ನವೆಂಬರ್ 13ರ ಶುಕ್ರವಾರ, ಬೆಂಗಳೂರಿನಲ್ಲಿ ಮೆಟ್ರೋದ ನಾಲ್ಕನೇ ಮಾರ್ಗ ‘ಪಿಂಕ್ ಲೈನ್’ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಮಾರ್ಗವೂ ಸೇರಿದಂತೆ ಬೆಂಗಳೂರಿನ ಮೆಟ್ರೋ 104 ಕಿ.ಮೀ ಮಾರ್ಗವನ್ನು ಹೊಂದುವ ಮೂಲಕ, ದೇಶದ ಎರಡನೇ ದೊಡ್ಡ ಮೆಟ್ರೋ ಸಂಪರ್ಕ ಜಾಲವಾಗಿ ಗುರುತಿಸಿಕೊಂಡಿದೆ.
ಇದೇ ಸಂದರ್ಭದಲ್ಲಿ ಮೆಟ್ರೋಗೆ ಸಂಬಂಧಿಸಿದ ಅನುದಾನದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿದೆ. ಮೆಟ್ರೋ ಯೋಜನೆಗೆ ಅತಿ ಹೆಚ್ಚು ಅನುದಾನ ನೀಡುತ್ತಿರುವುದು ರಾಜ್ಯ ಸರ್ಕಾರ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಕಾಂಗ್ರೆಸ್ ಸುಳ್ಳು ಲೆಕ್ಕ ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ. ಇಬ್ಬರೂ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ತಮ್ಮದೇ ಆದ ಅಂಕಿ ಅಂಶಗಳನ್ನು ಮಂಡಿಸಿದ್ದಾರೆ.
ಪಿಂಕ್ ಲೈನ್ ಸಾರ್ವಜನಿಕ ಲೋಕಾರ್ಪಣೆಯ ಹಿನ್ನೆಲೆ, ನವೆಂಬರ್ 11ರಂದು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರು, ರಾಜ್ಯ ಮತ್ತು ಕೇಂದ್ರ ಅನುದಾನಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.
ಇದುವರೆಗಿನ ಬೆಂಗಳೂರಿನ ಮೆಟ್ರೊ ಯೋಜನೆಯ 1, 2, 2A, 2B ಫೇಸ್ ಹಾಗೂ ಫೇಸ್ 3 ಅಂದಾಜು ವೆಚ್ಚವನ್ನು ಸೇರಿಸಿ ಒಟ್ಟು 77,891 ಕೋಟಿ ವೆಚ್ಚವಾಗಿದೆ. ಇದರಲ್ಲಿ ಕರ್ನಾಟಕದ ಪಾಲು 65,291 ಕೋಟಿ ರೂ. ಶೇ. 83.8 ಕೇಂದ್ರದ ಪಾಲು 12,600 ಕೋಟಿ ರೂ. ಶೇ. 16.2 ಆಗಿದೆ.
