ಆಮೆಗತಿಯಲ್ಲಿ ಸಾಗುತ್ತಿದೆ ಜೆಜೆಎಂ; ರಾಜ್ಯದಲ್ಲಿ ಶೇ.10ರಷ್ಟು ಪೂರ್ಣಗೊಳ್ಳದ ಕಾಮಗಾರಿ

Date:

ಮನೆ-ಮನೆಗೆ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್(ಜೆಜೆಎಂ) ಯೋಜನೆಯನ್ನು 2019ರಲ್ಲಿ ಜಾರಿಗೆ ತಂದಿತು. 2024ರ ವೇಳೆಗೆ ದೇಶದ ಪ್ರತಿ ಮನೆಗೂ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಯೋಜನೆ ಹೊಂದಿದೆ. ಆದರೆ, ಕರ್ನಾಟಕದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವೇ ನಾಲ್ಕು ವರ್ಷ ಅಧಿಕಾರ ನಡೆಸಿದ್ದರೂ, ಜೆಜೆಎಂ ಯೋಜನೆ ಪ್ರಗತಿ ಸಾಧಿಸಿಲ್ಲ. ಕಾಮಗಾರಿ ಅತ್ಯಂತ ನಿಧಾನವಾಗಿದ್ದು, ಕುಂಟುತ್ತ ಸಾಗಿದೆ.

ರಾಜ್ಯದಲ್ಲಿ ಒಟ್ಟು 28,333 ಗ್ರಾಮಗಳ ಪೈಕಿ 2,593 ಗ್ರಾಮಗಳಲ್ಲಿ ಮಾತ್ರ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 25,740 ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಇನ್ನು ಬಾಕಿ ಉಳಿದಿದೆ. ಇದರಲ್ಲಿ ಶೇ.55% ಹೆಚ್ಚು ಕಾಮಗಾರಿ ಪೂರ್ಣಗೊಂಡ ಜಿಲ್ಲೆಗಳ ಪೈಕಿ ಗದಗ, ಧಾರವಾಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿವೆ. ಕೋಲಾರ ಜಿಲ್ಲೆ ಇನ್ನೂ ಶೂನ್ಯದಲ್ಲಿದೆ. ಯೋಜನೆ ಜಾರಿಯಾಗಿ ಮೂರು ವರ್ಷ ಕಳೆದರೂ ರಾಜ್ಯದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು ಪ್ರತಿಶತ 9 ರಷ್ಟು ಮಾತ್ರ, ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರತಿಶತ 1ರಷ್ಟು ಕಾಮಗಾರಿ ಸಹ ಪೂರ್ಣಗೊಂಡಿಲ್ಲ ಎಂದು ಇಲಾಖೆ ನೀಡಿದ ಮಾಹಿತಿ ನೋಡಿದರೆ ಜೆಜೆಎಂ ಯೋಜನೆ ಸಮಪರ್ಕವಾಗಿ ಅನುಷ್ಠಾನಗೊಳಿಸುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದರ್ಥ.

ವಿಧಾನ ಪರಿಷತ್‌ ಸದಸ್ಯ ಅರವಿಂದ ಕುಮಾರ್‌ ಅರಳಿ ಅವರು ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೆಜೆಎಂ ಯೋಜನೆಗೆ ಎಸ್‌ಸಿಪಿ/ಟಿಎಸ್‌ಪಿ ಅನುದಾನ ಬಳಕೆ:

ಜೆಜೆಎಂ ಯೋಜನೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಹಣ ಯಾವ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತಿದೆ. ಯೋಜನೆಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಅಭಿವೃದ್ಧಿ ಕುಂಠಿತವಾವಾಗುವುದಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿಯವರು ಪ್ರಶ್ನೆ ಕೇಳಿದ್ದರು. “ಜಲ ಜೀವನ್ ಮಿಷನ್ ಯೋಜನೆಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಗ್ರಾಮೀಣ ಜನವಸತಿಗಳಲ್ಲಿ ಅನುಷ್ಠಾನಗೊಳಿಸಲಾಗುವ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳಲ್ಲಿ ಎಸ್‌ಸಿ, ಎಸ್‌ಟಿ ಮನೆಗಳಿಗೆ ಸಹ ನಳಸಂಪರ್ಕ ಒದಗಿಸಲಾಗುತ್ತಿದೆ ಹಾಗೂ ಯೋಜನೆಯ ನಿಯಮಗಳಂತೆ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನ ಸಹ ಉಪಯೋಗಿಸಲಾಗುತ್ತಿದೆ” ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಉತ್ತರಿಸಿದ್ದಾರೆ.

ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್‌ ಖರ್ಗೆ

“ಜಲ ಜೀವನ ಮಿಷನ್ ಯೋಜನೆ ಗ್ರಾಮದೊಳಗಿನ ಕಾರ್ಯಾತ್ಮಕ ನಳಸಂಪರ್ಕ ನೀಡುವ ಕಾಮಗಾರಿಗಳಿಗೆ ಶೇಕಡ 45ರಷ್ಟು ಕೇಂದ್ರ ಹಾಗೂ ರಾಜ್ಯಸರ್ಕಾರ ಭರಿಸುತ್ತದೆ, ಉಳಿದ 10ರಷ್ಟು ಗ್ರಾಮ ಪಂಚಾಯತಿಯ ಪಾಲುಗಾರಿಕೆಯಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇಕಡ 45% ಪಾಲುಗಾರಿಕೆಯನ್ನು ಭರಿಸಲು ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಕಾಮಗಾರಿಗಳಿಗೆ ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಅನುಪಾತವಾಗಿ ಉಪಯೋಗ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.

