2005 ರಿಂದ 2016ರ ನಡುವೆ ತಯಾರಾದ ಬಿಎಸ್-3 (BS-III) ವಾಹನಗಳಲ್ಲಿ ಇ20 (ಎಥೆನಾಲ್ 20) ಪೆಟ್ರೋಲ್ ಬಳಸಿದಾಗ, ಆ ವಾಹನಗಳ ಕೆಲವು ರಬ್ಬರ್ ಬಿಡಿಭಾಗಗಳು ಹಾಗೂ ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು. ಆದರೆ, ಈ ಮಿಶ್ರಿತ ಇಂಧನ ಬಳಕೆಯಿಂದ ವಾಹನದ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಯಾವುದೇ ದೊಡ್ಡ ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಡ್ಕರಿ, “ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (IIP), ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಡೆಸಿದ ಅಧ್ಯಯನಗಳ ಪ್ರಕಾರ, ಬಿಎಸ್-6 (BS-VI) ವಾಹನಗಳಲ್ಲಿ ಇ20 ಇಂಧನ ಬಳಸಿ ಪರೀಕ್ಷಿಸಿದಾಗಲೂ ಅವು ಹೊರಸೂಸುವಿಕೆ ಮಾನದಂಡಗಳನ್ನು (Emission norms) ಪೂರೈಸುತ್ತಿರುವುದು ಕಂಡುಬಂದಿದೆ” ಎಂದು ತಿಳಿಸಿದರು.
ಕಾರು ಹಾಗೂ ದ್ವಿಚಕ್ರ ವಾಹನಗಳ ಎಂಜಿನ್‌ಗಳನ್ನು ಮಾರ್ಪಡಿಸುವ ಯಾವುದೇ ಅಗತ್ಯವಿಲ್ಲ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ ಎಂದು ಗಡ್ಕರಿ ಸ್ಪಷ್ಟಪಡಿಸಿದರು. “ಹಳೆಯ ವಾಹನಗಳಲ್ಲಿ ಇ20 ಇಂಧನ ಬಳಸಿದಾಗಲೂ ಅವುಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ವ್ಯತ್ಯಾಸಗಳೇನೂ ಕಂಡುಬಂದಿಲ್ಲ. ಅಲ್ಲದೆ, ಅವುಗಳಲ್ಲಿ ಅಸಹಜ ಸವೆತಗಳಾಗಲೀ ಆಗಿಲ್ಲ. ವಾಹನ ಚಾಲನೆ, ಸ್ಟಾರ್ಟ್ ಮಾಡುವ ಪ್ರಕ್ರಿಯೆ, ಲೋಹ ಹಾಗೂ ಪ್ಲಾಸ್ಟಿಕ್ ಹೊಂದಾಣಿಕೆಯಂತಹ ನಿಯತಾಂಕಗಳಲ್ಲಿ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ,” ಎಂದು ಅವರು ಹೇಳಿದರು.
ಆದಾಗ್ಯೂ, 2016ಕ್ಕೂ ಮೊದಲು ತಯಾರಾದ ಬಿಎಸ್-3 ವಾಹನಗಳ ಮೇಲಿನ ಪರೀಕ್ಷೆಗಳು, ಅವುಗಳ ಕೆಲವು ರಬ್ಬರ್ ಬಿಡಿಭಾಗಗಳು ಹಾಗೂ ಗ್ಯಾಸ್ಕೆಟ್‌ಗಳಿಗೆ ಬದಲಾವಣೆಯ ಅಗತ್ಯವಿರಬಹುದು ಎಂಬುದನ್ನು ಸೂಚಿಸಿವೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ ಮೈಲೇಜ್ ಕಡಿತದ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ, ವಾಹನದ ಮೈಲೇಜ್ ಇಳಿಕೆಯು ವಾಹನ ಚಲಾಯಿಸುವ ಶೈಲಿ, ಆಯಿಲ್ ಮತ್ತು ಏರ್-ಫಿಲ್ಟರ್ ಬದಲಾವಣೆಯಂತಹ ನಿರ್ವಹಣಾ ಕ್ರಮಗಳು, ಟೈರ್ ಒತ್ತಡ, ವೀಲ್ ಅಲೈನ್‌ಮೆಂಟ್ ಮತ್ತು ಹವಾನಿಯಂತ್ರಣದ (ಎಸಿ) ಬಳಕೆಯನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿದೆ.





