ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (BMICP) ಅಥವಾ ನೈಸ್ (NICE) ಯೋಜನೆ ಕರ್ನಾಟಕದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಲ್ಲಿಸಿದ್ದ ಮೇಲ್ಮನವಿಗಳನ್ನು ತಿರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ, ನೈಸ್ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ. ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿದ್ದ ರೈತರ ಜಮೀನುಗಳನ್ನು ಸಂವಿಧಾನದ 300Aನೇ ವಿಧಿಯಡಿ ನೀಡಬೇಕಾದ ಪರಿಹಾರವನ್ನೂ ಕೊಡದೆ ಕಸಿದುಕೊಳ್ಳಲಾಗಿದೆ ಎಂದು ಹೇಳಿದೆ.
2025ರ ಜುಲೈ 4ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ NICE ಹಾಗೂ KIADB ಮೇಲ್ಮನವಿ ಸಲ್ಲಿಸಿದ್ದವು. ಆದರೆ ಹೈಕೋರ್ಟ್ ಅದನ್ನು ತಿರಸ್ಕರಿಸಿದೆ.
ಭೂಸ್ವಾಮಿಗಳ ಅರ್ಜಿಯನ್ನು ಮಾನ್ಯಗೊಳಿಸಿದ್ದ ಏಕಸದಸ್ಯ ಪೀಠ, ಭೂಮಿ ಸ್ವಾಧೀನಪಡಿಸಿಕೊಂಡ ಉದ್ದೇಶಕ್ಕೆ ಜಮೀನು ಬಳಸಲಾಗಿಲ್ಲ ಎಂದು ಹೇಳಿತ್ತು. ಎಕ್ಸ್‌ಪ್ರೆಸ್‌ವೇ, ಪೆರಿಫೆರಲ್ ರಸ್ತೆ, ಲಿಂಕ್ ರಸ್ತೆ, ಟೋಲ್ ಪ್ಲಾಜಾ ಮತ್ತು ಇಂಟರ್‌ಚೇಂಜ್ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ, ಹಲವು ಭೂಮಿಗಳಿಗೆ 11ರಿಂದ 23 ವರ್ಷಗಳವರೆಗೆ ಪರಿಹಾರ ನಿಗದಿಪಡಿಸುವ ‘ಅವಾರ್ಡ್’ ಕೂಡ ಪ್ರಕಟಿಸಿರಲಿಲ್ಲ. ವಿಭಾಗೀಯ ಪೀಠದ ಪ್ರಕಾರ, 2003ರಿಂದ 2009ರ ಅವಧಿಯಲ್ಲಿ ಅಂತಿಮ ಅಧಿಸೂಚನೆಗಳು ಹೊರಬಿದ್ದಿದ್ದರೂ, 23 ವರ್ಷಗಳಾದರೂ ಪರಿಹಾರದ ಆದೇಶ ಹೊರಡಿಸದಿರುವುದು ಹಾಗೂ ಅದಕ್ಕೆ ಸಮರ್ಪಕ ಕಾರಣ ನೀಡದಿರುವುದು ಭೂಸ್ವಾಧೀನ ಪ್ರಕ್ರಿಯೆಯನ್ನೇ ಕಾನೂನುಬಾಹಿರವಾಗಿಸುತ್ತದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು 2026ರ ಜುಲೈ 28ರಂದು ಸಲ್ಲಿಸಿದ ಪ್ರಮಾಣಪತ್ರವನ್ನು ಉಲ್ಲೇಖಿಸಿದ ನ್ಯಾಯಾಲಯ, 25-26 ವರ್ಷಗಳಲ್ಲಿ ಪ್ರಸ್ತಾವಿತ 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ಪೈಕಿ ಕೇವಲ 5 ಕಿ.ಮೀ. ಮಾತ್ರ ನಿರ್ಮಾಣವಾಗಿದೆ ಎಂದು ಹೇಳಿದೆ.
