ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಅ.27 ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 99.32 ಲಕ್ಷ ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬರೋಬ್ಬರಿ 16,23,060ಲಕ್ಷ ಮತದಾರರನ್ನು ಕೈಬಿಡಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿ ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ SIR ಪ್ರಕ್ರಿಯೆ ಪೂರ್ವದಲ್ಲಿ ಒಟ್ಟು 1,01,63,828 ಮತದಾರರಿದ್ದರು. ಹಳೆ ಮತದಾರರ ಪಟ್ಟಿಗೆ ಹೋಲಿಸಿದರೆ SIR ಬಳಿಕ ಕಲ್ಯಾಣ ಕರ್ನಾಟಕ ಒಟ್ಟಾರೆ ಮತದಾರರ ಸಂಖ್ಯೆ 85,40,768 ಲಕ್ಷಕ್ಕೆ ತಗ್ಗಿದೆ.
ರಾಜ್ಯದಲ್ಲಿ 2026ರ ಜೂನ್ 30ರಿಂದ ಆರಂಭವಾದ SIR ಪ್ರಕ್ರಿಯೆ ಸುಮಾರು 4 ತಿಂಗಳ ಕಾಲ ನಡೆದು ಅಕ್ಟೋಬರ್ 27ರಂದು ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದೆ.
ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ SIR ಪ್ರಕ್ರಿಯೆಯ ಎನ್ಯೂಮರೇಷನ್ ಫಾರ್ಮ್ಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಿ ಡಿಜಿಟಲೈಸೇಷನ್ ಮಾಡಿದ್ದರು. ಮತದಾರರ ಪಟ್ಟಿಯಿಂದ ಹಲವರು ಹೊರಗುಳಿಯಲು ಮುಖ್ಯ ಕಾರಣಗಳಲ್ಲಿ ಎಎಸ್ಡಿಡಿಒ (ಅಬ್ಸೆಂಟ್-ಎ, ಶಿಫ್ಟೆಡ್-ಎಸ್, ಡೆಡ್-ಡಿ, ಡ್ಯೂಪ್ಲಿಕೇಟ್-ಡಿ, ಅದರ್ಸ್-ಒ) ವರ್ಗೀಕರಣ ಪ್ರಧಾನವಾಗಿತ್ತು. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 18.11 ಅನರ್ಹ ಮತದಾರರು ಎಂದು ಗುರುತಿಸಿ ಕರಡು ಮತಪಟ್ಟಿಯಿಂದ ಹೊರಗಿಡಲಾಗಿತ್ತು.
ಎರಡನೇ ಹಂತದಲ್ಲಿ 3.45 ಲಕ್ಷ ಮತದಾರರಿಗೆ 2002ರ ಮತದಾರರ ಪಟ್ಟಿಯ ಮ್ಯಾಪಿಂಗ್ ವಿವರ ಇಲ್ಲ ಮತ್ತು ವಿವರ ವ್ಯತ್ಯಾಸವಿದೆ ಎಂದು ನೋಟಿಸ್ ಸೃಜಿಸಲಾಗಿತ್ತು. ಅಂತಹ ಮತದಾರರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿ ಅವರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಕರಡು ಮತದಾರರ ಪಟ್ಟಿಯಿಂದ ಹೊರಗೆ ಉಳಿದ ಅರ್ಹ ಮತದಾರರು ಮತ್ತೆ ನೋಂದಣಿ ಮಾಡಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಲಾಗಿತ್ತು.

ಹೊಸದಾಗಿ ನೋಂದಣಿಗೆ ಅರ್ಜಿ ನಮೂನೆ-6 ಸಲ್ಲಿಸಿದವರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವಂತೆ ನಮೂನೆ-7 ಅರ್ಜಿ ಸಲ್ಲಿಕೆಯಾಗಿತ್ತು. ಸೂಕ್ತ ದಾಖಲೆ ನೀಡದೇ ಇರುವುದರಿಂದ ಬಹುತೇಕ ಅರ್ಜಿಗಳನ್ನು ತಿರಸ್ಕೃತಗೊಂಡವು. ಪರಿಷ್ಕರಣೆ, ಸೇರ್ಪಡೆ, ತಿದ್ದುಪಡಿ ನಡೆದ ಬಳಿಕ ಹೊಸ ಮತದಾರರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.
ಮಹಿಳಾ ಮತದಾರರೇ ಅಧಿಕ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟಾರೆ ನೋಡುವುದಾದರೆ ಮಹಿಳಾ ಮತದಾರರ ಸಂಖ್ಯೆಯೇ ಅಧಿಕವಾಗಿದೆ. ಏಳು ಜಿಲ್ಲೆಗಳಲ್ಲಿ ಒಟ್ಟು 42,91,367 ಮಹಿಳೆಯರು, 42,48,591 810 ಪುರುಷರು ಹಾಗೂ 810 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಅಂತಿಮ ಕರಡು ಪಟ್ಟಿಯಲ್ಲಿ ಒಟ್ಟು 85,40,768 ಮತದಾರರ ಹೆಸರು ಭದ್ರವಾಗಿದೆ.
ಕಲ್ಯಾಣದ ಏಳು ಜಿಲ್ಲೆಗಳ 41 ಮತಕ್ಷೇತ್ರದಲ್ಲಿ ಮತಪಟ್ಟಿಯಿಂದ ಹೊರ ಹೋದವರಲ್ಲಿ ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದವರೇ ಹೆಚ್ಚು ಇದ್ದಾರೆ. ನಂತರದಲ್ಲಿ ರಾಯಚೂರು, ನಗರ, ಬೀದರ್ ಉತ್ತರ ಕ್ಷೇತ್ರದ ಮತದಾರರು ಅಂತಿಮ ಕರಡು ಪಟ್ಟಿಯಿಂದ ಹೊರ ಉಳಿದಿದ್ದಾರೆ. ಇನ್ನೊಂದು ಅಚ್ಚರಿ ಏನೆಂದರೆ, ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶ ಮತಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಎಸ್ಐಆರ್ ಪೂರ್ವದಲ್ಲಿ 3.35 ಲಕ್ಷ ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 2.39 ಲಕ್ಷ ಮತದಾರರು ಉಳಿದು, 95,712 ಮತದಾರರು ಹೊರ ಹೋಗಿದ್ದಾರೆ. ಕಲಬುರಗಿ ದಕ್ಷಿಣದಲ್ಲಿ ಎಸ್ಐಆರ್ ಪೂರ್ವದಲ್ಲಿ 2.97 ಲಕ್ಷ ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 2.02 ಉಳಿದು, 95,668 ಮತದಾರರನ್ನು ಕೈಬಿಡಲಾಗಿದೆ. ಬೀದರ್ ಉತ್ತರ ಕ್ಷೇತ್ರದಲ್ಲಿ ಪೂರ್ವದಲ್ಲಿ 2.48 ಲಕ್ಷ ಮತದಾರರಿದ್ದರು, ಎಸ್ಐಆರ್ ನಂತರ ಅಂತಿಮ ಪಟ್ಟಿಯಲ್ಲಿ 1.88 ಲಕ್ಷ ಮತದಾರರು ಉಳಿದು, 60,162 ಮತದಾರರನ್ನು ಹೊರ ಹಾಕಲಾಗಿದೆ. ಇನ್ನು ಚಿತ್ತಾಪುರ ಕ್ಷೇತ್ರದಲ್ಲಿ 2.51 ಲಕ್ಷ ಮತದಾರರ ಪೈಕಿ 51,034 ಮತದಾರರನ್ನು ಕೈಬಿಡಲಾಗಿದ್ದು,ಅಂತಿಮ ಪಟ್ಟಿಯಲ್ಲಿ 2 ಲಕ್ಷ ಮತದಾರರಿದ್ದಾರೆ.
