ಈ ದಿನ ಸಂಪಾದಕೀಯ | ಕೆಪಿಎಸ್‌ಸಿಯ ʼಭ್ರಷ್ಟʼ ರೋಗಕ್ಕೆ ಅರೆಬರೆ ತೇಪೆ ಸಾಕು; ಶಾಶ್ವತ ಮದ್ದು ಬೇಕು!

Date:

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಸುತ್ತ ದಶಕಗಳಿಂದ ಕವಿದಿರುವ ಭ್ರಷ್ಟಾಚಾರದ ಕಾರ್ಮೋಡ ಕರಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಧ್ಯಕ್ಷರ ಅಮಾನತು, ಮರುನೇಮಕ, ನ್ಯಾಯಾಲಯದ ಮಧ್ಯಪ್ರವೇಶ, ಇಡಿ ದಾಳಿಗಳೆಲ್ಲವೂ ರಾಜ್ಯದ ಉನ್ನತ ನೇಮಕಾತಿ ಸಂಸ್ಥೆಯೊಂದರ ದುಸ್ಥಿತಿಗೆ ಸಾಕ್ಷಿ. ಪ್ರತಿಬಾರಿ ಆರೋಪ ಬಂದಾಗಲೂ ತೇಪೆ ಹಚ್ಚುವ ಕೆಲಸವಾಗುತ್ತಿದೆಯೇ ಹೊರತು, ಬುಡಕ್ಕೆ ಅಂಟಿರುವ ರೋಗಕ್ಕೆ ಮದ್ದು ಅರೆಯುವ ಪ್ರಯತ್ನಗಳಾಗಿಲ್ಲ. ಆಯೋಗದ ಆಡಳಿತದಲ್ಲಿ ಆಮೂಲಾಗ್ರ ಸುಧಾರಣೆ ತಂದು, ಸಂಪೂರ್ಣ ವ್ಯವಸ್ಥೆಯನ್ನೇ ಶುದ್ಧೀಕರಿಸುವ ಕಾಲ ಈಗ ಬಂದಿದೆ.

- Advertisement -

ಕೆಪಿಎಸ್‌ಸಿಯಲ್ಲಿನ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿರುವ ಬೆನ್ನಲ್ಲೇ, ಅಮಾನತುಗೊಂಡಿದ್ದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಸುತ್ತ ತನಿಖೆಯ ಕುಣಿಕೆ ಬಿಗಿಯಾಗುತ್ತಿದೆ. ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ರಾಜ್ಯದ ವಿವಿಧೆಡೆ ಸುಮಾರು 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಕೆಪಿಎಸ್‌ಸಿ ಕೇಂದ್ರ ಕಚೇರಿಯಿಂದ ಹಿಡಿದು ಶಿವಶಂಕರಪ್ಪ ಅವರ ನಿವಾಸ, ಆಯೋಗದ ಸದಸ್ಯೆ ಶಾಂತಾ ಹೊಸಮನಿ ಅವರ ಮನೆ, ಮಧ್ಯವರ್ತಿಗಳೆಂದು ಶಂಕಿಸಲಾಗಿರುವವರ ಸ್ಥಳಗಳು, ಆಯ್ಕೆಯಾದ ಅಭ್ಯರ್ಥಿಗಳ ಆವರಣ, ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ನಡೆಸಿದ ಸಂಸ್ಥೆಯ ಕಚೇರಿಯವರೆಗೆ ಇಡಿ ಶೋಧ ನಡೆಸಿದೆ. ನೇಮಕಾತಿ ಅಕ್ರಮದ ಆರೋಪ ಈಗ ಆಯೋಗದ ಗೋಡೆ ದಾಟಿ ಕೇಂದ್ರ ತನಿಖಾ ಸಂಸ್ಥೆಯ ಬಾಗಿಲು ತಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ವಿಶೇಷವಾಗಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ಆರೋಪಗಳು ಗಾಬರಿಗೊಳಿಸುತ್ತವೆ. ಪರೀಕ್ಷೆಗೂ ಮುನ್ನವೇ ಕನಿಷ್ಠ 29 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಕ್ರಮವಾಗಿ ಲಭ್ಯವಾಗಿತ್ತು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಅಧ್ಯಕ್ಷರು, ಆಯೋಗದ ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿಕರು ಅಗ್ರಸ್ಥಾನ ಪಡೆದಿದ್ದರು, ಪರೀಕ್ಷೆ ಬಳಿಕ ಮಧ್ಯವರ್ತಿಗಳು ಅಭ್ಯರ್ಥಿಗಳನ್ನು ಸಂಪರ್ಕಿಸಿ, ಒಎಂಆರ್‌ ಶೀಟ್‌ಗಳನ್ನು ತಿದ್ದಿ ಆಯ್ಕೆ ಮಾಡಿಸುವುದಾಗಿ ಹೇಳಿ ₹80 ಲಕ್ಷದವರೆಗೂ ಹಣ ಕೇಳಿದ್ದರು, ಅಧ್ಯಕ್ಷರ ಸಂಬಂಧಿ ಎನ್ನಲಾದವರೊಬ್ಬರು ಹಿಂದೆ ಪದವಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ ಎಂಬಿತ್ಯಾದಿ ಆರೋಪಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಹುಳುಕಿದೆ ಎನ್ನುವುದನ್ನಂತೂ ಬಯಲು ಮಾಡಿವೆ.

