ಆರ್‌ಎಸ್‌ಎಸ್ ಮುಖಂಡ ಟಿ ಜಿ ಮೋಹನ್‌ದಾಸ್, ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ ನೀಡಿರುವ ಹಾಗೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಬುಧವಾರ ಸಮಿತಿಯ ಅಧ್ಯಕ್ಷೆ ಚಂದ್ರಕುಮಾರಿ, ಪ್ರಧಾನ ಕಾರ್ಯದರ್ಶಿ ದೇವಿ ಅವರು ಜಂಟಿಯಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಜಂತರ್ ಮಂತರ್ ಸುತ್ತ ಕರ್ಫ್ಯೂ ಜಾರಿಗೊಳಿಸಬೇಕು ಹಾಗೂ “ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದೆ” ಎಂಬ ಟಿ ಜಿ ಮೋಹನ್‌ದಾಸ್ ಅವರ ಹೇಳಿಕೆ ಅತ್ಯಂತ ಅಪಾಯಕಾರಿ ಮತ್ತು ಪ್ರಚೋದನಕಾರಿ ಎಂದು ಸಂಘಟನೆ ಆರೋಪಿಸಿದೆ.
ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಜಾತ್ಯತೀತ ಮನೋಭಾವದ ಯುವತಿಯರು ಸಾಮೂಹಿಕ ಅತ್ಯಾಚಾರವನ್ನು ಬೆಂಬಲಿಸುತ್ತಾರೆ ಹಾಗೂ ಲೈಂಗಿಕ ದೌರ್ಜನ್ಯವನ್ನು ಅನುಭವಿಸುವುದನ್ನು ಇಷ್ಟಪಡುತ್ತಾರೆ ಎಂಬ ಹೇಳಿಕೆ ಮಹಿಳೆಯರ ಘನತೆಗೆ ಧಕ್ಕೆ ತರುವ, ಅತ್ಯಂತ ಅಸಹ್ಯಕರ ಮತ್ತು ಖಂಡನೀಯ. ಇವು ಸಾಮಾನ್ಯ ರಾಜಕೀಯ ಹೇಳಿಕೆಗಳಲ್ಲ, ಬದಲಿಗೆ ಹಿಂಸೆಗೆ ನೇರ ಪ್ರಚೋದನೆ ನೀಡುವ ಮಾತುಗಳಾಗಿವೆ. ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಯನ್ನು ಸಹಜೀಕರಿಸುವ ಹಾಗೂ ಬಲಿಪಶುಗಳನ್ನೇ ದೂಷಿಸುವ ಮನೋಭಾವವನ್ನು ಇವು ಪ್ರತಿಬಿಂಬಿಸುತ್ತವೆ ಎಂದು AIDWA ಆರೋಪಿಸಿದೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಕೊಲ್ಲಬೇಕು ಎಂದು ಕರೆ ನೀಡುವುದು ಸಂವಿಧಾನ ಖಾತರಿಪಡಿಸಿರುವ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮೂಲಭೂತ ಹಕ್ಕಿನ ಮೇಲಿನ ನೇರ ದಾಳಿ. ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಆನಂದಿಸುತ್ತಾರೆ ಎಂಬ ರೀತಿಯ ಹೇಳಿಕೆಗಳು ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಸಮರ್ಥಿಸುವ ಪ್ರಯತ್ನವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಇದನ್ನೂ ಓದಿ: NICE ಯೋಜನೆ ರಾಜ್ಯದ ಅತಿದೊಡ್ಡ ಹಗರಣ: ಹೈಕೋರ್ಟ್ ಕಿಡಿ
ಟಿ.ಜಿ. ಮೋಹನ್‌ದಾಸ್ ಅವರ ಹೇಳಿಕೆಗಳು ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 75, 79 ಮತ್ತು 351 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 67ರ ಅಡಿಯಲ್ಲಿ ಜಾಮೀನುರಹಿತ ಅಪರಾಧಗಳಾಗಿವೆ ಎಂದು ಸಂಘಟನೆ ಹೇಳಿದೆ. ಆದ್ದರಿಂದ ಅವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪ್ರಜಾಪ್ರಭುತ್ವ ಪರ ಧ್ವನಿಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾತ್ಮಕ ವಾತಾವರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.
ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಂತಹ ಕೊಲೆ ಕರೆಗಳು ಹಾಗೂ ಲೈಂಗಿಕ ಹಿಂಸೆಯನ್ನು ಸಮರ್ಥಿಸುವ ಹೇಳಿಕೆಗಳ ಬಗ್ಗೆ ಮೌನ ವಹಿಸುವುದು ಅಥವಾ ನಿರ್ಲಕ್ಷ್ಯ ತೋರುವುದು ಪರೋಕ್ಷ ಬೆಂಬಲ ನೀಡಿದಂತೆಯೇ ಆಗುತ್ತದೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಇಂತಹ ದಂಡಮುಕ್ತತೆಗೆ ಯಾವುದೇ ಅವಕಾಶ ಇರಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




