ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 200 ಸ್ಥಾನಗಳಲ್ಲಿ ಅಧಿಕಾರದ ಗಾದಿ ಹಿಡಿಯಲು ಬಿಜೆಪಿ ‘ಮಿಷನ್-200’ ಎಂಬ ಬೃಹತ್ ಗುರಿಯನ್ನು ಹೊಂದಿತ್ತು. ಆದರೆ, ಚುನಾವಣಾ ಫಲಿತಾಂಶದ ಪ್ರಕಾರ ಬಿಜೆಪಿ ಸ್ವತಂತ್ರವಾಗಿ ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಗಿದ್ದು ಕೇವಲ 86 ಸ್ಥಳಗಳಲ್ಲಿ ಮಾತ್ರ. ಹೀಗಿದ್ದರೂ, ಉಳಿದ ಕಡೆಗಳಲ್ಲಿ ಅಧಿಕಾರ ಪೀಠವನ್ನು ಕಬಳಿಸಲು ಬಿಜೆಪಿ ಈಗ ‘ಆಪರೇಷನ್ ಲೋಟಸ್’ ಮತ್ತು ಮೈತ್ರಿ ರಾಜಕೀಯದ ಮೊರೆ ಹೋಗಿದೆ. ಸ್ವತಂತ್ರ ಅಭ್ಯರ್ಥಿಗಳು ಮತ್ತು ಥರ್ಡ್ ಫ್ರಂಟ್ (ಮೂರನೇ ರಂಗ) ಬೆಂಬಲದೊಂದಿಗೆ ‘ಮಿಷನ್-200’ ತಲುಪಲು ಕಸರತ್ತು ತೀವ್ರಗೊಳಿಸಿದೆ.
ರಾಜಸ್ಥಾನದ ಒಟ್ಟು 10 ಮಹಾನಗರ ಪಾಲಿಕೆಗಳು (ನಿಗಮ), 47 ನಗರ ಪರಿಷತ್ ಮತ್ತು 162 ಪುರಸಭೆಗಳಲ್ಲಿ ಪೂರ್ಣ ಪ್ರಮಾಣದ ಆಡಳಿತ ಮಂಡಳಿ (ಬೋರ್ಡ್) ರಚಿಸುವುದು ಬಿಜೆಪಿಯ ಪ್ರಮುಖ ಯೋಜನೆ. 10 ನಗರ ನಿಗಮಗಳಲ್ಲಿ ಕೇಸರಿ ಪಡೆಗೆ ಕೇವಲ 4 ಕಡೆ (ಉದಯಪುರ, ಭಿಲ್ವಾರಾ, ಕೋಟಾ ಮತ್ತು ಜೈಪುರ) ಮಾತ್ರ ಸ್ಪಷ್ಟ ಬಹುಮತ ಸಿಕ್ಕಿದೆ. ಅಂತೆಯೇ 47 ನಗರ ಪರಿಷತ್‌ಗಳಲ್ಲಿ 12 ಹಾಗೂ 252 ಪುರಸಭೆಗಳಲ್ಲಿ 70 ಕಡೆ ಮಾತ್ರ ಸ್ವಂತ ಬಲದ ಮೇಲೆ ಸ್ಪಷ್ಟ ಬಹುಮತ ಬಂದಿದೆ. ಈ ಹಿನ್ನೆಲೆಯಲ್ಲಿ, ಬಹುಮತದ ಕೊರತೆ ಇರುವ ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯಲು ಮತ್ತು ರೆಸಾರ್ಟ್/ಹೋಟೆಲ್ ರಾಜಕೀಯ ನಡೆಸಿ ಅಧಿಕಾರ ಹಿಡಿಯಲು ಬಿಜೆಪಿಯ ಉನ್ನತ ನಾಯಕರು ತಂತ್ರ ಹೆಣೆದಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಜಯಭೇರಿ ಬಾರಿಸಿದ ಇಬ್ಬರು ‘Gen Z’ ಅಭ್ಯರ್ಥಿಗಳು
‘ಮಿಷನ್-200’ಗಾಗಿ ‘ಆಪರೇಷನ್ ಲೋಟಸ್’
This video cannot be played in your browser. Open the video directly
ಸ್ಪಷ್ಟ ಬಹುಮತವಿಲ್ಲದಿದ್ದರೂ ‘ಮಿಷನ್-200’ ತಲುಪಲು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವವು ಆಪರೇಷನ್ ಕಮಲ/ಲೋಟಸ್ ಯೋಜನೆಯನ್ನು ಜಾರಿಗೆ ತಂದಿದೆ. ಅದಕ್ಕಾಗಿ ವಿಶೇಷ ನಾಯಕರ ನಿಯೋಜನೆ ಮಾಡಿದೆ. ನಗರ ನಿಗಮಗಳಲ್ಲಿ ಯಾವುದೇ ಬೆಲೆಯಲ್ಲಾದರೂ ಮೇಯರ್ ಪೀಠವನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ರತಿಯೊಂದು ನಿಗಮಕ್ಕೆ 10-10 ಪ್ರಭಾವಿ ನಾಯಕರ ವಿಶೇಷ ತಂಡವನ್ನು ನಿಯೋಜಿಸಿದೆ. ಈ ತಂಡಗಳು ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿವೆ.
