ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯದಲ್ಲಿ ಸಿಕ್ಕ ಚಿನ್ನದ ಕಿವಿಯೋಲೆಯನ್ನು ವಾರಸುದಾರರಿಗೆ ಮರಳಿಸುವ ಮೂಲಕ ಕಾರವಾರ ನಗರಸಭೆಯ ಇಬ್ಬರು ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳಸವಾಡ ಪ್ರದೇಶದಲ್ಲಿ ದೀಪಾವಳಿ ಪೂಜೆಯ ಬಳಿಕ ನಗರಸಭೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಕವಿತಾ ಗಣೇಶ್ ನಾಯ್ಕ್ ಅವರು ಕಸ ಹಾಕುವಾಗ ತಮ್ಮ ಚಿನ್ನದ ಕಿವಿಯೋಲೆಯನ್ನೂ ಅಚಾತುರ್ಯದಿಂದ ತ್ಯಾಜ್ಯದ ಕವರ್‌ಗೆ ಹಾಕಿದ್ದರು.
ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಘಟಕದಲ್ಲಿ ವಿಂಗಡಣೆ ಮಾಡುತ್ತಿದ್ದ ವೇಳೆ ವಾಹನ ಚಾಲಕ ಅರುಣ್ ವಿಠಲ್ ಹರಿಜನ್ ಹಾಗೂ ಸಹಾಯಕ ಮದನ್ ನಾಯ್ಕ್ ಅವರಿಗೆ ಕಸದ ರಾಶಿಯಲ್ಲಿ ಚಿನ್ನದ ಓಲೆ ಪತ್ತೆಯಾಗಿದೆ. ಅದನ್ನು ಜೋಪಾನವಾಗಿ ತೆಗೆದಿಟ್ಟುಕೊಂಡ ಸಿಬ್ಬಂದಿ, ಅದರ ವಾರಸುದಾರರ ಬಗ್ಗೆ ಮಾಹಿತಿ ಕಲೆಹಾಕಿ ಕವಿತಾ ಗಣೇಶ್ ನಾಯ್ಕ್ ಅವರನ್ನು ಸಂಪರ್ಕಿಸಿದ್ದಾರೆ.
ನಂತರ ಇಬ್ಬರೂ ಸಿಬ್ಬಂದಿ ಚಿನ್ನದ ಓಲೆಯನ್ನು ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಕಳೆದುಹೋಗಿದ್ದ ಆಭರಣ ಮರಳಿ ದೊರೆತಿದ್ದರಿಂದ ಕವಿತಾ ಅವರು ಸಂತಸ ವ್ಯಕ್ತಪಡಿಸಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಕಾರ್ಯದ ನಡುವೆಯೂ ಬೆಲೆಬಾಳುವ ಆಭರಣವನ್ನು ತಮ್ಮದಾಗಿಸಿಕೊಳ್ಳುವ ಆಸೆ ತೋರದೆ ವಾರಸುದಾರರಿಗೆ ಮರಳಿಸಿದ ಅರುಣ್ ವಿಠಲ್ ಹರಿಜನ್ ಹಾಗೂ ಮದನ್ ನಾಯ್ಕ್ ಅವರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಗರಸಭೆಯ ಸಿಬ್ಬಂದಿಯ ಈ ಪ್ರಾಮಾಣಿಕ ಕಾರ್ಯ ಇತರರಿಗೂ ಮಾದರಿಯಾಗಿದೆ.





