ಭಾರತಿ ನಗರ ನಿವಾಸಿಗಳ ಅಭಿವೃದ್ಧಿ ಸಂಘವು ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಸಹಯೋಗದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆ ಹಾಗೂ ವೇರ್ ಸ್ಟೀಲ್ಸ್ ಪೆ.ಲಿ. ಸಿಎಸ್ಆರ್ ಅನುದಾನ ಸೇರಿ 8 ಲಕ್ಷ ರೂ. ವೆಚ್ಚದಲ್ಲಿ ಮಾದರಿಯಾಗಿ ಅಭಿವೃದ್ಧಿಪಡಿಸಿರುವ ಉದ್ಯಾನವನ ಉದ್ಘಾಟನೆ ಸೆ. 27ರಂದು ಬೆಳಗ್ಗೆ 10:00 ಗಂಟೆಗೆ ನೆರವೇರಲಿದೆ ಎಂದು ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ನಾಗರಾಜ ತಾಯಣ್ಣವರ ಹೇಳಿದರು.
ಧಾರವಾಡ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಉದ್ಯಾವನ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಭಾರತಿ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಶಂಕರ ಸಾಧನಿ ಹಾಗೂ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ” ಎಂದರು.
“ಈ ಉದ್ಯಾನವನವು ಸೂಕ್ತ ನಿರ್ವಹಣೆ ಇಲ್ಲದೇ ಸಂರ್ಪೂಣ ಹಾಳಾಗಿತ್ತು. ಮಹಾನಗರ ಪಾಲಿಕೆ ಅನುದಾನ ಕಾಯದೇ ದತ್ತು ಪಡೆದು ಕ್ಲಬ್ ಹಾಗೂ ಬಡಾವಣೆ ನಿವಾಸಿಗಳ ಸಹಕಾರದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆ, ವೇರ್ ಸ್ಟೀಲ್ಸ್ ಪೆ.ಲಿ. ಸಿಎಸ್ಆರ್ ಅನುದಾನ ಬಳಸಿಕೊಂಡು ವಿಶೇಷ ಸೌಲಭ್ಯವುಳ್ಳ ಉದ್ಯಾನವನ ರೂಪಿಸಲಾಗಿದೆ. ಬರೀ ಗಿಡಮರಗಳ ಸೌಂದರ್ಯ ಮಾತ್ರವಲ್ಲದೇ ಹೊರಾಂಗಣ ಜಿಮ್ ಇದೆ. ಪುಟಪಾತ್ ಅಗಲೀಕರಣ, ಯೋಗ ತರಗತಿಗಳು, ಕಸ ನಿರ್ವಹಣೆ ಮಾಡಿ ಅದನ್ನು ಗೊಬ್ಬರವಾಗಿ ಬಳಸುವುದು, ನೀರು ನಿರ್ವಹಣೆ ಸೇರಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ” ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಕಾರ್ಯದರ್ಶಿ ಪ್ರೊ. ವಾಸುದೇವ ಪರ್ವತಿ, ಗಿರೀಶ ಬೆಟಗೇರಿ, ಕರಣ ದೊಡವಾಡ, ಪ್ರಮೋದ ಜಳಕೀಕರ ಇದ್ದರು.




