‘ಮೈಬಣ್ಣದ ಕಾರಣಕ್ಕೆ ನನ್ನನ್ನು ಕಡೆಗಣಿಸಿದರು’- ಕಹಿ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್

Date:

19ನೇ ವಯಸ್ಸಿನಲ್ಲಿಯೇ ಇಮ್ರಾನ್ ಖಾನ್‌ಗೆ ಗೂಗ್ಲಿ ಎಸೆದ, ಶಾರ್ಜಾದಲ್ಲಿ ಜೈಕಾರ ಹಾಕಿಸಿಕೊಂಡ, ಕಪಿಲ್ ದೇವ್ ಅವರಷ್ಟೇ ‘ಸಹಜ ಪ್ರತಿಭಾವಂತ’ ಎನಿಸಿಕೊಂಡಿದ್ದ ಭಾರತದ ಮಾಜಿ ಲೆಗ್ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರ ಮನೆಯಲ್ಲಿ, ಇಂದು ಅವರ ಸಾಧನೆಯ ಒಂದೇ ಒಂದು ಕುರುಹಿಲ್ಲ. ವರ್ಣಭೇದ ನೀತಿ ಮತ್ತು ತಾರತಮ್ಯಗಳು ಒಬ್ಬ ಅದ್ಭುತ ಪ್ರತಿಭೆಯನ್ನು ಹೇಗೆ ಖಿನ್ನತೆಗೆ ನೂಕಿ, ಕತ್ತಲಲ್ಲಿ ಕರಗುವಂತೆ ಮಾಡಿತು ಎಂಬುದರ ಕರುಣಾಜನಕ ಕಥೆ ಇದು. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಅವರ ಸಂದರ್ಶನದ ಅನುವಾದ ಇಲ್ಲಿದೆ.

- Advertisement -

ತಮ್ಮ 19ನೇ ವಯಸ್ಸಿನಲ್ಲಿಯೇ ಟೆಸ್ಟ್ ಪಂದ್ಯವೊಂದರಲ್ಲಿ 12 ವಿಕೆಟ್ ಕಬಳಿಸಿದ, ಶಾರ್ಜಾದಲ್ಲಿ ಪ್ರೇಕ್ಷಕರು ತಮ್ಮ ಹೆಸರು ಕೂಗುತ್ತಿದ್ದಾಗ ಇಮ್ರಾನ್ ಖಾನ್‌ರನ್ನು ಹಾಗೂ ಎಂಸಿಜಿ (MCG) ಕ್ರೀಡಾಂಗಣದಲ್ಲಿ ಜಾವೇದ್ ಮಿಯಾಂದಾದ್ ಅವರನ್ನು ಸ್ಟಂಪ್ ಔಟ್ ಮಾಡಿದರು, ಕಪಿಲ್ ದೇವ್ ಅವರ ಜೊತೆಗೆ ಭಾರತದ ಅತ್ಯಂತ ‘ಸಹಜ ಪ್ರತಿಭಾವಂತ’ ಕ್ರಿಕೆಟಿಗ ಎಂದು ಕರೆಸಿಕೊಂಡಿದ್ದ ಆಟಗಾರನೊಬ್ಬನ ಮನೆಯಲ್ಲಿ ಆತನ ಸಾಧನೆಯನ್ನು ಸಾರುವ ಒಂದೇ ಒಂದು ಕುರುಹಿಲ್ಲ. ಚೆನ್ನೈನ ಅಭಿರಾಮಪುರಂನಲ್ಲಿರುವ ಅವರ ಮನೆಯಲ್ಲಿ ತಮ್ಮ ಆಟದ ದಿನಗಳ ಒಂದೇ ಒಂದು ಫೋಟೊ, ಶರ್ಟ್‌, ಟ್ರೋಫಿ ಅಥವಾ ಬ್ಯಾಟ್‌ಗಳಿಲ್ಲ. 1984-85ರ ಭಾರತ-ಇಂಗ್ಲೆಂಡ್ ಸರಣಿಯ ‘ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿಯೂ ಅವರ ಬಳಿಯಿಲ್ಲ. “ಮನೆಯಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೂ ಇಲ್ಲ. ಆ ದಿನಗಳಿಂದ ನಾನು ದೂರವಿರಲು ಬಯಸುತ್ತೇನೆ. ಎಲ್ಲವನ್ನೂ ಯಾರಿಗೋ ಒಬ್ಬರಿಗೆ ಕೊಟ್ಟುಬಿಟ್ಟಿದ್ದೇನೆ” ಎಂದು ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳುತ್ತಾರೆ. ಅವರು ಆ ನೆನಪುಗಳನ್ನೂ ಇತರರಿಗೆ ಕೊಡಲು ಪ್ರಯತ್ನಿಸಿದರು, ಆದರೆ ಆ ನೆನಪುಗಳು ಅವರನ್ನು ಬಿಟ್ಟುಹೋಗಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

​ಅವರಿಗೆ ಮೊದಲ ಆಘಾತವಾದದ್ದು 14ನೇ ವಯಸ್ಸಿನಲ್ಲಿ. ಆಗಿನ್ನೂ ಶಾಲೆಯಲ್ಲಿದ್ದ ಶಿವರಾಮಕೃಷ್ಣನ್, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ನೆಟ್(ಅಭ್ಯಾಸ) ಬೌಲರ್ ಆಗಿದ್ದರು. ಸಮವಸ್ತ್ರದಲ್ಲಿದ್ದ ಅವರು ಬಟ್ಟೆ ಬದಲಾಯಿಸಲು ಕ್ರೀಡಾಂಗಣದ ಸಣ್ಣ ಕೊಠಡಿಯತ್ತ ಧಾವಿಸುತ್ತಿದ್ದಾಗ, ಭಾರತದ ಹಿರಿಯ ಬ್ಯಾಟ್ಸ್‌ಮನ್ ಒಬ್ಬರು “ಹೇ, ಹೇ” ಎಂದು ಕರೆದರು. ಶಿವರಾಮಕೃಷ್ಣನ್ ಮೇಲೆ ನೋಡಿದಾಗ, ಆ ಆಟಗಾರ ಬಂದು ತನ್ನ ಶೂಗಳನ್ನು ಸ್ವಚ್ಛಗೊಳಿಸುವಂತೆ ಕೇಳಿದ. “ನಾನು ಅವರನ್ನು ನೋಡಿ, ‘ಅದು ನನ್ನ ಕೆಲಸವಲ್ಲ, ನೀವು ಮಾಡಬೇಕಾದ್ದನ್ನು ನೀವೇ ಮಾಡಿಕೊಳ್ಳಿ’ ಎಂದು ಹೇಳಿದೆ” ಎನ್ನುತ್ತಾರೆ ಅವರು. ಆ ಹಿರಿಯ ಕ್ರಿಕೆಟಿಗ ಇವರನ್ನು ಮೈದಾನದ ಸಿಬ್ಬಂದಿ ಎಂದು ಭಾವಿಸಿದ್ದ. “ಆಗ ನನಗೆ ವರ್ಣಭೇದ ನೀತಿ ಅಥವಾ ಮೈಬಣ್ಣದ ತಾರತಮ್ಯದ ಬಗ್ಗೆ ಗೊತ್ತಿರಲಿಲ್ಲ. ಈ ವ್ಯಕ್ತಿ ಏಕೆ ಹೀಗೆ ಪ್ರತಿಕ್ರಿಯಿಸಿದ ಎಂದು ನಾನು ಆಶ್ಚರ್ಯಪಡುತ್ತಿದ್ದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅದು ಮೊದಲ ಅನುಭವವಾಗಿತ್ತು, ಆದರೆ ಕೊನೆಯದ್ದಾಗಿರಲಿಲ್ಲ.