ವಿವಿಧ ಹಂತಗಳ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನದ ಅಂಕಿ ಅಂಶ
| ಹಂತ | ಕಿ.ಮೀ | ಒಟ್ಟು ವೆಚ್ಚ | ರಾಜ್ಯದ ಪಾಲು | ಕೇಂದ್ರ ಪಾಲು |
| 1 | 42.30 | 14,761 | 11,688 | 3,073 |
| 2 | 75.06 | 32,387 | 27,106 | 5,281 |
| 2ಎ, 2ಬಿ | 58.19 | 15,131 | 13,144 | 1,987 |
| 3 | 44.65 | 15,611 | 13,352 | 2,259 |
ರಾಜ್ಯ ಸರ್ಕಾರ ಭರಿಸಿದ ವೆಚ್ಚಗಳ ವಿವರ
- 28,958 ರೂ. ವಿದೇಶದಿಂದ ಮಾಡಿರುವ ಸಾಲ. ಕೇಂದ್ರ ಗ್ಯಾರಂಟಿ ಇದ್ದು ಸಾಲ ತೀರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. (ಇದಕ್ಕೆ ಸಂಸದ ತೇಜಸ್ವಿ ಸೂರ್ಯ ವಿಭಿನ್ನವಾದ ತರ್ಕವನ್ನು ಕೊಟ್ಟಿದ್ದಾರೆ)
- ಭೂಸ್ವಾಧೀನ ಮತ್ತು ಪುನರ್ವಸತಿ ವೆಚ್ಚವಾಗಿ 14,404
- ಈಕ್ವಿಟಿ ಮೊತ್ತ 9,164
- ಅನುದಾನ ಮತ್ತು ಮೌಲ್ಯ ಸಂಗ್ರಹಣೆ ಮೊತ್ತವಾಗಿ 4,818
- ರಾಜ್ಯ ತೆರಿಗೆ 3,915
- ಕೇಂದ್ರ ತೆರಿಗೆಗಳ ಅರ್ಧದಷ್ಟು ಮೊತ್ತಕ್ಕೆ ಸಾಲ 3,270
- ನಿರ್ಮಾಣ ಅವಧಿಯ ಬಡ್ಡಿಯಾಗಿ 761 ಕೋಟಿ ರೂ.
ಇದುವರೆಗೂ ಬಿಎಂಆರ್‌ಸಿಎಲ್ ಕಟ್ಟಿದ ಸಾಲ ಕಂತಿನ 5,018 ಕೋಟಿಗಳಲ್ಲಿ ರಾಜ್ಯ ಸರ್ಕಾರ ನೀಡಿರುವುದು 4,502 ಕೋಟಿಯಾಗಿದೆ. ಕೇಂದ್ರ ಸರ್ಕಾರದ ಅನುಮೋದನೆ ತಡವಾದ ಕಾರಣ ನಷ್ಟವಾದ ಮೊತ್ತ 1,124 ಇದರಲ್ಲಿ ರಾಜ್ಯ ಸರ್ಕಾರದ ಪಾಲು 1,069 ಕೋಟಿಯಾಗಿದೆ ಎಂದು ಕೃಷ್ಣ ಬೈರೇಗೌಡರು ವಿವರಿಸಿದರು.
ಮೆಟ್ರೋ ಎಲ್ಲ ಮಾರ್ಗದ ಖರ್ಚು-ವೆಚ್ಚದಲ್ಲಿ ಸಿಂಹಪಾಲು ರಾಜ್ಯ ಸರ್ಕಾರದ್ದೇ ಆಗಿದೆ. ರಾಜ್ಯ ಸರ್ಕಾರಕ್ಕೆ ಐದು ರೂಪಾಯಿ ವೆಚ್ಚವಾದರೆ, ಕೇಂದ್ರ ಸರ್ಕಾರ ಒಂದು ರೂಪಾಯಿ ವೆಚ್ಚ ಭರಿಸುತ್ತಿದೆ ಎಂದು ಅಂಕಿ ಅಂಶಗಳನ್ನು ಅವರು ಮಂಡಿಸಿದರು.
ಅಂಕಿ ಅಂಶಗಳನ್ನು ಹೇಳುವ ಸಂದರ್ಭದಲ್ಲಿ ಕೃಷ್ಣಬೈರೇಗೌಡ ಅವರು ಹೇಳಿರುವಂತೆ ಭೂಸ್ವಾಧೀನ ವೆಚ್ಚ, ಯೋಜನಾ ವೆಚ್ಚದಲ್ಲಿನ ಹೆಚ್ಚಳ ಹಾಗೂ ಬಿಎಂಆರ್‌ಸಿಎಲ್ ಅನುಭವಿಸುವ ನಗದು ನಷ್ಟಗಳ ಸಂಪೂರ್ಣ ಹೊರೆಯನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಅಲ್ಲದೆ, ವಿದೇಶಿ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಕುಸಿತದಿಂದ ಉಂಟಾಗುವ ಮರುಪಾವತಿ ಹೊಣೆಯನ್ನೂ ರಾಜ್ಯ ಸರ್ಕಾರವೇ ಹೊರುತ್ತಿದೆ. ಹೊರಗಿನ ಸಾಲಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೇವಲ ‘ಸಮನ್ವಯಕಾರ’ನಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರವಾಗಿ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸಿ ಕೆಲವು ಅಂಕಿ ಅಂಶಗಳನ್ನು ವಿವರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತಪ್ಪು ಲೆಕ್ಕಗಳನ್ನು ತೋರಿಸುತ್ತಾ ಜನರಿಗೆ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ಈ ಲೇಖನ ಓದಿದ್ದೀರಾ : ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!
