ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಕಿಯೋ’ ಕಂಪ್ಯೂಟರ್‌ಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ತಂತ್ರಜ್ಞಾನವನ್ನು ತಲುಪಿಸಿ, ಭವಿಷ್ಯದ ಪೀಳಿಗೆಯನ್ನು ಸಜ್ಜುಗೊಳಿಸುತ್ತಿರುವ ಕಿಯೋನಿಕ್ಸ್ (KEONICS) ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಿಯೋನಿಕ್ಸ್’ನ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
”ನಾವು ಭವಿಷ್ಯವನ್ನು ನಿರ್ಮಿಸುವ ಹೊಸ್ತಿಲಲ್ಲಿದ್ದೇವೆ. ಎಐ ಯುಗದ ಪ್ರವೇಶದಲ್ಲಿರುವ ಈ ಸಂದರ್ಭದಲ್ಲಿ ಕಿಯೋನಿಕ್ಸ್ ಹೊಸ ಸಾಧ್ಯತೆಗಳನ್ನು ಗುರುತಿಸಿ ‘ಕಿಯೋ’ ಕಂಪ್ಯೂಟರ್‌ಗಳನ್ನು ಸಿದ್ಧಪಡಿಸಿದೆ. ಇತ್ತೀಚೆಗಷ್ಟೇ ನನ್ನಿಂದಲೇ ಇದನ್ನು ಅನಾವರಣ ಮಾಡಿಸಲಾಗಿತ್ತು. ತಂತ್ರಜ್ಞಾನ ಹಾಗೂ ವಿಜ್ಞಾನ ಎಂದರೆ ಅದು ಬೆಂಗಳೂರು ಎಂಬಷ್ಟರ ಮಟ್ಟಿಗೆ ನಮ್ಮ ನಗರ ಬೆಳೆದಿದೆ. ಇದೀಗ ಕಿಯೋನಿಕ್ಸ್ ಸಂಸ್ಥೆಯು ಗ್ರಾಮೀಣ ಶಾಲೆಗಳು ಹಾಗೂ ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನವನ್ನು ತಲುಪಿಸುತ್ತಿರುವುದು ಸ್ವಾಗತಾರ್ಹ” ಎಂದು ಪ್ರಶಂಸಿಸಿದರು.
ಕೌಶಲ ವೃದ್ಧಿಗೆ ಪಠ್ಯಕ್ರಮ ಬದಲಾವಣೆ:
“ರಾಜ್ಯದಲ್ಲಿ 30 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ. ಎಂಜಿನಿಯರಿಂಗ್ ಪದವೀಧರರಿಗೂ ಅತ್ಯಂತ ಕಡಿಮೆ ವೇತನ ಸಿಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಮಕ್ಕಳ ಕೌಶಲ ವೃದ್ಧಿಗೆ ಒತ್ತು ನೀಡಲು ಉದ್ಯಮ ಆಧಾರಿತ ಪಠ್ಯಕ್ರಮವನ್ನು ರೂಪಿಸುವಂತೆ ಸೂಚನೆ ನೀಡಿದ್ದೇನೆ. ಕೆಲವು ವಿದೇಶಗಳಲ್ಲಿ ಉದ್ಯೋಗ ನೀಡುವಾಗ ಕೇವಲ ಪದವಿಗಳನ್ನು ಕೇಳುವುದಿಲ್ಲ; ಬದಲಾಗಿ ಆ ಉದ್ಯೋಗಕ್ಕೆ ಸೂಕ್ತವಾದ ಕೌಶಲವಿದೆಯೇ ಎಂದು ಪರೀಕ್ಷಿಸುತ್ತಾರೆ. ನಮ್ಮ ಯುವಕರು ಕೇವಲ ಉದ್ಯೋಗಿಗಳಾಗದೆ ಉದ್ಯೋಗದಾತರಾಗಬೇಕು ಎಂಬುದು ಸರ್ಕಾರದ ಆಶಯ ಹಾಗೂ ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿದೆ” ಎಂದು ಹೇಳಿದರು.