​ತಮಿಳುನಾಡು ತಂಡದಲ್ಲಿದ್ದಾಗ, ಪ್ರಮುಖ ಆಟಗಾರರು ಅವರನ್ನು ‘ಕರುಪ’ (ಕಪ್ಪು ಬಣ್ಣದವನು) ಎಂದು ಕರೆಯುತ್ತಿದ್ದರು. ಮುಂಬೈ, ಚಂಡೀಗಢ, ಜಲಂಧರ್—ಸಾಮಾನ್ಯವಾಗಿ ಉತ್ತರ ಭಾರತದ ಮೈದಾನಗಳಲ್ಲಿ ಬೌಂಡರಿ ಬಳಿ ಫೀಲ್ಡಿಂಗ್ ಮಾಡುವಾಗ ಪ್ರೇಕ್ಷಕರು ‘ಕಾಲಿಯಾ, ತೇರಾ ಕ್ಯಾ ಹೋಗಾ'(ಕರಿಯ, ನಿನಗೆ ಏನಾಗುತ್ತಿದೆ?) ಎಂದು ಅಣಕಿಸುತ್ತಿದ್ದರು. ಪ್ರಸ್ತುತ ನಾರಿಮನ್ ಪಾಯಿಂಟ್‌ನಲ್ಲಿರುವ ಟ್ರೈಡೆಂಟ್ ಎಂದು ಕರೆಯಲ್ಪಡುವ ಮುಂಬೈನ ಹೋಟೆಲ್‌ನಲ್ಲಿ, ಒಮ್ಮೆ ಹೊರಗೆ ಹೋಗಿ ಮರಳಿದ ಅವರನ್ನು ಭಾರತೀಯ ಕ್ರಿಕೆಟಿಗನೆಂದು ನಂಬದ ಕಾವಲುಗಾರನೊಬ್ಬ ಒಳಬಿಡಲು ನಿರಾಕರಿಸಿದ. ಆಗ ಅವರು ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ಮುಂಬೈನಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರದಲ್ಲಿ ಭಾರತ ತಂಡದ ಭಾಗವಾಗಿದ್ದರು. ಅವರ ಬಳಿ ಕೀ ಇರಲಿಲ್ಲ. ಆ ಕಾವಲುಗಾರ ಇವರನ್ನು ನೋಡಿ ಭಾರತದ ಕ್ರಿಕೆಟಿಗನೆಂದು ನಂಬಲೇ ಇಲ್ಲ. ಸಹ ಆಟಗಾರನೊಬ್ಬ ಹೊರಬಂದು ಖಚಿತಪಡಿಸುವವರೆಗೆ ಅವರು ಒಂದು ಗಂಟೆ ಕಾಯಬೇಕಾಯಿತು. “ಅದಾದ ನಂತರ ನಾನು ಕೀಗಳನ್ನು ನನ್ನೊಂದಿಗೇ ಕೊಂಡೊಯ್ಯಬೇಕೆಂದು ಅರಿತುಕೊಂಡೆ. ಆದರೆ ಮತ್ತೆ ತಿರಸ್ಕರಿಸಲ್ಪಟ್ಟು ಹೊರಹಾಕಲ್ಪಡುವ ಭಯದಿಂದ ಗೇಟ್ ಬಳಿ ಹೋದಾಗಲೆಲ್ಲಾ ನನಗೆ ನಡುಕ ಶುರುವಾಗುತ್ತಿತ್ತು” ಎಂದು ಹೇಳುತ್ತಾರೆ. ಆಗ ಅವರಿಗೆ ಕೇವಲ 16 ವರ್ಷ. ಆ ನಡುಕವನ್ನು ಅವರು ದಶಕಗಳ ಕಾಲ ಹೊತ್ತೊಯ್ದರು.

Shivaramakrishnan 5

​ಅವರು ಇತರ ಅನುಭವಗಳ ಬಗ್ಗೆಯೂ ಮಾತನಾಡುತ್ತಾರೆ. 17ನೇ ಹುಟ್ಟುಹಬ್ಬದಂದು ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ನಾಯಕ ಸುನಿಲ್ ಗವಾಸ್ಕರ್ ಕೇಕ್ ತರಿಸಿದ್ದರು. ಇಡೀ ತಂಡವೇ ಸೇರಿತ್ತು. ಆಗ ಸಹ ಆಟಗಾರನೊಬ್ಬ, “ಹೇ ಸನ್ನಿ, ನೀವು ಸರಿಯಾದ ಬಣ್ಣದ ಕೇಕ್ ತರಿಸಿದ್ದೀರಿ. ಕಪ್ಪು ಹುಡುಗನಿಗೆ ಕಪ್ಪು ಬಣ್ಣದ ಚಾಕೊಲೇಟ್ ಕೇಕ್” ಎಂದು ವ್ಯಂಗ್ಯವಾಡಿದ್ದ. “ನಾನು ಅಳಲು ಶುರುಮಾಡಿದೆ ಮತ್ತು ಕೇಕ್ ಕತ್ತರಿಸಲು ನಿರಾಕರಿಸಿದೆ. ಸುನಿಲ್ ಗವಾಸ್ಕರ್ ನನ್ನನ್ನು ಸಮಾಧಾನಪಡಿಸಬೇಕಾಯಿತು ಮತ್ತು ಆ ನಂತರ ಕಣ್ಣೀರಿನೊಂದಿಗೆ ನಾನು ಕೇಕ್ ಕತ್ತರಿಸಿದೆ” ಎಂದರು. ಅವರು ತಂಡದಲ್ಲಿ 17 ವರ್ಷದ “ಹುಡುಗ” ಆಗಿದ್ದರು. ನಾಯಕನಿಂದ ಜನ್ಮದಿನದ ಕೇಕ್ ಪಡೆದಿದ್ದ ಯುವಕನ ಮೈಬಣ್ಣವನ್ನು ಸಹ ಆಟಗಾರನೊಬ್ಬ ತಮಾಷೆಯ ವಸ್ತುವನ್ನಾಗಿಸಿದ್ದ.

ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ

​ಒಂದು ತಿಂಗಳ ಕಾಲ ಪಾಕಿಸ್ತಾನದ ಪ್ರೇಕ್ಷಕರು ತಮ್ಮದೇ ಆದ ಶೈಲಿಯಲ್ಲಿ ‘ಕಾಲಿಯಾ, ಕಾಲಿಯಾ, ಕಾಲಿಯಾ…’ ಎಂದು ಜರೆಯುತ್ತಿದ್ದರು. ಅಂಪೈರ್ ಶಕೂರ್ ರಾಣಾ ಕೂಡ ಬೌಲಿಂಗ್ ಮಾಡುವಾಗ ಅವರಿಗೆ ಕಿರುಕುಳ ನೀಡುತ್ತಿದ್ದರು. ಆಗ ಗವಾಸ್ಕರ್ ಅವರು ಭೋಜನ ವಿರಾಮದ ನಂತರ ಆ ಯುವಕನ ಮುಂದೆಯೇ (ಶಿವರಾಮಕೃಷ್ಣನ್) ರಾಣಾ ಅವರನ್ನು ತರಾಟೆಗೆ ತೆಗೆದುಕೊಂಡರು. “ನನ್ನ ಯಾವುದೇ ಬೌಲರ್‌ಗಳೊಂದಿಗೆ ನೀವು ಮಾತನಾಡುವಂತಿಲ್ಲ. ನಿಮಗೆ ಏನಾದರೂ ಸಮಸ್ಯೆ ಇದ್ದರೆ ಬಂದು ನನ್ನೊಂದಿಗೆ ಮಾತನಾಡಿ” ಎಂದು ಗವಾಸ್ಕರ್ ಎಚ್ಚರಿಸಿದ್ದರು. ಶಿವರಾಮಕೃಷ್ಣನ್ ಅವರ ಅತ್ಯುತ್ತಮ ಪ್ರದರ್ಶನಗಳು ಯಾವಾಗಲೂ ಗವಾಸ್ಕರ್ ನಾಯಕತ್ವದಲ್ಲೇ ಬಂದವು.

​”ನನ್ನ ಕಪ್ಪು ಮೈಬಣ್ಣದ ಕಾರಣಕ್ಕೆ ಜನ ನನ್ನನ್ನು ಕಡೆಗಣಿಸುತ್ತಿದ್ದರು. ಪ್ರತಿ ಬಾರಿಯೂ ಹೀಗಾದಾಗ ಒಂದು ರೀತಿಯ ನೋವು ಕಾಡುತ್ತಿತ್ತು. ನಾನು ಯಾವಾಗಲೂ ಅದನ್ನು ‘ಮರೆಯಲು, ಮರೆಯಲು, ಮರೆಯಲು’ ಬಯಸಿದ್ದೆ. ಆದರೆ ಅದು ಆಳವಾಗಿ ಬೇರೂರಿತ್ತು ಮತ್ತು ಹೊರಬರುತ್ತಲೇ ಇತ್ತು. ಇವೆಲ್ಲವೂ ನನ್ನನ್ನು ಚಿಕ್ಕ ವಯಸ್ಸಿನಲ್ಲಿಯೇ ಕೀಳರಿಮೆಗೆ ನೂಕಿದವು… ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ತುಂಬಾ ಕಷ್ಟವಾಯಿತು.

