- ನಳಿನ್ ಕುಮಾರ್ ಕಟೀಲ್, ಸಧಾನಂದಗೌಡ ಬ್ಯಾನರ್‌ಗೆ ಚಪ್ಪಲಿ ಹಾರ ಪ್ರಕರಣ
- ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಅಮಾನುಷವಾಗಿ ಥಳಿತ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯುವಕರನ್ನು ಪೊಲೀಸ್ ಠಾಣೆಯಲ್ಲಿ ಅಮಾನುಷವಾಗಿ ಥಳಿಸಿದ್ದ ಆರೋಪದ ಮೇಲೆ ಸಂಪ್ಯ ಗ್ರಾಮಾಂತರ ಠಾಣೆಯ ಪಿಎಸ್‌ಐ ಶ್ರೀನಾಥ ರೆಡ್ಡಿ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಹರ್ಷಿತ್ ಎಂಬುವರನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರೇ ಕಾರಣವೆಂದು ಕೇಸರಿ ಕಾರ್ಯಕರ್ತರು ಕಿಡಿಕಾರಿದ್ದರು. ಅಲ್ಲದೆ, ಪುತ್ತೂರಿನಲ್ಲಿ ಅವರಿಬ್ಬರ ಫೋಟೋವುಳ್ಳ ಬ್ಯಾನರ್ ಅಳವಡಿಸಿ, ಚಪ್ಪಲಿ ಹಾರ ಹಾಕಿದ್ದರು.
ಈ ಪ್ರಕರಣ ಸಂಬಂಧ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದರು. ಅವರೆಲ್ಲರಿಗೂ ಠಾಣೆಯಲ್ಲಿ ಅಮಾನುಷವಾಗಿ ಥಳಿಸಲಾಗಿತ್ತು. ಪೊಲೀಸರಿಂದ ಹಲ್ಲೆಗೊಳಗಾದ ಆರೋಪಿಗಳ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಪೊಲೀಸ್ ದೌರ್ಜನ್ಯ ಸಂಬಂಧ ಆರೋಪಿ ಅವಿನಾಶ್ ತಂದೆ ವೇಣುನಾಥ ದೂರು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ, ಪಿಎಸ್‌ಐ ಮತ್ತು ಪೇದೆಯನ್ನು ಅಮಾನತುಗೊಳಿಸಲಾಗಿದೆ. ಪುತ್ತೂರಿನ ಡಿವೈಎಸ್ಪಿ ವೀರಯ್ಯ ಹಿರೇಮಠ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
“ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ ಇಲಾಖಾ ವಿಚಾರಣೆಯ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪುತ್ತೂರು ಡಿವೈಎಸ್ಪಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು” ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲೇ ಆರೋಪಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಈ ಪ್ರಕರಣದ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.

ಹಲ್ಲೆಗೊಳಗಾದ ಆರೋಪಿಗಳಲ್ಲಿ ಅವಿನಾಶ್ ಮತ್ತು ಮತ್ತೊಬ್ಬರು ಬುಧವಾರ ರಾತ್ರಿ ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರೂ ಹಲ್ಲೆಗೊಳಗಾದ ಆರೋಪಿಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, “ಯಾರ ಪ್ರಚೋದನೆಗೆ ಒಳಗಾಗಿ ಪೊಲೀಸರು ಈ ರೀತಿ ಕೃತ್ಯ ನಡೆಸಿದ್ದಾರೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಿವೈಎಸ್ಪಿ ಕಚೇರಿಯಲ್ಲೇ ಪಿಎಸ್‌ಐ ಹಾಗೂ ಸಿಬ್ಬಂದಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಅವರನ್ನು ಅಮಾನತುಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಪುತ್ತೂರಿನ ಪುಣ್ಯಭೂಮಿಯಲ್ಲಿ ಪೈಶಾಚಿಕ ವರ್ತನೆ ತೋರಿದ ಇಂತಹ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅವಕಾಶ ಕೊಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಲ್ಲೆಗೊಳಗಾದ ಆರೋಪಿಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ನೂತನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳೆದು ಬಂದ ಹಾದಿ
ಘಟನೆ ಹಿನ್ನೆಲೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನಾಯ ಸೋಲು ಅನುಭವಿಸಿದ ಹಿನ್ನೆಲೆ ಪುತ್ತೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರ ಫೋಟೋವುಳ್ಳ ಬ್ಯಾನರ್ ಹಾಕಿ, ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾದವ, ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಅವರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಅಮಾನವೀಯವಾಗಿ ಥಳಿಸಿದ್ದರು.
ಪೊಲೀಸರಿಂದ ಹಲ್ಲೆಗೆ ಒಳಗಾದ ಯುವಕರು ನಡೆಯಲಾಗದ ಸ್ಥಿತಿಯಲ್ಲಿ ಪೊಲೀಸ್ ಠಾಣೆಯಿಂದ ಹೊರಬರುವ ಮತ್ತು ಅವರ ಮೈಮೇಲೆ ಆಗಿದ್ದ ಗಾಯಗಳ ಫೋಟೊ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಯನ್ನು ಖಂಡಿಸಿದ್ದ ಸಾರ್ವಜನಿಕರು, ಮುಖಂಡರು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.