‘ಬಿಯಾಂಡ್ ಬೆಂಗಳೂರು’ಗೆ ಒತ್ತು ಹಾಗೂ ಡಿಜಿಟಲ್ ಖಾತಾ:
“ಬೆಂಗಳೂರಿನ ಜತೆಗೆ ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಇತರ ಜಿಲ್ಲೆಗಳಲ್ಲೂ ಉದ್ಯಮಗಳ ಪ್ರಗತಿಗೆ ಒತ್ತು ನೀಡಲಾಗುತ್ತಿದೆ. ಆಡಳಿತದಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಬೆಂಗಳೂರಿನ 40 ಲಕ್ಷ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ದಾಖಲೆ ನೀಡಲು ಸರ್ಕಾರ ಮುಂದಾಗಿದೆ. ಎಸ್‌ಐಆರ್ ಪ್ರಕ್ರಿಯೆ ಮುಗಿದ ಬಳಿಕ ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ಖಾತಾ ವಿತರಣೆ ಮಾಡಲಾಗುವುದು. ಸಮಸ್ಯೆಗಳು ಏನೇ ಇದ್ದರೂ ಸಕಾರಾತ್ಮಕವಾಗಿ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಮುಖ್ಯಮಂತ್ರಿಗಳು ವಿವರಿಸಿದರು.
50 ವರ್ಷಗಳ ಪ್ರಗತಿಯ ಪಯಣ:
ಕಿಯೋನಿಕ್ಸ್‌ನ ಇತಿಹಾಸವನ್ನು ಮೆಲುಕು ಹಾಕಿದ ಸಿಎಂ, “ನಾನು ಶಾಲೆಯಲ್ಲಿ ಓದುವಾಗ ಕಿಯೋನಿಕ್ಸ್ ಆರಂಭವಾಗಿತ್ತು. ಅಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು, ವೀರಪ್ಪ ಮೊಯ್ಲಿ ಕೈಗಾರಿಕಾ ಸಚಿವರಾಗಿದ್ದರು ಹಾಗೂ ಎಸ್.ಎಂ. ಕೃಷ್ಣ ಉಪಸಚಿವರಾಗಿದ್ದರು. ಅಂದು ಅವರು ಅಲಂಕರಿಸಿದ್ದ ಸ್ಥಾನದಲ್ಲಿ ಇಂದು ನಾನು ನಿಂತಿರುವುದು ನನ್ನ ಭಾಗ್ಯ. ಅವರು ಹಾಕಿದ ದೂರದೃಷ್ಟಿಯ ಬುನಾದಿಯಿಂದಾಗಿ ಕಿಯೋನಿಕ್ಸ್ 50 ವರ್ಷಗಳ ಅನ್ವೇಷಣೆ ಹಾಗೂ ಪ್ರಗತಿಯ ಪಯಣ ಸವೆಸಿದೆ. ಕಿಯೋನಿಕ್ಸ್ ಆರಂಭವಾದಾಗ ಬೆಂಗಳೂರಿನ ಜನಸಂಖ್ಯೆ ಕೇವಲ 20 ಲಕ್ಷ ಇತ್ತು, ಇಂದು 1.40 ಕೋಟಿ ತಲುಪಿದೆ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ನಮ್ಮ ಬೆಂಗಳೂರಿನಲ್ಲಿ ಬರೋಬ್ಬರಿ 26 ಲಕ್ಷ ಐಟಿ ವೃತ್ತಿಪರರಿದ್ದಾರೆ” ಎಂದರು.
