ಖ್ಯಾತ ರಂಗ ನಿರ್ದೇಶಕ ಹಾಗೂ ನಾಡಿನ ಹಿರಿಯ ಸಾಹಿತಿ ಚಿದಂಬರ ರಾವ್ ಜಂಬೆ ಅವರು ನಿಧನರಾಗಿದ್ದಾರೆ. ಶಿವಮೊಗ್ಗದ ಹೆಗ್ಗೋಡಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರ ಅಗಲಿಕೆಯಿಂದಾಗಿ ಸಾರಸ್ವತ ಲೋಕ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಕಥೆಗಾರರಾಗಿ ಹಾಗೂ ರಂಗಕರ್ಮಿಯಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು. ಅವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದಲ್ಲಿ ಜನಿಸಿದ ಇವರು, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (NSD) ಹಳೆ ವಿದ್ಯಾರ್ಥಿಯಾಗಿದ್ದು, ಯಕ್ಷಗಾನ ಕಲೆಯಲ್ಲೂ ತರಬೇತಿ ಪಡೆದಿದ್ದರು. ಬಾಲ್ಯದಿಂದಲೇ ಓದಿನಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇಡಿ. ಪದವಿ ಪಡೆದಿದ್ದ ಅವರು, ಹಿಂದಿಯಲ್ಲಿ ‘ರಾಷ್ಟ್ರಭಾಷಾ ವಿಶಾರದ’ ಪದವೀಧರರಾಗಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಇಂಟರ್‌ಮೀಡಿಯೇಟ್‌ನಲ್ಲಿ ರ್‍ಯಾಂಕ್ ಪಡೆಯಲೇಬೇಕೆಂಬ ಛಲದಿಂದ ಹಗಲು-ರಾತ್ರಿ ಓದಿದ್ದ ಅವರ ಜ್ಞಾನದ ದಾಹ ಅಪಾರವಾಗಿತ್ತು.
ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅವರಿಗಿದ್ದ ಪ್ರಭುತ್ವ ಅಸಾಧಾರಣವಾಗಿತ್ತು. 1988-89ರ ಅವಧಿಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ ಅವರು, ತರುವಾಯ 1991ರಿಂದ 1994ರವರೆಗೆ ಮಲ್ಲಾಡಿಹಳ್ಳಿಯ ಟಿ.ಸಿ.ಎಚ್. ಕಾಲೇಜಿನ ಪ್ರಾಂಶುಪಾಲರಾಗಿ, ಆಡಳಿತಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಮೈಸೂರಿನ ರಂಗಾಯಣ ನಿರ್ದೇಶಕರಾಗಿ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿಯೂ, ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ತಮ್ಮ ಜೀವಿತಾವಧಿಯಲ್ಲಿ ಹಲವು ಸಣ್ಣಕತೆಗಳನ್ನು ರಚಿಸಿದ್ದಾರೆ. ‘ಸರಿಯುವ ತೆರೆಗಳು’ (1973), ‘ಬೆಂಕಿಯ ನಾಡು’ (1981), ‘ಅಲೆಗಳು’ (1985), ‘ನಿರ್ದೇಶನ’ (1986), ‘ಸಂದಿಗ್ಧ’ (1994) ಅವರ ಪ್ರಮುಖ ಕೃತಿಗಳಾಗಿವೆ. ಇದಲ್ಲದೆ ‘ಬೆಂಕಿಯ ನೆರಳು’ ಎಂಬ ಕಾದಂಬರಿ ಹಾಗೂ ‘ಎಚ್ಚಮ ನಾಯಕ’ ಎಂಬ ಜೀವನ ಚರಿತ್ರೆಯನ್ನೂ ರಚಿಸಿದ್ದರು. ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಆತ್ಮಚರಿತ್ರೆಯಾದ ‘ಜೋಳಿಗೆ ಮಹಿಮೆ’ಯನ್ನು 1994ರಲ್ಲಿ ಅತ್ಯಂತ ಸಮರ್ಪಕವಾಗಿ ಸಂಪಾದಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಬರವಣಿಗೆಯ ಜೊತೆಗೆ ರಂಗಭೂಮಿಯ ಮೇಲಿನ ಒಲವು ಅವರಲ್ಲಿ ಗಾಢವಾಗಿತ್ತು. ‘ಚೆರ್ರಿ ಹಣ್ಣಿನ ತೋಟ’, ‘ಚಾಣಕ್ಯ ಪ್ರಪಂಚ’, ‘ತಲೆದಂಡ’, ‘ಆ ಊರು-ಈ ಊರು’ ಸೇರಿದಂತೆ 100ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಿದ್ದಿ ಜನಾಂಗದವರನ್ನು ರಂಗಕ್ಕೆ ಪರಿಚಯಿಸಿ ‘ಕಪ್ಪು ಜನ, ಕೆಂಪು ನೆರಳು’ ನಾಟಕವನ್ನು ನಿರ್ದೇಶಿಸಿದ್ದರು.
