ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.
ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಗೆಲುವಿನ ಆಶಾಭಾವನೆಯಲ್ಲಿದ್ದ ಬಿಜೆಪಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಕಾಂಗ್ರೆಸ್ ನಾಯಕರಿಗೆ ಈ ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಇತ್ತಾದರೂ ಇಷ್ಟು ಪ್ರಮಾಣದ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಅವರಿಗೆ ಕನಸಿನಲ್ಲೂ ಇರಲಿಲ್ಲ. ಬಿಜೆಪಿ ನಾಯಕರಿಗೆ ತಮ್ಮ ಅಭ್ಯರ್ಥಿ ಸೋಲಬಹುದೆಂಬ ಆತಂಕ ಒಳಗಡೆ ಎಲ್ಲೋ ಒಂದು ಕಡೆ ಇದ್ದರೂ ಈ ರೀತಿ ದಯನೀಯವಾಗಿ ಸೋಲಬಹುದೆಂದು ಅವರು ಊಹೆ ಮಾಡಿರಲಿಲ್ಲ.
1952ರ ಮೊದಲನೇ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು 2023ರವರೆಗೆ ಈ ಕ್ಷೇತ್ರದ ಇತಿಹಾಸದಲ್ಲಿ ಯಾವುದೇ ವಿಜೇತ ಅಭ್ಯರ್ಥಿಯೂ ಇಷ್ಟು ಭಾರೀ ಮತಗಳ ಅಂತರದಿಂದ ಗೆದ್ದಿರಲಿಲ್ಲ. 22,332 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆದ್ದಿರುವುದು ಈಗ ಹೊಸ ದಾಖಲೆಯಾಯಿತು.
ಮಾಧ್ಯಮಗಳ ಸಮೀಕ್ಷೆಗಳು ಎಗ್ಸಿಟ್ ಪೋಲ್‌ಗಳು ಗುಪ್ತಚರ ಇಲಾಖೆ ವರದಿ ಕಾಂಗ್ರೆಸ್ ಇಷ್ಟೊಂದು ಅಗಾಧ ಪ್ರಮಾಣದ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ಅಂದಾಜು ಮಾಡಿರಲಿಲ್ಲ. ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 20,000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಈ ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮತದಾನದ ನಂತರ ನಿಖರವಾಗಿ ಹೇಳಿದ್ದರು. ಅವರ ಲೆಕ್ಕಾಚಾರ ತಪ್ಪಲಿಲ್ಲ. ಕ್ಷೇತ್ರದಲ್ಲಿ ಮೂರು ವಾರಗಳ ಕಾಲ ಬೀಡುಬಿಟ್ಟು ಹೆಣೆದ ಅವರ ಚುನಾವಣೆ ರಣತಂತ್ರ ಹುಸಿಯಾಗಲಿಲ್ಲ. ಕಾಂಗ್ರೆಸ್ ಪಕ್ಷದ ಈ ಗೆಲುವಿಗೆ ಒಂದಲ್ಲ ಎರಡಲ್ಲ ಅನೇಕ ಕಾರಣಗಳಿವೆ. ಹನಿಹನಿ ಕೂಡಿದರೆ ಹಳ್ಳ ತೆನೆತೆನೆಗೂಡಿದರೆ ಬಳ್ಳ ಎನ್ನುವಂತೆ ಕ್ಷೇತ್ರದ ಎಲ್ಲ ಧರ್ಮ ಜಾತಿಗಳ ಮತಗಳು ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಹರಿದು ಬಂದುದರಿಂದ ಇಂತಹುದೊಂದು ನ ಭೂತೋ ಎನ್ನುವ ಗೆಲುವು ಸಾಧ್ಯವಾಯಿತು.
ಇದು ಉಪ ಚುನಾವಣೆ ಆಗಿದ್ದುದರಿಂದ ಎರಡೂ ಪಕ್ಷಗಳ ನಾಯಕರು ಕಾರ್ಯಕರ್ತರು ಪ್ರತಿಯೊಂದು ಹಳ್ಳಿಗಳು ಪಟ್ಟಣಗಳು ನಗರದಲ್ಲಿ ಒಂದೊಂದು ಮತವನ್ನು ಲೆಕ್ಕದಲ್ಲಿಟ್ಟುಕೊಂಡು ಪ್ರಚಾರ ಮಾಡಿದ್ದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಗ್ರಹಾರಗಳಿಂದ ಹಿಡಿದು ಅಲೆಮಾರಿಗಳ ಜೋಪಡಿಗಳವರೆಗೂ ಹೋಗಿ ಮತ ಯಾಚನೆ ಮಾಡಿದ್ದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈಹಿಡಿದವು. ಆ ಪಕ್ಷದ ಎಲ್ಲ ಧರ್ಮ ಜಾತಿಗಳ ಸಚಿವರು, ಶಾಸಕರು, ಮುಖಂಡರು ತಮ್ಮ ತಮ್ಮ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಕಡೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಒಂದೆಡೆ ಅಹಿಂದ ಮತಗಳ ಕ್ರೋಢೀಕರಣಗೊಂಡರೆ ಇನ್ನೊಂದೆಡೆ ಲಿಂಗಾಯತ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಂದವು.

