ಸೋರುವ ಕೊಠಡಿ, ಶಿಕ್ಷಕರ ಕೊರತೆ ಸೇರಿ ಹಲವು ಕೊರತೆಗಳ ನಡುವೆ ಶಾಲೆಗಳು ಬಾಗಿಲು ತೆರೆದು ಎರಡು ವಾರ ಕಳೆದಿವೆ. ಕೆಲವೆಡೆ ಮಕ್ಕಳಿದ್ದರೆ ಶಿಕ್ಷಕರಿಲ್ಲ, ಶಿಕ್ಷಕರಿದ್ದರೆ ಮಕ್ಕಳಿಲ್ಲ, ಇನ್ನೊಂದಿಷ್ಟು ಕಡೆ ಮಕ್ಕಳು, ಶಿಕ್ಷಕರಿದ್ದಾರೆ. ಮೂಲ ಸೌಕರ್ಯ ಕೊರತೆಗಳ ನಡುವೆ ತರಗತಿಗಳು ನಡೆಸುವಂತಾಗಿದೆ.
ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್ ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ತರಗತಿಗೆ ಅನುಗುಣವಾಗಿ ಕೋಣೆಗಳಿಲ್ಲದೆ 2-3 ತರಗತಿಯ ಮಕ್ಕಳನ್ನು ಒಂಂದೇ ಕೋಣೆಯಲ್ಲಿ ಗುಂಪುಗೂಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಲ್ಲಿ ಇಬ್ಬರೇ ಕಾಯಂ ಶಿಕ್ಷಕರಿದ್ದು, ಓರ್ವ ಅತಿಥಿ ಶಿಕ್ಷಕರ ನೇಮಕಕ್ಕೆ ಮನವಿ ಮಾಡಿದ್ದಾರೆ.
ನೂತನ ಕೊಠಡಿ ನಿರ್ಮಿಸಲು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದ ಮೂರ್ನಾಲ್ಕು ಕೋಣೆಗಳನ್ನು ನೆಲಸಮ ಮಾಡಲಾಗಿದೆ. ಉಳಿದ ಎರಡು ಕೋಣೆಗಳಲ್ಲಿ ಈಗ ಏಳು ತರಗತಿಗಳು ನಡೆಯುತ್ತಿವೆ. ನೆಲಸಮಗೊಳಿಸಿ ಹೊಸ ಕಟ್ಟಬೇಕಾದ ಶಿಕ್ಷಣ ಇಲಾಖೆ ವರ್ಷದಿಂದ ಅನುದಾನಕ್ಕಾಗಿ ಕಾಯುತ್ತಿದೆ.
ಸುಣ್ಣ-ಬಣ್ಣ ಕಂಡು ಹಲವು ವರ್ಷಗಳೇ ಕಳೆದ, ಮಳೆ ಬಂದರೆ ಸೋರುವ ಕೊಠಡಿಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸಿ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದು, ಕೈಯಲ್ಲಿ ಜೀವ ಹಿಡಿದು ಪಾಠ ಕೇಳಲು ಬೆಳಗ್ಗೆಯಿಂದ ಸಂಜೆವರೆಗೆ ಕುಳಿತುಕೊಳ್ಳಬೇಕಾದ ಸ್ಥಿತಿ ಮಕ್ಕಳದ್ದಾಗಿದೆ.

1 ರಿಂದ 7ನೇ ತರಗತಿವರೆಗೆ ಈಗ 37 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 7ನೇ ತರಗತಿವರೆಗೆ ಮುಖ್ಯಶಿಕ್ಷಕ ಸೇರಿ ಇಬ್ಬರೇ ಕಾಯಂ ಶಿಕ್ಷಕರಿದ್ದಾರೆ. ಹಳೆ ಶಾಲಾ ಕಟ್ಟಡ ಇರುವ ಖಾಲಿ ಜಾಗದಲ್ಲಿ ನೂತನ ಕೊಠಡಿ ನಿರ್ಮಾಣ ಕಾರ್ಯಕ್ಕಾಗಿ ಎದುರು ನೋಡುವಂತಾಗಿದೆ. ಹೀಗಾಗಿ ಸುಮಾರು ಮೂರು ದಶಕಗಳ ಹಳೆಯ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿರುವ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿ ಬೋಧಿಸುವ ಶಿಕ್ಷಕರು ಚಿಂತಾಕ್ರಾಂತರಾಗಿದ್ದಾರೆ.
