ರಾಜ್ಯ ಸರ್ಕಾರದ ಉದ್ದೇಶಿತ ‘ಬಿಡದಿ ಟೌನ್‌ಶಿಪ್’ ಯೋಜನೆಯಿಂದ ರೈತರಿಗಾಗುವ ಅನ್ಯಾಯವನ್ನು ವಿರೋಧಿಸಿ, ರೈತರೊಂದಿಗೆ ಸೇರಿ ಆಗಸ್ಟ್ 9 ರಿಂದ ಮೂರು ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲು ಜೆಡಿಎಸ್ ಸಜ್ಜಾಗಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನವರೆಗೆ ಈ ಹೋರಾಟ ನಡೆಯಲಿದೆ. ಯೋಜನೆ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಸಮರ ಸಾರಲು ನಿರ್ಧರಿಸಿರುವ ಜೆಡಿಎಸ್, ಶನಿವಾರ ಸಮನ್ವಯ ಸಭೆ ನಡೆಸಿ ಪಾದಯಾತ್ರೆಯ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ.
ಭಾನುವಾರ (ಆಗಸ್ಟ್ 9) ಬೆಳಿಗ್ಗೆ ಬೈರಮಂಗಲ ವೃತ್ತದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಸೋಮವಾರ ಬಿಡದಿಯಲ್ಲಿ ನಡೆಯುವ ಎರಡನೇ ದಿನದ ನಡಿಗೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ.
ಬೈರಮಂಗಲ ವೃತ್ತದಿಂದ ಫ್ರೀಡಂ ಪಾರ್ಕ್‌ನವರೆಗೆ ಒಟ್ಟು 38 ಕಿ.ಮೀ. ದೂರವನ್ನು ಮೂರು ದಿನಗಳಲ್ಲಿ ಕ್ರಮಿಸಲಾಗುತ್ತದೆ (ಪ್ರತಿನಿತ್ಯ 10-12 ಕಿ.ಮೀ. ನಡಿಗೆ). ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2-3 ಸಾವಿರ ರೈತರು ಹಾಗೂ ಜೆಡಿಎಸ್‌ನ 3-5 ಸಾವಿರ ಕಾರ್ಯಕರ್ತರು ಸೇರಿದಂತೆ ಅಂದಾಜು 5 ರಿಂದ 6 ಸಾವಿರ ಮಂದಿ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯು ಆಗಸ್ಟ್ 9ರಂದು ಬೆಳಿಗ್ಗೆ ಬೈರಮಂಗಲ ವೃತ್ತದಿಂದ ಆರಂಭವಾಗಲಿದೆ. ಅಂದು ಮಧ್ಯಾಹ್ನ ಜೋಗರದೊಡ್ಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ, ಅಂದರೆ ಆಗಸ್ಟ್ 10ರಂದು ಬೆಳಿಗ್ಗೆ ಬಿಡದಿಯಿಂದ ಹೆಜ್ಜೆ ಮುಂದುವರಿಸಲಿರುವ ಮುಖಂಡರು ಹಾಗೂ ಕಾರ್ಯಕರ್ತರು, ಮಧ್ಯಾಹ್ನ ಎಂ. ಸಿರಿ ಕನ್ವೆನ್ಶನ್ ಹಾಲ್‌ನಲ್ಲಿ ಭೋಜನ ಮುಗಿಸಿ, ಸಂಜೆ ವೇಳೆಗೆ ಮೈಸೂರು ರಸ್ತೆಯ ನೈಸ್ ಜಂಕ್ಷನ್ ತಲುಪಲಿದ್ದಾರೆ.
ಅಂದು ರಾತ್ರಿ ಅಲ್ಲಿನ ಜೆ.ಕೆ. ಗ್ರ್ಯಾಂಡ್‌ನಲ್ಲಿ ವಾಸ್ತವ್ಯ ಹೂಡಲಾಗುತ್ತದೆ. ಅಂತಿಮ ದಿನವಾದ ಆಗಸ್ಟ್ 11ರಂದು ಬೆಳಿಗ್ಗೆ ನೈಸ್ ಜಂಕ್ಷನ್‌ನಿಂದ ಹೊರಡುವ ಈ ನಡಿಗೆಯು ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪುವ ಮೂಲಕ ಸಮಾರೋಪಗೊಳ್ಳಲಿದೆ.