ಶೋಷಿತರ ಅಭಿವೃದ್ದಿಗಾಗಿ ಸಾಂವಿಧಾನಿಕವಾಗಿ ಮೀಸಲಿಸಿರುವ ಅನುದಾನಕ್ಕೆ ಕನ್ನ ಹಾಕಿರುವುದು ಸರ್ಕಾರ ಒಪ್ಪಿಕೊಂಡಂತಾಗಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಶೇ.13% ಮಾತ್ರ ಪೂರ್ಣ: 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆಯವರ ತವರು ಜಿಲ್ಲೆ ಕಲಬುರಗಿ ಒಳಗೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಏಳು ಜಿಲ್ಲೆಗಳ ಒಟ್ಟು 4118 ಗ್ರಾಮಗಳ ಪೈಕಿ 557 ಹಳ್ಳಿಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಕೊಪ್ಪಳದಲ್ಲಿ (ಶೇ 24%) ಹಾಗೂ ಬೀದರ್‌ (ಶೇ 16%) ಪೂರ್ಣಗೊಂಡಿದ್ದು, ಯಾದಗಿರಿ ಹಾಗೂ ಕಲಬುರಗಿಯಲ್ಲಿ (ಶೇ 10%) ಸಹ ಕಾಮಗಾರಿ ಮುಗಿದಿಲ್ಲ.‌ ಒಟ್ಟಾರೆ ಕಲ್ಯಾಣ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿಶತ 13% ಕಾಮಗಾರಿ ಪೂರ್ಣಗೊಂಡಿದೆ.

ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಲ್ಲಿದೆ, ಆದರೆ ಬಹುತೇಕ ಹಳ್ಳಿಗಳಿಗೆ ಇನ್ನೂ ಶುದ್ದ ಕುಡಿಯುವ ನೀರು ಪೂರೈಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಕಾರ ಉಂಟಾಗಿ ಮೈಲಿಗಟ್ಟಲೆ ದೂರ ನಡೆದು ನೀರು ತರಬೇಕಾದ ಪರಿಸ್ಥಿತಿ ಕೊನೆಗೊಂಡಿಲ್ಲ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡು, ಕುಡಿಯಲು ನೀರು ಸಿಗದಿರುವ ಕಾರಣಕ್ಕೆ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಪ್ರಕರಣಗಳು ಹೆಚ್ಚು ಕಂಡು ಬಂದಿರುವುದು ಇದೇ ಭಾಗದಲ್ಲಿ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ ಎಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.

ಎಲ್ಲಡೆ ಕಳಪೆ ಕಾಮಗಾರಿ ಆರೋಪ:

ಸರ್ಕಾರ ಮನೆ-ಮನೆಗೂ ನಳ ಸಂಪರ್ಕ ಕಲ್ಪಿಸಿ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಮಹತ್ವದ ಯೋಜನೆ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆದರೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಇನ್ನೊಬ್ಬ ಗುತ್ತಿಗೆದಾರನಿಂದ ಕಾಮಗಾರಿ ಮಾಡಿಸುವ ಕಾರಣಕ್ಕೆ ಕಳಪೆ‌ ಮಟ್ಟದ ಕಾಮಗಾರಿ ನಡೆಯುತ್ತಿದೆ. ಅದರಂತೆ ಗ್ರಾಮಿಣ ಭಾಗದ ಸಿಸಿ ರಸ್ತೆಗಳು ಎಲ್ಲೆಂದರಲ್ಲಿ ಅಗೆದು, ಅವುಗಳನ್ನು ಮರಳಿ ರಸ್ತೆ ದುರಸ್ತಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ‌ ಪರದಾಡುವಂತಾಗಿದೆ ಎಂದು ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುವ ಮಹತ್ವಾಕಾಂಕ್ಷೆ ಯೋಜನೆಯ ಕಾಮಗಾರಿ 2024ರ ಒಳಗೆ ಸಮಪರ್ಕವಾಗಿ ಅನುಷ್ಠಾನಗೊಳಿಸಿ ಗುರಿ ತಲುಪುವ ಬಗ್ಗೆ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಜಲ ಜೀವನ ಮಿಷನ್ ಯೋಜನೆಯ ಕಳಪೆ ಕಾಮಗಾರಿಯಿಂದ ದೇಶದಲ್ಲಿ ಕೋಟಿಗಟ್ಟಲೆ ಹಣ ಪೊಲಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಮತ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೋಲಿಯೊ ನಿರ್ಮೂಲನೆ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದನ್ನ ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ....

ಬೆಂಗಳೂರು | ಕುಡಿಯುವ ನೀರಿಗಾಗಿ ಬಂಗಾರಪ್ಪನಗರ ನಿವಾಸಿಗಳ ಪರದಾಟ

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಇದೀಗ, ರಾಜರಾಜೇಶ್ವರಿ...

ಚಿತ್ರದುರ್ಗ | ಹಾಳಾಗಿದೆ ಆರೋಗ್ಯ ಉಪಕೇಂದ್ರ; ಗ್ರಾಮಸ್ಥರಿಗೆ ಆರೋಗ್ಯ ಸೇವೆಯೂ ದೂರ

ಚಿಕ್ಕಂದವಾಡಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಉಪ ಕೇಂದ್ರವಿದೆ. ಆದರೆ, ಅದು ನಿಜಕ್ಕೂ...

ಗದಗ | ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಹೊಸ ಕಾನೂನು ಜಾರಿ: ಸಚಿವ ಎಚ್‌.ಕೆ ಪಾಟೀಲ್

ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಮಾರ್ಚ್ 4ರಂದು ರಾಜ್ಯಾದ್ಯಂತ ನೂತನ...