ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ, ಕವಿ ಹಾಗೂ ಕತೆಗಾರ ಅಬ್ದುಲ್ ರಶೀದ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಮ್ಮೇಳನವು ಮೇ 29 ಮತ್ತು 30ರಂದು ಕುಶಾಲನಗರ ತಾಲೂಕಿನ ಸುಂಟಿಕೊಪ್ಪದಲ್ಲಿ ನಡೆಯಲಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ 11ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಿ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದೆ.
ಅಬ್ದುಲ್ ರಶೀದ್ ಅವರು ಕನ್ನಡದ ಪ್ರಮುಖ ಬರಹಗಾರ, ಕವಿ, ಸಂಪಾದಕ ಹಾಗೂ ಅನುವಾದಕರಾಗಿದ್ದಾರೆ. 2004ರಲ್ಲಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದಿರುವ ಅವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ 2025ರ ಫೆಬ್ರವರಿ 28ರಂದು ನಿವೃತ್ತರಾಗಿದ್ದಾರೆ.
1965ರ ಫೆಬ್ರವರಿ 28ರಂದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಜನಿಸಿದ ರಶೀದ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅವರು ‘ಕೆಂಡಸಂಪಿಗೆ’ ಮತ್ತು ‘ಮೈಸೂರುಪೋಸ್ಟ್’ ಆನ್‌ಲೈನ್ ನಿಯತಕಾಲಿಕೆಗಳ ಸಂಪಾದಕರಾಗಿದ್ದು, ಹಲವು ಕಾದಂಬರಿ, ಕಥಾಸಂಕಲನ, ಕವನ ಸಂಕಲನ ಹಾಗೂ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಹೆಮಿಂಗ್ವೇ, ಕ್ಯಾಮುಸ್, ರೂಮಿ ಸೇರಿದಂತೆ ಅನೇಕ ಖ್ಯಾತ ಸಾಹಿತ್ಯಕರ್ತರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರ ಪ್ರಮುಖ ಕೃತಿಗಳಲ್ಲಿ ‘ಹೂವಿನಕೊಲ್ಲಿ’, ‘ಕೀರ್ತಿ ಪತಾಕೆ’, ‘ಪ್ರಾಣಪಕ್ಷಿ’ ಸೇರಿದಂತೆ ಹಲವಾರು ಕಥಾಸಂಕಲನಗಳು ಗಮನಾರ್ಹವಾಗಿವೆ. ‘ನನ್ನ ಪಾಡಿಗೆ ನಾನು’ ಮತ್ತು ‘ನರಕದ ಕೆನ್ನಲಿಗೆಯಂತ ನಿನ್ನ ಬೆನ್ನ ಹುರಿ’ ಎಂಬ ಕವನ ಸಂಕಲನಗಳು ಜನಪ್ರಿಯವಾಗಿವೆ.
ರಶೀದ್ ಅವರು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಉತ್ಸವಗಳಲ್ಲಿ ಭಾಷಣಕಾರರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಹಿತ್ಯ ಅಕಾಡೆಮಿಯನ್ನು ಪ್ರತಿನಿಧಿಸಿದ್ದಾರೆ.
ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಬಾಕಿ ವೇತನಕ್ಕೆ ಆಕ್ರೋಶ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಅಧಿಕಾರಿಗಳಿಗೆ ಮನವಿ
ಈ ಮೂಲಕ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುಭವಸಂಪನ್ನ ಸಾಹಿತ್ಯಿಕರ ನೇತೃತ್ವ ದೊರೆತಿದ್ದು, ಸಮ್ಮೇಳನ ಯಶಸ್ವಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.




