ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಸಭಾಂಗಣದಲ್ಲಿ ಮೈಸೂರು ವಿವಿ ಸಂಶೋಧಕರ ಸಂಘ, ಅರಿವಿನ ಚಾವಡಿ, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಉಳುಮೆ ಪ್ರತಿಷ್ಠಾನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಯುವ ಜನತೆ ನಮ್ಮ ನಾಳೆಯ ಭರವಸೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕಿ ಎಚ್. ಎಸ್. ಅನುಪಮ, ‘ಯುವಜನತೆ ರಾಜಕೀಯ ಆಸಕ್ತಿ ಬೆಳೆಸಿಕೊಳ್ಳಬೇಕು; ಪ್ರಾತಿನಿಧ್ಯ ಸಿಗುವರೆಗೂ ಒತ್ತಾಯಿಸಬೇಕು’ ಎಂದು ಕರೆ ನೀಡಿದರು.
“ಯುವಜನತೆ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕು, ಕೇವಲ ಮತ ಹಾಕುವುದು, ಹಾಕಿಸುವುದು, ಪ್ರಚಾರ ಮಾಡುವ ಸರಕಾಗಬಾರದು, ದೇಶದಲ್ಲಿ ಅರ್ಧಕ್ಕೂ ಹೆಚ್ಚು ಯುವಜನತೆ ಇರುವಾಗ ಅಧಿಕಾರ ಹಿಡಿಯುವಲ್ಲಿ ವಿಫಲತೆ ಕಂಡಿದೆ. ಈಗಲಾದರೂ ಎಚ್ಚತ್ತುಕೊಂಡು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸಬೇಕು.
ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರ ಭಾರತ. ಅದರಲ್ಲಿ ಬರೋಬ್ಬರಿ 75 ಕೋಟಿ ಯುವಜನತೆ ಇದ್ದಾರೆ. ಆದರೆ, ರಾಜಕೀಯವಾಗಿ ಅಧಿಕಾರ, ನಾಯಕತ್ವ ಹೊಂದಿಲ್ಲ. ಅದಕ್ಕೆ ಪೂರಕವಾದ ವಾತಾವರಣ ಸಹ ಸೃಷ್ಟಿಯಾಗಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
“543 ಸಂಸದರಲ್ಲಿ 30ರ ಆಸುಪಾಸಿನ ಸಂಸದರು ಇರುವುದು 7 ಜನ, ಅದರಲ್ಲಿ ಕರ್ನಾಟಕದಿಂದ ಸಾಗರ್ ಖಂಡ್ರೆ, ಪ್ರಿಯಾಂಕ ಜಾರಕಿಹೋಳಿ. ಇವರುಗಳು ರಾಜಕೀಯ ಕುಟುಂಬದ ಬಲದಿಂದ ಬಂದವರು ಹೊರತು, ರಾಜಕೀಯವಾಗಿ ತೊಡಗಿಸಿಕೊಂಡು ನಾಯಕತ್ವದ ತಳಹದಿಯಲ್ಲಿ ಬಂದವರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದವರು ಮತ ಚಲಾಯಿಸುವುದು ಆದರೆ, ಅದಕ್ಕೆ ತಕ್ಕನಾದ ಪ್ರಾತಿನಿಧ್ಯ ಸಹ ದೊರಕಬೇಕು. ಅದರಲ್ಲೂ, ಯುವಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡುವ ಹಕ್ಕು ಸಹ ಇಲ್ಲದಿರುವುದು ಶೋಚನಿಯ. ನಮ್ಮ ಸಂಸ್ಕೃತಿ, ಆಚಾರ ವಿಚಾರ ಯುವಜನತೆಯ ರಾಜಕೀಯದ ಸ್ಥಾನಮಾನ ಕಂಡುಕೊಳ್ಳಲು ಅಡ್ಡಿಯಾದಂತಿದೆ” ಎಂದು ಅಭಿಪ್ರಾಯ ತಿಳಿಸಿದರು.