ದಿ.ಹುಲ್ಲಪ್ಪ ಮೇಟಿ ಅವರ ಸಾವಿನ ಅನುಕಂಪವೂ ನಿರ್ಧಿಷ್ಟ ಸಮುದಾಯದ ಮೇಲೆ ಪರಿಣಾಮ ಬೀರಿತು. ಚುನಾವಣೆ ಪ್ರಚಾರದ ಆರಂಭದ ದಿನಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದು ಕಾಣುವಂತಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಸಿಎಂ, ಡಿಸಿಎಂ ಮತ್ತಿತರ ಸಚಿವರು ಬಂದು ಭಾಗವಹಿಸಿದರೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಂದು ಜನ ಸೇರಿರಲಿಲ್ಲ. ಪ್ರಚಾರದ ಆರಂಭದ ದಿನಗಳಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದಿರುವಂತಹ ವಾತಾವರಣ ಕ್ಷೇತ್ರದಲ್ಲಿ ಕಂಡುಬಂದಿತ್ತು. ಮುಂದೆ ಬರುಬರುತ್ತ ಪ್ರಚಾರದಲ್ಲಿ ಎರಡೂ ಪಕ್ಷಗಳ ಅಬ್ಬರ ಜೋರಾದುದರಿಂದ ಯಾರು ಗೆಲ್ಲಬಹುದು ಎಂದು ಸುಲಭವಾಗಿ ಹೇಳಲಾಗದ ಸ್ಥಿತಿ ಇತ್ತು. ಕಾಂಗ್ರೆಸ್ ಪರವಾಗಿ ಗುಪ್ತಗಾಮಿನಿಯಾಗಿದ್ದ ಅಲೆ ಆ ಪಕ್ಷವನ್ನು ಸುಲಭವಾಗಿ ಗೆಲುವಿನ ವೇದಿಕೆಗೆ ಕರೆತಂದಿತು.
ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಏಳೆಂಟು ದಿನಗಳು ದೊಡ್ಡ ಪಟ್ಟಣ, ಸಣ್ಣ ಹಳ್ಳಿಗಳೆನ್ನದೆ 17 ಕಡೆಗಳಲ್ಲಿ ಬಹಿರಂಗ ಭಾಷಣ ಮಾಡಿ ಮತ ಯಾಚಿಸಿದರು. ಲಿಂಗಾಯತ ಮುಖಂಡರ ಪ್ರತ್ಯೇಕ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಬಹಿರಂಗ ಪ್ರಚಾರದ ಕೊನೆಯ ದಿನದವರೆಗೂ ಸಿಎಂ ಬಾಗಲಕೋಟೆ ನಗರದಲ್ಲಿ ಇದ್ದುಕೊಂಡು ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಅವರೊಂದಿಗೆ ಕುಳಿತು ಚುನಾವಣೆ ರಣತಂತ್ರ ಹೆಣೆದರು. ಚುನಾವಣೆ ಚಾಣಕ್ಯ ಜಾರಕಿಹೊಳಿ ಅವರ ಪ್ಲ್ಯಾನ್ ಎ, ಪ್ಲ್ಯಾನ್ ಬಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿತು.
ಅತ್ತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸ್ಥಿತಿ ನೆಚ್ಚಿಕೊಂಡ ಎಮ್ಮೆ ಕೋಣ ಆದಂತಾಯಿತು. ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಬಾಗಲಕೋಟೆ ನಗರದ ವಿದ್ಯಾಗಿರಿ ನವನಗರ ಹಳೆ ನಗರದಲ್ಲಿ ಬಿಜೆಪಿಗೆ ಮತಗಳು ಬರಲಿಲ್ಲ. ಬಾಗಲಕೋಟೆ ನಗರದಲ್ಲಿ ಚುನಾವಣೆಗೆ ಮುಂಚೆ ಶಿವಾಜಿ ಜಯಂತಿ ಆಚರಣೆ ಸಮಯದಲ್ಲಿ ನಡೆದ ಗಲಭೆಯಾಗಲಿ, ಬಸನಗೌಡ ಪಾಟೀಲ ಯತ್ನಾಳ ಅವರು ಕ್ಷೇತ್ರದಲ್ಲಿ ಮಾಡಿದ ಹಿಂದುತ್ವದ ಪರವಾದ ಪ್ರಚೋದನಕಾರಿ ಭಾಷಣವಾಗಲಿ ಚರಂತಿಮಠ ಅವರಿಗೆ ಮತಗಳನ್ನು ತಂದುಕೊಡಲಿಲ್ಲ.
ಇದನ್ನೂ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಮನರೇಗಾ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ವ್ಯವಸ್ಥೆಗೆ ಸಿಇಒ ಸೂಚನೆ
ಮಾಜಿ ಸಚಿವ ಸಿ ಸಿ ಪಾಟೀಲ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾಡಿದ ಭಾಷಣ ಯಡವಟ್ಟು ಮಾಡಿತೇ ವಿನಃ ಬಿಜೆಪಿಗೆ ಮತಗಳನ್ನು ತಂದುಕೊಡಲಿಲ್ಲ. ಮೋದಿ ಅವರ ಹೆಸರು ಇಲ್ಲಿ ಸ್ವಲ್ಪ ಕೂಡ ಕೆಲಸ ಮಾಡಲಿಲ್ಲ. ಚರಂತಿಮಠ ಅವರ ಪರವಾಗಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡುವ ಕಾರ್ಯಕರ್ತರ ಪಡೆ ಇತ್ತು. ಬಾಗಲಕೋಟೆ ಬಿಜೆಪಿಯ ಭದ್ರಕೋಟೆ ಈ ಕ್ಷೇತ್ರ ಚರಂತಿಮಠ ಅವರ ಹಿಡಿತದಲ್ಲಿದೆ ಎಂಬ ಮಾತುಗಳು ಈ ಚುನಾವಣೆ ಫಲಿತಾಂಶದಿಂದ ಹುಸಿಯಾದವು. ಮತಗಳ ಎಣಿಕೆಯ ಆರಂಭದ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ತನ್ನ ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು. ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳ ಮತದಾರರು ಕಾಂಗ್ರೆಸ್‌ಗೆ ಒಲವು ತೋರಿಸಿರುವುದು ಇದರಿಂದ ಸಾಬೀತಾಯಿತು.

ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ



