ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳ ತನಿಖೆಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖಾ ಆಯೋಗ ಅಥವಾ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ವಕೀಲ ಚಾಂದ್ ಖುರೇಷಿ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13 ಕೋಟಿ ಹೆಸರುಗಳನ್ನು ಅಳಿಸಿರುವುದಕ್ಕೆ ಸಂಬಂಧಿಸಿದ ಸಂದರ್ಭಗಳ ಕುರಿತು ತನಿಖೆ ನಡೆಸಬೇಕು ಎಂದು ಕೋರಲಾಗಿದೆ. ಚುನಾವಣಾ ಆಯೋಗದ ECINet ಮತ್ತು ERONet ಸೇರಿದಂತೆ ಡೇಟಾಬೇಸ್‌ಗಳ ಸಮಗ್ರ ಫೊರೆನ್ಸಿಕ್ ಆಡಿಟ್ ನಡೆಸಬೇಕು ಎಂದೂ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ ಜ್ಞಾನೇಶ್ ಕುಮಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್ 32ರಡಿ ಕ್ರಮ ಕೈಗೊಳ್ಳುವಂತೆಯೂ ಕೋರಲಾಗಿದೆ. ಎಸ್‌ಐಆರ್‌ಗೆ ಸಂಬಂಧಿಸಿದಂತೆ ಸಿಇಸಿ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರಗಳು, ಮಾರ್ಗಸೂಚಿಗಳು ಹಾಗೂ ಸಾಫ್ಟ್‌ವೇರ್ ಬದಲಾವಣೆಗಳು ಇತರ ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿಯಿಲ್ಲದೆ ನಡೆದಿದ್ದರೆ ಅವುಗಳನ್ನು ಅಸಂವಿಧಾನಿಕ ಹಾಗೂ ಅಮಾನ್ಯ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.
ಮತದಾರರ ಪಟ್ಟಿಗೆ ಹೊಸ ಮತದಾರರ ಹೆಸರು ಸೇರ್ಪಡೆಗೆ ಬಳಸುವ ಫಾರ್ಮ್–6ರಲ್ಲಿ ಮಾಡಲಾದ ಬದಲಾವಣೆಗಳನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಹಿಂದಿನ ಎಸ್‌ಐಆರ್ ಪಟ್ಟಿಯೊಂದಿಗೆ ಸಂಬಂಧ ಹೊಂದಿರುವ ಮಾಹಿತಿ ಅಥವಾ ಪೂರ್ವಜರ ವಿವರಗಳನ್ನು ಕಡ್ಡಾಯಗೊಳಿಸುವ ರೀತಿಯಲ್ಲಿ ಫಾರ್ಮ್–6 ಬದಲಾಯಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಂತಹ ಬದಲಾವಣೆಗಳಿಗೆ ಚುನಾವಣಾ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡದೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅರ್ಜಿದಾರರ ವಾದ. ಆದ್ದರಿಂದ ಮೂಲ ಶಾಸನಬದ್ಧ ಫಾರ್ಮ್–6 ಅನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ.
ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪ ಮತ್ತು ಭಿನ್ನಾಭಿಪ್ರಾಯ ದಾಖಲಿಸಿದ್ದಾರೆ ಎಂಬ ವರದಿಯನ್ನೂ ಅರ್ಜಿ ಉಲ್ಲೇಖಿಸಿದೆ. ಈ ಆಕ್ಷೇಪಗಳಲ್ಲಿ ಫಾರ್ಮ್–6 ಬದಲಾವಣೆ, ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ ಹಾಗೂ ಚುನಾವಣಾ ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳು ಸೇರಿವೆ.
ಇದನ್ನೂ ಓದಿ: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಅರ್ಜಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಹೆಸರುಗಳನ್ನು ಮರುಸೇರ್ಪಡೆಗೊಳಿಸಿದ ನ್ಯಾಯಾಧಿಕಾರಿಗಳ ಆದೇಶಗಳ ವಿರುದ್ಧ ಚುನಾವಣಾ ಆಯೋಗದ ಹೆಸರಿನಲ್ಲಿ 16.10 ಲಕ್ಷ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಇವುಗಳಿಗೆ ಅಗತ್ಯ ಅನುಮತಿ ಅಥವಾ ಕಾನೂನುಬದ್ಧ ಆಧಾರವಿರಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇತ್ತ ಚುನಾವಣಾ ಆಯೋಗವು ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದು, ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಂಸ್ಥೆಯ ಚರ್ಚಾ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿವೆ ಹಾಗೂ ತನ್ನ ಡಿಜಿಟಲ್ ವೇದಿಕೆಗಳು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಲ್ಲಿವೆ ಎಂದು ಹೇಳಿಕೊಂಡಿದೆ.




