ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯು ಸಂವಿಧಾನ ಪ್ರತಿಪಾದಿಸುವ ಸಮಾನತೆಯ ಹಕ್ಕಿಗೆ (ವಿಧಿ 14) ವಿರುದ್ಧವಾಗಿದೆ. ಹೀಗಾಗಿ ದೇಶದಲ್ಲಿ ಈಗಿರುವ ಮೀಸಲಾತಿಯನ್ನು ಮುಂದುವರಿಸಬಾರದು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ’ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
“ಸಂವಿಧಾನ ರಚನೆಯಾಗುವ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಕೊಡಿಸಲು 10 ವರ್ಷಗಳ ಅವಧಿಗೆ ಮಾತ್ರ ಮೀಸಲಾತಿ ಕೋರಿದ್ದರು. ಆದರೆ, ಸಂವಿಧಾನ ಜಾರಿಯಾಗಿ 70 ವರ್ಷಗಳು ಕಳೆದರೂ ಇದು ಮುಂದುವರಿಯುತ್ತಲೇ ಇದೆ” ಎಂದು ಹೆಗ್ಡೆ ಪ್ರತಿಪಾದಿಸಿದರು.
“ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತರಾದ ವರ್ಗಗಳಿಗೆ ಜಾತಿಯ ಆಧಾರದ ಬದಲಾಗಿ ಆರ್ಥಿಕ ಪರಿಸ್ಥಿತಿಯನ್ನು ಮಾನದಂಡವಾಗಿಸಿಕೊಂಡು ನೆರವು ನೀಡಬೇಕು. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿಯು ಹತ್ತು ಹಲವು ತಲೆಮಾರುಗಳಿಂದ ಆರ್ಥಿಕವಾಗಿ ಸದೃಢರಾಗಿರುವ, ಐಎಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರಂತವರ ಕುಟುಂಬಗಳಿಗೇ ತಲುಪುತ್ತಿದೆ. ಪರಿಣಾಮವಾಗಿ ನೈಜ ಬಡ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ” ಎಂದರು.
“ಮೀಸಲಾತಿಯೊಳಗೆ ಮತ್ತೆ ಒಳಮೀಸಲಾತಿ ತರುವುದು ಸಮಾಜವನ್ನು ಮತ್ತಷ್ಟು ತುಂಡರಿಸುತ್ತದೆ. ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ವಿಸ್ತರಿಸುತ್ತಿರುವುದು ಅಪಾಯಕಾರಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಅನೇಕ ಮಹಿಳೆಯರು ಮೀಸಲಾತಿ ಇಲ್ಲದೆಯೇ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದಾರೆ. ಪ್ರಸ್ತುತ ಮಹಿಳೆಯರು ಸ್ವಯಂಚಾಲಿತವಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿರುವಾಗ ರಾಜಕೀಯದಲ್ಲಿ ಮತ್ತೆ ಮಹಿಳಾ ಮೀಸಲಾತಿಯ ಅಗತ್ಯವಿಲ್ಲ” ಎಂದರು.
ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಕೆ. ಹರೀಶ್ ಗೌಡ ಅವರು ಸಂತೋಷ್ ಹೆಗ್ಡೆ ಅವರ ನಿಲುವನ್ನು ಖಂಡಿಸಿದರು. “ಸಂವಿಧಾನವು ಸಮಾನತೆಯನ್ನು ಬೋಧಿಸುವುದರ ಜೊತೆಗೇ ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ವಿಶೇಷ ಅವಕಾಶಗಳನ್ನೂ ಕಲ್ಪಿಸಿದೆ. ಹೀಗಾಗಿ ಮೀಸಲಾತಿಯನ್ನು ಏಕಾಏಕಿ ನಿರಾಕರಿಸುವ ಮುನ್ನ ಅದರ ಹಿಂದಿರುವ ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕು” ಎಂದರು.
“ಮಹಿಳೆಯರಿಗೆ ರಾಜಕೀಯ ಮೀಸಲಾತಿ ಅಗತ್ಯವಿದೆ. ಕುಟುಂಬದ ಹಾಗೂ ಸಾಂಪ್ರದಾಯಿಕ ಅಡೆತಡೆಗಳಿಂದಾಗಿ ಹಲವು ಮಹಿಳೆಯರಿಗೆ ರಾಜಕೀಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲು ಮೀಸಲಾತಿ ಬಲವಾದ ವೇದಿಕೆಯಾಗಲಿದೆ. ಅಲ್ಲದೆ, ಪುರುಷರಿಗಿಂತ ಮಹಿಳೆಯರಲ್ಲಿ ಭ್ರಷ್ಟಾಚಾರದ ಪ್ರಮಾಣವೂ ಕಡಿಮೆ” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಎಸ್. ಅನಿತಾ, ಡಾ. ಕಾವ್ಯಶ್ರೀ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಡ್ಡೀಕೆರೆ ಗೋಪಾಲ್, ಡಾ. ವೈ.ಡಿ. ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.



