ಕಾಳಗಿ ತಾಲೂಕು ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ, ಅರ್ಹ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಹಾಗೂ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಸಮಿತಿ ವತಿಯಿಂದ ಮಂಗಳವಾರ ಕಾಳಗಿ ಪಟ್ಟಣ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ರೈತರು ಹಾಗೂ ಸಂಘಟನೆಗಳ ಮುಖಂಡರು ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತಕ್ಕೆ ತೆರಳಿದರು. ಬಳಿಕ ಅಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಲಬುರಗಿ ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ ಅವರಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರು ಮಾತನಾಡಿ, ‘2025–26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಾಳಗಿ ತಾಲೂಕಿನ ರೈತರು ತೊಗರಿ, ಹೆಸರು, ಉದ್ದು, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ಆದರೆ ಮಳೆ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಸಂದರ್ಭದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿಲ್ಲ’ ಎಂದು ಆರೋಪಿಸಿದರು.
‘ಹಲವು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ತೆರಳದೆ ಕಾಟಾಚಾರದ ರೀತಿಯಲ್ಲಿ ಬೆಳೆ ಸಮೀಕ್ಷೆ ನಡೆಸಲಾಗಿದೆ. ಬೆಳೆ ಹಾನಿಯ ವಾಸ್ತವಿಕ ಪ್ರಮಾಣವನ್ನು ದಾಖಲಿಸದೆ ತಪ್ಪು ವರದಿಗಳನ್ನು ಸಲ್ಲಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರ ದೊರೆತಿಲ್ಲ’ ಎಂದು ದೂರಿದರು.
‘ಅಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಬೆಳೆ ಹಾನಿಯಾಗಿದ್ದರೂ ಹಾನಿಯಾಗಿಲ್ಲ ಎಂಬ ರೀತಿಯಲ್ಲಿ ವರದಿ ಸಲ್ಲಿಸಿರುವ ಪರಿಣಾಮ ಅರ್ಹ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ಕೆಲವು ರೈತರ ಖಾತೆಗಳಿಗೆ ಅಲ್ಪ ಪ್ರಮಾಣದ ವಿಮಾ ಮೊತ್ತ ಮಾತ್ರ ಜಮೆಯಾಗಿದೆ. ಬೆಳೆ ಹಾನಿಗೆ ಅನುಗುಣವಾಗಿ ಪರಿಹಾರ ದೊರೆಯದಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆ ವಿಮೆ ಪರಿಹಾರವೂ ಸಮರ್ಪಕವಾಗಿ ದೊರೆಯದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೆಳೆ ವಿಮೆ ಪರಿಹಾರದಿಂದ ವಂಚಿತರಾಗಿರುವ ರೈತರ ಜಮೀನುಗಳಿಗೆ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಮರುಸಮೀಕ್ಷೆ ನಡೆಸಬೇಕು. ವಾಸ್ತವಿಕ ಬೆಳೆ ಹಾನಿಯ ಆಧಾರದ ಮೇಲೆ ಅರ್ಹ ಎಲ್ಲ ರೈತರಿಗೆ ಬಾಕಿ ಇರುವ ವಿಮಾ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಇದರ ಜೊತೆಗೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿರುವ ಹಿನ್ನೆಲೆಯಲ್ಲಿ ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಳಗಿ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದರಿಂದ ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶಗಳು ಸ್ತಬ್ಧವಾಗಿದ್ದು, ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.
ರೈತರ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕೌಟುಂಬಿಕ ಕಲಹ: ತಂದೆ, ಮಗಳ ಸಾವು, ನಾಲ್ವರಿಗೆ ಗಂಭೀರ ಗಾಯ
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಸಮಿತಿ ಪದಾಧಿಕಾರಿಗಳು, ಬಿಜೆಪಿ ಶಾಸಕ ಉಮೇಶ್ ಜಾದವ್, ಸ್ವಾಮಿಗಳು, ಗಮಠಾಧೀಶರು, ಪ್ರಗತಿಪರ ಚಿಂತಕರು, ಸಮಾಜಿಕ ಹೋರಾಟಗಾರರು, ಸೇರಿದಂತೆ ಅನೇಕರು ಭಾಗವಹಿಸಿದರು.





