ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹಿತರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಬರಬೇಕು, ಒಗ್ಗಟ್ಟಾಗಿರಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ (KRMO) ಮತ್ತು ಕ್ರೈಸ್ತ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ಎರಡೂ ಸಮುದಾಯಗಳ ಮುಖಂಡರು ಬೆಂಗಳೂರಿನಲ್ಲಿ ಶುಕ್ರವಾರ ಸಂಟಿ ಸಭೆ ನಡೆಸಿದ್ದು, ಅಲ್ಪಸಂಖ್ಯಾತ ಸಮುದಾಯಗಳನ್ನು ಒಗ್ಗೂಡಿಸುವ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೋ ಅವರೊಂದಿಗೆ ಅಲ್ಪಸಂಖ್ಯಾತ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಪ್ರಮುಖವಾಗಿ ಮತಾಂತರ ನಿಷೇಧ ಕಾಯ್ದೆಯ ದುರುಪಯೋಗ ಮತ್ತು ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷ ಭಾಷಣ ಹಾಗೂ ಉದ್ದೇಶಿತ ನಿಂದನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಹಲವರು ಕಳವಳ ವ್ಯಕ್ತಪಡಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯ ಹೆಸರಿನಲ್ಲಿ ಕೆಲವು ಮೂಲಭೂತವಾದಿ ಸಂಘಟನೆಗಳು ಅಲ್ಪಸಂಖ್ಯಾತ ಸಮುದಾಯದ ಮುಗ್ಧ ಜನರಿಗೆ ಕಿರುಕುಳ ನೀಡುತ್ತಿರುವುದು, ಹಿಂಸೆ ಒಡ್ಡುತ್ತಿರುವುದು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದನ್ನು ಸಭೆಯಲ್ಲಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಸಂವಿಧಾನಾತ್ಮಕ ಹಕ್ಕುಗಳನ್ನು ಎತ್ತಿಹಿಡಿಯಲು ಇದು ಸೂಕ್ತ ಸಮಯವಾಗಿದ್ದು, ಎಲ್ಲಾ ಅಲ್ಪಸಂಖ್ಯಾತರು ಒಗ್ಗಟ್ಟಾಗಬೇಕಿದೆ ಎಂದು ಸಭೆ ಸರ್ವಾನುಮತದಿಂದ ಅಭಿಪ್ರಾಯಪಟ್ಟಿದೆ.
ಸಭೆಯಲ್ಲಿ; ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಜಂಟಿ ಸಮಸ್ಯೆಗಳನ್ನು ಬಗೆಹರಿಸಲು ಕಾಯಂ ಸಾಮಾನ್ಯ ವೇದಿಕೆಯೊಂದರಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಸಮುದಾಯದ ಪ್ರಮುಖ ಬೇಡಿಕೆಗಳು ಮತ್ತು ಆಗ್ರಹಗಳನ್ನು ಸರ್ಕಾರದ ಗಮನಕ್ಕೆ ತರಲು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಮಯ ಕೋರಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರು ಮತ್ತು ಸಂಸದರನ್ನು ಖುದ್ದಾಗಿ ಭೇಟಿಯಾಗಿ, ಈ ಕಳವಳಗಳನ್ನು ಶಾಸಕಾಂಗದ ಒಳಗೆ ಮತ್ತು ಹೊರಗೆ ಧ್ವನಿಸುವಂತೆ ಮನವಿ ಮಾಡಬೇಕು. ರಾಜ್ಯದ ಅಲ್ಪಸಂಖ್ಯಾತರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಾಲ್ಕು ಸದಸ್ಯರ ತಂಡದ ಮೂಲಕ ವಿವರವಾದ ವರದಿಯನ್ನು ಸಿದ್ಧಪಡಿಸಬೇಕು ಎಂದು ಸಭೆಯು ನಿರ್ಣಯ ಕೈಗೊಂಡಿದೆ.
ಸಮುದಾಯಗಳ ಒಗ್ಗಟ್ಟಿಗಾಗಿ ಕೆಲಸ ಮಾಡುವ ವೇದಿಕೆಯನ್ನು ಮುನ್ನಡೆಸಲು ಸಭೆಯಲ್ಲಿ ಸಂಯೋಜಕರನ್ನು ನೇಮಿಸಲಾಗಿದೆ. ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದಿಂದ ತನ್ವೀರ್ ಅಹ್ಮದ್, ಸುಹೇಲ್ ಅಹ್ಮದ್ ಮರೂರ್, ಯಾಹ್ಯಾ ದಾಮುದಿ ಹಾಗೂ ಕ್ರೈಸ್ತ ಸಮುದಾಯದಿಂದ ಫಾ. ವಿನಯ್ ಕುಮಾರ್ ಮತ್ತು ಸಹಾಯಕ ಬಿಷಪ್ ಸುನೀಲ್ ವಿ. ಜಾಕೋಬ್ ಅವರನ್ನು ಜಂಟಿ ಸಂಯೋಜಕರನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಆರ್ಚ್ ಬಿಷಪ್ ವಿನೋದ್ ಎಂ. ಚಾಕೋ, ಬಿಷಪ್ ಲೆಮಿಯಲ್ ಮೋಸಸ್, ಸಹಾಯಕ ಬಿಷಪ್‌ಗಳಾದ ರೆವರೆಂಡ್ ಆರೋಗ್ಯರಾಜ್ ಸತೀಶ್, ರೆವರೆಂಡ್ ಜೋಸೆಫ್ ಸುಸೈನಾಥನ್, ಪಾಸ್ಟರ್ ಎಂ. ಜಾನ್ ಮೋಸಸ್, ಪೌಲ್ ಅಮೃತ್‌ರಾಜ್, ಎಡಿಎಫ್ ಕರ್ನಾಟಕದ ಲೂಕಸ್, ಕೆಆರ್‌ಎಂಒ ಸಂಚಾಲಕರಾದ ಮುಹಮ್ಮದ್ ಯಾಸೀನ್ ಮಲ್ಪೆ, ಹಾರಿಸ್ ಸಿದ್ದೀಖಿ, ದಲಿತ ಕ್ರೈಸ್ತ ಒಕ್ಕೂಟದ ಮುಖ್ಯಸ್ಥ ಮನೋಹರ್ ಚಂದ್ರಪ್ರಸಾದ್, ಪೆರಿಕೋ ಪ್ರಭು, ವಕೀಲರಾದ ರಾಬಿನ್ ಕ್ರಿಸ್ಟೊಫರ್, ಝಿಶಾನ್ ರಝ್ವಿ ಹಾಗೂ ಆರ್ಚ್ ಬಿಷಪ್ ಸಾರ್ವಜನಿಕ ಸಂಪರ್ಕಾಧಿಕಾರಿ ಕಾಂತರಾಜ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.




