ಮುಂಡಗೋಡ: ಪಟ್ಟಣದ ಹಳೂರಿನ ಮಾರಿಕಾಂಬಾ ನಗರದಲ್ಲಿ ಕಳೆದ ಕೆಲ ದಿನಗಳಿಂದ ಸರಣಿ ಕಳ್ಳತನದ ಘಟನೆಗಳು ನಡೆದಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಮನೆಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು,
ಸೋಮವಾರ ಹಾಗೂ ಮಂಗಳವಾರ ರಾತ್ರಿ ಎರಡು ಕಡೆ ಕಳ್ಳತನಕ್ಕೆ ಯತ್ನಿಸಿದ್ದು, ಒಂದು ಮನೆಯಿಂದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ವರದಿಯಾಗಿದೆ. ಮಾರಿಕಾಂಬಾ ನಗರದ ನಿವಾಸಿ ಬಾಷಾ ಮರಗಡಿ ಅವರ ಮನೆಯ ಬಾಗಿಲಿನ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 2.5 ಗ್ರಾಂ ಚಿನ್ನ, ₹3,000 ನಗದು ಹಾಗೂ ಮನೆಯಲ್ಲಿದ್ದ ಹುಂಡಿಯ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇ ಸುದ್ದಿ ಓದಿದ್ದೀರಾ? ಭಟ್ಕಳ | ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರನ ಶವ ಮರುದಿನ ತೀರದಲ್ಲಿ ಪತ್ತೆ
ಕಳ್ಳರು ಮನೆಯಲ್ಲೇ ಟೀ ಮಾಡಿಕೊಂಡು ಕುಡಿದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದ್ದು, ಈ ವಿಚಾರ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ, ಶಂಕರ ಕುರುಬರ ಅವರ ಅಂಗಡಿಯ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೂಡ ನಡೆದಿದೆ. ಆದರೆ ಯಾವುದೇ ವಸ್ತು ಕಳುವಾಗಿದೆಯೇ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಸರಣಿ ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳರ ಸುಳಿವು ಪತ್ತೆಹಚ್ಚುವ ನಿಟ್ಟಿನಲ್ಲಿ ಶ್ವಾನದಳದ ಸಹಾಯವೂ ಪಡೆಯಲಾಗಿದೆ.
ಇತ್ತೀಚೆಗೆ ಪ್ರದೇಶದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಡಗೋಡ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳರನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.




