ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ರಸ್ತೆ ತಡೆ ಹಾಗೂ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ ನಡೆಸಿ ನೂರಕ್ಕೂ ಹೆಚ್ಚು ರೈತರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿರುವುದನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ -ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘ ಜಂಟಿಯಾಗಿ ನಡೆಸಿದ ಆಗಸ್ಟ್ 25ರ ವಿಧಾನ ಸೌಧ ಚಲೋ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಗಳನ್ನು ಜಾರಿ ಮಾಡುವಂತೆ ಆಗ್ರಹಿಸಿ ರೈತರು ಸತ್ಯಾಗ್ರಹ ನಡೆಸುತ್ತಿದ್ದರು.
ಬಿಡದಿ ಟೌನ್ ಶಿಪ್ ಯೋಜನೆಯನ್ನು ಕಾನೂನಾತ್ಮಕ, ಮಾನವೀಯ ಹಾಗೂ ಸಮಗ್ರ ಅಭಿವೃದ್ಧಿ ಚೌಕಟ್ಟಿನಲ್ಲಿ ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ನ್ಯಾಯಮೂರ್ತಿ ಜಿ ನರೇಂದರ್ ಸಮಿತಿಗೆ ಪರಿಸರ ತಜ್ಞರು, ಕೃಷಿ ತಜ್ಞರು, ಸಮಾಜ ವಿಜ್ಞಾನಿಗಳನ್ನು ಸೇರ್ಪಡೆ ಮಾಡಿ ಕೂಡಲೇ ಕಾರ್ಯಾರಂಭ ಮಾಡುವುದಾಗಿ, ಸಮಿತಿ ಖುದ್ದಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಭೂ ಸ್ವಾಧೀನ ವಿರೋಧಿಸುತ್ತಿರುವ ಎಲ್ಲರ ಅಹವಾಲುಗಳನ್ನು ಪರಿಗಣಿಸಲು ಕ್ರಮ ಕೈಗೊಳ್ಳುವುದಾಗಿ, ಸಮಿತಿ ತನ್ನ ವರದಿ ನೀಡಿ ಮುಂದಿನ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳುವವರೆಗೆ ಯಾವುದೇ ರೀತಿಯ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ -ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಮಿತಿ ಮುಖಂಡರಿಗೆ ಭರವಸೆ ನೀಡಿದ್ದರು, ಅಲ್ಲಿನ ಕೃಷಿ ಭೂಮಿ ಹಚ್ಚ ಹಸಿರಿನ ನೀರಾವರಿ ಸಮೃದ್ಧವಾಗಿದ್ದು ಯಾರೂ ಭೂಮಿ ಮಾರಿಕೊಳ್ಳದೇ ಕಾಪಾಡಿಕೊಳ್ಳಿ, ನಿಮ್ಮ ಭೂಮಿ ರಕ್ಷಣೆಗೆ ನನ್ನ ಬೆಂಬಲ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.
ಇದನ್ನೂ ಓದಿ: GRAMG ಕಾಯ್ದೆ, ವ್ಯಾಪಾರ ಒಪ್ಪಂದ ವಿರೋಧಿಸುವಂತೆ ಸಿಎಂಗೆ ಸಂಯುಕ್ತ ಕಿಸಾನ್ ಮೋರ್ಚಾ, ಸಂಯುಕ್ತ ಹೋರಾಟ ಕರ್ನಾಟಕ ಮನವಿ
“ಆದರೆ ಇದಾಗಿ ಒಂದು ತಿಂಗಳಾದರೂ ಸಮಿತಿ ಕಾರ್ಯಾರಂಭ ಮಾಡಲಿಲ್ಲ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರದವರು ತೋಳ್ಬಲದ ರಿಯಲ್ ಎಸ್ಟೇಟ್ ದಲ್ಲಾಳಿಗಳ ಮೂಲಕ ಈ ಎರಡೂ ಪಂಚಾಯಿತಿ ಗಳ ಕುಟುಂಬಗಳ ಸದಸ್ಯರ ನಡುವೆ ಸಿವಿಲ್ ವ್ಯಾಜ್ಯಗಳನ್ನು ಹುಟ್ಟು ಹಾಕುವ ಮೂಲಕ, ಸುಳ್ಳು ಕ್ರಿಮಿನಲ್ ಕೇಸ್ ಗಳ ಬೆದರಿಕೆ ಮೂಲಕ, ಕಂದಾಯ ಇಲಾಖೆ ಭ್ರಷ್ಟ ಅಧಿಕಾರಿಗಳ ಮೂಲಕ ಪಹಣಿಯ ವಿಸ್ತೀರ್ಣ ಮತ್ತು ಎಂಆರ್‌ಗಳಲ್ಲಿ ತಿದ್ದುಪಡಿ ಮಾಡಿಸುವ ಮೂಲಕ ಹೀಗೆ ವಿವಿಧ ರೀತಿಯ ದಬ್ಬಾಳಿಕೆ, ದೌರ್ಜನ್ಯ, ದಮನ ತಂತ್ರಗಳ ಮೂಲಕ ಭೂ ಸ್ವಾಧೀನಕ್ಕೆ ಬಲವಂತವಾಗಿ ಒಪ್ಪಿಗೆ ಪಡೆದು ಭೂ ಸ್ವಾಧೀನ ಪರಿಹಾರ ವಿತರಣೆಯನ್ನು ಮುಂದುವರೆಸಿತು ಎಂದಿದೆ.