“ಆದರೆ, ವೆಸ್ಟ್ ಇಂಡೀಸ್‌ನಲ್ಲಿ ಎಲ್ಲವೂ ಭಿನ್ನವಾಗಿತ್ತು. “ಅಲ್ಲಿ ಪ್ರತಿಯೊಬ್ಬರ ಚರ್ಮದ ಬಣ್ಣವೂ ಕಪ್ಪಾಗಿಯೇ ಇತ್ತು. ಅವರು ತುಂಬಾ ಸಂತೋಷದ ಜನರಾಗಿದ್ದರು.” ಟೆಸ್ಟ್ ಸರಣಿಯ ಸಮಯದಲ್ಲಿ ಮಾಲ್ಕಮ್ ಮಾರ್ಷಲ್ ಮತ್ತು ಡೆಸ್ಮಂಡ್ ಹೇನ್ಸ್ ಅವರನ್ನು ಬಹುತೇಕ ಪ್ರತಿದಿನ ಸಂಜೆ ಹೊರಗೆ ಕರೆದೊಯ್ಯುತ್ತಿದ್ದರು. ಜಮೈಕಾ, ಟ್ರಿನಿಡಾಡ್, ಬಾರ್ಬಡೋಸ್ ಸುತ್ತಾಡಿಸುತ್ತಿದ್ದರು. ಮಾರ್ಷಲ್ ಮನೆಗೆ ಹೋಗಿ ಕಾಲಿನ್ ಕ್ರಾಫ್ಟ್ ಬೌಲಿಂಗ್ ಮಾಡುತ್ತಿದ್ದ ಹಳೆಯ ವೆಸ್ಟ್ ಇಂಡೀಸ್ ಪಂದ್ಯಗಳ ವಿಡಿಯೊಗಳನ್ನು ನೋಡುತ್ತಿದ್ದೆವು”.

​ತಮ್ಮದೇ ತಂಡದ ಆಟಗಾರರೊಂದಿಗೂ ಅಪರೂಪಕ್ಕೆ ಮಾತನಾಡುತ್ತಿದ್ದ ಗಾರ್ಡನ್ ಗ್ರೀನಿಡ್ಜ್ ಇವರೊಂದಿಗೆ ಮುಕ್ತವಾಗಿ ಮಾತನಾಡಿದರು. “ನಾನು ಇಂಗ್ಲೆಂಡ್‌ನಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆ. ಅದಕ್ಕಾಗಿಯೇ ನಾನು ನನ್ನ ಪಾಡಿಗೆ ನಾನಿರುತ್ತೇನೆ, ನನ್ನ ಕ್ರಿಕೆಟ್ ಆಡಿಕೊಂಡು ಹೋಗುತ್ತೇನೆ ಎಂದು ಅವರು ನನಗೆ ಹೇಳಿದರು.” ಬೇರೆ ಬೇರೆ ಪ್ರದೇಶದ ಇಬ್ಬರು ಕಪ್ಪು ವರ್ಣದ ಕ್ರಿಕೆಟಿಗರು ಒಂದೇ ರೀತಿಯ ‘ಕಪ್ಪು ಗಾಯದ’ ಮೂಲಕ ಒಬ್ಬರಿಗೊಬ್ಬರು ಹತ್ತಿರವಾಗಿದ್ದರು.

ಇದನ್ನು ಓದಿದ್ದೀರಾ? ಇಂದಿನಿಂದ IPL ಹಬ್ಬ ಶುರು; ತವರು ಮೈದಾನದಲ್ಲಿ ಕಪ್ ಉಳಿಸಿಕೊಳ್ಳಲು ಸಮರಕ್ಕಿಳಿಯಲಿದೆ RCB

ಶಿವರಾಮಕೃಷ್ಣನ್ ತಮ್ಮ ಹೆಚ್ಚಿನ ಸಮಯವನ್ನು ವೆಸ್ಟ್ ಇಂಡೀಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಳೆದರು. ಊಟದ ಸಮಯದಲ್ಲಿ ಅವರು ಒಳಗೆ ನಡೆದು, ಕ್ಲೈವ್ ಲಾಯ್ಡ್‌ಗೆ ಹಲೋ ಹೇಳುತ್ತಿದ್ದರು (ಅವರು ಕೇವಲ ತಲೆಯಾಡಿಸುತ್ತಿದ್ದರು) ಮತ್ತು ಹೇನ್ಸ್, ಹೋಲ್ಡಿಂಗ್ ಅಥವಾ ಆಂಡಿ ರಾಬರ್ಟ್ಸ್ ಅವರೊಂದಿಗೆ ಕುಳಿತುಕೊಳ್ಳುತ್ತಿದ್ದರು. ಆಗ ಅವರಿಗೆ 17 ವರ್ಷ. ಅವರು ತಮ್ಮ ಡ್ರೆಸ್ಸಿಂಗ್ ರೂಮ್‌ಗಿಂತ ಎದುರಾಳಿ ಪಾಳೆಯದಲ್ಲಿ ಹೆಚ್ಚು ಸಂತೋಷವಾಗಿದ್ದರು. ಕ್ರಿಕೆಟ್, ಸ್ವಲ್ಪ ಸಮಯದ ಮಟ್ಟಿಗೆ ಎಲ್ಲವನ್ನೂ ಮೌನಗೊಳಿಸಿತ್ತು.

​ಜನವರಿ 1985ರಲ್ಲಿ ಬಾಂಬೆಯಲ್ಲಿ, ಶಿವರಾಮಕೃಷ್ಣನ್ ಕೇವಲ ತಮ್ಮ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 12 ವಿಕೆಟ್ ಕಬಳಿಸಿದ್ದರು. ಆಗ ಅವರಿಗೆ 19 ವರ್ಷ. ಅವರು ಬೌಲಿಂಗ್‌ ಮಾಡುವಾಗ ಚೆಂಡು ಹಾರುವಾಗ ಸ್ವಲ್ಪ ಬದಿಗೆ ತಿರುಗುತ್ತಾ, ಕೆಳಗೆ ಬೀಳುವಾಗ ಮೋಸಗೊಳಿಸುತ್ತಾ, ನಂತರ ಜೋರಾಗಿ ತಿರುಗುತ್ತಾ ಬ್ಯಾಟ್ಸ್‌ಮನ್‌ರನ್ನು ಗೊಂದಲಗೊಳಿಸುತ್ತಿತ್ತು. ಬ್ಯಾಟ್ಸ್‌ಮನ್‌ಗಳು ಇಲ್ಲದ ಎಸೆತಗಳತ್ತ ಬ್ಯಾಟ್ ಬೀಸುತ್ತಿದ್ದರು. ಆಗ ಏರ್ ಇಂಡಿಯಾ ಮದ್ರಾಸ್‌ನ ಮೌಂಟ್ ರೋಡ್‌ನಲ್ಲಿ “ಶಿವಾ ರಾಮ ಕೃಷ್ಣ, ಚೆಪಾಕ್‌ನಲ್ಲಿ ನಮಗೆ ಒಂದು ಗೆಲುವು ತಂದುಕೊಡಿ ” (Siva Rama Krishna, give us a break at Chepauk) ಎಂಬ ಹೋರ್ಡಿಂಗ್ ಹಾಕಲಾಗಿತ್ತು.

​ಎರಡು ತಿಂಗಳ ಬಳಿಕ, ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ‘ವಿಶ್ವ ಚಾಂಪಿಯನ್‌ಶಿಪ್‌ ಆಫ್ ಕ್ರಿಕೆಟ್’ ಫೈನಲ್ ಪಂದ್ಯದಲ್ಲಿ ಶಿವರಾಮಕೃಷ್ಣನ್ ಅವರು ಸಲೀಂ ಮಲಿಕ್ ಅವರನ್ನು ಔಟ್ ಮಾಡಿದರು. ಆಮೇಲೆ ಜಾವೇದ್ ಮಿಯಾಂದಾದ್ ಅವರಿಗೆ ಬೌಲಿಂಗ್ ಮಾಡುವ ಸರದಿ ಬಂತು. ಮಿಯಾಂದಾದ್ ಸ್ಪಿನ್ ಬೌಲಿಂಗ್ ಅನ್ನು ಎದುರಿಸುವುದರಲ್ಲಿ ಅಂದಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಶಿವರಾಮಕೃಷ್ಣನ್ ಹಾಕಿದ ಮೋಹಕವಾದ ಎಸೆತವನ್ನು ಅರಿಯುವಲ್ಲಿ ಅವರು ವಿಫಲರಾದರು. ಚೆಂಡಿನ ಗತಿಗೆ ಮರುಳಾಗಿ ‘ಆಫ್ ಡ್ರೈವ್’ ಬಾರಿಸಲು ಮುಂದೆ ಬಂದು ಬ್ಯಾಟ್ ಬೀಸಿದರು. ಆದರೆ ಚೆಂಡು ಅವರ ಬ್ಯಾಟ್‌ಗೆ ತಾಗದೆ, ಅವರನ್ನು ಸಂಪೂರ್ಣವಾಗಿ ವಂಚಿಸಿ ಕೀಪರ್ ಕೈ ಸೇರಿತು. ಕೀಪರ್ ಸದಾನಂದ್ ವಿಶ್ವನಾಥ್(ಇವರು ಕರ್ನಾಟಕದವರು) ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಸ್ಟಂಪಿಂಗ್ ಮಾಡಿಬಿಟ್ಟರು. ದಿಗ್ಗಜ ಆಟಗಾರ ಮಿಯಾಂದಾದ್ ಅಲ್ಲಿ ಏನೂ ಅರಿಯದ ಅನನುಭವಿಯಂತೆ ನಿಂತುಬಿಟ್ಟಿದ್ದರು! ಶಿವರಾಮಕೃಷ್ಣನ್ ಫಾರ್ಮ್‌ನಲ್ಲಿದ್ದಾಗ ಎಂತಹ ಮ್ಯಾಜಿಕ್ ಮಾಡಬಲ್ಲರು ಎಂಬುದಕ್ಕೆ ಆ ಎಸೆತವೇ ಸಾಕ್ಷಿಯಾಗಿತ್ತು. ಆ ಪಂದ್ಯದಲ್ಲಿ ಅವರು ಕೇವಲ 35 ರನ್ ನೀಡಿ 3 ವಿಕೆಟ್ ಪಡೆದರು, ಅಲ್ಲದೆ ಭಾರತ ಕೂಡ ಟೂರ್ನಿಯನ್ನು ಗೆದ್ದುಕೊಂಡಿತು.

Shivaramakrishnan 8

​ಇದಾದ ನಂತರ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧವೇ ನಡೆದ ಮತ್ತೊಂದು ಪಂದ್ಯ. ಶಿವರಾಮಕೃಷ್ಣನ್ ಬೌಲಿಂಗ್ ಮಾಡಲು ಓಡಿಬರುತ್ತಿದ್ದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು “ಶಿವಾ, ಶಿವಾ” ಎಂದು ಜೈಕಾರ ಹಾಕುತ್ತಿದ್ದರು. ಆ ಪಂದ್ಯದಲ್ಲಿ ಅವರು ಇಮ್ರಾನ್ ಖಾನ್‌ಗೆ ಅದ್ಭುತವಾದ ‘ಗೂಗ್ಲಿ’ ಎಸೆದರು. ಇಮ್ರಾನ್ ಆ ಚೆಂಡನ್ನು ತಡೆಯಲು ಕ್ರೀಸ್‌ನಿಂದ ಸ್ವಲ್ಪ ಮುಂದೆ ಬಂದರು. ಆದರೆ ಚೆಂಡು ಮಿಂಚಿನ ವೇಗದಲ್ಲಿ ಅವರನ್ನು ವಂಚಿಸಿ ಕೀಪರ್ ಕೈ ಸೇರಿತು. ಇಮ್ರಾನ್ ಕೂಡ ಸ್ಟಂಪ್ ಔಟ್ ಆದರು! ಆ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 87 ರನ್‌ಗಳಿಗೆ ಕುಸಿಯಿತು. ಈ ಎಲ್ಲಾ ಅದ್ಭುತ ಪ್ರದರ್ಶನಗಳನ್ನೇ ನೆನಪಿಸಿಕೊಂಡು ರವಿಶಾಸ್ತ್ರಿ ಅವರು, “1980ರ ದಶಕದಲ್ಲಿ ಕಪಿಲ್ ದೇವ್ ಅವರಷ್ಟೇ ಅದ್ಭುತವಾದ ಸಹಜ ಪ್ರತಿಭೆ ಹೊಂದಿದ್ದ ಭಾರತದ ಕ್ರಿಕೆಟಿಗ ಎಂದರೆ ಅದು ಬಹುಶಃ ಶಿವರಾಮಕೃಷ್ಣನ್” ಎಂದು ಹೊಗಳಿದ್ದರು.

ಇದನ್ನು ಓದಿದ್ದೀರಾ? 18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

​ಸಾಧನೆಯಿಂದ ಪತನದತ್ತ

ಅದು ಅವರ ಸಾಧನೆಯ ಶಿಖರವಾಗಿತ್ತು. ಆದರೆ ಆಮೇಲೆ ಅವರ ಪತನ ಶುರುವಾಯಿತು. 16 ರಿಂದ 19 ವರ್ಷದ ನಡುವೆ ಶಿವರಾಮಕೃಷ್ಣನ್ ಅವರ ಎತ್ತರ ಎರಡೂವರೆ ಇಂಚು ಹೆಚ್ಚಾಯಿತು. ಆದರೆ ಬೌಲಿಂಗ್ ಮಾಡುವಾಗ ಚೆಂಡನ್ನು ಬಿಡುವ ಜಾಗ (ರಿಲೀಸ್ ಪಾಯಿಂಟ್) ಮಾತ್ರ ಬದಲಾಗಲಿಲ್ಲ. ಇದರಿಂದಾಗಿ ಚೆಂಡು ಸರಿಯಾದ ಜಾಗದಲ್ಲಿ ಬೀಳುವ ಬದಲು ‘ಫುಲ್ ಟಾಸ್’ ಆಗಿ ಬೀಳಲಾರಂಭಿಸಿತು. “ಆಗ ಯಾರಾದರೂ ನನ್ನ ತಪ್ಪು ತಿದ್ದಿದ್ದರೆ, ನಾನು ಖಂಡಿತ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಯಾರೂ ಹೇಳಲಿಲ್ಲ. ಅದೇ ಅಭ್ಯಾಸವಾಗಿ, ಫುಲ್ ಟಾಸ್ ಎಸೆತಗಳು ಹೆಚ್ಚಾದವು” ಎನ್ನುತ್ತಾರೆ ಅವರು. 1980ರ ದಶಕದಲ್ಲಿ ಭಾರತ ತಂಡಕ್ಕೆ ಸರಿಯಾದ ಫಿಸಿಯೋ ಅಥವಾ ವಿಶ್ಲೇಷಕರು ಇರಲಿಲ್ಲ. ಆಸ್ಟ್ರೇಲಿಯಾದಲ್ಲಿ ಬೌಂಡರಿಯಿಂದ ಚೆಂಡು ಎಸೆಯುವಾಗ ಅವರ ಭುಜಕ್ಕೆ ಗಾಯವಾಯಿತು. ಆಗ ಕೇವಲ ಐಸ್ ಪ್ಯಾಕ್ ಮತ್ತು ನೋವು ನಿವಾರಕ ಮಾತ್ರೆಗಳನ್ನು ನೀಡಲಾಯಿತೇ ಹೊರತು, ಸರಿಯಾದ ಚಿಕಿತ್ಸೆ ಸಿಗಲಿಲ್ಲ. ನೋವಿನಲ್ಲೇ ಬೌಲಿಂಗ್ ಮಾಡಿ ಗಾಯ ಇನ್ನಷ್ಟು ಉಲ್ಬಣಿಸಿತು.

“ಮೈದಾನದಲ್ಲಿ ಮೊದಲಿನಂತೆ ಚೆನ್ನಾಗಿ ಆಡಲು ಸಾಧ್ಯವಾಗದೇ ಇದ್ದದ್ದೇ ನನಗೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿತು ಎನ್ನುತ್ತಾರೆ ಅವರು. ಅವರ ಆಟ ಸ್ವಲ್ಪ ಕಳಪೆಯಾಗುತ್ತಿದ್ದಂತೆಯೇ ಜನರು ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಲು ಶುರುಮಾಡಿದರು. ‘ಸಣ್ಣ ವಯಸ್ಸಿಗೆ ಸಿಕ್ಕ ಯಶಸ್ಸು ಅವನ ತಲೆಗೇರಿದೆ’ ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ‘ಅವನು ಮದ್ಯ ಮತ್ತು ಡ್ರಗ್ಸ್ (ಮಾದಕ ದ್ರವ್ಯ) ಚಟಕ್ಕೆ ಬಿದ್ದಿದ್ದಾನೆ’ ಎಂದು ಸುಳ್ಳು ಸುದ್ದಿ ಹರಡಿದರು.

ಇದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುವ ಶಿವರಾಮಕೃಷ್ಣನ್, “ಜನರಿಗೆ ಕೆಟ್ಟ ವಿಷಯಗಳನ್ನು ಹರಡುವುದಕ್ಕೆ ಇಷ್ಟಪಡುತ್ತಾರೆ. ನಾನು ಕ್ರಿಕೆಟ್ ಆಡಲು ವಿದೇಶಿ ಪ್ರವಾಸ ಮಾಡಿದ್ದು ನನ್ನ 16 ರಿಂದ 19ನೇ ವಯಸ್ಸಿನ ನಡುವೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಹೋಟೆಲ್‌ನವರು ನನಗೆ ಮದ್ಯವನ್ನು ಕೊಡಲು ಹೇಗೆ ತಾನೇ ಸಾಧ್ಯ? ನನ್ನ ಇಡೀ ಜೀವನದಲ್ಲಿ ನಾನು ಎಂದಿಗೂ ಡ್ರಗ್ಸ್ ಮುಟ್ಟಿಲ್ಲ. ವಯಸ್ಸಾದ ಮೇಲೆ, ಮುಂದಿನ ದಿನಗಳಲ್ಲಿ ನಾನು ಕೆಲವೊಮ್ಮೆ ಬಿಯರ್ ಕುಡಿದಿರಬಹುದು, ಅದನ್ನು ನಾನು ಮುಚ್ಚಿಡುವುದಿಲ್ಲ. ಆದರೆ ಕೇವಲ 19 ವರ್ಷದ ಯುವಕನನ್ನು ‘ಕುಡುಕ, ಡ್ರಗ್ ವ್ಯಸನಿ’ ಎಂದು ಕರೆಯುವುದು ಎಷ್ಟು ಸರಿ, ಒಮ್ಮೆ ನೀವೇ ಕಲ್ಪಿಸಿಕೊಳ್ಳಿ” ಎನ್ನುತ್ತಾರೆ.

Shivaramakrishnan 1

ಈ ಎಲ್ಲ ಸುಳ್ಳು ವದಂತಿಗಳು ಮತ್ತು ಕಳಪೆ ಫಾರ್ಮ್‌ನಿಂದಾಗಿ, ಅವರು ತಮ್ಮ ಕೇವಲ 21ನೇ ವಯಸ್ಸಿನಲ್ಲಿಯೇ (1987ರ ವಿಶ್ವಕಪ್‌ನಲ್ಲಿ) ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಬೇಕಾಯಿತು. ಅಲ್ಲಿಗೆ ಅವರ ಕ್ರಿಕೆಟ್ ಬದುಕು ಬಹುಬೇಗ ಮುಕ್ತಾಯವಾಯಿತು.

ಕೈತಪ್ಪಿದ ಅವಕಾಶ, ಬಡತನ ಮತ್ತು ಕಾಯಿಲೆ

​1987ರ ವಿಶ್ವಕಪ್ ಆಡಿ ಮನೆಗೆ ಮರಳಿದ ಒಂದು ದಿನದ ನಂತರ, ತಮಿಳುನಾಡು ಆಯ್ಕೆ ಸಮಿತಿ ಅವರನ್ನು ಕರೆಯಿತು. ತಂಡದಲ್ಲಿ ಅವರಿಗೆ ಸ್ಥಾನವಿಲ್ಲ ಎಂದು ಅವರು ಹೇಳಿದರು. “ನಾನು ಅನ್‌ಫಿಟ್ ಎಂದು ಪತ್ರಿಕೆಗಳಿಗೆ ಹೇಳುವಂತೆ ಅವರು ನನ್ನನ್ನು ಕೇಳಿದರು. ನಾನು ಹೇಳುವುದಿಲ್ಲ ಅಂದೆ. ನಾನು ನಿಮಗೆ ವಿಷಯಗಳನ್ನು ಸುಲಭಗೊಳಿಸುವುದಿಲ್ಲ. ನಿಮಗೆ ಬೇಕಾದರೆ, ನನ್ನನ್ನು ಕೈಬಿಡಿ ಎಂದೆ”. ಅವರನ್ನು ಕೈಬಿಡಲಾಯಿತು.

ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ನಂತರ ಅವರು ಚೆನ್ನೈನ ಒಂದು ಕಂಪನಿಯನ್ನು ಸೇರಿ, ಆ ಕಂಪನಿಯ ಕ್ರಿಕೆಟ್ ತಂಡದ ಪರ ಆಡಲಾರಂಭಿಸಿದರು. ಅವರು ಕಚೇರಿಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಿಗ್ಗೆ 6.45ಕ್ಕೆ ಮನೆಯಿಂದ ‘ಕೈನೆಟಿಕ್ ಹೋಂಡಾ’ ಸ್ಕೂಟರ್‌ನಲ್ಲಿ ಹೊರಟು 14 ಕಿ.ಮೀ. ದೂರದ ಕಾರ್ಖಾನೆಗೆ ಹೋಗುತ್ತಿದ್ದರು. ಮಧ್ಯಾಹ್ನ 2.30ರವರೆಗೆ ಲೆಕ್ಕಪತ್ರಗಳ ಕೆಲಸ ಮಾಡಿ, ಅಲ್ಲಿಂದ 8 ಕಿ.ಮೀ. ದೂರವಿದ್ದ ನೆಟ್ಸ್‌ಗೆ (ಕ್ರಿಕೆಟ್ ಅಭ್ಯಾಸಕ್ಕೆ) ಹೋಗುತ್ತಿದ್ದರು. ಆಗ ಅವರ ಸಂಬಳ ಕೇವಲ 8,000 ರೂ. ಇತ್ತು. ಕಾರಿಗೆ ಪೆಟ್ರೋಲ್ ಹಾಕಿಸಲು ಹಣವಿಲ್ಲದ ಕಾರಣ ಅವರು ತಮ್ಮ ‘ಮಾರುತಿ 800’ ಕಾರನ್ನು ಮಾರಿ ಸ್ಕೂಟರ್ ತೆಗೆದುಕೊಂಡಿದ್ದರು.

ಆಮೇಲೆ ಅವರಿಗೆ ‘ಲೆಪ್ಟೊಸ್ಪೈರೋಸಿಸ್’ (ಇಲಿಜ್ವರ) ಕಾಯಿಲೆ ಬಂತು. ಹುಬ್ಬಳ್ಳಿಯಲ್ಲಿ ನಡೆದ ಟೂರ್ನಿಯೊಂದರಲ್ಲಿ, ಜವುಗು ಪ್ರದೇಶಕ್ಕೆ ಬಿದ್ದಿದ್ದ ಚೆಂಡನ್ನು ತೆಗೆದುಕೊಂಡು ಬಂದು ಹಾಗೆಯೇ ಆಟ ಮುಂದುವರಿಸಿದ್ದರು. ಎರಡು ದಿನಗಳ ನಂತರ ಅವರಿಗೆ 105 ಡಿಗ್ರಿ ಜ್ವರ ಬಂತು. ಆ ಬ್ಯಾಕ್ಟೀರಿಯಾ ಇವರ ಲಿವರ್ (ಯಕೃತ್ತು) ಮತ್ತು ಕಿಡ್ನಿಗಳ (ಮೂತ್ರಪಿಂಡ) ಮೇಲೆ ದಾಳಿ ಮಾಡಿತ್ತು. “ಕಾಯಿಲೆಯಿಂದ ಪಾರಾಗಲು ನಾನು ಆರು ತಿಂಗಳ ಕಾಲ ಉಪ್ಪಿಲ್ಲದ ಊಟ ಮಾಡಬೇಕಾಯಿತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮದುವೆ, ಮಗಳ ಆಯ್ಕೆ ಮತ್ತು ಸಚಿನ್ ನೀಡಿದ ಮನ್ನಣೆ

