ಚಾಮರಾಜನಗರ ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಜನತೆಯೊಂದಿಗೆ ಇಡೀ ಸರ್ಕಾರ ನಿಂತಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಜಿಲ್ಲೆಗೆ ಸುಮಾರು ₹3 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ನೀಡಲಾಗಿತ್ತು. ಪ್ರಸ್ತುತ ಸರ್ಕಾರವೂ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಸಚಿವರು, ಸಂಸದರು ಹಾಗೂ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದರು.
ಕೊಳ್ಳೇಗಾಲಕ್ಕೆ ಉತ್ತಮ ಕಾಲ ಬಂದಿದೆ. ಹನೂರಿಗೂ ಅಭಿವೃದ್ಧಿ ಹರಿಯುತ್ತಿದೆ. ಕೊಳ್ಳೇಗಾಲದ ರೇಷ್ಮೆ ಪಾರಂಪರಿಕ ವೃತ್ತಿಯಾಗಿದ್ದು, ತಾವು ಕೂಡ ರೇಷ್ಮೆ ನಾಡಿನಿಂದ ಬಂದವರು. ಕನಕಪುರ, ರಾಮನಗರ, ಮಾಗಡಿ, ಕೊಳ್ಳೇಗಾಲ, ಮಳವಳ್ಳಿ, ಹನೂರು ಹಾಗೂ ಶಿಡ್ಲಘಟ್ಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಮೈಸೂರು ಸಿಲ್ಕ್ ಪ್ರಸಿದ್ಧ ಬ್ರ್ಯಾಂಡ್ ಆಗಿದೆ. ಟಿಪ್ಪು ಸುಲ್ತಾನ್ ಅವರು ನಾಡಿಗೆ ರೇಷ್ಮೆ ಪರಿಚಯಿಸಿದರು. ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಮಗ್ಗ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಸಂಪುಟದಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಫಲ ತಲುಪಿದಾಗ ಮಾತ್ರ ಅವರ ಬದುಕಿನಲ್ಲಿ ಆಶಾಕಿರಣ ಮೂಡುತ್ತದೆ. ಸೇವೆಯೇ ನಮ್ಮ ಧರ್ಮ, ಅಭಿವೃದ್ಧಿಯೇ ನಮ್ಮ ಗುರಿ ಹಾಗೂ ಜನರ ಸಂಕಷ್ಟಕ್ಕೆ ನೆರವಾಗುವುದೇ ನಮ್ಮ ಧ್ಯೇಯ. ಮಾತಿನಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ನಿರಂತರ ಶ್ರಮ ಮತ್ತು ಶಿಸ್ತಿನಿಂದ ಅಭಿವೃದ್ಧಿ ಸಾಧಿಸಬೇಕು. ಯಾರ ಅಧಿಕಾರವೂ ಶಾಶ್ವತವಲ್ಲ. ಆದರೆ ಜನರಿಗಾಗಿ ಮಾಡಿದ ಸೇವೆ ಮತ್ತು ಅಭಿವೃದ್ಧಿಯ ಕೆಲಸಗಳನ್ನು ಜನರು ನೆನಪಿಸಿಕೊಳ್ಳುವವರೆಗೆ ಅವು ಶಾಶ್ವತವಾಗಿರುತ್ತವೆ ಎಂದರು.

ಚಾಮರಾಜನಗರ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ₹120 ಕೋಟಿ ವೆಚ್ಚದ ಕಾಮಗಾರಿಗೆ ಕಾರ್ಯದೇಶ ನೀಡಲಾಗಿದೆ. ಹನೂರಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಚಾಮರಾಜನಗರದ ಬಳಿ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ₹450 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಸುಮಾರು ₹1,000 ಕೋಟಿ ಮೊತ್ತದ ನೀರಾವರಿ ಕಾಮಗಾರಿಗಳಿಗೆ ಜಿಲ್ಲೆಗೆ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರ ಆಹಾರ ಕಿಟ್‌ಗಳ ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರ ಬದ್ಧವಾಗಿದೆ.
ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಬಂದಿದ್ದು, ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಬಹುದಿನಗಳ ಬೇಡಿಕೆಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದ ಅವರು, ಮಾಜಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರವನ್ನು ತಮ್ಮ ಸರ್ಕಾರ ಕೈಗೊಂಡಿದೆ. ಶಾಸಕರು ಮತ್ತು ಸಚಿವರು ಪ್ರತಿ ಜಿಲ್ಲೆಯ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು.
ಈ ವಿಶೇಷ ವರದಿ ಓದಿದ್ದೀರಾ? ಕರ್ನಾಟಕ ಮತ್ತೊಂದು ಬೆಂಗಾಲ್ ಆಗಲು ಬಿಡುವುದಿಲ್ಲ; SIR ರದ್ದಾಗಲೇಬೇಕು: ಪ್ರಕಾಶ್ ರಾಜ್
ಕಾರ್ಯಕ್ರಮದಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಚೆಲುವರಾಯಸ್ವಾಮಿ, ಲೋಕಸಭಾ ಸದಸ್ಯ ಸುನೀಲ್ ಬೋಸ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ಡಾ. ಡಿ. ತಿಮ್ಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.




