ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಮತದಾರರು ಫಾರಂ ತುಂಬುವ ವಿಚಾರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಬೂತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು ಎಂದು ನಾಗರಿಕ ಮತಕಾವಲು ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ನಾಗರಿಕ ಮತಕಾವಲು ಸಮಿತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಹಿಂದೆ ನಾಗರಿಕ ಸಂಘಟನೆಗಳ ಒತ್ತಾಯದಿಂದಾಗಿ ರಾಜ್ಯ ಸರ್ಕಾರ ಬೂತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಪ್ರಾರಂಭಿಸುವ ತೀರ್ಮಾನ ಮಾಡಿತ್ತು. ಆದರೆ ಇನ್ನೂ ಸಂಪೂರ್ಣವಾಗಿ ಪ್ರಾರಂಭವಾಗಿಲ್ಲ. ಈ ಹಂತದಲ್ಲಿ ಮತದಾರರಿಗೆ ಒಂದೊಂದು ದಿನವೂ ಬಹಳ ಮುಖ್ಯ ಎಂದು ಸಮಿತಿ ಅಭಿಪ್ರಾಯಿಸಿದೆ
ಇದನ್ನೂ ಓದಿ: ಅಂದು ಎಸ್‌ಐಆರ್ ಸಮರ್ಥನೆ, ಇಂದು ತಡೆಗೆ ಆಗ್ರಹ: ನಿಷ್ಫಲವಾಯಿತೇ ಬಿಜೆಪಿ ತಂತ್ರಗಾರಿಕೆ?
ರಾಜ್ಯ ಸರ್ಕಾರ ಕೂಡಲೇ ಮತದಾರರ ನೆರವಿಗೆ ಮುಂದಾಗಬೇಕು. ರಾಜ್ಯಾದ್ಯಂತ ಎಸ್‌ಐಆರ್ ಸಹಾಯ ಕೇಂದ್ರಗಳನ್ನು ಸ‍್ಥಾಪಿಸಿ, ಜನರಿಗೆ ಅಗತ್ಯ ದಾಖಲೆಗಳನ‍್ನು ತ್ವರಿತವಾಗಿ ದೊರಕಿಸಿಕೊಡುವ ವ್ಯವಸ‍್ಥೆ ಕಲ‍್ಪಿಸಬೇಕು. ಶಾಶ್ವತ ನಿವಾಸಿ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ‍್ನು ಪಡೆಯಲು ಬೂತ್ ಮಟ್ಟದಲ್ಲಿ ವಿಶೇಷ ಶಿಬಿರಗಳನ‍್ನು ಆಯೋಜಿಸಬೇಕು. ಯಾವುದೇ ನಾಗರಿಕರು ದಾಖಲೆಗಳ ಕೊರತೆಯಿಂದ ಸಂಕಷ್ಟಕ‍್ಕೀಡಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ತಿಳಿಸಿದೆ.
ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ
ಈ ಪತ್ರಿಕಾ ಹೇಳಿಕೆಯಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಎಸ್‍ಐಆರ್ ಪ್ರಕ್ರಿಯೆಯಿಂದ ಮತದಾರರು ಧಿಕ‍್ಕೆಟ‍್ಟಿರುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ‍್ಯೆಗಳನ‍್ನು ಬದಿಗೊತ್ತಿ, ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ ಕುರಿತು ಅಮಿತ್ ಶಾ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿರುವುದು ವಿಷಾದನೀಯ. ಇದನ‍್ನು ನಾಗರಿಕ ಮತಕಾವಲು ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ.
ಜನರು ಅಗತ್ಯ ದಾಖಲೆಗಳ ಕೊರತೆ, ಮಾಹಿತಿ ಅಭಾವ, ಗೊಂದಲ ಮತ್ತು ಆಡಳಿತಾತ್ಮಕ ತೊಂದರೆಗಳಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಸಮಸ‍್ಯೆಗಳಿಗೆ ಪರಿಹಾರ ಸೂಚಿಸುವ ಬದಲು ಜನರ ಸಂಕಟದಲ್ಲೂ ರಾಜಕಾರಣ ಮಾಡುವ ಪ್ರಯತ್ನ ಖಂಡನೀಯ. ಜನ ವಿರೋಧಿ ಪ್ರಯತ್ನಗಳನ‍್ನು ನಿಲ‍್ಲಿಸಬೇಕು. ಇದರಲ್ಲಿ ರಾಜಕಾರಣ ಮಾಡದೆ ಜನರಿಗೆ ನೆರವಾಗಲು ಎಲ್ಲರೂ ಮುಂದಾಗಬೇಕು ಎಂದು ನಾಗರಿಕ ಮತಕಾವಲು ಸಮಿತಿ ಒತ್ತಾಯಿಸಿದೆ.