ಶಿವಶಂಕರಪ್ಪ ಅವರ ಪುತ್ರಿ ನಕಲಿ ಆದಾಯ ಪ್ರಮಾಣಪತ್ರ ಬಳಸಿ ಒಬಿಸಿ ಕೋಟಾದಡಿ ಹುದ್ದೆ ಪಡೆದಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯಪಾಲರು ಕಳೆದ ಜುಲೈ 10ರಂದು ಅವರನ್ನು ಅಮಾನತುಗೊಳಿಸಿದ್ದರು. ಅವರ ನಿರೀಕ್ಷಣಾ ಜಾಮೀನು ಅರ್ಜಿ ಆಗಸ್ಟ್ 11ರಂದು ನ್ಯಾಯಾಲಯದಲ್ಲಿ ವಜಾಗೊಂಡಿತ್ತು.  ಮತ್ತೊಂದೆಡೆ, ವಶಪಡಿಸಿಕೊಂಡಿರುವ 329 ಒಎಂಆರ್‌ ಶೀಟ್‌ಗಳ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಈ ನಡುವೆ ಆಗಸ್ಟ್ 20ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅವರ ವಿರುದ್ಧ ಎರಡು ಪ್ರತ್ಯೇಕ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ವೈದ್ಯ ಮಂಜುನಾಥ್ ಪ್ರತ್ಯೇಕವಾಗಿ ಸಿಬಿಐ ತನಿಖೆಗೆ ಮನವಿ ಮಾಡಿದ್ದಾರೆ. ಈಗಾಗಲೇ ರಾಜ್ಯದ ಸಿಐಡಿ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಇಡಿ ಪ್ರವೇಶಿಸಿದೆ.

1951ರಲ್ಲಿ ಸ್ಥಾಪನೆಯಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಏಳು ದಶಕಗಳಿಗೂ ಹೆಚ್ಚು ಇತಿಹಾಸವಿದೆ. ರಾಜ್ಯದ ಸರ್ಕಾರಿ ಸೇವೆಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆಯೊಂದು, ಸುದೀರ್ಘ ಇತಿಹಾಸದ ಬಳಿಕವೂ ನೇಮಕಾತಿ ಅಕ್ರಮ, ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗದಿರುವುದು ವಿಷಾದಕರ ಮಾತ್ರವಲ್ಲ, ಆತಂಕಕಾರಿ. ಕೆಪಿಎಸ್‌ಸಿಯ ಸುತ್ತಲಿನ ವಿವಾದಗಳನ್ನು ಕೆದಕಿದರೆ, ಇದು ಯಾವುದೋ ಒಂದೆರಡು ಅಧಿಕಾರಿಗಳ ವ್ಯಕ್ತಿಗತ ತಪ್ಪುಗಳಿಂದ ಹಿಡಿದು ವ್ಯವಸ್ಥೆಯೊಳಗೆ ಕಾಲಕಾಲಕ್ಕೆ ಮರುಕಳಿಸುತ್ತಿರುವ ಸಾಂಕ್ರಾಮಿಕ ʼರೋಗʼ ಎಂಬ ಕಟು ಸತ್ಯವನ್ನು ಸ್ಪಷ್ಟಪಡಿಸುತ್ತದೆ.