ಇನ್ನೊಂದೆಡೆ ರೆಸಾರ್ಟ್ ರಾಜಕೀಯವೂ ತೀವ್ರಗೊಂಡಿದೆ. ಮೈತ್ರಿ ಅಥವಾ ಬೆಂಬಲ ಕೊಡುವ ಪಕ್ಷೇತರ ಅಭ್ಯರ್ಥಿಗಳು ಮತ್ತು ಕೌನ್ಸಿಲರ್‌ಗಳನ್ನು ಕೈಜಾರದಂತೆ ನೋಡಿಕೊಳ್ಳಲು ಜೈಪುರ, ಜೋಧ್‌ಪುರ ಸೇರಿದಂತೆ ಪ್ರಮುಖ ನಗರಗಳಿಂದ ಪದಾಧಿಕಾರಿಗಳನ್ನು ನಿಯೋಜಿಸಿ ರೆಸಾರ್ಟ್‌ಗಳಲ್ಲಿ ಅವರನ್ನು ಇರಿಸುವ ಕಾರ್ಯ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಟಿಕೆಟ್ ಸಿಗದೆ ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರರಾಗಿ ಗೆದ್ದಿರುವ ಕೌನ್ಸಿಲರ್‌ಗಳನ್ನು ಮರಳಿ ಪಕ್ಷಕ್ಕೆ ಕರೆತಂದು ಅವರ ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಯತ್ನವನ್ನೂ ಬಿಜೆಪಿ ನಡೆಸುತ್ತಿದೆ.
ಭರತ್‌ಪುರ ನಗರ ನಿಗಮದ ಒಟ್ಟು 65 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 20 ಸ್ಥಾನಗಳಲ್ಲಿ ಮಾತ್ರ. ಆದಾಗ್ಯೂ, ವಿಭಾಗೀಯ ಉಸ್ತುವಾರಿ ಅಶೋಕ್ ಪರ್ಣಾಮಿ, ಹರಿಯಾಣ ರಣವಾ ಹಾಗೂ ಅಲ್ಕಾ ಗುರ್ಜರ್ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ 25ಕ್ಕೂ ಹೆಚ್ಚು ಪಕ್ಷೇತರರ ಬೆಂಬಲವನ್ನು ಪಡೆದು ಬಿಜೆಪಿ ಅಲ್ಲಿ ತನ್ನ ಬೋರ್ಡ್ ರಚಿಸಲು ಸಜ್ಜಾಗಿದೆ. ಭಿಲ್ವಾರಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಮೇಯರ್ ಹಾಗೂ ಚಕ್ಕಮು, ಪಲಸಾನಾ, ಖೇತಡಿ, ಕೊಟ್‌ಕಾಸಿಮ್, ಗೋವಿಂದ್‌ಗಢ್ ಸೇರಿದಂತೆ ಒಟ್ಟು 18 ವಾರ್ಡ್‌ಗಳಲ್ಲಿ ಬಿಜೆಪಿಯ ಚೇರ್‌ಮನ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೋಧ್‌ಪುರದ 100 ವಾರ್ಡ್‌ಗಳಲ್ಲಿ 55 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದ ಗಡಿಯನ್ನು ದಾಟಿದೆ. ಜೈಪುರ ಸೇರಿದಂತೆ 4 ಪ್ರಮುಖ ಪ್ರದೇಶಗಳಲ್ಲಿ ಮೇಯರ್ ಮತ್ತು ಅಧ್ಯಕ್ಷ ಸ್ಥಾನಗಳಿಗೆ ಸೆಪ್ಟೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಪ್ರಸ್ತುತ ಸಜ್ಜಾಗಿರುವ ಕುದುರೆ ವ್ಯಾಪಾರ ಮತ್ತು ಮೈತ್ರಿ ಕಸರತ್ತು ಅಂತಿಮ ಘಟ್ಟ ತಲುಪಲಿದೆ.
