ಗ್ರೌಂಡ್ ರಿಪೋರ್ಟ್ | ಪೊಲೀಸ್ ಸೂಚನೆ ಸುತ್ತ ವಿವಾದ: ಶಾಂತಿ ಕಾಪಾಡುವ ಕರ್ತವ್ಯಕ್ಕೆ ರಾಜಕೀಯ ಬಣ್ಣ ಬೇಡವೆಂದ ಸ್ಥಳೀಯರು

Date:

ಗೌರಿ-ಗಣೇಶ ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆ ಹಾಗೂ ಶೋಭಾಯಾತ್ರೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ನೀಡುವ ಸೂಚನೆಗಳನ್ನು ಅಧಿಕಾರದ ದರ್ಪ ಅಥವಾ ಧಮ್ಕಿ ಎಂದು ಬಿಂಬಿಸುವುದು ಸರಿಯಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಪೊಲೀಸ್ ಇಲಾಖೆಯ ಕಾನೂನುಬದ್ಧ ಕರ್ತವ್ಯವಾಗಿದ್ದು, ಸಾಮಾನ್ಯ ಸಂದರ್ಭಗಳಿಗಿಂತ ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ವರ್ತನೆ ಮತ್ತು ಸೂಚನೆಗಳು ಕೊಂಚ ಕಠಿಣವಾಗಿ ಕಾಣಿಸಿಕೊಳ್ಳಬಹುದು. ಆದರೆ, ಅದನ್ನು ನೇರವಾಗಿ ಸವಾಲು, ಬೆದರಿಕೆ ಅಥವಾ ದರ್ಪದ ನಡೆ ಎಂದು ಅರ್ಥೈಸುವುದು ಸರಿಯಲ್ಲ ಎಂಬ ಅಭಿಪ್ರಾಯ ಟಿ. ನರಸೀಪುರದ ಹಲವು ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಮುಖಂಡರಿಂದ ವ್ಯಕ್ತವಾಗಿದೆ.

- Advertisement -

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮೆರವಣಿಗೆಗಳು ನಡೆಯುವುದು ಧಾರ್ಮಿಕ ಆಚರಣೆಯ ಭಾಗವಾಗಿದ್ದು, ಅವು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಮೆರವಣಿಗೆ ಸಾಗುವ ಮಾರ್ಗ, ಸಾರ್ವಜನಿಕರ ಸಂಚಾರ, ಧ್ವನಿವರ್ಧಕಗಳ ಬಳಕೆ, ವಿವಿಧ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಸೇರಿದಂತೆ ಹಲವು ಅಂಶಗಳನ್ನು ಪೊಲೀಸರು ಮುನ್ನೆಚ್ಚರಿಕೆಯಾಗಿ ಗಮನಿಸಬೇಕಾಗುತ್ತದೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಶಾಂತಿ ಸಭೆ ನಡೆಸಿ, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡುವುದು ಕಾನೂನು ಸುವ್ಯವಸ್ಥೆಯ ಭಾಗವೇ ಹೊರತು ಅದಕ್ಕೆ ಅನಗತ್ಯ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂಬ ಮಾತು ಸ್ಥಳೀಯವಾಗಿ ಕೇಳಿಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು:...

