ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್.ಎಸ್.ಎಸ್) ಸರ್ಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ನಿಯಮದಿಂದ ಯಾವ ಕಾನೂನಿನ ಅಡಿ ವಿನಾಯಿತಿ ಪಡೆದಿದೆ ಎಂಬುದನ್ನು ಸಾಬೀತುಪಡಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಕೇಂದ್ರ ಕಚೇರಿ ‘ಕೇಶವ ಕೃಪಾ’ಕ್ಕೆ ಭೇಟಿ ನೀಡಲು ತಾವು ಸಿದ್ಧರಿದ್ದು, ಇಲ್ಲವೇ ಆರ್.ಎಸ್.ಎಸ್ ನಾಯಕರೇ ಅಗತ್ಯ ದಾಖಲೆಗಳೊಂದಿಗೆ ತಮ್ಮ ಕಚೇರಿಗೆ ಬಂದು ಸ್ಪಷ್ಟನೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಯೂ ಸರ್ಕಾರದ ನಿಯಮಾವಳಿಗಳಡಿ ನೋಂದಣಿ ಮಾಡಿಕೊಳ್ಳಬೇಕಾದ, ದೇವಾಲಯಗಳು ತಮ್ಮ ಪ್ರತಿಯೊಂದು ದೇಣಿಗೆಗೂ ಲೆಕ್ಕ ನೀಡಬೇಕಾದ ಹಾಗೂ ಸಾಮಾನ್ಯ ನಾಗರಿಕರು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕಾದ ವ್ಯವಸ್ಥೆಯಲ್ಲಿ, ಆರ್.ಎಸ್.ಎಸ್.ಗೆ ಮಾತ್ರ ಹೇಗೆ ವಿನಾಯಿತಿ ಸಿಗಲು ಸಾಧ್ಯ ಎಂದು ಸಚಿವರು ಪ್ರಶ್ನಿಸಿದ್ದಾರೆ. ಸಂಘಟನೆಯು ಸಾಂವಿಧಾನಿಕ ನಿಬಂಧನೆಗಳಿಂದ ಹೇಗೆ ವಿನಾಯಿತಿ ಪಡೆದಿದೆ ಎಂಬುದನ್ನು ಅವರು ದಾಖಲೆಗಳ ಸಮೇತ ತೋರಿಸಲಿ. ಅದನ್ನು ಪರಿಶೀಲಿಸಿದ ಬಳಿಕ, ನನ್ನದೇ ತಪ್ಪಾಗಿದ್ದರೆ ಖಂಡಿತ ಕ್ಷಮೆಯಾಚಿಸುತ್ತೇನೆ. ಇಲ್ಲದಿದ್ದರೆ, ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಖರ್ಗೆ ಪಟ್ಟು ಹಿಡಿದಿದ್ದಾರೆ.
ಇದನ್ನು ಓದಿದ್ದೀರಾ? ಗಿಲ್ಗಿಟ್‌ನಲ್ಲಿ ಪಾಕ್ ಯಶಸ್ವಿ ಚುನಾವಣೆ; 6 ತಿಂಗಳಲ್ಲಿ ‘PoK’ ವಶವೆಂದ ಮೋದಿ ಮೌನ!
ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಹಿಂದೆ, ತಮ್ಮದು ನೋಂದಾಯಿತ ಸಂಸ್ಥೆಯಲ್ಲ, ಬದಲಾಗಿ ಅದೊಂದು ಕೇವಲ ‘ವ್ಯಕ್ತಿಗಳ ಸಮೂಹ’ ಎಂದು ಹೇಳಿದ್ದರು. ಅಲ್ಲದೆ, ತಮಗೆ ಬರುವ ಗುರು ದಕ್ಷಿಣೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ ಎಂದು ನ್ಯಾಯಾಲಯವೇ ಹೇಳಿದೆ ಎಂದು ಸಮರ್ಥಿಸಿಕೊಂಡಿದ್ದರು.
ಆರ್.ಎಸ್.ಎಸ್‌ನ ಈ ವಾದವನ್ನು ತಳ್ಳಿಹಾಕಿರುವ ಪ್ರಿಯಾಂಕ್ ಖರ್ಗೆ, ‘ಬೆಂಗಳೂರು ಕ್ಲಬ್’ ಕೂಡ ವ್ಯಕ್ತಿಗಳ ಸಮೂಹವೇ ಆಗಿದೆ, ಹಾಗಾದರೆ ಅವರಿಗೇಕೆ ನಿಯಮಗಳಿಂದ ವಿನಾಯಿತಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಚಿವರ ಈ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ್ದ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ, ಈ ಹಿಂದೆ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರೇ ಆರ್.ಎಸ್.ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿ ವಿಫಲರಾಗಿದ್ದರು ಎಂದು ಟೀಕಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಸಿ.ಟಿ. ರವಿ ಅವರಿಗೆ ಇತಿಹಾಸದ ಅರಿವಿಲ್ಲ ಎಂದಿದ್ದಾರೆ. ನೆಹರೂ ಮತ್ತು ಸರ್ದಾರ್ ಪಟೇಲ್ ಅವರು ಸಂಘಟನೆಯನ್ನು ನಿಷೇಧಿಸಿದಾಗ, ಇದೇ ನಾಯಕರು ಅವರ ಕಾಲಿಗೆ ಬಿದ್ದಿದ್ದರು. ಇಂದಿರಾ ಗಾಂಧಿಯವರು ನಿಷೇಧ ಹೇರಿದಾಗ, ಅದರಿಂದ ತಪ್ಪಿಸಿಕೊಳ್ಳಲು ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿ ಮೆಚ್ಚುಗೆಯ ಪತ್ರ ಬರೆದಿದ್ದರು ಎಂದು ಇತಿಹಾಸವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.




