ವಿದ್ಯಾರ್ಥಿಗಳು, ಯುವ ಸಮೂಹ ಮಾದಕ ವಸ್ತುಗಳಿಂದ ದೂರವಿದ್ದು, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಂತಪುರ ಪೊಲೀಸ್ ಠಾಣೆಯ ಪಿಎಸ್ಐ ದಿನೇಶ್ ಎಂ.ಟಿ. ಹೇಳಿದರು.
ಔರಾದ್ ತಾಲೂಕಿನ ಕಂದಗೂಳ ಗ್ರಾಮದ ಬಾಬು ಜಗಜೀವನರಾಮ್ ಪ್ರೌಢ ಶಾಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂತಪೂರ ಠಾಣೆ ವತಿಯಿಂದ ಹಮ್ಮಿಕೊಂಡ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು, ಸುರಕ್ಷತೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇಂದಿನ ಯುವ ಪೀಳಿಗೆ ಅಮಲು ಪದಾರ್ಥಗಳ ಬಳಕೆಗೆ ಹೆಚ್ಚು ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದರು.
ಅಕ್ಕಪಡೆಯ ಸಿಬ್ಬಂದಿ ಮೀನಾಕ್ಷಿ ನಾಗುರುಕರ್ ಮಾತನಾಡಿ, “ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯ ತುರ್ತು ಸೇವೆಗಳ ದೂರವಾಣಿ ಸಂಖ್ಯೆಗಳ ಬಗ್ಗೆ ತಿಳಿದುಕೊಂಡಿರಬೇಕು. ಯಾವುದೇ ಅನಾಹುತ ಅಥವಾ ಸಮಸ್ಯೆ ಎದುರಾದ ಸಂದರ್ಭದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು” ಎಂದು ಸಲಹೆ ನೀಡಿದರು.

“ಇತ್ತೀಚಿನ ದಿನಗಳಲ್ಲಿ ಕೆಲ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಮೋಟಾರ್ ಬೈಕ್ ಸೇರಿದಂತೆ ಇತರ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದರೆ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗುವುದರ ಜೊತೆಗೆ ಪೋಷಕರಿಗೂ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಬೀದರ್ | ಪ್ರತ್ಯೇಕ ದಾಳಿ : ₹14.50 ಲಕ್ಷ ಮೌಲ್ಯದ 25 ಕೆ.ಜಿ. ಗಾಂಜಾ ಜಪ್ತಿ, ಮೂವರ ಬಂಧನ
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ಮೈಜ್ಯೋದ್ದಿನ್, ಶಿಕ್ಷಕರಾದ ಶೈಲಜಾ, ಎಎಸ್ಐ ರವೀಂದ್ರ, ಪೊಲೀಸ್ ಸಿಬ್ಬಂದಿಗಳಾದ ಶೈಲಜಾ, ಸೂರ್ಯಕಾಂತ ದೇಶಮುಖ, ದತ್ತಾತ್ರಿ ನರೋಟೆ ಸೇರಿದಂತೆ ಪ್ರಮುಖರಾದ ತ್ರಯಂಬಕ್ ಪಾಟೀಲ್, ಕಾಶಿನಾಥ್ ಬೆಲ್ಲೆ ಸೇರಿದಂತೆ ಶಾಲೆಯ ಶಿಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