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

ಈ ಹಿನ್ನೆಲೆಯಲ್ಲಿ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ ಅವರು ಶಾಂತಿ ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿಗರು ರಾಜಕೀಯ ವಾಗ್ವಾದಕ್ಕೆ ಕಾರಣವಾಗುತ್ತಿರುವುದು ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಹಬ್ಬದ ಆಚರಣೆಯನ್ನು ತಡೆಯುವ ಉದ್ದೇಶದಿಂದಲ್ಲ, ಬದಲಾಗಿ ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಸೂಚನೆ ನೀಡಿರಬಹುದು. ಹಿಂದಿನ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸುವುದು ಸಹಜವಾಗಿದ್ದು, ಅದನ್ನೇ ಸಂಘರ್ಷದ ವಿಷಯವನ್ನಾಗಿ ಮಾಡುವುದರಿಂದ ಶಾಂತಿಯುತ ವಾತಾವರಣಕ್ಕೆ ಧಕ್ಕೆಯಾಗಬಹುದು ಎಂಬ ಅಭಿಪ್ರಾಯವನ್ನು ಹಲವು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸ್ಥಳೀಯವಾಗಿ ಇನ್ಸ್ಪೆಕ್ಟರ್ ಧನಂಜಯ ಅವರ ಕಾರ್ಯವೈಖರಿ ಕುರಿತು ಜನಾಭಿಪ್ರಾಯವೂ ಚರ್ಚೆಗೆ ಬಂದಿದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪೈಕಿ ಧನಂಜಯ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಸಂಘಟನೆಗಳ ಕೆಲವು ಮುಖಂಡರು ಮತ್ತು ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಅಥವಾ ಅಭಿಪ್ರಾಯ ಭಿನ್ನತೆಗಳು ಇರಬಹುದಾದರೂ, ಒಟ್ಟಾರೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರ ಕಾರ್ಯವೈಖರಿ ಒಪ್ಪುವಂತಿದೆ ಎಂಬ ಮಾತು ಸ್ಥಳೀಯರಲ್ಲಿ ಕೇಳಿಬರುತ್ತಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಲಗೂಡು ಶಿವಣ್ಣ ಅವರು ಈದಿನ.ಕಾಮ್ ಜೊತೆ ಮಾತನಾಡಿ, ಟಿ. ನರಸೀಪುರದಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಇನ್ಸ್ಪೆಕ್ಟರ್ ಧನಂಜಯ ಅವರು ಶಾಂತಿ ಸಭೆ ನಡೆಸಿದ್ದಾರೆ. ಹಿಂದಿನ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ನೀಡಿರುವ ಮುನ್ನೆಚ್ಚರಿಕೆಯ ಸೂಚನೆಗಳನ್ನು ತಪ್ಪಾಗಿ ಅರ್ಥೈಸಿ ಬಿಜೆಪಿ ರಾಜಕೀಯಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದರು. ತಮ್ಮ ಹೇಳಿಕೆಯಲ್ಲಿ ಅವರು ಬಿಜೆಪಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿ, ಶಾಂತಿಯುತವಾಗಿರುವ ಟಿ. ನರಸೀಪುರ ತಾಲೂಕಿನಲ್ಲಿ ಅನಗತ್ಯವಾಗಿ ಕೋಮು ಭಾವನೆ ಮೂಡಿಸುವ ಯಾವುದೇ ಪ್ರಯತ್ನಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಕೋಮು ಸೌಹಾರ್ದತೆಯನ್ನು ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳ ಜವಾಬ್ದಾರಿಯಾಗಿದೆ. ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವುಗಳನ್ನು ದೊಡ್ಡ ರಾಜಕೀಯ ವಿವಾದವನ್ನಾಗಿ ಪರಿವರ್ತಿಸುವುದರಿಂದ ಜನಸಾಮಾನ್ಯರ ನಡುವೆ ಅನಗತ್ಯ ಅನುಮಾನ ಮತ್ತು ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು. ಹೀಗಾಗಿ, ಟಿ. ನರಸೀಪುರದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸ್ಥಳೀಯ ಜನರು ಒಪ್ಪುವುದಿಲ್ಲ. ಅನಾಗತ್ಯ ವಿಚಾರ ಸೃಷ್ಟಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂಬ ತಮ್ಮ ಬೇಡಿಕೆಯನ್ನೂ ಅವರು ಮುಂದಿಟ್ಟರು.

ಜನಸ್ಪಂದನ ಸೇವಾ ಸಂಸ್ಥೆಯ ಮಂಜುನಾಥ್ ಸೋಸಲೆ ಮಾತನಾಡಿ, ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿ ನೀಡಿರುವ ಸೂಚನೆಗಳಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಹಬ್ಬದ ಸಂದರ್ಭದಲ್ಲಿ ಜನರು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ನೆರೆಹೊರೆಯವರಿಗೆ ತೊಂದರೆಯಾಗದಂತೆ ಆಚರಣೆ ನಡೆಸಬೇಕು ಹಾಗೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂಬುದು ಪೊಲೀಸ್ ಅಧಿಕಾರಿಯ ಕರ್ತವ್ಯದ ಭಾಗವಾಗಿದೆ. ಅಂತಹ ಸಾಮಾನ್ಯ ಮುನ್ನೆಚ್ಚರಿಕೆಯ ಮಾತುಗಳನ್ನು ದೊಡ್ಡ ವಿವಾದವನ್ನಾಗಿ ಬಿಜೆಪಿಗರು ಮಾಡುವುದು ಸರಿಯಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದರು.

