ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ ಕೊಠಡಿಯನ್ನು ಶುಚಿಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರು ದುರಂತ ಅಂತ್ಯ ಕಂಡಿದ್ದು, ಮತ್ತಿಬ್ಬರು ಅಸ್ವಸ್ಥಗೊಂಡಿರುವ ಶೋಚನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದೆ.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ತಕ್ಷಣವೇ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಆಲಳ್ಳಿಯಲ್ಲಿ ವೃದ್ಧೆ ಅನುಮಾನಾಸ್ಪದ ಸಾವು; ₹1.70 ಲಕ್ಷ ನಗದು, ಚಿನ್ನಾಭರಣ ನಾಪತ್ತೆ
ಘಟನೆಯ ವಿವರ: ತದಡಿ ಬಂದರಿನ ‘ಕುಚೈಮಾ’ ಹೆಸರಿನ ಬೋಟ್‌ನಲ್ಲಿದ್ದ ಸಿಬ್ಬಂದಿ ಸಮುದ್ರದಲ್ಲಿ ಚಮನ್ ತಳಿಯ ಮೀನುಗಳನ್ನು ಬೇಟೆಯಾಡಿ ಬಂದರಿಗೆ ಹಿಂತಿರುಗಿದ್ದರು. ಬೋಟ್‌ನಲ್ಲಿದ್ದ ಮೀನುಗಳನ್ನು ಹೊರತೆಗೆದ ಬಳಿಕ, ಮೀನು ಸಂಗ್ರಹಿಸುವ ತಳಭಾಗದ ಕೊಠಡಿಯನ್ನು (ಫಿಶ್ ಹೋಲ್ಡ್) ಸ್ವಚ್ಛಗೊಳಿಸಲು ಮೀನುಗಾರರು ಕೆಳಗಿಳಿದಿದ್ದರು.
ಈ ವೇಳೆ ಕೊಠಡಿಯೊಳಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಎಲ್ಲರೂ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಬೋಟ್‌ನ ತಳಭಾಗದ ಸಂಗ್ರಹಾಗಾರದಲ್ಲಿ ರಾಸಾಯನಿಕ ಕ್ರಿಯೆಯಿಂದ ವಿಷಕಾರಿ ಅನಿಲ ರೂಪುಗೊಂಡಿರುವುದು ಅಥವಾ ಆಮ್ಲಜನಕದ ಅಭಾವ ಉಂಟಾಗಿರುವುದು ಈ ಅನಾಹುತಕ್ಕೆ ಮುಖ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಸಾವಿಗೆ ನಿಖರ ಕಾರಣವೇನೆಂಬುದು ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಸ್ಪಷ್ಟವಾಗಬೇಕಿದೆ. ನಿತ್ಯ ಚಟುವಟಿಕೆಗಳಿಂದ ಜನನಿಬಿಡವಾಗಿದ್ದ ತದಡಿ ಬಂದರಿನಲ್ಲಿ ಈ ಆಕಸ್ಮಿಕ ದುರಂತ ಸಂಭವಿಸಿರುವುದು ಕರಾವಳಿಯ ಮೀನುಗಾರ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಬೋಟ್‌ಗಳ ತಳಭಾಗದಲ್ಲಿ ಕಾರ್ಯನಿರ್ವಹಿಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.





