ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಪಶ್ಚಿಮ ಬಂಗಾಳದಲ್ಲಿ ಬಳಸಿದ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟವೇರ್ ಅನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಳಸಬಾರದು ಎಂದು ಸಾಹಿತಿ-ಲೇಖಕ ಬಳಗವು ರಾಜ್ಯದ ಚುನಾವಣಾ ಆಯೋಗಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ. ಹಾಗೆಯೇ ಈ ಬಳಗವು ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿರೋಧ ಸಮಾವೇಶಕ್ಕೂ ಬೆಂಬಲ ಸೂಚಿಸಿದೆ.
“ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸುವಾಗ ಸಮಾನ ಮತದಾನದ ಹಕ್ಕನ್ನು ನಾವು ಪಡೆದುಕೊಂಡಿರುವ ರಾಜಕೀಯ ಸ್ವಾತಂತ್ರ್ಯ ಎಂದು ಹೇಳಿದ್ದರು. ‘ಎಲ್ಲರಿಗೂ ಒಂದು ಮತ, ಒಂದು ಮತ ಒಂದು ಮೌಲ್ಯ’ ಎನ್ನುವುದನ್ನು ಇಲ್ಲಿಯವರೆಗೂ ಎಲ್ಲ ಚುನಾವಣಾ ಆಯೋಗ ಪಾಲಿಸಿ ಕೊಂಡು ಬಂದಿದ್ದವು”
ಇದನ್ನು ಓದಿದ್ದೀರಾ? ಎಸ್‌ಐಆರ್‌ಗೆ ಪ್ರವೇಶ ಪತ್ರ, ತೇರ್ಗಡೆ ಪ್ರಮಾಣಪತ್ರವೂ ಗುರುತಿನ ಚೀಟಿ: ಸುಪ್ರೀಂ ಕೋರ್ಟ್
“ಆದರೆ ಈಗ ಭಾರತ ಚುನಾವಣಾ ಆಯೋಗದ ಮೂಲಕ ಜಾರಿ ಮಾಡಲಾಗುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿ, ಎಲ್ಲಾ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಇಲ್ಲಿಯವರೆಗೂ ಇಲ್ಲದ ಹೊಸ ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಅವರ ಜೀವಿತ ಕಾಲದಲ್ಲಿಯೇ ನಿರಾಕರಿಸುತ್ತಿರುವುದು ಪ್ರಜಾತಂತ್ರದ ಕಗ್ಗೊಲೆಯಾಗಿದೆ. ಅಷ್ಟೇ ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ ಪ್ರಯತ್ನಿಸಿ ವಿಫಲಗೊಂಡ ಸಿಎಎ, ಎನ್‌ಆರ್‌ಸಿಯನ್ನು ಜಾರಿಗೊಳಿಸುವ ಪೌರತ್ವ ಪರೀಕ್ಷೆಯ ಪರೋಕ್ಷ ಕಾರ್ಯಚರಣೆಯಂತಾಗಿದೆ” ಎಂದು ಬಹಿರಂಗ ಪತ್ರದಲ್ಲಿ ಬರೆಯಲಾಗಿದೆ.
“ಈಗಾಗಲೇ SIRನಿಂದಾಗಿ ಹಲವು ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ 3 ಕೋಟಿಯ ತನಕ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ. ಇದು ನುಸುಳುಕೋರರನ್ನು ಪತ್ತೆ ಹಚ್ಚುವುದರ ಬದಲಿಗೆ ದೊಡ್ಡ ಸಂಖ್ಯೆಯಲ್ಲಿ ಪೌರತ್ವದ ಹಕ್ಕು ಇಲ್ಲದ ಎರಡನೇ ದರ್ಜೆಯ ಜನ ವರ್ಗವನ್ನು ಸೃಷ್ಟಿಸುವ ಅಜೆಂಡಾ ಆಗಿದೆಯೇ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ರಾಜ್ಯ ಸರಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಶರಣರ, ಸೂಫಿ, ಸಂತರ, ಕುವೆಂಪು ನಾಡಿನಲ್ಲಿ ಇಂತಹ ಅನ್ಯಾಯ ನಡೆಯಲು ಯಾವುದೇ ಕಾರಣಕ್ಕೂ ಬಿಡಬಾರದು” ಎಂದು ಮನವಿ ಮಾಡಿದ್ದಾರೆ.