ಪ್ರತಿ ವಿಚಾರದಲ್ಲೂ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜಕೀಯ ವಾತಾವರಣ ನಿರ್ಮಿಸುವುದು ಸಾಮಾಜಿಕವಾಗಿ ಅಪಾಯಕಾರಿ. ತಮ್ಮ ಹೇಳಿಕೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ರಾಜಕೀಯ ನಡೆ ಕುರಿತು ಟೀಕೆ ವ್ಯಕ್ತಪಡಿಸಿದ ಅವರು, ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಬದಲು ವಿಭಜನೆಯ ವಾತಾವರಣಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಬಾರದು ಎಂದರು. ಕರ್ನಾಟಕ ಶಾಂತಿಯುತವಾಗಿರಬೇಕಾದರೆ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಶಾಂತಿ ಕದಡುವ ರೀತಿಯಲ್ಲಿ ನಡೆದುಕೊಂಡರೆ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಹಬ್ಬದ ಆಚರಣೆಗಳು ಇತರ ಸಮುದಾಯಗಳಿಗೂ ಗೌರವ ನೀಡುವ ರೀತಿಯಲ್ಲಿ ನಡೆಯಬೇಕು. ತಮ್ಮ ಧಾರ್ಮಿಕ ಆಚರಣೆಯನ್ನು ಆಚರಿಸುವ ಹಕ್ಕಿನ ಜತೆಗೆ ಅಕ್ಕಪಕ್ಕದ ಜನರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಸಾಮಾಜಿಕ ಜವಾಬ್ದಾರಿಯೂ ಇರಬೇಕು. ಪೊಲೀಸ್ ಅಧಿಕಾರಿ ಧನಂಜಯ ಅವರು ನೀಡಿರುವ ಸೂಚನೆಗಳನ್ನು ಇದೇ ದೃಷ್ಟಿಕೋನದಲ್ಲಿ ನೋಡಬೇಕು. ಸಾರ್ವಜನಿಕ ಹಬ್ಬಗಳು ಶಾಂತಿಯುತವಾಗಿ ನಡೆದಾಗ ಮಾತ್ರ ಅವುಗಳ ಉದ್ದೇಶವೂ ಸಾರ್ಥಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜೆಡಿಎಸ್ ಮುಖಂಡ ಶಿವಕುಮಾರ್ ಮಾತನಾಡಿ, ಟಿ. ನರಸೀಪುರದಂತಹ ಸ್ಥಳೀಯ ವಿಚಾರಗಳಲ್ಲಿ ಹೊರಗಿನ ರಾಜಕೀಯ ಹಸ್ತಕ್ಷೇಪದಿಂದ ಅನಗತ್ಯ ವಾತಾವರಣ ನಿರ್ಮಾಣವಾಗಬಾರದು ಎಂದು ಹೇಳಿದರು. ಜಾತಿ ಮತ್ತು ಧರ್ಮದ ವಿಚಾರಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡು ಕೋಮು ಭಾವನೆ ಬೆಳೆಸುವುದು ಅಪಾಯಕಾರಿ. ಇಂತಹ ಪ್ರಯತ್ನಗಳಿಗೆ ಸ್ಥಳೀಯವಾಗಿ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಗಣೇಶ ಹಬ್ಬದ ಆಚರಣೆಯ ವಿಚಾರದಲ್ಲಿ ರಾಜಕೀಯ ಹೇಳಿಕೆಗಳು ಅಥವಾ ಆರೋಪ-ಪ್ರತ್ಯಾರೋಪಗಳಿಗಿಂತ ಧಾರ್ಮಿಕ ಆಚರಣೆಯ ಗೌರವ ಮತ್ತು ಸಾರ್ವಜನಿಕ ಶಾಂತಿಗೆ ಆದ್ಯತೆ ನೀಡಬೇಕು ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು. ಗಣೇಶನ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಯನ್ನು ಧಾರ್ಮಿಕ ಭಾವನೆಯೊಂದಿಗೆ ಗೌರವಯುತವಾಗಿ ನಡೆಸುವುದು ಮುಖ್ಯ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಆಚರಣೆ ನಡೆಯಬಾರದು. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಸಂಘರ್ಷದ ವೇದಿಕೆಯನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸುವುದರ ಜತೆಗೆ ಪರಸ್ಪರ ಗೌರವ ಕಾಪಾಡಬೇಕು. ಹಬ್ಬದ ಸಂಭ್ರಮ ಎಲ್ಲರಿಗೂ ಸೇರಿದ್ದಾಗ ಮಾತ್ರ ಅದು ನಿಜವಾದ ಸಾಮಾಜಿಕ ಸಂಭ್ರಮವಾಗುತ್ತದೆ. ಒಂದು ಸಮುದಾಯದ ಹಬ್ಬ ಮತ್ತೊಂದು ಸಮುದಾಯಕ್ಕೆ ಆತಂಕ ಅಥವಾ ಅಸೌಕರ್ಯ ಉಂಟುಮಾಡುವ ರೀತಿಯಲ್ಲಿ ನಡೆಯಬಾರದು ಎಂಬುದು ತಮ್ಮ ನಿಲುವು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ರಾಜಕೀಯ ಹಿನ್ನೆಲೆ ಕುರಿತು ಅವರು ವೈಯಕ್ತಿಕ ಟೀಕೆಗಳನ್ನು ಮಾಡಿದರು.