1998, 1999 ಮತ್ತು 2004ರ ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಯಲ್ಲಿನ ಅಕ್ರಮಗಳ ಆರೋಪಗಳು ಕೆಪಿಎಸ್‌ಸಿ ಇತಿಹಾಸದ ಹಳೆಯ ಕಪ್ಪು ಅಧ್ಯಾಯಗಳಲ್ಲೊಂದು. ಆಗ ಆಯೋಗದ ಅಧ್ಯಕ್ಷರಾಗಿದ್ದ ಡಾ. ಎಚ್.ಎನ್. ಕೃಷ್ಣ ಅವರ ಅವಧಿಯ ನೇಮಕಾತಿಯಲ್ಲಿ ಅರ್ಹತೆ ಇಲ್ಲದವರು ಆಯ್ಕೆಯಾಗಿದ್ದಾರೆ, ಪರೀಕ್ಷೆಯನ್ನೇ ಬರೆಯದವರಿಗೆ ಅವಕಾಶ ಕಲ್ಪಿಸಲಾಗಿದೆ, ನಕಲಿ ಅಂಕಪಟ್ಟಿಗಳನ್ನು ಬಳಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪ್ರಕರಣಗಳು ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿ, ತನಿಖೆಯ ಹಂತಕ್ಕೂ ತಲುಪಿದವು. 2011ರ ಅಕ್ಟೋಬರ್‌ನಲ್ಲಿ ಸಿಐಡಿ ಕೃಷ್ಣ ಅವರನ್ನು ಬಂಧಿಸಿತ್ತು. ಸಿಐಡಿ ವರದಿಯಲ್ಲೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವುದನ್ನು ಉಲ್ಲೇಖಿಸಲಾಗಿತ್ತು. ಬಳಿಕ 2011ರಿಂದ 2013ರವರೆಗಿನ ಅವಧಿ ಮತ್ತೊಂದು ಕಪ್ಪು ಅಧ್ಯಾಯ. ಗೋನಾಳ್ ಭೀಮಪ್ಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆರಂಭವಾದ 326 ಗೆಜೆಟೆಡ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಆರೋಪಗಳು ಪರೀಕ್ಷೆಯಿಂದ ಮೌಲ್ಯಮಾಪನ, ಸಂದರ್ಶನದವರೆಗೂ ವ್ಯಾಪಿಸಿದವು. ಸಿಐಡಿ ತನಿಖೆಯ ಪ್ರಕಾರ, ಆಯ್ಕೆ ಮಾಡಿದ ಮೌಲ್ಯಮಾಪಕರ ಮೂಲಕ ಮುಖ್ಯ ಪರೀಕ್ಷೆಯ ಮೌಲ್ಯಮಾಪನದಲ್ಲಿ ಹಸ್ತಕ್ಷೇಪ ಮಾಡಲಾಗಿದೆ, ವಿಷಯ ಪರಿಣಿತರಲ್ಲದವರಿಂದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಲಾಗಿದೆ ಎಂಬ ಆರೋಪವೂ ಕೇಳಿಬಂತು. ಅಭ್ಯರ್ಥಿಗಳಿಂದ ಹಣದ ಬೇಡಿಕೆ ಇಡಲಾಗಿದೆ, ಹಣ ಕೊಡದವರಿಗೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡಲಾಗಿದೆ ಎಂಬ ಆರೋಪಗಳು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದವು. 2012ರಲ್ಲಿ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳು, 2013ರಲ್ಲಿ ಸಂದರ್ಶನಗಳು ನಡೆದ ಈ ನೇಮಕಾತಿ ಪ್ರಕ್ರಿಯೆಯೂ ಕೊನೆಗೆ ಸಿಐಡಿ ತನಿಖೆಯ ಸುಳಿಗೆ ಸಿಲುಕಿತು. ಅರ್ಹತೆಯ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕಿದ್ದ ಅಭ್ಯರ್ಥಿಗಳು ವರ್ಷಗಳ ಪರಿಶ್ರಮದ ಬಳಿಕವೂ ಅನಿಶ್ಚಿತತೆಯಲ್ಲೇ ಉಳಿಯಬೇಕಾಯಿತು. ಒಂದು ನೇಮಕಾತಿ ಸಂಸ್ಥೆಯ ವೈಫಲ್ಯದ ಬೆಲೆಯನ್ನ ಅಭ್ಯರ್ಥಿಗಳು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲ್ಲೇ.

