ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ ಕಾರ್ಮಿಕ ಮಹಿಳೆಯೊಬ್ಬರಿಗೆ ನ್ಯಾಯಾಲಯವು 100 ಛಡಿಯೇಟಿನ ಕಠಿಣ ಶಿಕ್ಷೆ ವಿಧಿಸಿದೆ. ತನ್ನ ಮಗುವಿನೊಂದಿಗೆ ತಾಯ್ನಾಡಿಗೆ ಮರಳಲು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಹೆಣಗಾಡುತ್ತಿರುವ ಆ ತಾಯಿಗೆ ಈ ತೀರ್ಪು ಆಘಾತವನ್ನುಂಟುಮಾಡಿದೆ. ಕಳೆದೊಂದು ದಶಕದಲ್ಲಿ ಸೌದಿ ಅರೇಬಿಯಾ ತಂದಿರುವ ಸಾಮಾಜಿಕ ಹಾಗೂ ಕಾನೂನು ಸುಧಾರಣೆಗಳ ಮಿತಿಗಳನ್ನು ಈ ಘಟನೆ ಎತ್ತಿತೋರಿಸಿದ್ದು, ‘ಕಾನೂನುಬಾಹಿರ ಗರ್ಭಧಾರಣೆ’ಗಾಗಿ ಮಹಿಳೆಯರು ಇಂದಿಗೂ ಜೈಲು ಮತ್ತು ದೈಹಿಕ ಶಿಕ್ಷೆ ಅನುಭವಿಸುವ ದುಸ್ಥಿತಿ ಅಲ್ಲಿ ಜೀವಂತವಾಗಿದೆ.
ಛಡಿಯೇಟಿನ ಶಿಕ್ಷೆಗೊಳಗಾದ 40 ವರ್ಷದ ಎಸ್ತರ್ ವಾಂಜಾ ಮುತ್ತೋನಿ, ಸೌದಿಯ ‘ಮಹಾರಾ ಹ್ಯೂಮನ್ ರಿಸೋರ್ಸಸ್’ ಮೂಲಕ ಗೃಹ ಕಾರ್ಮಿಕಳಾಗಿ ಕೆಲಸಕ್ಕೆ ಸೇರಿದ್ದರು. ಈಜಿಪ್ಟ್ ಮೂಲದ ಮೊಹಮ್ಮದ್ ಎಂಬಾತನೊಂದಿಗೆ ಬೆಳೆದ ಅಲ್ಪಾವಧಿಯ ಸಂಬಂಧದಿಂದಾಗಿ ಗರ್ಭಿಣಿಯಾದ ಅವರು, ಆಗಸ್ಟ್ 2025 ರಲ್ಲಿ ಸಿಬ್ಬಂದಿ ವಸತಿಗೃಹದಲ್ಲಿ ‘ಅಬುಡಿ’ ಎಂಬ ಗಂಡುಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಗೆ ದಾಖಲಾದಾಗ ಗರ್ಭಧಾರಣೆ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ, ಮಗುವಿನ ತಂದೆ ಆಗಿರುವ ವ್ಯಕ್ತಿಯು ಈಗಾಗಲೇ ದೇಶ ಬಿಟ್ಟು ಹೋಗಿರುವುದಾಗಿ ಮುತ್ತೋನಿ ತಿಳಿಸಿದ್ದರು.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಸತಿಗೃಹದಿಂದ ಹೊರಹಾಕಲ್ಪಟ್ಟ ಮುತ್ತೋನಿ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಕೀನ್ಯಾ ರಾಯಭಾರ ಕಚೇರಿಯ ಅಧಿಕಾರಿಗಳಿಂದಲೂ ಅವರಿಗೆ ಸಹಾಯದ ಬದಲು ಕಡೆಗಣನೆ ಹಾಗೂ ಲಂಚದ ಬೇಡಿಕೆ ಎದುರಾಯಿತು. ಅಂತಿಮವಾಗಿ ಪೆಟ್ರೋಲ್ ಬಂಕ್‌ವೊಂದರಲ್ಲಿ ಅವರು ಆಶ್ರಯ ಪಡೆದಿದ್ದರು. ಕಳೆದ ವರ್ಷ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ಈ ಶೋಷಣೆಯ ಬಗ್ಗೆ ವರದಿ ಮಾಡಿದ ನಂತರವಷ್ಟೇ, ಆಕೆಗೆ ವಸತಿ ಹಾಗೂ ನಿರ್ಗಮನ ದಾಖಲೆಗಳನ್ನು ಒದಗಿಸಲಾಯಿತು. ಆದರೆ, ಆಕೆಯ ವಿರುದ್ಧದ ಕಾನೂನು ಪ್ರಕ್ರಿಯೆ ಬಾಕಿ ಇದ್ದ ಕಾರಣ ಸೌದಿಯಿಂದ ಹೊರಹೋಗಲು ಸಾಧ್ಯವಾಗಲಿಲ್ಲ.
