ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು, ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸಿದರೆ ಅವರ ಹುದ್ದೆಗೆ ಕಂಠಕ ಎದುರಾಗಲಿದೆ. ವಿವಿ ನಿಯಮಾವಳಿ ಮತ್ತು ಸೇವಾ ಷರತ್ತುಗಳ ಪ್ರಕಾರ, ಸಂಸ್ಥೆಯ ವಿರುದ್ಧ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಹೇಳಿಕೆ ನೀಡುವುದನ್ನು ‘ಸೇವಾ ನಿಯಮಗಳ ಉಲ್ಲಂಘನೆ’ (Misconduct) ಎಂದು ಪರಿಗಣಿಸಿ, ಯಾವುದೇ ಪೂರ್ವಾಪರ ಸೂಚನೆ ಇಲ್ಲದೆ ಸೇವೆಯಿಂದ ವಜಾಗೊಳಿಸುವ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ.
ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆಯಲ್ಲೇ ಈ ಷರತ್ತನ್ನು ವಿಧಿಸುತ್ತಿವೆ. ಬೋಧಕರು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕು ಮತ್ತು ಸಂಸ್ಥೆಯ ಆಂತರಿಕ ನಿರ್ಧಾರಗಳು, ವೇತನ ಅಥವಾ ಆಡಳಿತಾತ್ಮಕ ವಿಚಾರಗಳ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಮಾಸಿಕ ₹50 ಸಾವಿರ ವೇತನಕ್ಕೆ ಒತ್ತಾಯಿಸಿ ಬೀದರ್ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರಿಂದ ಧರಣಿ
ವಿವಿ ಅಥವಾ ಇಲಾಖೆಯ ವಿರುದ್ಧ ವಾಟ್ಸಾಪ್, ಫೇಸ್‌ಬುಕ್, ಎಕ್ಸ್ (ಟ್ವಿಟರ್) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು, ಪತ್ರಿಕಾಗೋಷ್ಠಿ ನಡೆಸಿ ಆಡಳಿತ ಮಂಡಳಿಯನ್ನು ನಿಂದಿಸುವುದು ಅಥವಾ ವಿದ್ಯಾರ್ಥಿಗಳನ್ನು ಉದ್ರೇಕಿಸಿ ಮುಷ್ಕರಕ್ಕೆ ಪ್ರಚೋದಿಸುವುದನ್ನು ಗಂಭೀರ ಶಿಸ್ತುಕ್ರಮದ ವ್ಯಾಪ್ತಿಗೆ ತರಲಾಗಿದೆ.
ಗುತ್ತಿಗೆ ಅಥವಾ ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಳ್ಳುವ ಅತಿಥಿ ಉಪನ್ಯಾಸಕರು ಈ ನಿಯಮ ಉಲ್ಲಂಘಿಸಿದರೆ, ಅವರಿಗೆ ನೋಟಿಸ್ ನೀಡದೆ ನೇಮಕಾತಿ ಆದೇಶವನ್ನು ರದ್ದುಗೊಳಿಸುವ ಹಾಗೂ ಮುಂದಿನ ಶೈಕ್ಷಣಿಕ ವರ್ಷಗಳ ಆಯ್ಕೆ ಪ್ರಕ್ರಿಯೆಯಿಂದ ಕಪ್ಪುಪಟ್ಟಿಗೆ (Blacklist) ಸೇರಿಸುವ ಅವಕಾಶ ಆಡಳಿತ ಮಂಡಳಿಗಿದೆ.
ಈ ಕಟ್ಟುನಿಟ್ಟಿನ ನಿಯಮಗಳಿಗೆ ಅತಿಥಿ ಉಪನ್ಯಾಸಕರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. “ವರ್ಷಗಳಿಂದ ಸೇವಾ ಭದ್ರತೆ, ಸೂಕ್ತ ಗೌರವಧನ ಹಾಗೂ ಸೌಲಭ್ಯಗಳಿಗಾಗಿ ಹೋರಾಡುತ್ತಿರುವ ನಮಗೆ ಧ್ವನಿ ಎತ್ತುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಸಮಸ್ಯೆಗಳನ್ನು ಬಗೆಹರಿಸುವ ಬದಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತೋಟಿಯಲ್ಲಿಡಲು ಇಂತಹ ನಿಯಮಗಳನ್ನು ಬಳಸಲಾಗುತ್ತಿದೆ” ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಮತ್ತು ಶಿಸ್ತು ಕಾಪಾಡುವ ನೆಪದಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಇದು ಅತಿಥಿ ಉಪನ್ಯಾಸಕರ ವೃತ್ತಿ ಭದ್ರತೆಯ ಮೇಲೆ ಮತ್ತಷ್ಟು ಆತಂಕದ ನೆರಳು ಮೂಡಿಸಿದೆ.