“ನಮ್ಮೂರ ಸರ್ಕಾರಿ ಶಾಲೆಯ ಶಿಥಿಲಗೊಂಡ ಕೋಣೆಗಳನ್ನು ನೆಲಸಮಗೊಳಿಸಿ ವರ್ಷ ಕಳೆಯುತ್ತಿದೆ. ಎರಡು ಕೋಣೆ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ, ಇಲ್ಲಿಯವರೆಗೆ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಹಳೆಯ ಕೋಣೆಗಳಲ್ಲಿಯೇ ಮಕ್ಕಳ ಪಾಠ, ಪ್ರವಚನ ನಡೆಯುತ್ತಿದೆ” ಎಂದು ಗ್ರಾಮದ ಲೋಕೇಶ ಕಾಂಬಳೆ ಹೇಳುತ್ತಾರೆ.
“ಮಳೆಗಾಲ ಆರಂಭವಾಗಿದೆ, ಸ್ವಲ್ಪ ಮಳೆಯಾದರೆ ಸೋರುವ ಕೋಣೆಯಲ್ಲಿ ಕುಳಿತುಕೊಳ್ಳುವುದು ಶಿಕ್ಷಕ, ಮಕ್ಕಳ ಆತಂಕಕ್ಕೆ ಕಾರಣವಾಗಿದೆ. ಅವಘಡ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ನೂತನ ಕೋಣೆಗಳ ನಿರ್ಮಾಣ ಕಾಮಗಾರಿ ಆರಂಭಿಸಲು ಮುಂದಾಗಬೇಕು” ಕಾಂಬಳೆ ಒತ್ತಾಯಿಸಿದ್ದಾರೆ.
ಈ ಶಾಲೆ ರಸ್ತೆಯ ಎರಡು ಬದಿಯಲ್ಲಿ ಕೋಣೆಗಳಿವೆ. ಮಕ್ಕಳು ತರಗತಿಯಿಂದ ಹೊರ ಬಂದರೆ ರಸ್ತೆಯಲ್ಲಿ ತಿರುಗಾಡುವುದು ಸಹಜವಾಗಿದೆ. ಇಲ್ಲಿಯವರೆಗೆ ಈ ಶಾಲೆ ಕಾಂಪೌಂಡ್ ಹಾಗೂ ಆಟದ ಮೈದಾನ ಕಂಡೇ ಇಲ್ಲ. ಕಿರಿಯ ಪ್ರಾಥಮಿಕ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ. ಮಕ್ಕಳ ಆಟಕ್ಕೆ ರಸ್ತೆಯೇ ಮೈದಾನ ಎಂಬಂತಾಗಿದೆ. ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆಯೂ ಇಲ್ಲದಿರುವುದಕ್ಕೆ ಮಕ್ಕಳ ಶೌಚಕ್ಕೆ ಬಯಲೇ ಗತಿಯಾಗಿದೆ.
“ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಬಹುತೇಕ ಕೊಠಡಿಗಳು ಬಿರುಕು ಬಿಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಇದರಿಂದ ಶಾಲೆಗೆ ಸೇರುವ ಮಕ್ಕಳ ದಾಖಲಾತಿಯು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು” ಎಂದು ಗ್ರಾಮಸ್ಥರು ಮನವಿ ಮಾಡುತ್ತಾರೆ.

ಇದನ್ನೂ ಓದಿ : ಭಾಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜೈರಾಜ ಪಾತ್ರೆ ಆಯ್ಕೆ
ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತಿಯೊಬ್ಬ ಮಗುವಿಗೂ ಸುರಕ್ಷಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ರಾಚಪ್ಪ ಗೌಡಗಾಂವ್ ಶಾಲೆಯ ಪರಿಸ್ಥಿತಿ ನೋಡಿದರೆ ಆ ಗುರಿ ಇನ್ನೂ ದೂರವೇ ಉಳಿದಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂಜಾಗೃತೆಯಿಂದ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುವುದು ಒಳಿತು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