ರಿಯಾದ್‌ನ ಕ್ರಿಮಿನಲ್ ನ್ಯಾಯಾಲಯದಲ್ಲಿ ಮೂವರು ನ್ಯಾಯಾಧೀಶರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು. ಮುತ್ತೋನಿ ಅವರಿಗೆ ಭಾಷಾಂತರಕಾರರನ್ನು ಒದಗಿಸಲಾಗಿತ್ತಾದರೂ, ಪರವಾಗಿ ವಾದಿಸಲು ಯಾವುದೇ ವಕೀಲರನ್ನು ನೀಡಿರಲಿಲ್ಲ. ಅಂತಿಮವಾಗಿ ಕಳೆದ ಅಕ್ಟೋಬರ್‌ನಲ್ಲಿ ಇಸ್ಲಾಮಿಕ್ ಕಾನೂನಿನ (ಶರಿಯತ್) ಕಟ್ಟುನಿಟ್ಟಿನ ವ್ಯಾಖ್ಯಾನವನ್ನು ಆಧರಿಸಿ, ವಿವಾಹೇತರ ಲೈಂಗಿಕ ಕ್ರಿಯೆಗಾಗಿ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಮಾನಿಸಿ 100 ಛಡಿಯೇಟಿನ ಶಿಕ್ಷೆ ಪ್ರಕಟಿಸಿತು. ಆಶ್ಚರ್ಯಕರ ಸಂಗತಿಯೆಂದರೆ, ಮಗುವಿನ ತಂದೆಯ ವಿರುದ್ಧ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಸೌದಿ ಅರೇಬಿಯಾ 2020ರಲ್ಲೇ ಛಡಿಯೇಟು ನೀಡುವ ಶಿಕ್ಷೆಯನ್ನು ಗಣನೀಯವಾಗಿ ಕಡಿತಗೊಳಿಸಿ ‘ಐತಿಹಾಸಿಕ ನಿರ್ಧಾರ’ ಕೈಗೊಂಡಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಇಸ್ಲಾಮಿಕ್ ಕಾನೂನಿನ ಪ್ರಕಾರ ದೋಷಮುಕ್ತವಲ್ಲದ ಇಂತಹ ‘ನೈತಿಕ ಅಪರಾಧ’ಗಳಿಗೆ ಆ ವಿನಾಯಿತಿ ಅನ್ವಯಿಸುವುದಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಈ ಶಿಕ್ಷೆಯು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಹಾಗೂ ಇದು ದುರ್ಬಲ ಮಹಿಳೆಯರನ್ನು ರಕ್ಷಿಸುವ ಬದಲು ಅವರ ಘನತೆಯನ್ನು ಕಸಿದುಕೊಳ್ಳುತ್ತಿದೆ ಎಂದು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನು ನೆರವಿನ ಕೊರತೆಯಿಂದಾಗಿ ಐದು ಮಕ್ಕಳ ತಾಯಿಯಾಗಿರುವ ಮುತ್ತೋನಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿಲ್ಲ. ಛಡಿಯೇಟಿನ ಶಿಕ್ಷೆ ಅನುಭವಿಸಿದರೆ ಮಾತ್ರ ಕೀನ್ಯಾದಲ್ಲಿರುವ ತನ್ನ ಮಕ್ಕಳ ಬಳಿಗೆ ಮರಳಬಹುದು ಎಂಬ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ. ಶಿಕ್ಷೆಯನ್ನು ಯಾವಾಗ ಜಾರಿಗೊಳಿಸಲಾಗುತ್ತದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಛಡಿಯೇಟಿನ ಜೊತೆಗೆ ಅವರಿಗೆ ಒಂದು ವರ್ಷದ ಗಡೀಪಾರು ಶಿಕ್ಷೆಯನ್ನೂ ವಿಧಿಸಲಾಗಿದ್ದು, ಅವರನ್ನು ನೇರವಾಗಿ ಕೀನ್ಯಾಕ್ಕೆ ಕಳುಹಿಸಲಾಗುತ್ತದೆಯೇ ಅಥವಾ ಸೌದಿಯ ಬೇರೊಂದು ನಗರಕ್ಕೆ ಸ್ಥಳಾಂತರಿಸಲಾಗುತ್ತದೆಯೇ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ.