ಶಿವರಾಮಕೃಷ್ಣನ್ ಲೆಪ್ಟೊಸ್ಪೈರೋಸಿಸ್ ಕಾಯಿಲೆಯಿಂದ ಬದುಕುಳಿದರು, ಆದರೆ ಚೇತರಿಕೆ ಸುಲಭವಾಗಿರಲಿಲ್ಲ. 1995ರಲ್ಲಿ ಅವರು ಹರಿಣಿ ಅವರನ್ನು ವಿವಾಹವಾದರು. ಹರಿಣಿ ಅವರಿಗೆ ಇವರ ಹಿಂದಿನ ಕಷ್ಟಗಳ ಬಗ್ಗೆ ಅರಿವಿತ್ತು, ಏಕೆಂದರೆ ಶಿವರಾಮಕೃಷ್ಣನ್ ಅವರಿಗೆ ಎಲ್ಲವನ್ನೂ ಮೊದಲೇ ಹೇಳಿದ್ದರು. ಅವರ ಮಗಳು ಹಂಸಿನಿ ಈಗ ಮನೋವಿಜ್ಞಾನ ಓದುತ್ತಿದ್ದಾಳೆ – ಮಗಳ ಈ ಆಯ್ಕೆಯನ್ನು ಅವರು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ.

1998ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಗೂ ಮುನ್ನ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಇವರಿಗೆ ಕರೆ ಮಾಡಿದ್ದರು. ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ಸ್ಪಿನ್ ದಾಳಿಯನ್ನು ಎದುರಿಸಲು ಸಿದ್ಧತೆ ನಡೆಸಲು, ಶಿವರಾಮಕೃಷ್ಣನ್ ತಮಗೆ ಬೌಲಿಂಗ್ ಮಾಡಬೇಕೆಂದು ಸಚಿನ್ ಬಯಸಿದ್ದರು. ಎದುರಾಳಿ ಶ್ರೇಷ್ಠ ಸ್ಪಿನ್ನರ್‌ನನ್ನು ಎದುರಿಸಬೇಕಾದಾಗ ಯಾವ ಮಣಿಕಟ್ಟಿನ ಮೋಡಿಯನ್ನು ಬಳಸಿಕೊಳ್ಳಬೇಕೆಂದು ಆ ಕಾಲದ ಶ್ರೇಷ್ಠ ಬ್ಯಾಟ್ಸ್‌ಮನ್‌ಗೆ ಚೆನ್ನಾಗಿ ತಿಳಿದಿತ್ತು. ಕ್ರಿಕೆಟ್ ವ್ಯವಸ್ಥೆ ಅವರಿಗೆ ಎಂದಿಗೂ ನೀಡದಂತಹ ಅತಿ ದೊಡ್ಡ ಮನ್ನಣೆ ಇದಾಗಿತ್ತು.

Shivaramakrishnan

ಕಾಮೆಂಟರಿಯಲ್ಲಿ ಬೆಂಬಿಡದ ಮೈಬಣ್ಣದ ತಾರತಮ್ಯ

2000ನೇ ಇಸವಿಯಲ್ಲಿ ಅವರು ವೀಕ್ಷಕ ವಿವರಣೆಗಾರರಾಗಿ (ಕಾಮೆಂಟೇಟರ್) ಕೆಲಸ ಶುರುಮಾಡಿದರು. ಮೊದಲು ದೂರದರ್ಶನ, ನಂತರ ವರ್ಲ್ಡ್‌ಟೆಲ್ ಹಾಗೂ ಆಮೇಲೆ ಬಿಸಿಸಿಐ ಪ್ಯಾನೆಲ್‌ಗೆ ಸೇರಿದರು. ಅವರು ಸಂಜೆ ವೇಳೆಯಲ್ಲಿ ಇಯಾನ್ ಚಾಪೆಲ್ ಮತ್ತು ಟೋನಿ ಗ್ರೆಗ್ ಅವರಂತಹ ದಿಗ್ಗಜರೊಂದಿಗೆ ಚರ್ಚಿಸುತ್ತಾ ಕಳೆಯುತ್ತಿದ್ದರು, ಆದರೆ ಮದ್ಯಪಾನ ಮಾಡದಿರಲು ನಿಶ್ಚಯಿಸಿದ್ದರು. ಕಾಮೆಂಟರಿ ವೃತ್ತಿಗಾಗಿ ಅವರ ಪತ್ನಿ ಅವರಿಗೆ ಇಂಗ್ಲಿಷ್ ಉಚ್ಚಾರಣೆಯ ಅಭ್ಯಾಸಗಳನ್ನು ಮಾಡಿಸುತ್ತಿದ್ದರು. ವೃತ್ತಿಜೀವನದ ದೃಷ್ಟಿಯಿಂದ ಮನೆಯಲ್ಲೂ ಕೇವಲ ಇಂಗ್ಲಿಷ್‌ನಲ್ಲಿಯೇ ಮಾತನಾಡಲು ಶುರುಮಾಡಿದರು.

ಇದನ್ನು ಓದಿದ್ದೀರಾ? ದ್ರಾವಿಡ್‌ಗೆ ಸಿ.ಕೆ. ನಾಯುಡು ಪ್ರಶಸ್ತಿ: ಸಭ್ಯ, ಸಂಭಾವಿತ, ಸಾಧಕನಿಗೆ ಸಂದ ಗೌರವ

ಅವರು ಮೈಕ್ರೊಫೋನ್ ಹಿಂದೆ ಬರೋಬ್ಬರಿ 23 ವರ್ಷಗಳನ್ನು ಕಳೆದರು. ಆದರೆ ಅಲ್ಲಿಯೂ ಹಳೆಯ ಗಾಯ ಅವರನ್ನು ಬಿಡಲಿಲ್ಲ. “ನಾನು ಮೈದಾನದಲ್ಲಿ ಎಂದಿಗೂ ಟಾಸ್ ಪ್ರಕ್ರಿಯೆ ಅಥವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಟ್ಟಿಲ್ಲ. ನಾನು ಕಾರ್ಯಕ್ರಮ ನಿರ್ಮಾಪಕರಲ್ಲಿ ಒಬ್ಬರನ್ನು ಏಕೆ ಹೀಗೆ ಎಂದು ಕೇಳಿದೆ. ‘ನಿಮ್ಮನ್ನು ಅಲ್ಲಿಗೆ ಕಳುಹಿಸದಂತೆ ನಮ್ಮ ಮೇಲಧಿಕಾರಿಗಳು ನಮಗೆ ಸೂಚಿಸಿದ್ದಾರೆ’ ಎಂದು ಅವರು ಹೇಳಿದರು. ನಾನು ನೋಡಲು ಆಕರ್ಷಕವಾಗಿಲ್ಲ ಎಂಬುದೇ ಅದಕ್ಕೆ ಕಾರಣ ಎಂದು ಅವರು ಹೇಳುತ್ತಾರೆ.

ಇದನ್ನು ಹೇಳಿದ ನಂತರ ಶಿವರಾಮಕೃಷ್ಣನ್ ಸ್ವಲ್ಪ ಹೊತ್ತು ಮೌನವಾಗುತ್ತಾರೆ. ನಂತರ ಮಾತು ಆರಂಭಿಸಿ “ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ವರ್ಚಸ್ಸಿನ ಮತ್ತು ಅತ್ಯುತ್ತಮ ವ್ಯಕ್ತಿ ಎಂದರೆ ವಿಜಯ್ ಅಮೃತ್‌ರಾಜ್. ಅವರು ಕಪ್ಪಗಿಲ್ಲವೇ?” ಎಂದು ಪ್ರಶ್ನಿಸುತ್ತಾರೆ. 14ನೇ ವಯಸ್ಸಿನಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ಅವರಿಗೆ ಎದುರಾಗಿದ್ದ ಅದೇ ಮೈಬಣ್ಣದ ತಾರತಮ್ಯ, 30ನೇ ವಯಸ್ಸಿನಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲೂ ಅವರಿಗೆ ಕಾಯುತ್ತಿತ್ತು. ಕೋಣೆ ಬೇರೆಯಾಗಿತ್ತು, ಆದರೆ ಗಾಯ ಮಾತ್ರ ಅದೇ ಆಗಿತ್ತು.

