ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಡಾ. ವಾಣಿ ಪುಷ್ಪರಾಜ್ ಮಾತನಾಡಿ, ‘ಮಹಾವೀರರ ಜೀವನ ಮತ್ತು ಭೋಧನೆಗಳು ಸರ್ವಕಾಲಿಕ’ ಎಂದು ಹೇಳಿದರು.
ಭಗವಾನ್ ಮಹಾವೀರರ ತತ್ವ, ಚಿಂತನೆ ಹಾಗೂ ಅಹಿಂಸೆಯನ್ನು ಅಳವಡಿಸಿಕೊಂಡಲ್ಲಿ ಪ್ರಪಂಚದಲ್ಲಿ ಯಾವುದೇ ಯುದ್ದ ನಡೆಯುವುದಿಲ್ಲ. ಆ ನಿಟ್ಟಿನಲ್ಲಿ ಸಂದೇಶಗಳು ಹಾಗೂ ಮಾರ್ಗದರ್ಶನವನ್ನು ಪಾಲಿಸುವಂತಾಗಬೇಕು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ವಿಶ್ವದಲ್ಲಿ ಒಂದು ರೀತಿ ಸಂದಿಗ್ಧ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಹಾಗೂ ಅಭಿವೃದ್ಧಿ ಕುಂಠಿತವಾಗುತ್ತಿದೆ. ರಾಷ್ಟ್ರ ರಾಷ್ಟ್ರಗಳು ಒಂದಕ್ಕೊಂದು ಅವಲಂಬಿತವಾಗಿ ಬದುಕು ನಡೆಸುವಂತಾಗಿದೆ. ಆದ್ದರಿಂದ, ಇಡೀ ವಿಶ್ವದಲ್ಲಿ ಶಾಂತಿ ನೆಲೆಸುವಂತಾಗಬೇಕು. ಅದಕ್ಕೆ ಮಹಾವೀರರ ಸಂದೇಶಗಳು ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯುವಂತಾಗಬೇಕು ಎಂದು ಪ್ರತಿಪಾದಿಸಿದರು.
ಭಗವಾನ್ ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದು, ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಅಸ್ತೇಯ ಮತ್ತು ಅಪರಿಗ್ರಹ ಎಂಬ ಪಂಚ ಮಹಾವ್ರತಗಳನ್ನು ಭೋದಿಸಿದ್ದಾರೆ. ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜನಿಸಿರುವ ಮಹಾವೀರರು 12 ವರ್ಷಗಳ ಕಠಿಣ ತಪಸ್ಸಿನ ನಂತರ ಸರ್ವಜ್ಞಾನ ಪಡೆದು ಪ್ರತಿಯೊಂದು ಜೀವಿಗಳ ಉದ್ಧಾರಕ್ಕೆ ಅಹಿಂಸಾ ಮಾರ್ಗವನ್ನು ಬೋಧಿಸಿದರು ಎಂದು ಹೇಳಿದರು.
ಮಹಾವೀರರ ಬಾಲ್ಯದ ಹೆಸರು ವರ್ಧಮಾನ ಆಗಿದ್ದು, ಸತ್ಯದ ಹುಡುಕಾಟದಲ್ಲಿ 30ನೇ ವಯಸ್ಸಿನಲ್ಲಿ ಮನೆ ಬಿಟ್ಟು ಜೈನ ಧರ್ಮದ ತತ್ವ-ಮಾರ್ಗಗಳನ್ನು ಪಸರಿಸುತ್ತಾರೆ. ಅಹಿಂಸೆಯೇ ಪರಮಧರ್ಮ. ಪ್ರತಿಯೊಂದು ಜೀವಿಯೂ ಮನುಷ್ಯ, ಪ್ರಾಣಿ, ಸಸ್ಯ, ಸಮಾನವಾದುದು ಮತ್ತು ಎಲ್ಲದರಲ್ಲೂ ಆತ್ಮವಿದೆ. ಆದ್ದರಿಂದ, ಯಾವ ಪ್ರಾಣಿ, ಪಕ್ಷಿಗೂ ಹಿಂಸೆ ನೀಡಬಾರದು. ರತ್ನತ್ರಯಗಳು, ಕರ್ಮ ಸಿದ್ಧಾಂತ, ಅನೇಕಾಂತವಾದ ಹೀಗೆ ಹಲವು ಭೋದನೆಗಳಲ್ಲಿ ವಿವರಿಸಿದ್ದಾರೆ ಎಂದು ತಿಳಿಸಿದರು.
ಜೈನ ಸಮಾಜದ ಅಲ್ಪಸಂಖ್ಯಾತ ವಿಭಾಗದ ಸದಸ್ಯರಾದ ಜೆ.ಎನ್. ಚಂದ್ರಪ್ರಸಾದ್ ಮಾತನಾಡಿ, ಭಗವಾನ್ ಮಹಾವೀರರು ಜೈನಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು, ಮಹಾವೀರರು ಹಾಕಿಕೊಟ್ಟ ಸತ್ಯದ ಮಾರ್ಗದಲ್ಲಿ ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿ ಅಹಿಂಸೆ, ಶಾಂತಿ ಇರಬೇಕು. ಮೋಸ ಮತ್ತು ವಂಚನೆ ಇರಬಾರದು. ಯಾರಿಗೂ ನೋವು ಉಂಟಾಗದಂತೆ ನಡೆದುಕೊಳ್ಳಬೇಕು. ಸತ್ಯ ಧರ್ಮದಲ್ಲಿ ನಂಬಿಕೆ ಇರಬೇಕು. ಆ ನಿಟ್ಟಿನಲ್ಲಿ ಸಂದೇಶಗಳು ಇಂದಿಗೂ ಸಹ ಸಾರ್ವಕಾಲೀಕವಾಗಿವೆ ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೇಸಿಗೆ ಹಿನ್ನಲೆಯಲ್ಲಿ ಪೌರಕಾರ್ಮಿಕರ ಕೆಲಸದ ಸಮಯ ಬದಲಾವಣೆ
ಜೈನ ಸಮಾಜದ ಜಿಲ್ಲಾಧ್ಯಕ್ಷೆ ಜೆ.ಎನ್. ಪುಷ್ಪರಾಜ್, ಶಿರಸ್ತೇದಾರ್ ದೇವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.




