ಗಾಜಾ ಮೇಲಿನ ಇಸ್ರೇಲ್‌ನ ಕ್ರೌರ್ಯ ಮುಂದುವರೆದಿದೆ. ಈ ನಡುವೆ, ಇಸ್ರೇಲ್ ಬಂಧನ ಕೇಂದ್ರಗಳು ಮತ್ತು ಜೈಲುಗಳಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನ್ ಕೈದಿಗಳ ಹಕ್ಕುಗಳು ಮತ್ತು ಜೀವಕ್ಕೆ ತೀವ್ರ ಗಂಡಾಂತರ ಎದುರಾಗಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ. 9,200 ಪ್ಯಾಲೆಸ್ತೀನಿಯರು ಇಸ್ರೇಲ್‌ನ ಬಂಧನದಲ್ಲಿದ್ದಾರೆ. ಅವರೆಲ್ಲರೂ ಅತ್ಯಾಚಾರ ಬೆದರಿಕೆ, ಆಹಾರ ನಿರಾಕರಣೆ ಹಾಗೂ ಚಿತ್ರಹಿಂಸೆಗಳನ್ನು ಎದುರಿಸುತ್ತಿದ್ದಾರೆ. ಅವರ ಜೀವಕ್ಕೆ ಅಪಾಯವಿದೆ ಎಂದು ‘ಪ್ಯಾಲೆಸ್ತೀನಿಯನ್ ಸೆಂಟರ್ ಫಾರ್ ಪ್ರಿಜನರ್ಸ್ ಅಡ್ವೋಕಸಿ’ ಸಂಸ್ಥೆ ಬಿಡುಗಡೆ ಮಾಡಿದ ವರದಿ ಹೇಳಿದೆ.
ವರದಿಯ ಪ್ರಕಾರ, ಇಸ್ರೇಲ್ ಬಂಧನದಲ್ಲಿರುವ ಕನಿಷ್ಠ 380 ಮಕ್ಕಳಿಗೆ ಅಗತ್ಯ ವೈದ್ಯಕೀಯ ನೆರವು ದೊರೆಯುತ್ತಿಲ್ಲ. ಸಾವಿರಾರು ಕೈದಿಗಳು ದೈಹಿಕ ಹಿಂಸೆ, ಅತ್ಯಾಚಾರದ ಬೆದರಿಕೆಗಳು, ಹಸಿವು ಹಾಗೂ ವೈದ್ಯಕೀಯ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದಾರೆ.
ವರದಿಯ ವಿವರಗಳ ಪ್ರಕಾರ, 2026ರ ಜೂನ್ ವೇಳೆಗೆ ಇಸ್ರೇಲ್ ಜೈಲು ಸೇವಾ (IPS) ವಿಭಾಗವು 1,500ಕ್ಕೂ ಹೆಚ್ಚು ಗಾಜಾ ನಿವಾಸಿಗಳು ಸೇರಿದಂತೆ ಒಟ್ಟು 9,200 ಪ್ಯಾಲೆಸ್ತೀನಿಯನ್ನರನ್ನು ಬಂಧನದಲ್ಲಿಟ್ಟಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಮಹಿಳೆಯರು (ಗರ್ಭಿಣಿಯರು ಸೇರಿದಂತೆ) ಮತ್ತು 380ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳಿದ್ದಾರೆ. 3,100ರಿಂದ 3,550 ಕೈದಿಗಳನ್ನು ಯಾವುದೇ ಆರೋಪಪಟ್ಟಿ ಅಥವಾ ನ್ಯಾಯಾಲಯದ ವಿಚಾರಣೆಯಿಲ್ಲದೆ ‘ಆಡಳಿತಾತ್ಮಕ ಬಂಧನ’ದಡಿ ಜೈಲಿನಲ್ಲಿರಿಸಲಾಗಿದೆ. 1,400ಕ್ಕೂ ಹೆಚ್ಚು ಜನರನ್ನು ‘ಕಾನೂನುಬಾಹಿರ ಹೋರಾಟಗಾರರು’ ಹಣೆಪಟ್ಟಿ ಕಟ್ಟಿ ಬಂಧಿಸಲಾಗಿದೆ.
ಇಸ್ರೇಲ್ ಆಡಳಿತವು ಬಂದೀಖಾನೆಯಲ್ಲಿರುವವರ ವಿವರಗಳನ್ನು ‘ರಹಸ್ಯ ಕಡತ’ ಎಂದು ವರ್ಗೀಕರಿಸಿದೆ. ಇದರಿಂದ, ಕೈದಿಗಳು ಮತ್ತು ಅವರ ಪರ ವಕೀಲರು ಬಂಧನದಲ್ಲಿರುವವರ ಮೇಲಿರುವ ಆರೋಪಗಳೇನು ಎಂಬ ಮಾಹಿತಿ ಪಡೆಯಲು ಅವಕಾಶ ನೀಡಲಾಗುತ್ತಿಲ್ಲ. ಇದರಿಂದಾಗಿ ಯಾವುದೇ ವಿಚಾರಣೆಯಿಲ್ಲದೆ ವರ್ಷಾನುಗಟ್ಟಲೆ ಅವರನ್ನು ಜೈಲಿನಲ್ಲಿ ಇಡಲಾಗುತ್ತಿದೆ. ಅಂತಹವರಲ್ಲಿ ಒಬ್ಬರಾದ ಅಬ್ದುಲ್-ಸಲಾಂ ಅಬು ಅಲ್-ಹೈಜಾ ಎಂಬವರನ್ನು 2022ರ ಆಗಸ್ಟ್‌ನಿಂದ 2026ರ ಆಗಸ್ಟ್‌ವರೆಗೆ ನಾಲ್ಕು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧನದಲ್ಲಿಡಲಾಗಿತ್ತು. ಆತ ಜೈಲಿನಲ್ಲಿದ್ದಾಗಲೇ ಆತನ ತಾಯಿ ಮೃತಪಟ್ಟಿದ್ದರು.
