ವಚನಗಳಲ್ಲಿ ಜೀವನದ ಸಾರ ಅಡಗಿದ್ದು, ಸತ್ಯದ ಪಥ, ಸದುಚ್ಚರಣೆ ಹಾಗೂ ಸಮಾಜ ಸುಧಾರಣೆಯ ಮೌಲಿಕ ವಿಚಾರಗಳಿಗೆ ಬಸವಾದಿ ಶರಣರ ವಚನಗಳು ಬೆಳಕು ಚೆಲ್ಲುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಹಡಪದ ಅಪ್ಪಣ್ಣ ರಚಿಸಿರುವ 150ಕ್ಕೂ ಅಧಿಕ ವಚನಗಳು ಜೀವನದ ಸತ್ಯ, ಮಾನವೀಯ ಮೌಲ್ಯಗಳು ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತವೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಶರಣರು ಜನಸಾಮಾನ್ಯರ ಭಾಷೆಯಲ್ಲೇ ವಚನಗಳನ್ನು ರಚಿಸಿ ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ” ಎಂದು ಅವರು ತಿಳಿಸಿದರು.
ಯುವ ಪೀಳಿಗೆ ಶರಣ ಸಾಹಿತ್ಯವನ್ನು ಅಧ್ಯಯನ ಮಾಡಿ ವಚನಗಳಲ್ಲಿರುವ ಸತ್ವವನ್ನು ಅರಿತು, ಶರಣರ ಆಶಯದಂತೆ ಸತ್ಯ ಮತ್ತು ಮೌಲ್ಯಾಧಾರಿತ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಿ.ಎಂ. ಪಾಟೀಲ್, “ಸತ್ಯ, ಶುದ್ಧತೆ, ಕಾಯಕ ಮತ್ತು ನಿಷ್ಠೆಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನ ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಿದ್ದು, ಇಂದಿನ ಪೀಳಿಗೆಗೆ ಶರಣರ ಸಂದೇಶಗಳು ಅತ್ಯಂತ ಪ್ರಸ್ತುತ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ನಾಗಭೂಷಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಭೋವಿ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