ಇದೇ ವೇಳೆ, ಮಾದವಾರ, ಕೆಂಗೇರಿ, ಪಿಳ್ಳಗನಹಳ್ಳಿ, ವರಹಸಂದ್ರ ಸೇರಿದಂತೆ ಹಲವು ಪ್ರದೇಶಗಳ 110 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು NICE ಹಲವು ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ದಾಖಲೆಗಳಿವೆ ಎಂದು ನ್ಯಾಯಾಲಯ ಗಮನಿಸಿದೆ.
NICE 20 ಸಾವಿರ ಎಕರೆಗೂ ಅಧಿಕ ಭೂ ಬ್ಯಾಂಕ್ ಮೇಲೆ ಕುಳಿತಿದ್ದು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಫ್ರೇಮ್‌ವರ್ಕ್ ಒಪ್ಪಂದದ (FWA) ಉಲ್ಲಂಘನೆ ಮಾಡಿ ಭೂಮಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿದೆ. ಅಕ್ರಮವಾಗಿ ಟೋಲ್ ಸಂಗ್ರಹಿಸಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ವಂಚನೆ ಸೇರಿದಂತೆ ವಿವಿಧ ಅಪರಾಧಗಳ ಬಗ್ಗೆ ಸ್ವತಂತ್ರ ತಜ್ಞರ ತಂಡದಿಂದ ತನಿಖೆ ಹಾಗೂ ಫೊರೆನ್ಸಿಕ್ ಆಡಿಟ್ ನಡೆಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಇ20 ಪೆಟ್ರೋಲ್ ಬಳಕೆ: ಹಳೆಯ ವಾಹನಗಳ ರಬ್ಬರ್ ಬಿಡಿಭಾಗಗಳಿಗೆ ಹಾನಿ ಸಾಧ್ಯತೆ ಎಂದ ಗಡ್ಕರಿ
ಆದರೆ, “ರಾಜ್ಯ ಸರ್ಕಾರವೇ ಯೋಜನಾ ಪ್ರವರ್ತಕರಿಗೆ ನೆರವಾಗುವ ರೀತಿಯಲ್ಲಿ ವರ್ತಿಸಿರುವುದು ಕಂಡುಬರುತ್ತಿದೆ. ಆದ್ದರಿಂದ ಇಂತಹ ತನಿಖೆ ನಡೆಯುವ ಬಗ್ಗೆ ನಮಗೆ ಅನುಮಾನವಿದೆ” ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಯೋಜನೆಯ ಹಿನ್ನೆಲೆ ಗಮನಿಸುವುದಾದರೆ,
- 1990ರ ದಶಕದ ಮಧ್ಯಭಾಗ: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ರೂಪಿಸಲಾಯಿತು.
- 1997- ಏಪ್ರಿಲ್ 3: ಕರ್ನಾಟಕ ಸರ್ಕಾರ ಮತ್ತು ನಂದಿ NICE ನಡುವೆ ಫ್ರೇಮ್‌ವರ್ಕ್ ಒಪ್ಪಂದ (FWA)ಕ್ಕೆ ಸಹಿ.
- 2006-08: ಹೆಚ್ಚುವರಿ ಭೂಸ್ವಾಧೀನ ಆರೋಪ, ರಾಜಕೀಯ ವಿವಾದ ಹಾಗೂ ತನಿಖೆಗಳು.
- 2009-2023: ಭೂಸ್ವಾಧೀನ, ಯೋಜನೆ ಜಾರಿ ಹಾಗೂ ಹೆಚ್ಚುವರಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಹಲವು ನ್ಯಾಯಾಂಗ ಹೋರಾಟಗಳು.
- ಪ್ರಸ್ತುತ ಸ್ಥಿತಿ: ಪೆರಿಫೆರಲ್ ರಸ್ತೆ ಹಾಗೂ ಲಿಂಕ್ ರಸ್ತೆ ನಿರ್ಮಾಣಗೊಂಡಿದ್ದರೂ, 111 ಕಿ.ಮೀ. ಎಕ್ಸ್‌ಪ್ರೆಸ್‌ವೇ ಹಾಗೂ ಟೌನ್‌ಶಿಪ್ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ.