ಯುಎಇಯಲ್ಲಿ ತೀವ್ರ ಖಿನ್ನತೆ, ಭ್ರಮೆಗಳು, ಮದ್ಯದ ಚಟ

ಶಿವರಾಮಕೃಷ್ಣನ್ ಮನಸಿಕವಾಗಿ ಹಂತ ಹಂತವಾಗಿ ಕುಗ್ಗಿಹೋಗುತ್ತ ಹೋದರು. ಯುಎಇಯಲ್ಲಿ ನಡೆದ ಐಪಿಎಲ್ ಸಮಯದಲ್ಲಿ, ಕ್ವಾರಂಟೈನ್‌ನಲ್ಲಿದ್ದ ಆ ದಿನಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. “ನಾನು ಸಂಪೂರ್ಣವಾಗಿ ಕುಸಿದುಹೋಗಿದ್ದೆ, ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳಲೂ ನನಗೆ ಇಷ್ಟವಿರಲಿಲ್ಲ. ಆ ನೋವುಗಳನ್ನು ಸಹಿಸಿಕೊಳ್ಳಲಾಗದೆ ಎರಡು ಪೆಗ್ ಕುಡಿದು ನಿದ್ರೆಗೆ ಜಾರುತ್ತಿದ್ದೆ. ಎಚ್ಚರವಾದಾಗಲೆಲ್ಲಾ ನಾನು ಸಾಯುತ್ತೇನೆ ಎಂದು ಅನ್ನಿಸುತ್ತಿತ್ತು.”

ಅವರು ಕೋಣೆಯ ಪರದೆಗಳನ್ನು ಮುಚ್ಚುತ್ತಿದ್ದರು. ಹಗಲೋ ರಾತ್ರಿಯೋ ಎಂಬುದು ಅವರಿಗೆ ತಿಳಿಯುತ್ತಿರಲಿಲ್ಲ. ಅವರಿಗೆ ಕೇವಲ ಮಲಗಬೇಕಿತ್ತು ಮತ್ತು ಮದ್ಯವೊಂದೇ ನಿದ್ರೆ ತರಿಸುತ್ತಿತ್ತು. “ಕೆಲವೊಮ್ಮೆ ನಾವು ದುಬೈನಲ್ಲಿ ಪ್ರಯಾಣಿಸುತ್ತಿರುವಾಗ, ಅಲ್ಲಿ ವಾಹನಗಳಿಗೆ ವೇಗದ ಮಿತಿಯಿರುವುದಿಲ್ಲ. ಕಾರು ಅತಿ ವೇಗವಾಗಿ ಹೋಗುತ್ತಿದ್ದಾಗ, ಬಾಗಿಲು ತೆಗೆದು ಹೊರಗೆ ಹಾರುವಂತೆ ನನ್ನ ಮನಸ್ಸೇ ನನಗೆ ಹೇಳುತ್ತಿತ್ತು. ಆದರೆ ಯಾವುದೋ ಒಂದು ಶಕ್ತಿ ನನ್ನನ್ನು ಆ ಮೂರ್ಖತನ ಮಾಡದಂತೆ ತಡೆಯಿತು.”

Shivaramakrishnan 3

ರಾತ್ರಿಯ ಹೊತ್ತು ಅವರಿಗೆ ಭ್ರಮೆಗಳು ಕಾಡುತ್ತಿದ್ದವು. “ನೀವು ಕಣ್ಣು ಮುಚ್ಚಿದರೆ, ಊಹಿಸಲೂ ಸಾಧ್ಯವಾಗದಂತಹ ಭಯಾನಕ ಚಿತ್ರಗಳು ಕಾಣಿಸುತ್ತವೆ. ಕಣ್ಣು ತೆರೆದರೆ, ಅಲ್ಲಿ ಏನೂ ಇರುವುದಿಲ್ಲ. ಆದರೆ ನೀವು ತುಂಬಾ ದಣಿದಿರುವ ಕಾರಣ ನಿದ್ರೆ ಮಾಡಲು ಬಯಸುತ್ತೀರಿ. ಸ್ವಲ್ಪ ಹೊತ್ತು ಕಣ್ಣು ಮುಚ್ಚುತ್ತೀರಿ, ಆಮೇಲೆ ಮತ್ತೆ ಕಣ್ಣು ತೆರೆಯುತ್ತೀರಿ. ಹೀಗೆ ನಿಮ್ಮ ನಿದ್ರೆ ಹಾಳಾಗುತ್ತದೆ.”

ಮದ್ಯಪಾನವು ಖಿನ್ನತೆಯನ್ನು ಹೆಚ್ಚು ಮಾಡಿತು ಮತ್ತು ಖಿನ್ನತೆಯು ಮದ್ಯಪಾನವನ್ನು ಹೆಚ್ಚು ಮಾಡಿತು. “ಪ್ರತಿ ಬಾರಿಯೂ, ನೀವು ಆ ಸಮಸ್ಯೆಯಲ್ಲಿ ಇನ್ನಷ್ಟು ಬಿಗಿಯಾಗಿ ಸಿಲುಕಿಕೊಳ್ಳುತ್ತೀರಿ. ಮತ್ತು ‘ನೋಡು, ನಾನು ಮೊದಲೇ ಹೇಳಿದ್ದೆ. ಮದ್ಯವೇ ಇದಕ್ಕೆ ಕಾರಣ’ ಎಂದು ಹೇಳಲು ಹೊರಗಿನ ಪ್ರಪಂಚ ಕಾಯುತ್ತಿರುತ್ತದೆ.” ಕಾಮೆಂಟೇಟರ್‌ಗಳ ಜೊತೆ ಬಾರ್‌ಗೂ ಹೋಗಲಾಗುತ್ತಿರಲಿಲ್ಲ. ಹೋದರೆ ‘ಇವನು ಕುಡಿಯುತ್ತಿದ್ದಾನೆ’ ಅನ್ನುತ್ತಿದ್ದರು. ಹಾಗಾಗಿ ಅವರು ತಮ್ಮ ಕೋಣೆಗೇ ಮದ್ಯವನ್ನು ತರಿಸಿಕೊಳ್ಳುತ್ತಿದ್ದರು.

ಕಾಮೆಂಟರಿಗೆ ನಿವೃತ್ತಿ – ಬಿಸಿಸಿಐ ಸ್ಪಷ್ಟನೆ

ಅವರು ಐಪಿಎಲ್ ಮಧ್ಯದಲ್ಲೇ ಮನೆಗೆ ಮರಳಿದಾಗ ಹಳೆಯ ವದಂತಿಗಳು ಮತ್ತೆ ಶುರುವಾದವು – ಆತ ಮದ್ಯವ್ಯಸನಿಯಾಗಿದ್ದಾನೆ, ಮಲಗಿದ್ದು ಪಂದ್ಯಕ್ಕೆ ಹೋಗುವುದನ್ನು ತಪ್ಪಿಸಿಕೊಂಡ ಎಂಬ ಮಾತುಗಳು ಕೇಳಿಬಂದವು. ಆದರೆ ಅವರು ಆಂತರಿಕವಾಗಿ ಏನನ್ನು ಎದುರಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ನಂತರ, ಮಾರ್ಚ್ 28 ರಂದು ಐಪಿಎಲ್ ಪ್ರಾರಂಭವಾಗುವ ಕೆಲವು ದಿನಗಳ ಮೊದಲು, ಬಿಸಿಸಿಐ ಪ್ರಸಾರ ತಂಡದಿಂದ ಕರೆಗಳು ಬಂದವು. ಅವರು ಶಿವರಾಮಕೃಷ್ಣನ್ ಅವರ ಸ್ನೇಹಿತರ ಮೂಲಕ ಇವರ ಯೋಗಕ್ಷೇಮವನ್ನು ವಿಚಾರಿಸಿದ್ದರು. “ಅದು ಸುಳ್ಳು ಭರವಸೆಯನ್ನು ಸೃಷ್ಟಿಸಿತು. ನನ್ನ ಸ್ನೇಹಿತರಿಗೆ ಏಕೆ ಕರೆ ಮಾಡಬೇಕು? ನಾನು ಕರೆಗಳಿಗಾಗಿ ಕಾಯುತ್ತಿದ್ದೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ನಾನು ಎದುರಿಸಿದ್ದೂ ಇದನ್ನೇ. ಸ್ಪಂಜು ಒಂದು ಮಟ್ಟದವರೆಗೆ ಮಾತ್ರ ನೀರನ್ನು ಹೀರಿಕೊಳ್ಳುತ್ತದೆ, ಅದರ ನಂತರ ಅದು ಒಡೆಯುತ್ತದೆ. ನಾನು ಇನ್ನೆಷ್ಟು ಹೊತ್ತು ಇದನ್ನು ಸಹಿಸಿಕೊಳ್ಳಬೇಕು?” ಎಂದು ಅವರು ಪ್ರಶ್ನಿಸುತ್ತಾರೆ. ಇವೆಲ್ಲ ಅವಮಾನಗಳ ನಂತರ ಅವರು ತಾವು ಕಾಮೆಂಟರಿಯಿಂದ ನಿವೃತ್ತರಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದರು.

