ಎಸ್‌ಐಆರ್ (SIR) ಜಾರಿಯಿಂದ ಎದುರಾಗಿರುವ ಕಾನೂನಾತ್ಮಕ ಸವಾಲುಗಳನ್ನು ಎದುರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ‘ಮತ ಕಾವಲು ಕಾನೂನು ಸಮಿತಿ’ಗಳನ್ನು ರಚಿಸಲು ಇಲ್ಲಿ ನಡೆದ ವಕೀಲರ ದುಂಡುಮೇಜಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕ ಹಾಗೂ ವಕೀಲರಾದ ಬಿ.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಕೀಲ ಪ್ರತಿನಿಧಿಗಳು ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಪಶ್ಚಿಮ ಬಂಗಾಳದ ವಕೀಲ ಧಿಮಾಂಶು ಕರ್ ಅವರು ಅಲ್ಲಿನ ಎಸ್‌ಐಆರ್ ಪ್ರಕ್ರಿಯೆ ಸೃಷ್ಟಿಸಿರುವ ಅವಾಂತರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. “ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ 34 ಲಕ್ಷಕ್ಕೂ ಹೆಚ್ಚು ಮಂದಿ ಮೇಲ್ಮನವಿ ಸಲ್ಲಿಸಿದ್ದು, 19 ನ್ಯಾಯಾಂಗ ಟ್ರಿಬ್ಯುನಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ನಾಲ್ಕು ತಿಂಗಳಿಂದ ನಿರಂತರ ವಿಚಾರಣೆ ನಡೆದರೂ ಶೇ.1 ರಷ್ಟು ಪ್ರಕರಣಗಳನ್ನೂ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಇದೇ ವೇಗದಲ್ಲಿ ಸಾಗಿದರೆ ಎಲ್ಲಾ ಪ್ರಕರಣಗಳ ವಿಚಾರಣೆ ಮುಗಿಯಲು ಇನ್ನೂ 25 ವರ್ಷಗಳೇ ಬೇಕಾಗಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮಾತನಾಡಿ, “ಮತದಾರರ ಪಟ್ಟಿಯ ಪರಿಷ್ಕರಣೆಯ ಹಿಂದಿನ ಪ್ರಕ್ರಿಯೆಗೂ, ಈಗಿನ ಪ್ರಕ್ರಿಯೆಗೂ ಯಾವುದೇ ತಾಳಮೇಳವಿಲ್ಲ. ಈ ಇಡೀ ಪ್ರಕ್ರಿಯೆ ಸಂಪೂರ್ಣ ಅನೈತಿಕ, ಕಾನೂನುಬಾಹಿರ ಹಾಗೂ ಅಸಂವಿಧಾನಿಕವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.”ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಯುವಾಂದೋಲನದ ಬಳಿಕ ಸುಪ್ರೀಂ ಕೋರ್ಟ್ ಕೂಡ ಒತ್ತಡದಲ್ಲಿದ್ದು, ಅದರ ಪರಿಭಾಷೆ ಅನಿವಾರ್ಯವಾಗಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ಬಲವಾದ ಜೀವಂತ ಸಾಕ್ಷ್ಯಾಧಾರಗಳು ಮತ್ತು ಸರಿಯಾದ ವಾದಗಳೊಂದಿಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ಬೀದಿ ಹೋರಾಟ ಹಾಗೂ ಕಾನೂನು ಹೋರಾಟ ಎರಡನ್ನೂ ಸಮಾನಾಂತರವಾಗಿ ಕೊಂಡೊಯ್ಯಬೇಕು” ಎಂದು ಅವರು ಕರೆ ನೀಡಿದರು.
