ಮಾಲೂರು:ಸ್ವತಂತ್ರ ಭಾರತಕ್ಕೆ ಮುಕ್ಕಾಲು ಶತಮಾನ ಕಳೆದಿದ್ದರೂ ಸಹ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳು ಇನ್ನೂ ಸಂಪೂರ್ಣವಾಗಿ ನಿಲ್ಲದೆ ಮುಂದುವರಿಯುತ್ತಿರುವುದು ದುರದೃಷ್ಟಕರ ಸಂಗತಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮುದಾಯದ ಮೇಲೆ ನಿರಂತರವಾಗಿ ಅನ್ಯಾಯಗಳು ನಡೆಯುತ್ತಿರುವುದು ಕಾನೂನು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುವಂತಾಗಿದೆ.
ಕಾಂಗ್ರೆಸ್ನ ಭದ್ರಕೋಟೆ ಎಂದೇ ಪರಿಗಣಿಸಲ್ಪಡುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಪಡುವನಹಳ್ಳಿ ಗ್ರಾಮದಲ್ಲಿ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು ಮೂವತ್ತು ವರ್ಷಗಳಿಂದ ತಮ್ಮ ಜಮೀನಿನಲ್ಲಿ ವಾಸವಾಗಿರುವ ದಲಿತ ಕುಟುಂಬವನ್ನು ಬಲವಂತವಾಗಿ ತೆರವುಗೊಳಿಸಲು ಪ್ರಭಾವಿ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಡವನಹಳ್ಳಿ ಗ್ರಾಮದ ಸರ್ವೇ ನಂ. 78/5ರಲ್ಲಿ 2 ಎಕರೆ 19 ಗುಂಟೆ ಜಮೀನು ವೆಂಕಟಮ್ಮ ಮುನಿರಪ್ಪ ಅವರ ಹೆಸರಿನಲ್ಲಿ ಹಾಗೂ ಸರ್ವೇ ನಂ. 78/6ರಲ್ಲಿ 1 ಎಕರೆ 39 ಗುಂಟೆ ಜಮೀನು ಶಶಿಕಲಾ ಶ್ರೀನಿವಾಸ್ ಅವರ ಹೆಸರಿನಲ್ಲಿ ದಾಖಲಾಗಿದ್ದು, ಈ ಜಮೀನಿಗೆ ಸಂಬಂಧಿಸಿದಂತೆ ಚೆಕ್ಕುಬಂದಿ ಬದಲಾವಣೆ ಆಗಿರುವ ಬಗ್ಗೆ ಮಾಲೂರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಕೂಡ ಪ್ರಗತಿಯಲ್ಲಿದೆ.
ಈ ನಡುವೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಪ್ರಭಾವಿ ರಾಜಕಾರಣಿ ಶ್ರೀನಿವಾಸ್ ಎಂಬವರು, ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಮನೆ ಸುತ್ತ ಮಣ್ಣು ಹಾಕಿಸಿ ಓಡಾಡಲು ಆಗದಂತೆ ತೊಂದರೆ ನೀಡಿದ್ದು, ಮೂರು ತಿಂಗಳ ಹಿಂದೆ ಮನೆಗಳನ್ನು ಕೆಡವಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಮಾತನಾಡಿದ ಎಸ್.ಎಂ. ವೆಂಕಟೇಶ್ ಅವರು, “ಮಾಲೂರು ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಿದ್ದರೂ ಸಹ, ಸವರ್ಣೀಯರಿಂದ ದೌರ್ಜನ್ಯ ಹಾಗೂ ದಬ್ಬಾಳಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪಡುವನಹಳ್ಳಿಯಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ದಲಿತರ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಕೇಸ್ ನಡೆಯುತ್ತಿದ್ದರೂ ರಾತ್ರೋರಾತ್ರಿ ಮನೆಯ ಸುತ್ತ ಮಣ್ಣು ಹಾಕಿ ದೌರ್ಜನ್ಯ ಎಸಗಿದ್ದಾರೆ. ಆದಷ್ಟು ಬೇಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ನಾಗರಾಜ್ ಅವರು, “ಪೋಲೀಸರು ಸ್ಥಳಕ್ಕೆ ಪರಿಶೀಲನೆಗೆ ಬಂದಾಗ ಅವರ ಮುಂದೆಯೇ ಆರೋಪಿಯು ಬೆದರಿಕೆ ಹಾಕಿದ. ರೌಡಿಗಳೂ ಇದ್ದರು. ಆದರೂ ಪೋಲೀಸರು ಮೌನ ವಹಿಸಿದರು. ನಮಗೆ ನ್ಯಾಯ ಕೊಡಿಸಿ” ಎಂದು ಮನವಿ ಮಾಡಿದರು.
ಸಂತ್ರಸ್ತ ಮಹಿಳೆಯೊಬ್ಬರು ಮಾತನಾಡಿ, “ಶ್ರೀನಿವಾಸ್ ಎಂಬ ವ್ಯಕ್ತಿ ‘ನೀವು ಒಬ್ಬನಿಗೇ ಹುಟ್ಟಿದ್ದರೆ ಈ ಜಮೀನಿಂದ ಹೊರಗೆ ಹೋಗಿ’ ಎಂದು ಅವಾಚ್ಯವಾಗಿ ನಿಂದಿಸುತ್ತಾನೆ. ನಾವು ಇಲ್ಲಿ ಮೂವತ್ತು ವರ್ಷಗಳಿಂದ ವಾಸವಾಗಿದ್ದೇವೆ” ಎಂದು ಕಣ್ಣೀರಿಟ್ಟರು.
ಇದನ್ನು ಓದಿದ್ದೀರಾ..? ಅವಜ್ಞಾನಿಕ ಕಾಲುವೆ ನಿರ್ಮಾಣ ಸರ್ಕಾರಿ ಶಾಲೆಗೆ ನುಗ್ಗಿದ ಕೊಳಚೆ ನೀರು: ರಘುಪತಿ ಆಕ್ರೋಶ
ಘಟನೆಯ ನಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ದಲಿತ ಸಂಘಟನೆಗಳು ಹಾಗೂ ಸ್ಥಳೀಯರು, ಇಂತಹ ಪ್ರಕರಣಗಳು ಮರುಕಳಿಸದಂತೆ ಅಟ್ರಾಸಿಟಿ ಕಾಯ್ದೆಯನ್ನು ಕಠಿಣವಾಗಿ ಹಾಗೂ ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ವತಂತ್ರ ಭಾರತಕ್ಕೆ ಮುಕ್ಕಾಲು ಶತಮಾನ ಕಳೆದಿದ್ದರೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ದುರದೃಷ್ಟಕರ ಸಂಗತಿ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