ಶಿವರಾಮಕೃಷ್ಣನ್ ಅವರ ಆರೋಪದ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬರಲಿಲ್ಲ. ಆದರೂ, ಮಂಡಳಿಯ ಅಧಿಕಾರಿಯೊಬ್ಬರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಪ್ರತಿಕ್ರಿಯಿಸಿ, “ಬಿಸಿಸಿಐ ಎಂದಿಗೂ ಯಾವುದೇ ಆಟಗಾರ, ಮಾಜಿ ಆಟಗಾರ ಅಥವಾ ವೀಕ್ಷಕ ವಿವರಣೆಗಾರನ ವಿರುದ್ಧ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಲಕ್ಷ್ಮಣ್ ಶಿವರಾಮಕೃಷ್ಣನ್ ಅವರ ವಿಚಾರಕ್ಕೆ ಬಂದರೆ, ಕ್ರಿಕೆಟಿಗನಾಗಿ ಮತ್ತು ಕಾಮೆಂಟೇಟರ್ ಆಗಿ ಅವರ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ಬಿಸಿಸಿಐ ಎಂದಿಗೂ ಯಾರ ವಿರುದ್ಧವೂ ತಾರತಮ್ಯ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿದ್ದೀರಾ? ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಈಗಿನ ಜೀವನ: ಗಾಲ್ಫ್ ಮತ್ತು ಮೌನ

ಅವರಿಗೆ ಈಗ 60 ವರ್ಷ. ಅಭಿರಾಮಪುರಂನಲ್ಲಿರುವ ಅವರ ಮನೆಯ ಲಿವಿಂಗ್ ರೂಮ್‌ನಲ್ಲಿ ಅವರ ಕ್ರಿಕೆಟ್ ವೃತ್ತಿಜೀವನದ ಒಂದೇ ಒಂದು ಕುರುಹಿಲ್ಲ.

“15 ರಿಂದ 60ನೇ ವಯಸ್ಸಿನವರೆಗೆ- ಬರೋಬ್ಬರಿ 45 ವರ್ಷಗಳು. ಇವೆಲ್ಲವುಗಳಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಮತ್ತೆ, ಮತ್ತೆ ಆಟಗಾರರು ನನ್ನನ್ನು ನನ್ನ ಬಣ್ಣದಿಂದ ಕರೆಯುವುದು, ಪ್ರೇಕ್ಷಕರು ಜೈಕಾರ ಮಾಡಿ ಅಣಕಿಸುವುದು…. ನೀವು ಮಲಗಿದ್ದಾಗಲೂ, ಇದ್ದಕ್ಕಿದ್ದಂತೆ ಎಚ್ಚರಗೊಳ್ಳುತ್ತೀರಿ. ಆಗ ನೀವು ಯೋಚಿಸುವ ಮೊದಲ ವಿಷಯವೆಂದರೆ ನೀವು ಎದುರಿಸಿದ ಎಲ್ಲಾ ಅವಮಾನಗಳು ಮತ್ತು ನಿಮ್ಮನ್ನು ರೇಗಿಸಿದ ಹೆಸರುಗಳು.”

Shivaramakrishnan 7 Desmond Haynes

ಈಗ ಸಾಕು ಎಂದು ಅವರು ಹೇಳುತ್ತಾರೆ. “ಜೀವನವೆಂದರೆ ಕೇವಲ ಹಣವಲ್ಲ. ನಾನು ಶಾಲಾದಿನಗಳಿಂದ ಇಲ್ಲಿಯವರೆಗೆ ಬಿಸಿಸಿಐನೊಂದಿಗೆ ಇದ್ದೇನೆ. ಈಗ ನಾನು ನನ್ನ ಆಧ್ಯಾತ್ಮಿಕ ಜೀವನ, ಗಾಲ್ಫ್ ಆಟ ಮತ್ತು ಉತ್ತಮ ಆರೋಗ್ಯವಿರುವ ನೆಮ್ಮದಿಯ ಜಾಗದಲ್ಲಿರಲು ಬಯಸುತ್ತೇನೆ” ಅವರು ಈಗ ತಮ್ಮ ದಿನಗಳನ್ನು ಗಾಲ್ಫ್ ಕೋರ್ಸ್‌ನಲ್ಲಿ ಕಳೆಯುತ್ತಾರೆ. ಒಂದು ಕಾಲದಲ್ಲಿ ಇಮ್ರಾನ್ ಖಾನ್‌ಗೆ ಅದ್ಭುತವಾಗಿ ಗೂಗ್ಲಿ ಎಸೆದಿದ್ದ ಆ ಕೈಗಳು ಈಗ ಗಾಲ್ಫ್ ಸ್ಟಿಕ್ ಹಿಡಿದಿವೆ. ಈ ಬಾರಿ ಅವರು ಮೌನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಗೆದ್ದ ಟ್ರೋಫಿಗಳನ್ನು ಅವರು ಬೇರೆಯವರಿಗೆ ಕೊಟ್ಟುಬಿಟ್ಟರು. ಆದರೆ ಆ ಕಹಿ ನೆನಪುಗಳನ್ನು ಮಾತ್ರ ಕೊಡಲಾಗಲಿಲ್ಲ.

ಎಲ್  ಶಿವರಾಮಕೃಷ್ಣನ್ ಸಾಧನೆಗಳು

​ಶಿವರಾಮಕೃಷ್ಣನ್ ಅವರು 1983 ಮತ್ತು 1987ರ ನಡುವೆ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

76 ಪ್ರಥಮ ದರ್ಜೆ ಪಂದ್ಯಗಳಲ್ಲಿ 5 ಶತಕ, 3 ಅರ್ಧ ಶತಕ ಸೇರಿದಂತೆ 1802 ರನ್‌ ಪೇರಿಸಿದ್ದಾರೆ. ಹಾಗೆ 154 ವಿಕೆಟ್ ಕಬಳಿಸಿದ್ದಾರೆ

17 ವರ್ಷ ಮತ್ತು 118 ದಿನಗಳ ವಯಸ್ಸಿನಲ್ಲಿ, ಸಚಿನ್ ತೆಂಡೂಲ್ಕರ್ ಅವರು 16 ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿ ದಾಖಲೆ ಮುರಿಯುವವರೆಗೆ ಟೆಸ್ಟ್ ಆಡಿದ ಅತ್ಯಂತ ಕಿರಿಯ ಭಾರತೀಯರಾಗಿದ್ದರು.

​ಅವರ ಸಂಕ್ಷಿಪ್ತ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ‘ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನು ಗೆದ್ದಿದ್ದರು.

1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಸಿರೀಸ್ ಆಫ್ ಕ್ರಿಕೆಟ್ ಅನ್ನು ಭಾರತ ಗೆದ್ದಾಗ, ಅವರು ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಜಾವೇದ್ ಮಿಯಾಂದಾದ್ ಅವರನ್ನು ಔಟ್ ಮಾಡಿದ ಅವರ ಎಸೆತ ಎಲ್ಲರ ಬಾಯಲ್ಲೂ ಮಾತಾಗಿತ್ತು.

​ಬಿಸಿಸಿಐ ಪ್ಯಾನೆಲ್‌ನ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿ, ಅವರು 2000ರ ದಶಕದ ಆರಂಭದಿಂದಲೂ ಭಾರತದ ಪಂದ್ಯಗಳಿಗೆ ಮೈಕ್ರೊಫೋನ್ ಹಿಂದಿನ ನಿರಂತರ ಧ್ವನಿಯಾಗಿದ್ದರು.

ಅನುವಾದ: ಕೆ ಚೇತನ್ ಕುಮಾರ್

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...