ಟಿ.ಪಿ. ಕೈಲಾಸಂ ಅವರ ‘ಬಂಡವಾಳವಿಲ್ಲದ ಬಡಾಯಿ’ ಮುಂತಾದ ನಾಟಕಗಳಲ್ಲಿ ತಮ್ಮ ಸಹೋದ್ಯೋಗಿಗಳೊಡನೆ ಸೇರಿ ಅಭಿನಯಿಸಿದ್ದರು. ಕುಮಾರವ್ಯಾಸ ಮತ್ತು ಶಿವರಾಮ ಕಾರಂತರ ಕಟ್ಟಾ ಅಭಿಮಾನಿಯಾಗಿದ್ದ ಅವರು, ಹತ್ತಾರು ಕನ್ನಡ ಪದ್ಯಗಳನ್ನು ಪುಸ್ತಕ ನೋಡದೆ ತಡೆಯಿಲ್ಲದೆ ಹಾಡುವಷ್ಟು ಅದ್ಭುತ ಜ್ಞಾಪಕಶಕ್ತಿಯನ್ನು ಹಾಗೂ ಕಂಠಮಾಧುರ್ಯವನ್ನು ಹೊಂದಿದ್ದರು.
ಯೌವನದಲ್ಲಿ ರ್‍ಯಾಂಕ್ ಪಡೆಯಲು ವಿಪರೀತ ಓದಿದ ಪರಿಣಾಮವಾಗಿ ಅವರು ತೀವ್ರ ದೃಷ್ಟಿ ಮಾಂದ್ಯದ ತೊಂದರೆಗೆ ಒಳಗಾಗಿದ್ದರು. ಅರ್ಧ ಅಡಿ ಅಂತರದಲ್ಲಿ ಮುಖಕ್ಕೆ ಅಡ್ಡವಾಗಿ ಪುಸ್ತಕ ಹಿಡಿದುಕೊಂಡು ಓದುತ್ತಿದ್ದ ಅವರು ಸಾಹಿತ್ಯದ ಅತ್ಯಂತ ಸೂಕ್ಷ್ಮ ಹಾಗೂ ನಿಷ್ಠುರ ವಿಮರ್ಶಕರೂ ಆಗಿದ್ದರು. ಇವರ ಅಪಾರ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2014ರಲ್ಲಿ ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಿದಂಬರರಾವ್ ಅವರು, ಪತ್ನಿ ರಮಾ ಹಾಗೂ ಪುತ್ರಿ ಕನಕ ಮಂಜುಳಾ ಅವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕನ್ನಡದ ಸಾಹಿತ್ಯ ವಲಯ, ರಂಗಭೂಮಿಯ ಗಣ್ಯರು ಹಾಗೂ ಮಲ್ಲಾಡಿಹಳ್ಳಿ ಆಶ್ರಮದ ಅಪಾರ ಭಕ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.