“ಬುದ್ಧರಿಂದ ಹಿಡಿದು ಚೆಗುವೆರಾ, ಸಾಮ್ರಾಟ ಅಶೋಕ, ಬಿರ್ಸಾ ಮುಂಡಾ, ಅಂಬೇಡ್ಕರ್, ಮಲಾನರವರೆಗೂ ಅತಿ ಚಿಕ್ಕ ವಯಸ್ಸಿನಲ್ಲಿ ಹೋರಾಟದ ದಿಕ್ಕನ್ನೇ ಬದಲಾಯಿಸಿದರು. ವಯಸ್ಸಿನ ಯುವಕರು ದೇಶದ ಹಿತ, ಸಮಾಜದ ಹಿತದ ಕಡೆಗೆ ಆಲೋಚನೆ ಉಳ್ಳವರು. ದುರ್ದೈವ ಎಂದರೆ 70 ವರ್ಷ ದಾಟಿದ ಮುದುಕರು ಆಡಳಿತ ಮಾಡುತ್ತಾ ಕೇಡು ಮಾಡುತ್ತಿದ್ದಾರೆ. ನಿಲ್ಲಲು ಶಕ್ತಿಯಿರದವರಿಗೆ ಅಧಿಕಾರ. ಅದೇ ಶಕ್ತಿವಂತ ಯುವಜನತೆ ನಿರುದ್ಯೋಗಿಗಳಾಗಿ ಬದುಕು ಸಹ ಕಂಡುಕೊಳ್ಳಲು ಆಗದಿರುವ ಪರಿಸ್ಥಿತಿ”.
“ದಶಕಗಳಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನ ಬೇರೆಬೇರೆ ರಾಷ್ಟ್ರಗಳಲ್ಲಿ ಹೋರಾಟಗಳು ನಡೆದಿವೆ. ಕೇವಲ ಸಂದೇಶಗಳ ಮೂಲಕ, ಸಿರಿಯಾದಲ್ಲಿ ಟ್ವಿಟ್ಟರ್ ಮೂಲಕ ಹೋರಾಟ ನಡೆಸಿದೆ. ಅದು ಶ್ರೀಲಂಕಾ, ನೇಪಾಳ, ಇಂದಿನ ಯುದ್ಧ ಬೀತಿಯಲ್ಲಿರುವ ಇರಾನ್ ವರೆಗೂ ಹೋರಾಟ ಕಂಡು, ಸರ್ಕಾರಗಳೇ ಬದಲಾಗಿವೆ. ಆದರೆ, ಭಾರತದ ಜೆನ್‌ಜಿ ಮಂಪರು ನಿದ್ರೆಯಲ್ಲಿದೆ. ಬೌದ್ಧಿಕ ಗುಲಾಮಗಿರಿ, ಭಯ ಇರುವ ತನಕ ಏನನ್ನು ಸಾಧಿಸಲು ಸಾಧ್ಯವಿಲ್ಲ. ಭಯ ಇರುವಲ್ಲಿ ಹೊಸ ಆಲೋಚನೆಗಳು ಹುಟ್ಟುವುದಿಲ್ಲ, ಪ್ರಶ್ನಿಸುವ ಮನೋಭಾವ ಇಲ್ಲದ ಕಡೆ ಪ್ರಜಾಪ್ರಭುತ್ವ ಇರುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಅಮಾನವೀಯವಾದದ್ದು, ಪ್ರಪಂಚದ ಕೇಡು. ಇದರಿಂದಾಗಿ ಸಾವುನೋವಷ್ಟೇ ಅಲ್ಲಾ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಇದು ಕಿಡಿಗೇಡಿತನದ ಪರಮಾವಿಧಿ ಯುದ್ದದಿಂದ ಏನನ್ನು ಸಾಧಿಸಲಾರೆವು, ಇದರಿಂದ ಜಾಗತಿಕ ಬಿಕ್ಕಟ್ಟು ಉದ್ಭವಿಸಲಿದೆ. ಈಗಾಗಲೇ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳು, ಆಮದು, ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಿರುವಾಗ, ಯುದ್ಧವನ್ನು ಸಮರ್ಥಿಸುವ, ಗೆಲುವೆಂದು ಸಂಭ್ರಮಿಸುವ ಕಿಡಿಗೇಡಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು”.
ಈ ಸುದ್ದಿ ಓದಿದ್ದೀರಾ? ಕೊಡಗು | ಮಹಾವೀರರ ಜೀವನ-ಭೋಧನೆಗಳು ಸರ್ವಕಾಲಿಕ: ವಾಣಿ ಪುಷ್ಪರಾಜ್

ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಲ್ಯಾನ್ಸಿ ಡಿಸೋಜಾ, ಲೇಖಕ ಹಾಗೂ ಕೃಷಿಕರಾದ ಟಿ.ಜಿ.ಎಸ್. ಅವಿನಾಶ್, ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷೆ ಡಾ. ಎಂ. ಮಂಜುಳಾ, ಜಾನಪದ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮೀ ಮನಾಪುರ, ಮಹಾರಾಜ ಕಾಲೇಜು ಮಹಿಳಾ ಸಂಘಟನೆ ಸಂಚಾಲಕಿ ಕೆ.ಎಂ. ಲಕ್ಷ್ಮಮ್ಮ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಚಿನ್ನಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.