ದಸಂಸ ತಾಲ್ಲೂಕು ಸಂಚಾಲಕ ಶಾಂತಕುಮಾರ್ ಚೌಗಳ್ಳಿ ಮಾತನಾಡಿ, ಟಿ. ನರಸೀಪುರದಲ್ಲಿ ಗಣಪತಿ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದಲೂ ವಿವಿಧ ಸಮುದಾಯಗಳ ಜನರು ಪರಸ್ಪರ ಸಹಕಾರದೊಂದಿಗೆ ಪಾಲ್ಗೊಳ್ಳುವ ವಾತಾವರಣವಿದೆ. ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯಲ್ಲಿ ವಿವಿಧ ಸಮುದಾಯಗಳ ಜನರು ಭಾಗವಹಿಸುವ ಪರಂಪರೆ ಇದೆ. ಇಂತಹ ಸಹಬಾಳ್ವೆಯ ವಾತಾವರಣದಲ್ಲಿ ಅನಗತ್ಯವಾಗಿ ಸಂಘರ್ಷದ ವಾತಾವರಣ ಸೃಷ್ಟಿಸುವ ಪ್ರಯತ್ನಗಳು ನಡೆಯಬಾರದು ಎಂದು ಹೇಳಿದರು.

ಇನ್ಸ್ಪೆಕ್ಟರ್ ಧನಂಜಯ ಅವರು ನಡೆಸಿರುವುದು ಶಾಂತಿ ಸಭೆಯಾಗಿದ್ದು, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು, ಸಮುದಾಯಗಳ ನಡುವೆ ಯಾವ ರೀತಿಯ ಸೌಹಾರ್ದತೆ ಇರಬೇಕು, ಮೆರವಣಿಗೆಯಲ್ಲಿ ಯಾವ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಸೂಚನೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕ್ರಮವನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನೋಡಬೇಕೇ ಹೊರತು ರಾಜಕೀಯ ಸಂಘರ್ಷದ ವಿಚಾರವನ್ನಾಗಿ ಪರಿವರ್ತಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಶಾಂತಿ ಸಭೆಯ ಸೂಚನೆಗಳನ್ನು ಅರ್ಥೈಸಿಕೊಳ್ಳದೆ ಅದನ್ನೇ ಆಧಾರವಾಗಿಸಿಕೊಂಡು ಟಿ. ನರಸೀಪುರ ಪಟ್ಟಣದಲ್ಲಿ ರಾಜಕೀಯವಾಗಿ ಶೋಭಾಯಾತ್ರೆ ನಡೆಸುವುದು, ಅನಗತ್ಯ ವಿಚಾರವನ್ನು ದೊಡ್ಡದಾಗಿಸುವುದು ಮತ್ತು ಸಾಮಾಜಿಕವಾಗಿ ಅಡ್ಡಿಪಡಿಸುವ ವಾತಾವರಣ ನಿರ್ಮಿಸುವುದು ಎಷ್ಟು ಸೂಕ್ತ ಎಂಬುದನ್ನು ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಧಾರ್ಮಿಕ ಆಚರಣೆಗಳಿಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು. ಅದೇ ರೀತಿ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಶಾಂತಿಗೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗೂ ಅವಕಾಶ ನೀಡಬಾರದು ಎಂದರು.