“ಇಷ್ಟೆಲ್ಲಾ ಕಿರುಕುಳವನ್ನು ಎದುರಿಸಿಯೂ ತಮ್ಮ ಅಮೂಲ್ಯ ಫಲವತ್ತಾದ ಕೃಷಿ ಭೂಮಿ ರಕ್ಷಣೆ ಮಾಡಲು ಹೋರಾಟದಲ್ಲಿ ಕ್ರೀಯಾಶೀಲವಾಗಿರುವ ಹಾಗೂ ಭಾಗವಹಿಸುವ ಕುಟುಂಬಗಳ ಕೃಷಿ ಭೂಮಿಗೆ ನಕಲಿ ದಾಖಾಲಾತಿ ಸೃಷ್ಟಿಸಿ ಭೂ ಸ್ವಾಧೀನ ಪರಿಹಾರ ದೋಚುವ ಕ್ರಿಮಿನಲ್ ಕೃತ್ಯಗಳನ್ನು ನಡೆಸಿ ಹೋರಾಡುತ್ತಿರುವ ರೈತರ ಮನೋಬಲ ಕುಗ್ಗಿಸುವ ಕೆಲಸವನ್ನು ಕೂಡ ಮಾಡಿದ್ದು ಈಗಾಗಲೇ ಬಿಡದಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ಕೃಷಿ ಭೂಮಿ ಉಳಿಸಿಕೊಳ್ಳಲು ಬೈರಮಂಗಲ -ಕಂಚುಗಾರನಹಳ್ಳಿ ರೈತರು ಕಳೆದ ಐದು ದಿನಗಳಿಂದ ಬೈರಮಂಗಲ ವೃತ್ತದಲ್ಲಿ ಸರಣಿ ಉಪವಾಸ ಹಾಗೂ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ನಡೆಸುತ್ತಿದ್ದರು” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ರಾಜ್ಯ ಸರ್ಕಾರ ಈ ರೈತರ ನೈಜ ಆತಂಕವನ್ನು ನಿವಾರಿಸಿ, ಈ ಹಿಂದೆ ಬಿಡದಿ ರೈತರಿಗೆ ಹಾಗೂ ಕರ್ನಾಟಕ ಹೈಕೋರ್ಟ್‌ಗೆ ನೀಡಿದ್ದ ಭರವಸೆಯನ್ನು ಜಾರಿ ಮಾಡುವ ಬಗ್ಗೆ ಖಚಿತ ವಿಶ್ವಾಸ ಉಂಟಾಗುವಂತೆ ರೈತರ ಮನ ಒಲಿಸುವ ಮೂಲಕ ರಸ್ತೆ ತಡೆ ತೆರವು ಮಾಡುವ ವಿಧಾನದ ಬದಲು ಸುಮಾರು ಐದು ನೂರಕ್ಕೂ ಹೆಚ್ಚು ಪೊಲೀಸ್ ಬಲವನ್ನು ಬಳಸಿ, ಮಹಿಳೆಯರು ಎಂದು ಪರಿಗಣಿಸದೇ ಪುರುಷ ಪೊಲೀಸರ ಮೂಲಕವೇ ಎಳೆದಾಡಿ ಬಲವಂತವಾಗಿ ವಶಕ್ಕೆ ತೆಗೆದುಕೊಂಡು ಅಮಾನುಷವಾಗಿ ವರ್ತಿಸಿರುವುದು ಈಗ ತೀವ್ರ ಆಕ್ರೋಶ್ಕಕೆ ಕಾರಣವಾಗಿದೆ.
