“ಮಹಿಳೆಯರು ಕೌಶಲ್ಯಾಧಾರಿತ ತರಬೇತಿಯನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉಚಿತ ಹೊಲಿಗೆ ತರಬೇತಿ ಶಿಬಿರಗಳು ಉತ್ತಮ ಅವಕಾಶವಾಗಿವೆ ಎಂದು ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಶ್ರೀ ರಾಮಕೃಷ್ಣ ಹೇಳಿದರು.
ಭಾರತ್ ಸೋಷಿಯಲ್ ವೆಲ್ಪೇರ್ ಟ್ರಸ್ಟ್ ಮಂಗಳೂರು ಮತ್ತು ಸಾಲೆತ್ತೂರು ಗ್ರಾಮ ಪಂಚಾಯತ್ ಹಾಗೂ ಸಾಲೆತ್ತೂರು ಸೌಭಾಗ್ಯ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಸಾಲೆತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಿಳೆಯರ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಕೌಶಲ್ಯವನ್ನು ಉದ್ಯೋಗವಾಗಿ ಪರಿವರ್ತಿಸಿಕೊಳ್ಳಬೇಕು. ಸ್ವಂತ ದುಡಿಮೆಯಿಂದ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಸಮಾಜದಲ್ಲಿಯೂ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ್ ಸೋಷಿಯಲ್ ವೆಲ್ಪೇರ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ನೂರುಲ್ ಅಮೀನ್ ಮಾತನಾಡಿ, “ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಯೇ ಸಮಾಜದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚುವುದಲ್ಲದೆ, ಅವರು ಸ್ವಂತ ಆದಾಯ ಗಳಿಸಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಾರತ್ ಸೋಷಿಯಲ್ ವೆಲ್ಪೇರ್ ಟ್ರಸ್ಟ್ ವಿವಿಧ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಹೊಲಿಗೆ ತರಬೇತಿ ಪಡೆದ ಮಹಿಳೆಯರು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸ್ವಉದ್ಯೋಗ ಆರಂಭಿಸಿ ಇತರರಿಗೂ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಶ್ರೀ ಮಾಧವ ಮಾವೆ, ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ.) ಮಂಗಳೂರಿನ ಅಧ್ಯಕ್ಷ ಶ್ರೀ ಸುಭಾಶ್ಚಂದ್ರ ಶೆಟ್ಟಿ, ಸಾಲೆತ್ತೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಉಪಾಧ್ಯಕ್ಷ ಶ್ರೀ ಹೈಸನಾರ್ ಡಿ., ಕರ್ನಾಟಕ ಸರಕಾರದ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಸಾಲೆತ್ತೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯೆ ಶ್ರೀಮತಿ ಅಮಿತಾ ಎಸ್. ಭಂಡಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ಸಾಲೆತ್ತೂರು ಗ್ರಾಮ ಪಂಚಾಯತ್ನ ನಿಕಟಪೂರ್ವ ಸದಸ್ಯ ಶ್ರೀ ಆನಂದ ಪೂಜಾರಿ ಮಾವೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ದೇವಿದಾಸ್ ಶೆಟ್ಟಿ ಪಾಲ್ತಾಜೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಹಸೈನಾರ್ ತಾಳಿತ್ತನೂಜಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ನ ವಲಯ ಸಂಜೀವಿನಿ ಮೇಲ್ವಿಚಾರಕಿ ಶ್ರೀಮತಿ ದೀಕ್ಷಿತಾ, ಭಾರತ್ ಸೋಷಿಯಲ್ ವೆಲ್ಪೇರ್ ಟ್ರಸ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎ. ಮಾಸ್ಟರ್, ಟ್ರಸ್ಟ್ನ ಉಪಾಧ್ಯಕ್ಷ ಅಬ್ದುಲ್ಲಾ ಬಜಾಲ್, ಯೋಜನಾ ನಿರ್ದೇಶಕ ನಿಯಾಝುರ್ರಹ್ಮಾನ್ ಪೆರ್ಲ, ಟ್ರಸ್ಟ್ ಸದಸ್ಯ ಹೈದರ್ ಮಕಾಂದಾರ್ ಹಾಗೂ ಸಾಲೆತ್ತೂರು ಸೌಭಾಗ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ನ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು, ಸಾಮಾಜಿಕ ಕ್ಷೇತ್ರದ ಗಣ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಭಾರತ್ ಸೋಷಿಯಲ್ ವೆಲ್ಪೇರ್ ಟ್ರಸ್ಟ್ನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಾಲೆತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಯಿಷಾ ಬಾನು ಬಿ.ಎ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಝ್ಝಾಲಿ ವಕೀಲರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು





