ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕನ್ನಡಿಗರ ಮೇಲಿನ ಅನಗತ್ಯ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರುಗಳನ್ನು ನಾಡದ್ರೋಹಿಗಳು ಎಂದು ತೀರ್ಮಾನಿಸಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಮೂರನೇ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಾತನಾಡುತ್ತಿರುವ ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.
ʼಹಿಂದಿ ಕಡ್ಡಾಯ ಕಲಿಕೆ ವಿರೋಧಿಸುತ್ತಿರುವವರು ದೇಶದ್ರೋಹಿಗಳು ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ದ್ವಿಭಾಷಾ ನೀತಿ ಪರವಾಗಿ ಮಾತನಾಡಿದ್ದ ರಾಷ್ಟ್ರಕವಿ ಕುವೆಂಪು ಅವರನ್ನು ಅವರು ದೇಶದ್ರೋಹಿಗಳೆಂದು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಹಿಡಿದು ಕನ್ನಡದ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು ತ್ರಿಭಾಷಾ ನೀತಿಯ ವಿರುದ್ಧ ನಿರಂತರವಾಗಿ ಮಾತನಾಡುತ್ತ ಬಂದಿದ್ದಾರೆ. ಇವರೆಲ್ಲ ದೇಶದ್ರೋಹಿಗಳೇ? ಅಶ್ವತ್ಥ್ ನಾರಾಯಣ್ ಅವರಿಗೆ ಏನಾಗಿದೆʼ ಎಂದು ಪ್ರಶ್ನಿಸಿದರು.
ʼಹಿಂದಿಹೇರಿಕೆ ಪರವಾಗಿ ಮಾತನಾಡುತ್ತಿರುವವರೇ ನಿಜವಾದ ದೇಶದ್ರೋಹಿಗಳು, ನಾಡದ್ರೋಹಿಗಳು. ಈ ದೇಶವನ್ನು ಕೇವಲ ಹಿಂದಿ ಮತ್ತು ಸಂಸ್ಕೃತ ಎರಡೇ ಭಾಷೆಗಳನ್ನು ಇಟ್ಟುಕೊಂಡು ಆಳಲು ಹೊರಟಿದ್ದೀರಾ? ಈ ನುಡಿಗಳು ಮಾತ್ರ ರಾಷ್ಟ್ರೀಯತೆಯನ್ನು ಮೆರೆಸುವ ಭಾಷೆಗಳೇ? ಹಾಗಿದ್ದರೆ ನಮ್ಮ ಭಾಷೆಗಳೆಲ್ಲ ಏನು?ʼ ಎಂದು ಪ್ರಶ್ನಿಸಿದರು.
ʼಪಾಕಿಸ್ತಾನ ಯಾಕೆ ವಿಭಜನೆ ಆಯಿತು ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ಭಾಷಾ ಹೋರಾಟದಿಂದಲೇ ಬಾಂಗ್ಲಾದೇಶ ಬೇರೆ ಆಯಿತು. ಭಾರತದಲ್ಲೂ ಅಂಥದ್ದೇ ಆಗಲಿ ಎಂದು ಬಿಜೆಪಿ ನಾಯಕರು ಬಯಸುತ್ತಿದ್ದಾರೆಯೇ? ಹಿಂದಿಯೇತರ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆಯೇ? ಇದರಿಂದ ದೇಶಕ್ಕೆ ಒಳಿತಾಗುವುದಿಲ್ಲ. ಬಿಜೆಪಿ ನಾಯಕರು ತಮಗೆ ದಿಲ್ಲಿಯಿಂದ ಬರುವ ಸಂದೇಶ ಕೇಳಿಕೊಂಡು ನಾಡದ್ರೋಹದ ಮಾತುಗಳನ್ನು ಆಡಬಾರದುʼ ಎಂದರು.
‘ಮುಂದಿನ ಚುನಾವಣೆಯಲ್ಲಿ ಗೆದ್ದುಬಂದರೆ ಮತ್ತೆ ತ್ರಿಭಾಷಾ ನೀತಿ ಜಾರಿಗೆ ತರುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳಲಿ ನೋಡೋಣ ಎಂದು ಸವಾಲು ಹಾಕಿದ ನಾರಾಯಣಗೌಡ, ಬಿಜೆಪಿ ನಾಯಕರು ಧೋರಣೆ ಬದಲಾಯಿಸಿಕೊಳ್ಳದಿದ್ದರೆ ಎಲ್ಲ ಕಡೆಗಳಲ್ಲೂ ಅವರ ವಿರುದ್ಧ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ʼವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಹಾತ್ಮಗಾಂಧಿಯವರನ್ನು ಎಳೆದು ತಂದು ಮಾತನಾಡುತ್ತಿದ್ದಾರೆ. ನಿಮ್ಮ ರಾಜಕಾರಣ ನೀವು ಮಾಡಿಕೊಳ್ಳಿ. ನೀವು ಕಾಂಗ್ರೆಸ್ ನವರು ಬೀದಿಯಲ್ಲಿ ಜಗಳವಾಡಿಕೊಳ್ಳಿ. ಆದರೆ ಕನ್ನಡದ ತಂಟೆಗೆ ಬರಬೇಡಿ. ಕನ್ನಡದ ಅಸ್ತಿತ್ವದ ವಿರುದ್ಧ ಮಾತನಾಡಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಎಚ್ಚರಿಸಿದರು. ಒಂದು ಬಾರಿ ಪರಭಾಷಿಗರಿಗೆ ಹೆದರಿ ಕುಳಿತಿದ್ದ ಅಶೋಕ್ ಅವರಿಗೆ ರಕ್ಷಣೆ ನೀಡಿದ್ದು ಕರ್ನಾಟಕ ರಕ್ಷಣಾ ವೇದಿಕೆ ಎಂಬುದನ್ನು ಮರೆತಿದ್ದೀರಾʼ ಎಂದು ಅವರು ಪ್ರಶ್ನಿಸಿದರು.
ʼಹರುಕು ಮುರುಕು ಹಿಂದಿಯಲ್ಲಿ ಮಾತಾಡಿ ದಿಲ್ಲಿಯ ತಮ್ಮ ನಾಯಕರನ್ನು ಮೆಚ್ಚಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಿಂದಿ ಕಡ್ಡಾಯ ಕಲಿಕೆಯ ಪರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ವಾಸ್ತವವಾಗಿ ವಿಷಯ ಜ್ಞಾನವೇ ಇಲ್ಲ. ತಮ್ಮ ನಾಯಕರನ್ನು ಓಲೈಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆʼ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಬನವಾಸಿ ಬಳಗದ ಅಧ್ಯಕ್ಷ, ಕನ್ನಡಪರ ಚಿಂತಕ ಆನಂದ್ ಉಪಸ್ಥಿತರಿದ್ದರು.