ಡೇಮನ್ ಮತ್ತು ನೆಗೆವ್ ಸೇರಿದಂತೆ ಇಸ್ರೇಲ್‌ನ ಪ್ರಮುಖ ಜೈಲುಗಳಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಕೈದಿಗಳಿಗೆ ಸೂಕ್ತ ಬೆಡ್‌ಶೀಟ್‌ಗಳು ಅಥವಾ ಕಂಬಳಿಗಳನ್ನು ನೀಡದೆ ಬರಿ ನೆಲದ ಮೇಲೆ ಮಲಗಲು ಒತ್ತಾಯಿಸಲಾಗಿದೆ. ನೈರ್ಮಲ್ಯ ಸಾಮಗ್ರಿಗಳು ಮತ್ತು ಸೂಕ್ತ ಆಹಾರವನ್ನು ನಿರಾಕರಿಸಲಾಗುತ್ತಿದ್ದು, ಹೆಚ್ಚಿನ ಕೈದಿಗಳು ಪೋಷಕಾಂಶಗಳ ಕೊರತೆಯಿಂದ ತೀವ್ರ ತೂಕ ನಷ್ಟ ಮತ್ತು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಇರುವವರಿಗೂ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ಸುದೀರ್ಘ ಅವಧಿಯಿಂದ ಬಂಧನದಲ್ಲಿರುವ ಶತಿಲಾ ಅಬು ಆಯಾದಾ ಎಂಬ ಮಹಿಳಾ ಕೈದಿಯ ಪಿತ್ತಜನಕಾಂಗದ ಕಿಣ್ವಗಳ ಮಟ್ಟ ಏರಿಕೆಯಾಗಿದ್ದರೂ ಆಕೆಗೆ ಚಿಕಿತ್ಸೆ ನಿರಾಕರಿಸಲಾಗಿದೆ.
ಹೆಚ್ಚಿನ ಮಹಿಳಾ ಕೈದಿಗಳು ಮತ್ತು ಅಪ್ರಾಪ್ತ ಬಾಲಕರು ಅನುಭವಿಸಿದ ಚಿತ್ರಹಿಂಸೆಗಳು ಸಾರ್ವಜನಿಕವಾಗಿ ಬಯಲಾಗಿವೆ. ವಿಚಾರಣೆ ನೆಪದಲ್ಲಿ ಮಹಿಳಾ ಕೈದಿಗಳಿಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿ ದೂರುಗಳನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ವಿಶ್ವಸಂಸ್ಥೆಗೆ ಲಭ್ಯವಾಗಿರುವ 66 ಮಕ್ಕಳ ಸಾಕ್ಷ್ಯಗಳಲ್ಲಿ, ಅವರು ಜೈಲಿನಲ್ಲಿ ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು ದೃಢಪಟ್ಟಿದೆ. ಅಪೌಷ್ಟಿಕತೆ ಮತ್ತು ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಜೈಲಿನಲ್ಲಿ ಬಾಲಕನೊಬ್ಬ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ಸಾಬೀತಾಗಿದೆ.
ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!
ಆಘಾತಕಾರಿ ಸಂಗತಿ ಎಂದರೆ, 2023ರ ನವೆಂಬರ್‌ನಿಂದಲೇ ಇಸ್ರೇಲ್ ಸರ್ಕಾರವು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ (ICRC) ತಪಾಸಣೆಗಾಗಿ ಜೈಲುಗಳಿಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಇಸ್ರೇಲ್ ಉನ್ನತ ನ್ಯಾಯಾಲಯವು ರೆಡ್ ಕ್ರಾಸ್ ಭೇಟಿಯ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಆದೇಶಿಸಿದ್ದರೂ, ಇಸ್ರೇಲ್ ಸಶಸ್ತ್ರ ಪಡೆಗಳು ಅದನ್ನು ಅನುಷ್ಠಾನಗೊಳಿಸಿಲ್ಲ.
ಅಲ್ಲದೆ, ನಾಲ್ಕನೇ ಜಿನೇವಾ ಶೃಂಗಸಭೆಯ ನಿರ್ಣಯದಡಿ ಪ್ಯಾಲೆಸ್ತೀನ್ ಕೈದಿಗಳಿಗೆ ಧಾರ್ಮಿಕ ಆಚರಣೆ, ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಹಾಗೂ ರೆಡ್ ಕ್ರಾಸ್ ತಪಾಸಣೆಯ ಹಕ್ಕುಗಳನ್ನು ನೀಡಲಾಗಿದೆ. ಆದರೂ, ಇಸ್ರೇಲ್ ಇವೆಲ್ಲವನ್ನೂ ಬಹಿರಂಗವಾಗಿ ಉಲ್ಲಂಘಿಸುತ್ತಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಆರೋಪಿಸಿದೆ.
ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಒಕ್ಕೂಟಗಳು ಕೇವಲ ಖಂಡನಾತ್ಮಕ ಹೇಳಿಕೆಗಳನ್ನು ನೀಡುವ ಬದಲು, ಇಸ್ರೇಲ್ ಬಂಧನ ಕೇಂದ್ರಗಳ ಮೇಲೆ ನೇರ ತನಿಖೆ ನಡೆಸಿ ಪ್ಯಾಲೆಸ್ತೀನ್ ಕೈದಿಗಳ ಜೀವ ರಕ್ಷಿಸಲು ತಕ್ಷಣದ ಅಂತಾರಾಷ್ಟ್ರೀಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿ ಒತ್ತಾಯಿಸಿದೆ.