ಆಟೋ ಚಾಲಕ ಎನ್. ಮಾದೇಶ್ ಮಾತನಾಡಿ, ಇನ್ಸ್ಪೆಕ್ಟರ್ ಧನಂಜಯ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಿಂದ ಆಟೋ ಚಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕಾನೂನು ಪಾಲನೆ ಕುರಿತು ತಿಳಿವಳಿಕೆ ನೀಡಿದ್ದಾರೆ. ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನೀಡಿದ ಸೂಚನೆಗಳನ್ನು ತಪ್ಪಾಗಿ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಚಿಕ್ಕ ವಿಚಾರವನ್ನು ದೊಡ್ಡ ರಾಜಕೀಯ ವಿಚಾರವನ್ನಾಗಿ ಮಾಡಿ ರಾಜ್ಯದ ಗಮನ ಸೆಳೆಯುವ ಪ್ರಯತ್ನ ನಡೆಯಬಾರದು ಎಂದು ಮಾದೇಶ್ ಹೇಳಿದರು. ಯಾವುದೇ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದರೆ ಅದರ ಪರಿಣಾಮವನ್ನು ಮೊದಲು ಸ್ಥಳೀಯ ಜನರೇ ಎದುರಿಸಬೇಕಾಗುತ್ತದೆ. ನಂತರ ಅದರ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲೂ ಬರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಪೊಲೀಸರ ಕರ್ತವ್ಯ. ಅದಕ್ಕಾಗಿ ಅಧಿಕಾರಿಗಳು ನೀಡುವ ಸಲಹೆ ಮತ್ತು ಸೂಚನೆಗಳನ್ನು ಗೌರವಿಸುವುದು ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದರು.

ಆಟೋ ಚಾಲಕ ಸುಹಾಸ್ ಗೌಡ ಮಾತನಾಡಿ, ತಾವು ಸುಮಾರು ನಾಲ್ಕು ವರ್ಷಗಳಿಂದ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇನ್ಸ್ಪೆಕ್ಟರ್ ಧನಂಜಯ ಅವರ ಕಾರ್ಯವೈಖರಿಯನ್ನು ಸ್ಥಳೀಯವಾಗಿ ಗಮನಿಸಿರುವುದಾಗಿ ಹೇಳಿದರು. ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಿ ಬಸ್ ನಿಲ್ದಾಣದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಂಪೌಂಡ್ ತೆರವುಗೊಳಿಸಿ ಆಟೋ ನಿಲ್ದಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು. ಅಲ್ಲದೆ ಆಟೋ ಚಾಲಕರು ಕಾನೂನು ಪಾಲಿಸುವಂತೆ ಸ್ವತಃ ಖಾಕಿ ಶರ್ಟ್‌ಗಳನ್ನು ಕೊಡಿಸಿ ತಿಳಿವಳಿಕೆ ನೀಡಿದ್ದರು ಎಂದು ಹೇಳಿದರು.

ಹಿಂದೆ ನಡೆದಿದ್ದ ವೇಣುಗೋಪಾಲ ನಾಯಕ್ ಹತ್ಯೆ ಸೇರಿದಂತೆ ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ರೀತಿಯ ಸಂಘರ್ಷ ಮರುಕಳಿಸಬಾರದು ಎಂಬ ಉದ್ದೇಶದಿಂದ ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿರಬಹುದು ಎಂದು ಸುಹಾಸ್ ಗೌಡ ಹೇಳಿದರು. ಅಂತಹ ಮುನ್ನೆಚ್ಚರಿಕೆಯನ್ನು ತಪ್ಪಾಗಿ ಅರ್ಥೈಸದೆ, ಅದರ ಹಿಂದಿರುವ ಕಾನೂನು ಸುವ್ಯವಸ್ಥೆಯ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಸಂಘಟನೆಗಳು ಮತ್ತು ಸಾರ್ವಜನಿಕರು ಪಾಲಿಸಬೇಕು ಎಂದು ಅವರು ಹೇಳಿದರು.