ಇದನ್ನೂ ಓದಿ: ರಾಜಸ್ಥಾನ | ಬಿಜೆಪಿಗೆ ಮುಖಭಂಗ; ಮಾಜಿ ಸಿಎಂ ಭದ್ರಕೋಟೆ ಭೇದಿಸಿದ ಕಾಂಗ್ರೆಸ್
‘ಮಿಷನ್-200’ ಗುರಿಯ ಹಿಂದಿನ ರಾಜಕೀಯವೇನು?
ಸ್ವಂತ ಬಲದ ಮೇಲೆ 86 ಕಡೆಗಳಲ್ಲಿ ಮಾತ್ರ ಸ್ಪಷ್ಟ ಬಹುಮತ ಸಿಕ್ಕಿದ್ದರೂ, ಮೈತ್ರಿ ಮತ್ತು ‘ಆಪರೇಷನ್ ಲೋಟಸ್’ ಮೂಲಕ 200ರ ಗಡಿ ತಲುಪಲು ಹೆಣಗಾಡುತ್ತಿರುವುದರ ಹಿಂದೆ ಪ್ರಮುಖ ರಾಜಕೀಯ ತಂತ್ರಗಾರಿಕೆಗಳಿವೆ. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಬೃಹತ್ ನಗರ ಚುನಾವಣೆ ಇದಾಗಿದೆ. ಆದ್ದರಿಂದ ಸರ್ಕಾರದ ಆಡಳಿತ ಶೈಲಿ ಮತ್ತು ನೀತಿಗಳಿಗೆ ಸಾರ್ವಜನಿಕ ಒಪ್ಪಿಗೆಯಿದೆ ಎಂಬುದನ್ನು ನಿರೂಪಿಸುವುದು ಇದರ ಹಿಂದಿನ ತಂತ್ರವಾಗಿದೆ. ಹಾಗೆಯೇ ಶೇ. 65ಕ್ಕೂ ಹೆಚ್ಚು ನಗರ ಪ್ರದೇಶಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.
ಹಾಗೆಯೇ ಸ್ಥಳೀಯ ಸಂಸ್ಥೆಗಳ ಮಹಾನಗರ ಪಾಲಿಕೆ ಮೇಯರ್‌ಗಳು ಹಾಗೂ ಪುರಸಭೆ ಅಧ್ಯಕ್ಷರು ತಳಮಟ್ಟದ ರಾಜಕೀಯದಲ್ಲಿ ಭಾರಿ ಪ್ರಭಾವ ಬೀರುತ್ತಾರೆ. 200ಕ್ಕೂ ಹೆಚ್ಚು ನಗರಗಳಲ್ಲಿ ಬಿಜೆಪಿ ಅಧ್ಯಕ್ಷರಿದ್ದರೆ, ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಜಾಲವನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂಬುದು ಬಿಜೆಪಿ ತಂತ್ರ. ಅಷ್ಟು ಮಾತ್ರವಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್, ನಗರ ಪ್ರದೇಶಗಳಲ್ಲಿ ಮರಳಿ ತಲೆಯೆತ್ತದಂತೆ ಮಾಡಲು ಮತ್ತು ವಿಪಕ್ಷಗಳ ಬಲವನ್ನು ಸಂಪೂರ್ಣ ಕುಗ್ಗಿಸಲು ಬಿಜೆಪಿಯ ತಂತ್ರಗಾರಿಕೆ ಇದಾಗಿದೆ. ಆದರೆ ಈ ಚುನಾವಣೆಯಲ್ಲಿ 2,200ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಪಕ್ಷೇತರರು ಗೆದ್ದುಬಂದಿರುವುದು ಬಿಜೆಪಿಯ ಈ ತಂತ್ರಕ್ಕೆ ಹಿನ್ನಡೆ ಉಂಟುಮಾಡಿದೆ.