2015ರಲ್ಲಿ ಮತ್ತೆ ಪ್ರಶ್ನೆಪತ್ರಿಕೆ ಸಂಬಂಧಿತ ಅವ್ಯವಸ್ಥೆ ತಲೆದೋರಿತು. ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಯಲ್ಲಿ ನಿಗದಿತ ದಿನದ ಬದಲು ಮುಂದಿನ ದಿನಗಳ ಪ್ರಶ್ನೆಪತ್ರಿಕೆಗಳು ಅಭ್ಯರ್ಥಿಗಳಿಗೆ ಹಂಚಿಕೆಯಾಗಿವೆ ಎಂಬ ಆರೋಪಗಳೆದ್ದವು. 2019-20ರ ವೇಳೆಗೆ ವಿವಾದದ ಸ್ವರೂಪ ಮತ್ತಷ್ಟು ಬದಲಾಯಿತು. ಉತ್ತರಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ನೀಡಿಕೆ, ವಿಷಯ ಪರಿಣಿತರಲ್ಲದವರಿಂದ ಮೌಲ್ಯಮಾಪನ, ಡಿಜಿಟಲ್ ಮೌಲ್ಯಮಾಪನದಲ್ಲಿನ ಲೋಪಗಳು ಸೇರಿದಂತೆ ಹಲವು ಆರೋಪಗಳು ನ್ಯಾಯಾಲಯದವರೆಗೆ ತಲುಪಿದವು. ಪ್ರಶ್ನೆಪತ್ರಿಕೆ ಲೀಕ್‌ ಆಗುವುದ ಬಿಡಿ, ಉತ್ತರಪತ್ರಿಕೆಯ ಮೌಲ್ಯಮಾಪನವೇ ಅನುಮಾನಕ್ಕೊಳಗಾದರೆ, ವಿಶ್ವಾಸಾರ್ಹತೆ ಉಳಿಯುವುದು ಹೇಗೆ? 1998ರ ಜೆ.ಎಚ್. ಪಟೇಲ್ ನೇತೃತ್ವದ ಜನತಾ ದಳ ಸರ್ಕಾರದಿಂದ ಹಿಡಿದು ಇಂದಿನ ಕಾಂಗ್ರೆಸ್‌ವರೆಗೆ ಸರ್ಕಾರಗಳು ಬದಲಾಗಿವೆ, ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರೂ ಬದಲಾಗಿದ್ದಾರೆ. ಆದರೆ ಅಕ್ರಮಗಳ ಸರಣಿ ಮಾತ್ರ ನಿಂತಿಲ್ಲ.