“ಪಶ್ಚಿಮ ಬಂಗಳಾದಲ್ಲಿ ಬಳಸಿದ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟವೇರ್ ಅನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಳಸಬಾರದು. ಕರಡು ಪಟ್ಟಿ ತಯಾರಾದ ನಂತರ ಗ್ರಾಮ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು. ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಫಾರ್ಮ್ಯಾಟ್ ಮೂಲಕ ಪಾರದರ್ಶಕತೆ ಪಾಲಿಸಬೇಕು. ಮನವಿ/ ಆಕ್ಷೇಪಣೆ ಸಲ್ಲಿಸಲು-ಅಗತ್ಯ ದಾಖಲೆ ಒದಗಿಸಲು ಕನಿಷ್ಠ 6 ತಿಂಗಳ ಸಮಯವಕಾಶ ನೀಡಬೇಕು” ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಲಾಗಿದೆ.
ಇದನ್ನು ಓದಿದ್ದೀರಾ? ಶಹಾಪುರದಲ್ಲಿ ಎಸ್‌ಐಆರ್ ವಿರೋಧಿ ಹೋರಾಟದ ಕಹಳೆ; ಬೈಕ್ ರ‍್ಯಾಲಿ ಮೂಲಕ ಜನಜಾಗೃತಿ
ಹಾಗೆಯೇ “ಸ್ಥಳೀಯ ಚುನಾವಣೆಗಳು ಬರುತ್ತಿರುವುದರಿಂದ ಮತ್ತು ಜನರಲ್ಲಿ ಆತಂಕ ಇರುವುದರಿಂದ ನೀವು ಮಾಸ್ಟರ್ ರೋಲಿನ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಮಾಡಿಸಲು ವಿಶೇಷ ಗಮನ ನೀಡಬೇಕು. ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿ ಇರುವಂತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಗ್ರಾಮ ಸಭೆಗಳನ್ನು ಹಾಗೂ ವಾರ್ಡ್ ಸಭೆಗಳನ್ನು ಕರೆದು ತಿದ್ದುಪಡಿಗಳನ್ನು ಸ್ವೀಕರಿಸಿ, ಸಾರ್ವಜನಿಕವಾಗಿ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಮಾಡಿಯೇ ಅಂತಿಮಗೊಳಿಸಬೇಕು” ಎಂದು ರಾಜ್ಯ ಸರ್ಕಾರವನ್ನು ಸಾಹಿತಿ-ಲೇಖಕ ಬಳಗ ಆಗ್ರಹಿಸಿದೆ.
“ಈ ಗ್ರಾಮ/ವಾರ್ಡ್ ಸಭೆಗಳನ್ನು ಆಯೋಗ ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿ ನಡೆಸಬೇಕು. ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು. ಸಾರಾಂಶದಲ್ಲಿ ರಾಜ್ಯದ ಯಾವ ಅರ್ಹ ಮತದಾರರು ಕೂಡ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು” ಎಂದು ಸಾಹಿತಿ-ಲೇಖಕ ಬಳಗ ಒತ್ತಾಯಿಸಿದೆ.
ಇನ್ನು ಶನಿವಾರ ಜೂನ್ 20ರಂದು ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ SIR ವಿರೋಧಿ ಪ್ರತಿರೋಧ ಸಮಾವೇಶಕ್ಕೆ ಆಗಮಿಸಿ ನಾಗರಿಕ ಸಮಾಜದ ಪ್ರಶ್ನೆಗಳಿಗೆ ಸಾರ್ವಜನಿಕ ಸ್ಪಷ್ಟನೆ ನೀಡಬೇಕೆಂದು ಚುನಾವಣಾ ಅಧಿಕಾರಿ ಅನ್ಬುಕುಮಾರ್ ಅವರಿಗೆ SIR ವಿರೋಧಿ ಕರ್ನಾಟಕ ಪರವಾಗಿ ಪ್ರಗತಿಪರ ಚಿಂತಕರಾದ ನಗರಗೆರೆ ರಮೇಶ್, ಬರಗೂರು ರಾಮಚಂದ್ರಪ್ಪ, ಬಿ ಸುರೇಶ್, ಅಮ್ಜದ್ ಪಾಷ, ತಾರಾ ರಾವ್ ಮನವಿ ಮಾಡಿದ್ದಾರೆ.




