ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ. ಕನ್ನಡ ನಾಡಿನ ಜೈನ ಪರಂಪರೆಗೆ ಹಾವೇರಿ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದು ಡಾ. ಶಿವಯೋಗಿ ಆರ್ ಕೋರಿಶೆಟ್ಟರ್ ಹೇಳಿದರು.
ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕೆ.ಎಲ್.ಇ. ಸಂಸ್ಥೆಯ, ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಪರಂಪರ ಕೂಟ ಸಹಯೋಗದಲ್ಲಿ ‘ಹಾವೇರಿ ಜಿಲ್ಲೆಯ ಜೈನ ನೆಲೆಗಳು:ದೇವಗಿರಿಯನ್ನು ಅನುಲಕ್ಷಿಸಿ’ ವಿಷಯದ ಒಂದು ದಿನದ ರಾಜ್ಯ ಮಟ್ಟದ ಪ್ರಾತ್ಯಕ್ಷಿಕೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
“ಕ್ರಿ.ಶ ಐದನೆಯ ಶತಮಾನದಿಂದ ಮೊದಲುಗೊಂಡು ಹದಿನೆಂಟನೆಯ ಶತಮಾನದವರೆಗೂ ಜೈನಾವಶೇಷಗಳು ಈ ಪರಿಸರದಲ್ಲಿ ಲಭ್ಯವಾಗಿವೆ. ಬಸದಿಗಳು, ಜಿನಶಿಲ್ಪಗಳು, ಜಿನಗಲ್ಲುಗಳು, ಮುಕ್ಕೊಡೆಗಲ್ಲುಗಳು, ಮುನಿಗಳ ಸಂಚಾರ ಉಲ್ಲೇಖಗಳು ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ಜೈನ ಸಂಸ್ಕೃತಿಗೆ ಸಂಬಂಧಿಸಿದ ಅಸ್ಮಿತೆ ಹಾವೇರಿ ಜಿಲ್ಲಾ ಪರಿಸರದಲ್ಲಿ ಉಳಿದುಕೊಂಡು ಬಂದಿದೆ” ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕನ್ನಡ ಉಪನ್ಯಾಸಕರು, ಶಾಸನತಜ್ಞರು ಡಾ. ರವಿಕುಮಾರ ಕೆ. ನವಲಗುಂದ ಮಾತನಾಡಿ, “ಹಾವೇರಿ ಪರಿಸರವು ಜೈನರಿಗೆ ಹಾಗೂ ಕನ್ನಡ ರಾಜಸತ್ತೆಗಳಿಗೆ ಮಹತ್ವದ ಪ್ರದೇಶವಾಗಿದೆ. ಜೈನರಿಗೆ ಅವರ ಧರ್ಮ ಊರ್ಧ್ವಗೊಂಡು ಇಡೀ ಕನ್ನಡ ಪ್ರದೇಶಕ್ಕೆ ಬಹುವಾಗಿ ಹರಡಿದ್ದು, ಇಲ್ಲಿಂದಲೇ ಎಂಬುದೊಂದು ಹೆಗ್ಗಳಿಕೆ. ಜೈನಧರ್ಮದ ಧರ್ಮಸಿಂಚನ ತಾಣವಾಗಿ ಇಲ್ಲಿನ ಪರಲೂರು(ದೇವಗಿರಿ) ಆ ಕೆಲಸ ಮಾಡಿತು. ಅಂತೆಯೇ ಇಲ್ಲಿ ವಿವಿಧ ಮುನಿಸಂಘಗಳು ನಿತ್ಯಸಂಚರಿಸಿದವು. ನಾಡಿನಾದ್ಯಂತ ಜೈನಧರ್ಮವನ್ನು ಮತ್ತಷ್ಟು ಬಲಪಡಿಸಿದವು” ಎಂದರು.
ಸಹಾಯಕ ಪ್ರಾಧ್ಯಾಪಕ ಪ್ರೊ. ಕೃಷ್ಣ ಎಲ್.ಹೆಚ್ ಮಾತನಾಡಿ, “ದೇವಗಿರಿ ಪ್ರದೇಶದ ಜೈನಧರ್ಮದ ಪ್ರಾಚೀನತೆ ಬಗ್ಗೆ ಮಾತನಾಡಿದರು. ಹಾವೇರಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಂಯೋಜಕರಾದ ಡಾ. ಮಾಲತೇಶ ಮಾಚೇನಹಳ್ಳಿ ಅವರು ದೇವಗಿರಿ ದೇವಾಲಯಗಳ ವಾಸ್ತು-ಶಿಲ್ಪ-ಶಾಸನಗಳ ಕುರಿತು ಪ್ರತ್ಯಕ್ಷ ವಿವರಗಳನ್ನು ನೀಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಪರಂಪರೆ ಕೂಟದ ಸಂಚಾಲಕ ಡಾ. ಶರಣಪ್ಪ ಜಗ್ಗಲ ಮಾತನಾಡಿ, “ದೇಶದ ಸಾಂಸ್ಕೃತಿಕ ಇತಿಹಾಸ ರಚನೆಯಲ್ಲಿ ಗ್ರಾಮಗಳ ಪಾತ್ರ ಬಹುಮುಖ್ಯವಾದದ್ದು. ಒಂದು ನಾಡಿನ ನರ ನಾಡಿಗಳೆನಿಸಿದ ಗ್ರಾಮಗಳ ಅಧ್ಯಯನ ತುರ್ತಾಗಿ ನಡೆಯಬೇಕಾದ ಅನಿವಾರ್ಯವಿದೆ. ವೈಶಿಷ್ಟ್ಯಪೂರ್ಣವಾದ ಪರಿಸರದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪಿತವಾದ ಇಂಥ ಗ್ರಾಮಗಳು ಇತಿಹಾಸ ಕೋಶವನ್ನು ಹೆಣೆಯುತ್ತವೆ” ಎಂದು ಹೇಳದರು.
ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಅಮೃತಾ ಜಂಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳು, ಹಾವೇರಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು, ಕೆ.ಎಲ್.ಇ ಸಂಸ್ಥೆಯ ರಾಣೆಬೆನ್ನೂರಿನ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು, ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ನಮ್ಮ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಮಿತ್ರ ಗುರುನಂಜಪ್ಪ ಕುಂಬಾರಿ, ದೇವಗಿರಿಯ ಬಸವೇಶ್ವರ ದೇವಾಲಯ ಕಮೀಟಿಯ ಅಧ್ಯಕ್ಷರು ಶಿವಾನಂದ ಚನ್ನವೀರಪ್ಪನವರ, ಮಾಲತೇಶ ಪುರದ ಹಾಗೂ ದೇವಗಿರಿ ಗ್ರಾಮದ ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡರು. ವಿದ್ಯಾರ್ಥಿನಿ ಐಶ್ವರ್ಯ ಹಳೆರಿತ್ತಿ ಪ್ರಾರ್ಥಿಸಿದರು. ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಗುತ್ತೇಮ್ಮ ಹರಿಜನ ವಂದಿಸಿದರು.