ರೈತ ಮುಖಂಡ ಹಾಗೂ ವಕೀಲ ಬಡಗಲಪುರ ನಾಗೇಂದ್ರ ಅವರು ಸಭೆಯಲ್ಲಿ ವಿಶೇಷ ಟಿಪ್ಪಣಿ ಮಂಡಿಸಿದರು. ಎಸ್‌ಐಆರ್ ವಿರುದ್ಧದ ಕಾನೂನು ಹೋರಾಟದ ರೂಪುರೇಷೆಗಳ ಕುರಿತು ವಕೀಲರ ನಡುವೆ ಮುಕ್ತ ಚರ್ಚೆ ನಡೆದಿದ್ದು, ಸಭೆಯು ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ‘ಮತ ಕಾವಲು ಕಾನೂನು ಸಮಿತಿ’ಗಳ ರಚನೆ.ಎಸ್‌ಐಆರ್ ಪ್ರಕ್ರಿಯೆಯು ಹೇಗೆ ಕಾನೂನುಬಾಹಿರ ಹಾಗೂ ಅನೈತಿಕ ಎಂಬುದನ್ನು ಪತ್ರಿಕಾಗೋಷ್ಠಿಗಳ ಮೂಲಕ ಜನರಿಗೆ ವಿವರಿಸುವುದು ಮತ್ತು ವಕೀಲ ಸಮುದಾಯ ಜನರೊಂದಿಗಿದೆ ಎಂಬ ವಿಶ್ವಾಸ ಮೂಡಿಸುವುದು.
ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ಕೈಬಿಡಲಾದ (ಡಿಲೀಷನ್) ಮತದಾರರ ಪಟ್ಟಿಯನ್ನು ಮರುಪರಿಶೀಲಿಸಲು ಬಿಎಲ್‌ಒಗಳಿಗೆ (BLO) ಸೂಚಿಸುವಂತೆ ಹಾಗೂ ಜಾತಿ ಮತ್ತು ಶಾಶ್ವತ ದೃಢೀಕರಣ ಪತ್ರ ವಿತರಣೆಯನ್ನು ಸಮರ್ಪಕವಾಗಿ ನಡೆಸುವಂತೆ ಒತ್ತಾಯಿಸುವುದು.
ಸರ್ಕಾರದ ಆದೇಶದಂತೆ ಗ್ರಾಮ ಸಭೆ ಹಾಗೂ ವಾರ್ಡ್‌ಗಳಲ್ಲಿ ಹೆಲ್ಪ್ ಡೆಸ್ಕ್ (ಸಹಾಯವಾಣಿ) ತೆರೆಯಲು ಆಗ್ರಹಿಸುವುದು.
ಸ್ಥಳಾಂತರದ (ಶಿಫ್ಟಿಂಗ್) ನೆಪದಲ್ಲಿ ಮತದಾರರನ್ನು ಕೈಬಿಟ್ಟಿರುವುದರ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೊರೆ ಹೋಗುವುದು.
ಕರಡು ಪಟ್ಟಿ ಪ್ರಕಟಗೊಂಡ ಬಳಿಕ ಗ್ರಾಮ/ವಾರ್ಡ್ ಸಭೆ ಕಡ್ಡಾಯವಾಗಿ ನಡೆಸಲು, ಪ್ರತಿಯೊಂದು ನೋಟಿಸ್/ಡಿಲೀಷನ್‌ಗೂ ಸ್ಪಷ್ಟ ಕಾರಣ ನೀಡಲು ಹಾಗೂ ‘ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್‌ವೇರ್’ ಬಳಕೆಗೆ ತಡೆಯಾಜ್ಞೆ ಮತ್ತು ಮೇಲ್ಮನವಿ ಅವಧಿ ವಿಸ್ತರಿಸುವಂತೆ ಕೋರಿ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸುವುದು.
ಈ ವಿಚಾರದಲ್ಲಿ ಸರ್ಕಾರವು ತುರ್ತಾಗಿ ತೆಗೆದುಕೊಳ್ಳಬೇಕಾದ ಕಾನೂನಾತ್ಮಕ ಕ್ರಮಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು.ಈ ಸಭೆಯ ಮೂಲಕ ಕರ್ನಾಟಕದಲ್ಲಿ ಎಸ್‌ಐಆರ್ ವಿರುದ್ಧದ ಬೃಹತ್ ಕಾನೂನು ಹೋರಾಟಕ್ಕೆ ಅಧಿಕೃತವಾಗಿ ರಂಗ ಸಜ್ಜಾಗಿದೆ.