ಈಗ 2026ರಲ್ಲಿ ಮತ್ತೊಮ್ಮೆ ಕೆಪಿಎಸ್‌ಸಿ ಗಂಭೀರ ಆರೋಪಗಳ ಕೇಂದ್ರವಾಗಿದೆ. ಇಷ್ಟೆಲ್ಲ ಆರೋಪಗಳು, ತನಿಖೆಗಳು, ನ್ಯಾಯಾಂಗ ಮಧ್ಯಪ್ರವೇಶಗಳು ಮತ್ತು ನೇಮಕಾತಿ ಪ್ರಕ್ರಿಯೆ ರದ್ದಾದ ಉದಾಹರಣೆಗಳ ಬಳಿಕವೂ ಕೆಪಿಎಸ್‌ಸಿಯಲ್ಲಿ ಮೂಲಭೂತ ಬದಲಾವಣೆ ಏಕೆ ಸಾಧ್ಯವಾಗಿಲ್ಲ? ವರ್ಷಗಳು ಕಳೆದಿವೆ, ತಂತ್ರಜ್ಞಾನ ಬದಲಾಗಿದೆ, ಪರೀಕ್ಷಾ ವಿಧಾನಗಳೂ ಬದಲಾಗಿವೆ. ಆದರೆ ಆರೋಪಗಳ ಮೂಲ ಸ್ವರೂಪ ಮಾತ್ರ ಹಾಗೇ ಇದೆ. ಇದು ಅಧಿಕಾರಿಗಳನ್ನ ಬದಲಿಸುವುದರಿಂದ ಮಾತ್ರ ಸರಿಯಾಗುವ ಸಮಸ್ಯೆಯಂತೂ ಅಲ್ಲ, ಬುಡದಿಂದಲೇ ಕಿತ್ತೊಗೆಯಬೇಕಿರುವ ಕೊಳೆತ ಬೇರು.

ಈಗ ಮಾಡಬೇಕಿರುವುದು ಮತ್ತೊಂದು ತನಿಖಾ ಸಮಿತಿ ರಚಿಸುವುದು, ಮತ್ತೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸುವುದು ಅಥವಾ ವಿವಾದ ತಣ್ಣಗಾಗುವವರೆಗೆ ಕಾದು ಕೈತೊಳೆದುಕೊಳ್ಳುವುದಲ್ಲ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಮುದ್ರಣ, ಸಾಗಣೆ, ಸಂಗ್ರಹ, ಪರೀಕ್ಷಾ ಕೇಂದ್ರಕ್ಕೆ ತಲುಪಿಸುವಿಕೆ, ಉತ್ತರಪತ್ರಿಕೆಗಳ ಡಿಜಿಟಲೀಕರಣ, ಮೌಲ್ಯಮಾಪನ, ಅಂಕಗಳ ಸಂರಕ್ಷಣೆ ಮತ್ತು ಅಂತಿಮ ಫಲಿತಾಂಶ ಪ್ರಕಟಿಸುವವರೆಗಿನ ಪ್ರತಿಯೊಂದು ಹಂತದಲ್ಲೂ ಯಾರಿಗೆ ಯಾವ ಹಂತದಲ್ಲಿ ಪ್ರವೇಶವಿದೆ ಎಂಬುದು ಸಂಪೂರ್ಣ ಸಾರ್ವಜನಿಕವಾಗಬೇಕು. ಒಂದೇ ಹಂತದಲ್ಲಿ ಒಂದೇ ವ್ಯಕ್ತಿ ಅಥವಾ ಸಣ್ಣ ಗುಂಪಿಗೆ ಸಂಪೂರ್ಣ ನಿಯಂತ್ರಣ ಸಿಗದಂತೆ ಬಹುಹಂತದ ಭದ್ರತಾ ವ್ಯವಸ್ಥೆ ರೂಪಿಸಬೇಕು. ಅದನ್ನು ಪಾರದರ್ಶಕಗೊಳಿಸಬೇಕು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಅಮಿತ್ ಶಾ ರಾಜೀನಾಮೆ ನೀಡಬೇಕಲ್ಲವೇ?

