ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ವಿದ್ಯಾರ್ಥಿನಿ ಮೇಲಿನ ಭೀಕರ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೆಪ್ಟೆಂಬರ್ 19ರ ಸಂಜೆ ಜಮುಯಿ-ಲಖೀಸರಾಯ್ ರಸ್ತೆಯ ಮಡ್ವಾ ಬೆಟ್ಟದ ಸಮೀಪ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತಮ್ಮ ಕೋಚಿಂಗ್ ತರಗತಿಯನ್ನು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ, ಅವರನ್ನು ಮಾಸ್ಕ್ ಧರಿಸಿದ್ದ 6 ರಿಂದ 7 ಕಾಮುಕ ಪುಂಡ ಯುವಕರು ತಡೆದು ನಿಲ್ಲಿಸಿ, ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಬಾಲಕಿಯು ಕೈಮುಗಿದು ಬಿಟ್ಟುಬಿಡುವಂತೆ ಎಷ್ಟೇ ಬೇಡಿಕೊಂಡರೂ ಲೆಕ್ಕಿಸದೆ, ಆಕೆಯ ಮೇಲೆ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿ ಕಿರುಕುಳ ನೀಡಿದ್ದಾರೆ. ಈ ಇಡೀ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ವಿಡಿಯೋ ಕಂಡ ಸಾರ್ವಜನಿಕರು ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ, ಜಮುಯಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಜಮುಯಿ ಎಸ್‌ಡಿಪಿಒ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ಒಟ್ಟು 7 ಆರೋಪಿಗಳನ್ನು ಗುರುತಿಸಿ, ಆರಂಭದಲ್ಲಿ ಮೂವರನ್ನು ಬಂಧಿಸಿದ್ದರು.
ಪ್ರಕರಣದ ಮುಖ್ಯ ಆರೋಪಿ ನಂದನ್ ಯಾದವ್ ಎಂಬಾತನನ್ನು ಬಂಧಿಸಿ, ಸ್ಥಳ ಪರಿಶೀಲನೆಗೆ ಕರೆದೊಯ್ದಾಗ, ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆತನನ್ನು ಜಮುಯಿಯ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು, ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಬಿಹಾರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶ್ರವಣ್ ಕುಮಾರ್ ಅವರು ವಿಕೃತ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ಪ್ರಪಂಚವು ಸಂಪೂರ್ಣವಾಗಿ ಅಪರಾಧಮುಕ್ತವಾಗಿಲ್ಲ. ಇಂತಹ ‘ಛಿಟ್‌ಪುಟ್’ (ಸಣ್ಣಪುಟ್ಟ) ಘಟನೆಗಳು ನಡೆಯುತ್ತಲೇ ಇರುತ್ತವೆ” ಎಂದು ಹೇಳಿದ್ದು, ದಾರ್ಷ್ಟ್ಯ ಪ್ರದರ್ಶಿಸಿದ್ದಾರೆ.
ಇನ್ನು, ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹಾ ಸೇರಿದಂತೆ ಕೆಲ ನಾಯಕರು ಕೂಡ ಘಟನೆಯನ್ನು ‘ಚೋಟಿ-ಮೋಟಿ ಘಟನಾ’ (ಸಣ್ಣಪುಟ್ಟ ಘಟನೆ) ಎಂದು ಹಗುರವಾಗಿ ಮಾತನಾಡಿದ್ದಾರೆ. ಆಡಳಿತಾರೂಢ ಬಿಜೆಪಿ-ಜೆಡಿಯು ನಾಯಕರ ಹೇಳಿಕೆಗಳ ವಿರುದ್ಧವೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಲೋಕಸಭೆ ವಿಪಕ್ಷ ನಾಯಕರಾಹುಲ್ ಗಾಂಧಿ ಮತ್ತು ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ಈ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಹೆಣ್ಣುಮಕ್ಕಳ ಭದ್ರತೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ದೌರ್ಜನ್ಯಗಳನ್ನು ಸಣ್ಣ ಘಟನೆಗಳೆಂದು ಕರೆಯುವುದು ಸರ್ಕಾರದ ಗಂಭೀರತೆಯಿಲ್ಲದ ನಡವಳಿಕೆಯನ್ನು ತೋರಿಸುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.