ರಾಯಚೂರ ನಗರದಲ್ಲಿ ಎಸ್ಐಆರ್ ಪೂರ್ವದಲ್ಲಿ ಒಟ್ಟು 2.55 ಲಕ್ಷ ಮತದಾರರಿದ್ದರು, ಆ ಸಂಖ್ಯೆ ಅಂತಿಮ ಪಟ್ಟಿಯಲ್ಲಿ 1.84 ಲಕ್ಷಕ್ಕೆ ತಗ್ಗಿದೆ, ಅಂದರೆ ಬರೋಬ್ಬರಿ 70,725 ಮತದಾರರು ಮತಪಟ್ಟಿಯಿಂದ ಹೊರ ಹೋಗಿದ್ದಾರೆ. ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ ಹಾಗೂ ಬೀದರ್ ಹಾಲಿ ಶಾಸಕರು ಕಾಂಗ್ರೆಸ್ನವರು ಇದ್ದರೆ, ರಾಯಚೂರ ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಈ ಮೇಲಿನ ಐದು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಗೆಲುವಿನ ಅಂತರಕ್ಕಿಂತ ಅಧಿಕಪಟ್ಟು ಮತಗಳನ್ನು ಕರಡು ಪಟ್ಟಿಯಿಂದ ತೆಗೆಯಲಾಗಿದೆ. ಅಲ್ಲದೆ ರಾಯಚೂರ ಕ್ಷೇತ್ರದಲ್ಲಿ ಹಾಲಿ ಶಾಸಕರು 2023ರ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಅಧಿಕ ಮತದಾರರು ಪಟ್ಟಿಯಿಂದ ಹೊರ ಹೋಗಿರುವುದು ಗಮನಾರ್ಹ ಸಂಗತಿ. ಇನ್ನು ಉಳಿದ ಕ್ಷೇತ್ರಗಳಲ್ಲಿಯೂ ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ಇದನ್ನೂ ಓದಿ : ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮತ್ತೆ ಅವಕಾಶ; ದೆಹಲಿ ಸೇರಿ 6 ರಾಜ್ಯಗಳಲ್ಲಿ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
ಕಲ್ಯಾಣದಲ್ಲಿ 1.51 ಲಕ್ಷ ಯುವ ಮತದಾರರು
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 18-19 ವರ್ಷದ 1,51,475 ಯುವ ಮತದಾರರು ಇದ್ದಾರೆ ಎಂಬುದು ಚುನಾವಣೆ ಆಯೋಗ ನೀಡಿದ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಬೀದರ್ ಜಿಲ್ಲೆಯಲ್ಲಿ 20875, ಕಲಬುರಗಿ- 28,966, ಯಾದಗಿರಿ13,887 ರಾಯಚೂರ-24,029 ಕೊಪ್ಪಳ-21,511 ಬಳ್ಳಾರಿ-21,546 ಹಾಗೂ ವಿಜಯನಗರದಲ್ಲಿ 19,803 ಯುವ ಮತದಾರರಿದ್ದಾರೆ. ಇನ್ನು ಇದೇ ಏಳು ಜಿಲ್ಲೆಗಳಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಸಂಖ್ಯೆ 56,625 ಹಾಗೂ 1,15,186 ಅಂಗವಿಕಲ ಮತದಾರರಿದ್ದಾರೆ. ಎಸ್ಐಆರ್ ಪೂರ್ವದ ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳನ್ನು ಅಂತಿಮ ಪಟ್ಟಿಯೊಂದಿಗೆ ಹೋಲಿಸಿದಾಗ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅದರಲ್ಲೂ ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಬೀದರ್ ಉತ್ತರ, ಚಿತ್ತಾಪುರ ಹಾಗೂ ರಾಯಚೂರು ನಗರ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಕಡಿತಗೊಂಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಒಟ್ಟಾರೆ, ಕಲ್ಯಾಣ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಮತದಾರರ ಪಟ್ಟಿಯ ಸ್ವರೂಪವನ್ನೇ ಗಣನೀಯವಾಗಿ ಬದಲಿಸಿದೆ. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿರುವುದು, ಒಂದೂವರೆ ಲಕ್ಷಕ್ಕೂ ಅಧಿಕ ಯುವ ಮತದಾರರು ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಸಂಗತಿ. ಮತ್ತೊಂದೆಡೆ, ಲಕ್ಷಾಂತರ ಹೆಸರುಗಳು ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಅರ್ಹ ಮತದಾರರು ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯಗತ್ಯ. ಮತದಾನದ ಹಕ್ಕು ಯಾರೊಬ್ಬರಿಗೂ ತಪ್ಪದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದ್ದು, ಪರಿಷ್ಕರಣೆ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನಿಖರತೆಯೂ ಅಷ್ಟೇ ಮುಖ್ಯವಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