ತೇಜಸ್ವಿ ಸೂರ್ಯ ಪ್ರಕಾರ ಬಿಎಂಆರ್‌ಸಿಎಲ್ MOUಗೆ ಅನುಗುಣವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ 50:50 ಅನುಪಾತದಂತೆ ಸಮಾನ ಮಾಲಿಕತ್ವವನ್ನು ಹೊಂದಿದೆ. ನಿರ್ಮಾಣಕ್ಕೆ ವೆಚ್ಚವಾಗಿರುವ 77,891 ಕೋಟಿಗಳಲ್ಲಿ ಕೇಂದ್ರವು 41,558 ಕೋಟಿ ರೂ. (53.35%) ಮತ್ತು ರಾಜ್ಯ ಸರ್ಕಾರ 36,333 ಕೋಟಿ ರೂ. (46.65%) ಅನುದಾನವನ್ನು ಕೊಟ್ಟಿವೆ. ಆದರೆ ರಾಜ್ಯ ಸರ್ಕಾರವು ವಿದೇಶಿ ಬ್ಯಾಂಕ್‌ಗಳಿಂದ ಬಂದಿರುವ ಸಾಲದ ಮೊತ್ತವಾದ 28,958 ಕೋಟಿ ರೂ.ಗಳನ್ನು ತನ್ನ ಲಕ್ಕದಲ್ಲಿ ತೋರಿಸಿ ಸುಳ್ಳು ಹರಡುತ್ತಿದೆ ಎಂದು ಹರಿಹಾಯ್ದರು.
ಸಾಲ ತೆಗೆದುಕೊಳ್ಳುತ್ತಿರುವುದು ಬಿಎಂಆರ್‌ಸಿಎಲ್, ಸಾಲಕ್ಕೆ ಗ್ಯಾರಂಟಿಯಾಗಿ ಸಾಲ ಕೊಡಿಸುತ್ತಿರುವುದು ಕೇಂದ್ರ ಸರ್ಕಾರ, ಆ ಸಾಲವನ್ನು ತೀರಿಸುವುದು ಬಿಎಂಆರ್‌ಸಿಎಲ್ ಆಗಿರುವಾಗ ಇದರಲ್ಲಿ ರಾಜ್ಯ ಸರ್ಕಾರದ ಪಾಲೇನಿದೆ ಎಂದು ಪ್ರಶ್ನಿಸಿದರು.
ಇಂದು ಮೆಟ್ರೋ ಏನಾದರೂ ನಷ್ಟದಲ್ಲಿ ನಡೆಯುತ್ತಿದ್ದರೆ ಅದಕ್ಕೆ ರಾಜ್ಯ ಸರ್ಕಾರದ ದುರಾಡಳಿತವೇ ಕಾರಣ ಎಂದರು.
ಆದರೆ, ತೇಜಸ್ವಿ ಸೂರ್ಯ ತಮ್ಮ ವಾದದಲ್ಲಿ ವಿದೇಶಿ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಕುಸಿತದಿಂದ ಉಂಟಾಗುವ ಮರುಪಾವತಿ ಹೊಣೆಯನ್ನೂ ರಾಜ್ಯ ಸರ್ಕಾರ ಹೊರುತ್ತಿರುವ ಬಗ್ಗೆ ಮಾತನಾಡಲಿಲ್ಲ.
