ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದೆ. ಮತದಾನದ ವೇಳೆ ಶಾಸಕರು ಅಡ್ಡ ಮತದಾನ ಮಾಡುವ ಮತ್ತು ಗೈರುಹಾಜರಾಗುವ ಭೀತಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿದೆ. ತಮ್ಮ ಶಾಸಕರನ್ನು ಕಾವಲು ಕಾಯಲು ಪಕ್ಷಗಳ ಮುಂದಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಇರಿಸಿಕೊಂಡು, ಎಲ್ಲರನ್ನೂ ಒಟ್ಟಾಗಿ ಇಟ್ಟುಕೊಳ್ಳಲು ಕಸರತ್ತು ನಡೆಸಿವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಇಬ್ಬರನ್ನು ಕಣಕ್ಕಿಳಿಸಿದೆ. ಇತ್ತ ಜೆಡಿಎಸ್, ಗೆಲುವಿಗೆ ಅಗತ್ಯವಿರುವಷ್ಟು ಕನಿಷ್ಠ ಸಂಖ್ಯಾಬಲ ಹೊಂದಿಲ್ಲದಿದ್ದರೂ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಇದು ಚುನಾವಣಾ ಕಣದಲ್ಲಿ ತಲ್ಲಣ ಸೃಷ್ಟಿಸಿದೆ.
ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆದಿದ್ದು, ಅದರ ಬೆನ್ನಲ್ಲೇ ಪಕ್ಷವು ತನ್ನ ಶಾಸಕರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರೆಸಾರ್ಟ್‌ನಲ್ಲಿ ಉಳಿಯುವಂತೆ ಸೂಚನೆ ನೀಡಿದೆ. ಗುರುವಾರ ಮತದಾನ ನಡೆಯುವ ಸಮಯಕ್ಕೆ ಅವರನ್ನು ನೇರವಾಗಿ ರೆಸಾರ್ಟ್‌ನಿಂದ ವಿಧಾನ ಸೌಧಕ್ಕೆ ಕರೆತರಲು ನಿರ್ಧರಿಸಿದೆ. ಸಭೆಯಲ್ಲಿ, ‘ಜೆಡಿಎಸ್ ನಾಯಕರು ಕಾಂಗ್ರೆಸ್‌ನ ಕೆಲವು ಶಾಸಕರನ್ನು ರಹಸ್ಯವಾಗಿ ಸಂಪರ್ಕಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಪದ್ಧತಿ ಇರುವುದರಿಂದ, ಶಾಸಕರಿಗೆ ಮತ ಚಲಾಯಿಸುವ ವಿಧಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರವನ್ನೂ ಕಾಂಗ್ರೆಸ್ ಹಮ್ಮಿಕೊಂಡಿದೆ.
ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಆರೋಪ ಕುರಿತು ಪ್ರಕ್ರಿಯಿಸಿರುವ ಕೇಂದ್ರ ಸಚಿವ, ಜೆಡಿಎಸ್ ನಾಯಕ ಕುಮಾರಸ್ವಾಮಿ, “ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಕಾಂಗ್ರೆಸ್ ಶಾಸಕರನ್ನು ಸೆಳೆಯು ಅಗತ್ಯವಿಲ್ಲ. ನಮ್ಮ ಪಕ್ಷದ ಮತಗಳು ಒಟ್ಟಾಗಿ ಇರಲಿ ಎಂಬ ಕಾರಣಕ್ಕಷ್ಟೇ ನಾವು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಕುತಂತ್ರದ ಮೂಲಕ ಸ್ಥಾನವನ್ನು ಗೆಲ್ಲಲೇಬೇಕು ಎಂಬ ಉದ್ದೇಶ ನಮಗಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!
“ನಮ್ಮದು ಸಣ್ಣ ಪಕ್ಷ. ನಾವು ಏನು ಮಾಡಲು ಸಾಧ್ಯ? ಅವರ ಬಳಿ (ಕಾಂಗ್ರೆಸ್) ಜನಬಲ, ತೋಳ್ಬಲ ಹಾಗೂ ಹಣಬಲ ಎಲ್ಲವೂ ಇದೆ. ನಾವು ಅವರ ವಿರುದ್ಧ ಹೋರಾಡಲು ಸಾಧ್ಯವೇ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ತಮ್ಮ ಶಾಸಕರನ್ನು ದೇವನಹಳ್ಳಿಯ ರೆಸಾರ್ಟ್‌ಗೆ ಸ್ಥಳಾಂತರಿಸಿರುವ ಜೆಡಿಎಸ್, ತನ್ನ ಮೈತ್ರಿ ಪಕ್ಷವಾಗಿರುವ ಬಿಜೆಪಿ ಅದರ ಹೆಚ್ಚುವರಿ ಮತಗಳನ್ನು ತಮಗೆ ವರ್ಗಾಯಿಸುವಂತೆ ವಿನಂತಿಸಿದೆ.
ಮತಗಳ ಲೆಕ್ಕಾಚಾರ ಹೇಗಿದೆ?
ಮೊದಲ ಸುತ್ತಿನಲ್ಲಿ ನೇರವಾಗಿ ಗೆಲುವು ಸಾಧಿಸಲು ಒಬ್ಬ ಅಭ್ಯರ್ಥಿಗೆ 28 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿರುತ್ತದೆ. ಈ ನಿಗದಿತ ಮತಗಳ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್‌ನ ನಾಲ್ಕು ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ ಮೋಹನ್ ಮತ್ತು ಶಿವಣ್ಣ ಮಾಳವಳ್ಳಿ ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರು ಸುಲಭವಾಗಿ ಜಯಗಳಿಸುವ ಸ್ಥಿತಿಯಲ್ಲಿದ್ದಾರೆ.
ಆದರೆ, ಕಣದಲ್ಲಿರುವ ಏಳನೇ ಸ್ಥಾನಕ್ಕೆ ಕಾಂಗ್ರೆಸ್‌ಗೆ ಎರಡು ಮತಗಳ ಕೊರತೆಯಿದೆ. ಆದಾಗ್ಯೂ, ತಮ್ಮ ಅಭ್ಯರ್ಥಿ ಕಾರ್ತಿಕ್ ಅವರಿಗೆ ಬೀಳುವ ಎರಡನೇ ಪ್ರಾಶಸ್ತ್ಯದ ಮತಗಳು ಅವರ ಗೆಲುವನ್ನು ಖಚಿತಪಡಿಸಲಿವೆ ಎಂಬ ಪೂರ್ಣ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.
ಇತ್ತ, ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಹೆಚ್ಚುವರಿ ಮತಗಳು ಮತ್ತು ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಂಭಾವ್ಯ ಬೆಂಬಲ ಸಿಕ್ಕರೂ ಅಗತ್ಯವಿರುವ ಸಂಖ್ಯಾಬಲ ದೊರೆಯುವುದಿಲ್ಲ. ಆದರೂ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಹಾಗೆ ನೋಡಿದರೆ, ಜೆಡಿಎಸ್‌ನ ಪ್ರಮುಖ ಶಾಸಕರಲ್ಲಿ ಒಬ್ಬರಾದ ಜಿ.ಟಿ. ದೇವೇಗೌಡ ಅವರು ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಂತೆಯೇ, ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಕಾಂಗ್ರೆಸ್ ನಾಯಕರೊಂದಿಗೆ ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರೂ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ, 7ನೇ ಸ್ಥಾನವು ಕಾಂಗ್ರೆಸ್ ಪಾಲಾಗಲಿದೆ!