ಐಐಎಸ್‌ಸಿ ಸ್ಥಾಪನೆ ಹಾಗೂ ಇತಿಹಾಸದ ಹೆಜ್ಜೆಗುರುತುಗಳು:
“ಸ್ವಾಮಿ ವಿವೇಕಾನಂದ ಹಾಗೂ ಜಮ್‌ಶೆಡ್‌ಜಿ ಟಾಟಾ ಅವರು ಹಡಗಿನಲ್ಲಿ ಪ್ರಯಾಣಿಸುವಾಗ ಭಾರತಕ್ಕೆ ವಿಜ್ಞಾನದ ಅಗತ್ಯದ ಬಗ್ಗೆ ಚರ್ಚಿಸಿದ್ದರು. ಬಳಿಕ ಅವರು ಮೈಸೂರು ಮಹಾರಾಜರನ್ನು ಭೇಟಿಯಾಗಿ ಮನವಿ ಮಾಡಿದಾಗ, ರಾಜರು 300 ಎಕರೆ ಜಾಗ ಹಾಗೂ 5 ಲಕ್ಷ ರೂ. ನೆರವು ನೀಡಿದರು. ಅಲ್ಲಿಂದ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ (IISc) ಸ್ಥಾಪನೆಯಾಗಿ ವಿಜ್ಞಾನದ ಪಯಣ ಆರಂಭವಾಯಿತು. ಅದರ ಪ್ರತಿಫಲವಾಗಿ ಇಂದು ರಾಜ್ಯದಲ್ಲಿ 250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಉದ್ಯೋಗದಲ್ಲಿದ್ದಾರೆ. ಈ ವಿಚಾರವನ್ನು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳ ಗಮನಕ್ಕೂ ತಂದಿದ್ದೇನೆ” ಎಂದು ಸ್ಮರಿಸಿದರು.
ಬದಲಾದ ತಂತ್ರಜ್ಞಾನದ ಯುಗ:
“ನಮ್ಮ ಕಾಲದಲ್ಲಿ ಆಗಷ್ಟೇ ಕ್ಯಾಲ್ಕುಲೇಟರ್, ಟಿವಿಗಳು ಬಂದಿದ್ದವು. 1981ರಲ್ಲಿ ದೂರವಾಣಿ ಸಂಪರ್ಕ ಪಡೆಯಲು ನಾನು ಸಂಸದ ರಾಜಗೋಪಾಲ್ ಅವರಿಂದ ಶಿಫಾರಸು ಪಡೆದುಕೊಂಡಿದ್ದೆ. ಆದರೆ, ಇಂದು ಎಲ್ಲರ ಕೈಯಲ್ಲೂ ಎರಡೆರಡು ಮೊಬೈಲ್‌ಗಳಿವೆ. ಇದೀಗ ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಕಾಲಘಟ್ಟದಲ್ಲಿದ್ದೇವೆ. ಕಿಯೋನಿಕ್ಸ್ ಸಂಸ್ಥೆಯ ಪ್ರಥಮ ವ್ಯವಸ್ಥಾಪಕ ನಿರ್ದೇಶಕ ಬಾಳಿಗ ಅವರ ಪುತ್ಥಳಿ ನಿರ್ಮಿಸಿರುವುದು ಸಂತೋಷದ ವಿಚಾರ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ತಮ್ಮ ಮೂಲವನ್ನು ಮರೆತಿಲ್ಲ” ಎಂದು ಶ್ಲಾಘಿಸಿದರು.
ಬೆಂಗಳೂರಿಗೆ ತಂತ್ರಜ್ಞಾನದ ಗುರುತು ತಂದುಕೊಟ್ಟಿರುವ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ, ದೇವನಹಳ್ಳಿ ಏರ್‌ಪೋರ್ಟ್ ರಸ್ತೆ ಹಾಗೂ ನೆಲಮಂಗಲ ಮೇಲ್ಸೇತುವೆಗಳನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ನೆನಪಿಸಿದ ಮುಖ್ಯಮಂತ್ರಿಗಳು, ಭವಿಷ್ಯದಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಹೆಚ್ಚಿನ ಜಾಗದ ಅಗತ್ಯವಿದ್ದರೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.