ಅಷ್ಟೇ ಅಲ್ಲ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲೂ ಪಾರದರ್ಶಕತೆಯನ್ನು ಕಡ್ಡಾಯಗೊಳಿಸಬೇಕಿದೆ. ಅಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಪರಿಶೀಲಿಸುವ ಸ್ವತಂತ್ರ ವ್ಯವಸ್ಥೆ ಇರಬೇಕು. ಹಿತಾಸಕ್ತಿ ಸಂಘರ್ಷವಿರುವ ಸಂದರ್ಭಗಳಲ್ಲಿ ಸಂಬಂಧಿಕರು ಅಥವಾ ಪರಿಚಿತರ ಅಭ್ಯರ್ಥಿಗಳಿರುವ ನೇಮಕಾತಿ ಪ್ರಕ್ರಿಯೆಯಿಂದ ಸಂಬಂಧಪಟ್ಟವರು ಸಂಪೂರ್ಣವಾಗಿ ದೂರ ಉಳಿಯುವಂತೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಕೆಪಿಎಸ್‌ಸಿಯ ಮೇಲಿನ ನಂಬಿಕೆಯನ್ನು ಮರಳಿ ಕಟ್ಟಬೇಕು. ಪ್ರತಿಯೊಂದು ನೇಮಕಾತಿ ಪರೀಕ್ಷೆಯಲ್ಲೂ ಅಭ್ಯರ್ಥಿಗೆ ತನ್ನ ಉತ್ತರಪತ್ರಿಕೆ ಹೇಗೆ ಮೌಲ್ಯಮಾಪನಗೊಂಡಿತು, ತನ್ನ ಅಂಕ ಹೇಗೆ ನಿಗದಿಯಾಯಿತು, ಆಯ್ಕೆಪಟ್ಟಿ ಯಾವ ಮಾನದಂಡದ ಮೇಲೆ ರೂಪುಗೊಂಡಿತು ಎಂಬುದನ್ನು ಪ್ರಶ್ನಿಸುವ ಮತ್ತು ಪರಿಶೀಲಿಸುವ ಅವಕಾಶ ಇರಬೇಕು. ಯಾರೇ ತಪ್ಪು ಮಾಡಿದರೂ, ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ತನಿಖೆ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದ ವ್ಯವಸ್ಥೆ ನಿರ್ಮಾಣವಾಗಬೇಕು.

ಈಗಲೂ ಕಣ್ಣೊರೆಸುವ ಮತ್ತೊಂದು ಪ್ರಯತ್ನ ನಡೆದರೆ, ಮುಂದೊಂದು ದಿನ ಮತ್ತೊಂದು ಹಗರಣ ಸಿಡಿಯುವುದು ಖಚಿತ. ಹಾಗಾಗಿ ನೇಮಕಾತಿ ಪ್ರಕ್ರಿಯೆಯ ಪ್ರತಿಯೊಂದು ಬಾಗಿಲಿಗೂ ಪಾರದರ್ಶಕತೆಯ ಬೀಗ ಜಡಿಯಬೇಕು. ಪ್ರತಿಯೊಂದು ನಿರ್ಧಾರಕ್ಕೂ ಹೊಣೆಗಾರಿಕೆಯ ಕೀಲಿ ಕೊಡಬೇಕು. ಪ್ರತಿ ಅಕ್ರಮಕ್ಕೂ ತ್ವರಿತ ಶಿಕ್ಷೆಯ ವ್ಯವಸ್ಥೆ ಬರಬೇಕು. ಇಲ್ಲದಿದ್ದರೆ ದಶಕಗಳ ಬಳಿಕವೂ ಮುಂದಿನ ಪುಟದಲ್ಲಿ ಮತ್ತೆ ಅದೇ ಕಥೆ ಬರೆಯಬೇಕಾಗುತ್ತದೆ. ಕೆಪಿಎಸ್‌ಸಿಯ ರೋಗಕ್ಕೆ ಈಗ ತೇಪೆ ಸಾಕಾಗದು, ಶಸ್ತ್ರಚಿಕಿತ್ಸೆಯೇ ಅನಿವಾರ್ಯ. ಸರ್ಕಾರ ತಳಮಟ್ಟದ ಪುನಾರಚನೆ ಅಥವಾ ಬೇರು ಮಟ್ಟದ ಸುಧಾರಣೆಗೆ ಕೈ ಹಚ್ಚುವುದ ಬಿಟ್ಟು, ನಾಳೆ ಬಾ ಎಂದು ಬರೆಯುವುದು ತರವಲ್ಲ. ಮುತ್ತಿ ಕಾಡುತ್ತಿರುವ ನಿರುದ್ಯೋಗ ಯುವಜನರನ್ನು ಸಿಡಿದೇಳಿಸುವ ದಿನಗಳು ಅಂಗಳದಲ್ಲಿ ನಿಂತಿವೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...