ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರು ಸಂಜು ಸ್ಯಾಮ್ಸನ್ ಅವರ ಸೇರ್ಪಡೆಯಿಂದಾಗಿ ತಮ್ಮ ಸ್ಥಾನಕ್ಕೆ ಅಭದ್ರತೆ ಅನುಭವಿಸುತ್ತಿರಬಹುದು ಎಂಬ ಆತಂಕಕಾರಿ ವಿಚಾರವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೇಲ್ ವಾನ್ ಮತ್ತು ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಸೈಮನ್ ಡೌಲ್ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಬೆಳವಣಿಗೆಯು ಕಪ್ತಾನ ಗಾಯಕ್ವಾಡ್‌ಗೆ ಕಂಟಕವಾದರಾ ಸಂಜು ಸ್ಯಾಮ್ಸನ್, ಋತುರಾಜ್ ಪಟ್ಟಕ್ಕೆ ಕುತ್ತು ತರುತ್ತಾರಾ, ಅಥವಾ ಇವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬಂತಹ ಹಲವು ಕುತೂಹಲಕಾರಿ ಚರ್ಚೆಗಳಿಗೆ ನಾಂದಿ ಹಾಡಿದೆ. ಕ್ರಿಕ್‌ಬಝ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಈ ಇಬ್ಬರು ದಿಗ್ಗಜರು, ಸಿಎಸ್‌ಕೆ ತಂಡದ ಆಂತರಿಕ ವಿಚಾರಗಳು ಮತ್ತು ನಾಯಕತ್ವದ ಭವಿಷ್ಯದ ಬಗ್ಗೆ ಅಚ್ಚರಿಯ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸ್ಯಾಮ್ಸನ್ ಅವರಿಂದ ಗಾಯಕ್ವಾಡ್‌ಗೆ ಅಭದ್ರತೆ ಕಾಡುತ್ತಿದೆ ಎಂದು ನೀವು ಭಾವಿಸುತ್ತೀರಾ ಎಂಬ ಮೈಕೇಲ್ ವಾನ್ ಅವರ ಪ್ರಶ್ನೆಗೆ ಸೈಮನ್ ಡೌಲ್ ಅವರು ಖಂಡಿತವಾಗಿಯೂ ಹೌದು ಎಂದು ಉತ್ತರಿಸುವ ಮೂಲಕ ಕ್ರೀಡಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಗಾಯಕ್ವಾಡ್ ಐಪಿಎಲ್‌ನಲ್ಲಿ ಅತ್ಯಂತ ಕಿರಿಯ ನಾಯಕರಲ್ಲೊಬ್ಬರಾಗಿದ್ದು, ಫ್ರಾಂಚೈಸಿಯು ಅವರನ್ನು ಬೆಳೆಸಿ ಬೆಂಬಲ ನೀಡುತ್ತಿದೆ ಎಂದು ವಾನ್ ವಿಶ್ಲೇಷಿಸಿದ್ದಾರೆ. ಆದರೆ, ಅದೇ ಸಮಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಅತಿ ದೀರ್ಘಕಾಲದ ಯಶಸ್ವಿ ನಾಯಕ ಹಾಗೂ ಅತ್ಯುತ್ತಮ ವಿಕೆಟ್ ಕೀಪರ್ ಆಗಿರುವ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್‌ಕೆ ತಂಡಕ್ಕೆ ಕರೆತರಲಾಗಿದೆ. ಬಹುಕಾಲ ಯಶಸ್ವಿಯಾಗಿ ಮುನ್ನಡೆಸಿದ ಎಂ.ಎಸ್. ಧೋನಿಯವರ ಜಾಗವನ್ನು ತುಂಬಲು ಸಿಎಸ್‌ಕೆ ಪ್ರಯತ್ನಿಸುತ್ತಿದ್ದು, ಮುಂದೆ ನಾಯಕತ್ವವನ್ನು ಬದಲಾಯಿಸುವ ಯೋಚನೆ ಫ್ರಾಂಚೈಸಿಗೆ ಇರಬಹುದು ಎಂಬ ಭೀತಿ ಗಾಯಕ್ವಾಡ್‌ಗೆ ಕಾಡುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ
ಮತ್ತೊಂದೆಡೆ, 2026ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದೊಂದಿಗೆ ಸ್ಯಾಮ್ಸನ್ ಅವರ ಆರಂಭವು ನಿರಾಸೆದಾಯಕವಾಗಿದ್ದು, ಅವರು ಸತತವಾಗಿ ಎರಡು ಬಾರಿ ಒಂದಂಕಿಯ ಸ್ಕೋರ್‌ಗಳಿಗೆ ಔಟ್ ಆಗಿದ್ದಾರೆ. ಇದೊಂದು ದೊಡ್ಡ ಮಟ್ಟದ ಆಟಗಾರರ ವಿನಿಮಯವಾಗಿದ್ದರಿಂದ ಹಾಗೂ ಇಬ್ಬರು ಗುಣಮಟ್ಟದ ಆಟಗಾರರನ್ನು ಕೈಬಿಟ್ಟು ಸ್ಯಾಮ್ಸನ್‌ರನ್ನು ತಂದಿರುವುದರಿಂದ, ಅವರ ಮೇಲೆ ಸಹಜವಾಗಿಯೇ ಅತಿಯಾದ ಒತ್ತಡವಿದೆ ಎಂದು ಸೈಮನ್ ಡೌಲ್ ಹೇಳಿದ್ದಾರೆ. ಆದರೂ, ಕೆಲವು ವಾರಗಳ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ತೋರಿದ ಅದ್ಭುತ ಪ್ರದರ್ಶನವನ್ನು ಅವರು ಈ ಕ್ಲಿಷ್ಟಕರ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಮತ್ತು ಹೇಳಿಕೆಗಳು ಹೊರಬಿದ್ದಿರುವುದು, ಪಂಜಾಬ್ ಕಿಂಗ್ಸ್ ವಿರುದ್ಧ ಸಿಎಸ್‌ಕೆ ತಂಡವು ತನ್ನ ಸತತ ಎರಡನೇ ಸೋಲನುಭವಿಸಿದ ಬೆನ್ನಲ್ಲೇ ಎಂಬುದು ಗಮನಾರ್ಹ. ಈ ಪಂದ್ಯದಲ್ಲಿ ಸಿಎಸ್‌ಕೆ ಮೊದಲು ಬ್ಯಾಟ್ ಮಾಡಿ ಯುವ ಆಟಗಾರ ಆಯುಷ್ ಮ್ಹಾತ್ರೆ ಅವರ 73 ರನ್ ಹಾಗೂ ನಾಯಕ ಗಾಯಕ್ವಾಡ್ ಅವರ 28 ರನ್‌ಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ ಸೋಲು ಕಂಡಿತು.
ಸ್ಯಾಮ್ಸನ್ ಬೇಗನೆ ಔಟ್ ಆಗಿದ್ದು ಮತ್ತು ಮಧ್ಯಮ ಓವರ್‌ಗಳಲ್ಲಿ ರನ್ ಗತಿ ಕುಸಿದದ್ದು ತಂಡಕ್ಕೆ ದೊಡ್ಡ ಪೆಟ್ಟಾಯಿತು. ಗುರಿ ಬೆನ್ನಟ್ಟಿದ ಪಂಜಾಬ್ ಪರ, ನಾಯಕ ಶ್ರೇಯಸ್ ಅಯ್ಯರ್ ಕೇವಲ 29 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರೆ, ನೇಹಾಲ್ ವಧೇರ, ಪ್ರಿಯಾಂಶ್ ಆರ್ಯ, ಪ್ರಭಸಿಮ್ರಾನ್ ಸಿಂಗ್ ಮತ್ತು ಕೂಪರ್ ಕಾನೊಲಿ ಅವರ ಸಂಘಟಿತ ಪ್ರದರ್ಶನದಿಂದ ಪಂಜಾಬ್ ತಂಡ 5 ವಿಕೆಟ್‌ಗಳು ಬಾಕಿ ಇರುವಂತೆಯೇ ಭರ್ಜರಿ ಜಯ ಸಾಧಿಸಿತು. ಈ ಸೋಲಿನಿಂದ ಸಿಎಸ್‌ಕೆ ತಂಡದ ಬೌಲಿಂಗ್ ವಿಭಾಗದ ವೈಫಲ್ಯದ ಜೊತೆಗೆ, ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಹಾಗೂ ಗಾಯಕ್ವಾಡ್ ನಾಯಕತ್ವದ ಭವಿಷ್ಯದ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿವೆ.