ಇದನ್ನೂ ಓದಿ: ಐತಿಹಾಸಿಕ ದಿನವಾದ ದೇವನಹಳ್ಳಿ ಹೋರಾಟದ ಗೆಲುವು; ಸಂಯುಕ್ತ ಹೋರಾಟ ಕರ್ನಾಟಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ
“ರಸ್ತೆ ತಡೆ ತೆರವು ಮಾಡಿಸುವುದಕ್ಕಷ್ಟೇ ಸೀಮಿತಗೊಳ್ಳದೇ ಗ್ರಾಮ ಗ್ರಾಮಗಳಿಗೆ ಒಡಾಡಿ ಸಿಕ್ಕ ಸಿಕ್ಕವರನ್ನು ಬಂಧಿಸಲು ಆ ಮೂಲಕ ಗ್ರಾಮಗಳಲ್ಲಿ ಪೊಲೀಸ್ ಭೀತಿ ಹುಟ್ಟಿಸಲು ಪ್ರಯತ್ನಿಸಿದೆ. ಕಳೆದ 560 ದಿನಗಳಿಗೂ ಹೆಚ್ಚು ಕಾಲದಿಂದ ಅನಿರ್ದಿಷ್ಟಾವಧಿಯ ಪ್ರತಿಭಟನಾ ಧರಣಿ ಸ್ಥಳವನ್ನು ಧ್ವಂಸ ಮಾಡಿದೆ. ರಸ್ತೆ ತಡೆ ತೆರವುಗೊಳಿಸುವ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಪ್ರಾಯೋಜಿತ ಕೆಲವು ಗೂಂಡಾಗಳು ಕೂಡ ಪೊಲೀಸರ ಜೊತೆ ಧರಣಿ ಸ್ಥಳ ನಾಶ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ. ಇದು ಪೊಲೀಸ್ ರಾಜ್ಯ ಸೃಷ್ಟಿಸುವ ಅತ್ಯಂತ ಆತಂಕಕಾರಿ ವಿದ್ಯಮಾನ” ಎಂದು ಸಂಯುಕ್ತ ಹೋರಾಟ ಕರ್ನಾಟಕ ಗಂಭೀರವಾಗಿ ಆಪಾದಿಸಿದೆ.
“ಇಡೀ ದೇಶ ಹಾಗೂ ರಾಜ್ಯದ ರೈತ ಸಮುದಾಯದ ಬೆಂಬಲದೊಂದಿಗೆ ಶಾಂತಿಯುತವಾಗಿ ಹೋರಾಡುತ್ತಿರುವ ಬೈರಮಂಗಲ -ಕಂಚುಗಾರನಹಳ್ಳಿ ರೈತರ ಹೋರಾಟ ಕಳೆದ ಹದಿನೆಂಟು ತಿಂಗಳಿಂದ ನಡೆಯುತ್ತಿದ್ದರೂ ಈ ಹೋರಾಟವನ್ನು ತಮ್ಮ ಹೋರಾಟ ಎಂದು ಬಿಂಬಿಸಿಕೊಳ್ಳುತ್ತಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಹದಿನೆಂಟು ತಿಂಗಳುಗಳ ವಿಧಾನ ಸಭಾ ಕಲಾಪಗಳಲ್ಲಿ ಒಂದೇ ಒಂದು ಬಾರಿಯೂ ಕೂಡ ರಾಜ್ಯ ಸರ್ಕಾರವನ್ನು ಪ್ರಶ್ನಿಸಲಿಲ್ಲ. ಜಸ್ಟೀಸ್ ವಿ ಗೋಪಾಲಗೌಡ ಅವರ ನೇತೃತ್ವದ ಪಬ್ಲಿಕ್ ಹಿಯರಿಂಗ್ ತೀರ್ಪು ನ ಬಲವಾದ ಬೆಂಬಲ ಇದ್ದಾಗಲೂ ಸದನದಲ್ಲಿ ಬಳಸಿಕೊಳ್ಳಲಿಲ್ಲ. ಆದರೆ ಪ್ರತಿಭಟನಾಕಾರರಿಗೆ ಹುಸಿ ಭರವಸೆ ನೀಡುವುದನ್ನು ಮುಂದುವರೆಸಿ ಅತ್ಯಂತ ಬೇಜವಾಬ್ದಾರಿ ಹಾಗೂ ಹೊಣೇಗೇಡಿತನವನ್ನು ಪ್ರದರ್ಶಿಸಿದೆ. ಈ ಮೂಲಕ ಪಕ್ಷಾಧಾರಿತ ಒಡಕು ಸೃಷ್ಟಿಸುವ ರಾಜ್ಯ ಸರ್ಕಾರಕ್ಕೆ ಬೆಂಬಲ ಒದಗಿಸಿದೆ ಇದು ರೈತ ದ್ರೋಹ” ಎಂದು ಸಂಯುಕ್ತ ಹೋರಾಟ ಕರ್ನಾಟಕ ಅತ್ಯಂತ ಕಟುವಾಗಿ ಟೀಕಿಸುತ್ತದೆ.
“ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ, ಬಹು ವಾರ್ಷಿಕ ಬೆಳೆಗಳ ಕೃಷಿ ಭೂಮಿ ರಕ್ಷಣೆಯ ಬೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೈಜ ಉದ್ದೇಶದ ಹೋರಾಟವನ್ನು ಪಕ್ಷಾಧಾರಿತವಾಗಿ ನೋಡದೇ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಶಾಂತಿಯುತ ಅನಿರ್ದಿಷ್ಟ ಧರಣಿ ನಡೆಸುತ್ತಿರುವ ಬೈರಮಂಗಲ ವೃತ್ತದ ಪ್ರತಿಭಟನಾ ಧರಣಿ ಸ್ಥಳದಲ್ಲಿ ರೈತರ ಪ್ರತಿಭಟನಾ ಹಕ್ಕಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸಬೇಕು. ರೈತರ ಮೇಲೆ ದೌರ್ಜನ್ಯ ನಡೆಸಿರುವ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.