ಟಿ. ನರಸೀಪುರದಲ್ಲಿ ಗೌರಿ-ಗಣೇಶ ಹಬ್ಬದ ಆಚರಣೆ ಶಾಂತಿಯುತವಾಗಿ ನಡೆಯಬೇಕಾದರೆ ಧಾರ್ಮಿಕ ಭಾವನೆಗಳ ಜತೆಗೆ ಸಾಮಾಜಿಕ ಹೊಣೆಗಾರಿಕೆಯೂ ಅಗತ್ಯವಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸುವುದು, ಧಾರ್ಮಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಕಾನೂನು ಪಾಲಿಸುವುದು ಹಾಗೂ ರಾಜಕೀಯ ಪಕ್ಷಗಳು ಯಾವುದೇ ವಿಚಾರವನ್ನು ಕೋಮು ಸಂಘರ್ಷಕ್ಕೆ ಕಾರಣವಾಗದಂತೆ ಜವಾಬ್ದಾರಿಯುತವಾಗಿ ನಿರ್ವಹಿಸುವುದು-ಈ ಮೂರು ಅಂಶಗಳು ಮುಖ್ಯವಾಗುತ್ತವೆ.

ಈ ವಿಶೇಷ ವರದಿ ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಮೆರವಣಿಗೆಯ ದಾರಿಯಿಂದ ರಾಜಕೀಯದ ದಾರಿಗೆ: ಟಿ. ನರಸೀಪುರದಲ್ಲಿ ಸಹಬಾಳ್ವೆಯ ಪ್ರಶ್ನೆ

ಒಟ್ಟಿನಲ್ಲಿ, ಪೊಲೀಸ್ ಅಧಿಕಾರಿಯ ಶಾಂತಿ ಸಭೆಯಲ್ಲಿನ ಸೂಚನೆಗಳು ಹಾಗೂ ಅದರ ಸುತ್ತ ಮೂಡಿರುವ ರಾಜಕೀಯ ಪ್ರತಿಕ್ರಿಯೆ ಇದೀಗ ಟಿ. ನರಸೀಪುರದಲ್ಲಿ ಚರ್ಚೆಯ ವಿಷಯವಾಗಿದೆ. ಒಂದು ಕಡೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆಯ ಕ್ರಮವಾಗಿ ನೀಡಿದ ಸೂಚನೆ ಎಂದು ಸ್ಥಳೀಯರು ಹೇಳುತ್ತಿದ್ದರೆ, ಮತ್ತೊಂದೆಡೆ ಆ ಸೂಚನೆಗಳ ಕುರಿತು ರಾಜಕೀಯ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ ಸ್ಥಳೀಯ ಸಂಘಟನೆಗಳ ಮುಖಂಡರು, ಆಟೋ ಚಾಲಕರು ಹಾಗೂ ಸಾರ್ವಜನಿಕರ ಒಂದು ವರ್ಗವು ಯಾವುದೇ ವಿವಾದಕ್ಕಿಂತ ತಾಲೂಕಿನಲ್ಲಿ ದೀರ್ಘಕಾಲದಿಂದ ಇರುವ ಸಹಬಾಳ್ವೆ ಮತ್ತು ಕೋಮು ಸೌಹಾರ್ದತೆಯನ್ನು ಉಳಿಸಿಕೊಳ್ಳುವುದೇ ಮುಖ್ಯ ಎಂದು ಒತ್ತಿಹೇಳಿದ್ದಾರೆ. ಗೌರಿ-ಗಣೇಶ ಹಬ್ಬದ ಆಚರಣೆ ಶಾಂತಿ, ಪರಸ್ಪರ ಗೌರವ ಮತ್ತು ಕಾನೂನು ಪಾಲನೆಯೊಂದಿಗೆ ನಡೆಯಬೇಕೆಂಬುದು ಅವರ ಒಟ್ಟಾರೆ ಅಭಿಪ್ರಾಯವಾಗಿದೆ.

ಸಂಚಿಕೆ ಮುಂದುವರೆಯುತ್ತದೆ…

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು...

ವಿಜಯಪುರ | 13 ತಾಲೂಕುಗಳ ಪೈಕಿ 10 ಬರಪೀಡಿತ; ಹೋರಾಟ ಕೈಬಿಡಲು ಎಂ.ಬಿ ಪಾಟೀಲ್ ಮನವಿ

ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಒಟ್ಟು 10 ತಾಲೂಕುಗಳು ಬರಪೀಡಿತ...

ಸಿಂಧನೂರು | ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು, ₹56 ಸಾವಿರ ದಂಡ

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹56...

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಶ್ರೀರಕ್ಷೆಯಾಗಿದೆ : ಸಚಿವ ಶರಣಪ್ರಕಾಶ ಪಾಟೀಲ

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಶ್ರೀರಕ್ಷೆಯಾಗಿದ್ದು, ಈ...