ತೇಜಸ್ವಿ ಸೂರ್ಯ ಮುಚ್ಚಿಟ್ಟ ಸತ್ಯಗಳು
ಪತ್ರಿಕಾಗೋಷ್ಠಿಯಲ್ಲಿ ತೇಜಸ್ವಿ ಸೂರ್ಯರವರು ಎಲ್ಲ ಸತ್ಯಗಳನ್ನು ಬಿಚ್ಚಿಟ್ಟಿದ್ದಾಗಿ ಹೇಳಿದ್ದಾರೆ. ಆದರೆ, ಕೆಲವು ಸತ್ಯಾಂಶಗಳನ್ನು ಮುಚ್ಚಿಟ್ಟಿರುವುದು ಮೇಲ್ಮಟ್ಟಕ್ಕೆ ಕಾಣಿಸುತ್ತದೆ.
ಸಾಲದ ವಿಷಯವಾಗಿ ವಿದೇಶಿ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿದರಲ್ಲಿ ನೇರವಾಗಿ ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸಾಲ ನೀಡಲು ಭಾರತ ಸರ್ಕಾರ ಗ್ಯಾರಂಟಿ ನೀಡುವುದೇನೋ ನಿಜ. ಸಾಲದ ಒಪ್ಪಂದದ ಪ್ರಕಾರ, JICA, ADB, EIB ಮುಂತಾದ ವಿದೇಶ ಬ್ಯಾಂಕ್‌ಗಳಿಂದ ಪಡೆದ ಸಾಲದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸುವ ಪ್ರಾಥಮಿಕ ಜವಾಬ್ದಾರಿ ಬಿಎಂಆರ್‌ಸಿಎಲ್ ಸಂಸ್ಥೆಯದ್ದೇ ಆಗಿರುತ್ತದೆ ಎಂಬುದು ಅಷ್ಟೇ ಸತ್ಯ.
ಆದರೆ, BMRCL ಸಂಸ್ಥೆಯು ಸಾಲ ಮರುಪಾವತಿಸಲು ತನ್ನ ಸ್ವಂತ ಆದಾಯ ಸಾಕಾಗದಿದ್ದಾಗ ಅಥವಾ ಯೋಜನೆ ಪೂರ್ಣಗೊಳ್ಳುವ ಮುನ್ನವೇ ಮರುಪಾವತಿ ಅವಧಿ ಶುರುವಾದಾಗ, ಆ ಆರ್ಥಿಕ ಕೊರತೆಯನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂಬ ವಾಸ್ತವ ಸತ್ಯವನ್ನು ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಲೇ ಇಲ್ಲ.
ವಾಸ್ತವದಲ್ಲಿ BMRCL ತನ್ನ ಆಂತರಿಕ ಆದಾಯ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಅನುದಾನದ ಮೂಲಕ ಈವರೆಗೆ ಸಾಲ ಮರುಪಾವತಿ ಮಾಡುತ್ತಾ ಬಂದಿದೆ ಎಂಬ ಸತ್ಯವನ್ನು ಕೂಡ ತೇಜಸ್ವಿ ಸೂರ್ಯ ಮುಚ್ಚಿಟ್ಟರು.
ಮೆಟ್ರೋ ಕಾರ್ಯಾಚರಣೆಯ ಆರಂಭಿಕ ವರ್ಷಗಳಲ್ಲಿ ಟಿಕೆಟ್ ಆದಾಯದಿಂದ ಕೇವಲ ನಿರ್ವಹಣಾ ವೆಚ್ಚ ಮಾತ್ರ ಸರಿದೂಗುತ್ತಿತ್ತು. ಹೀಗಾಗಿ ವಿದೇಶಿ ಸಾಲಗಳ ಅಸಲು, ಬಡ್ಡಿ ಪಾವತಿ ಹಾಗೂ ಕಾರ್ಯಾಚರಣಾ ನಷ್ಟವನ್ನು ತುಂಬಲು ಕರ್ನಾಟಕ ಸರ್ಕಾರವು BMRCL ಗೆ ಪ್ರತಿ ವರ್ಷ ಬಜೆಟ್‌ನಲ್ಲಿ ‘ಶ್ಯಾಡೋ ಕ್ಯಾಶ್ ಸಪೋರ್ಟ್’ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಸಾಲ ಮರುಪಾವತಿ, ತೆರಿಗೆ ಮರುಪಾವತಿ ಮತ್ತು ನಷ್ಟ ಸರಿದೂಗಿಸಲು ರಾಜ್ಯವು ಈಗಾಗಲೇ ₹7,892 ಕೋಟಿಗೂ ಹೆಚ್ಚು ಹಣವನ್ನು BMRCL ಗೆ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮೂಲಕ ಪಡೆಯಲಾದ ಒಟ್ಟು ₹28,958 ಕೋಟಿ ವಿದೇಶಿ ಸಾಲದ 100% ಮರುಪಾವತಿ ಹೊಣೆಯನ್ನೂ ಅಸಲು ಮತ್ತು ಬಡ್ಡಿ ಸೇರಿ ರಾಜ್ಯ ಸರ್ಕಾರವೇ ಹೊತ್ತಿದೆ.
ಇದರ ಜೊತೆಗೆ ಮೆಟ್ರೋ ಕಾಮಗಾರಿಗೆ ಭೂಮಿ ನೀಡಿದ ರೈತರು ಮತ್ತು ಮಾಲೀಕರಿಗೆ 100% ಪರಿಹಾರ ನೀಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರವಲ್ಲ. ಈ ಪರಿಹಾರದ ಮೊತ್ತವೇ ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆ ಎಂಬುದು ಬೇರೆಯದೇ ಲೆಕ್ಕಾಚಾರ.
ಇತ್ತೀಚಿನ ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ BMRCL ಕಾರ್ಯಾಚರಣಾ ಲಾಭ ಗಳಿಸಲು ಆರಂಭಿಸಿದ ನಂತರ, ತನ್ನದೇ ಆದಾಯದ ಒಂದು ಭಾಗವನ್ನು ಸಾಲದ ಬಡ್ಡಿ ಮತ್ತು ಕಂತು ಪಾವತಿಸಲು ಬಳಸುತ್ತಿದೆ. ಉದಾಹರಣೆಗೆ, ಏರ್‌ಪೋರ್ಟ್ ಲೈನ್‌ಗಾಗಿ (Phase 2B) ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ADB) ಪಡೆದ $500 ಮಿಲಿಯನ್ ಸಾಲದ ಮರುಪಾವತಿ ಕಂತುಗಳನ್ನು ಜೂನ್ 2026 ರಿಂದ BMRCL ಪಾವತಿಸುತ್ತಿದೆ.
ಆದರೆ, ಡಾಲರ್ ಅಥವಾ ಯೆನ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಸಾಲ ಮರುಪಾವತಿಯ ಮೊತ್ತ ಹೆಚ್ಚಾಗುತ್ತದೆ ಉದಾಹರಣೆಗೆ : ಸಾಲ ಪಡೆದಾಗ ₹74 ಇದ್ದ ಡಾಲರ್ ಮೌಲ್ಯ ₹95ಕ್ಕೆ ಏರಿದಾಗ ಬೀಳುವ ಹೆಚ್ಚುವರಿ ಹೊರೆ ಹೊರೆಯನ್ನು ಕೂಡ ಕರ್ನಾಟಕ ರಾಜ್ಯ ಸರ್ಕಾರವೇ ಭರಿಸುತ್ತಿವೆ.
ಅಸಲಿಗೆ ಕಾಗದದ ಮೇಲೆ ಸಾಲ ಪಡೆಯುವವರು ಮತ್ತು ಕಂತು ಕಟ್ಟುವವರು BMRCL. ಆದರೆ, BMRCL ಗೆ ಆದಾಯದ ಕೊರತೆಯಾದಾಗಲೆಲ್ಲಾ ಆ ಸಾಲ ತೀರಿಸಲು ಹಣ ಒದಗಿಸುತ್ತಿರುವುದು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕನ್ನಡಿಗರ ತೆರಿಗೆ ಹಣ ಎಂಬುದು ಗಮನಿಸಬೇಕಾದ ಅಂಶವಾಗಿದೆ.




