ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಎದುರಿಸಿ ಪ್ರಗತಿ ಸಾಧಿಸಲು ‘ಅಭ್ಯುದಯ’ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಂಪೂರ್ಣ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮತ್ತು ತಯಾರಿಯನ್ನು ಉತ್ತೇಜಿಸಲು ಆಯೋಜಿಸಿದ್ದ ‘ಅಭ್ಯುದಯ’ ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲಿ ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತ ದಿನವಾಗಿದೆ. ‘ಅಭ್ಯುದಯ’ ಎಂದರೆ ಪ್ರಗತಿ ಮತ್ತು ಸಮೃದ್ಧಿ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರಿಂದ ಉತ್ತಮ ಉದ್ಯೋಗಾವಕಾಶ ಪಡೆಯಲು ವಿಳಂಬವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಪದವಿಪೂರ್ವ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಜಾಗೃತಿ, ಪರಿಶ್ರಮದ ವಿಧಾನಗಳು ಹಾಗೂ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಕ್ರಮಬದ್ಧ ಮಾರ್ಗದರ್ಶನದ ಕೊರತೆಯಿದೆ. ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ದೆಹಲಿ, ಚೆನ್ನೈ ಮೊದಲಾದ ನಗರಗಳಿಗೆ ತೆರಳಬೇಕಾಗುತ್ತಿತ್ತು. ಈಗ ಜಿಲ್ಲಾಡಳಿತವೇ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಅವಕಾಶ ತಂದುಕೊಟ್ಟಿದೆ. ಜಿಲ್ಲೆಯ ಪ್ರತೀ ಹಳ್ಳಿಯಿಂದಲೂ ಒಬ್ಬರು ಅಥವಾ ಇಬ್ಬರು ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವಂತಾದರೆ ಗ್ರಾಮೀಣ ಪ್ರದೇಶಗಳ ಚಿತ್ರಣವೇ ಬದಲಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪದವಿಪೂರ್ವ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಸಲು ಈಗಾಗಲೇ ಜಿಲ್ಲೆಯ 20 ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.

ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಿ.ಎಸ್. ಕೇದಾರ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಯಾವುದೇ ಕೀಳಿರಿಮೆ ಹೊಂದಬಾರದು. ಪರಿಶ್ರಮ ಮತ್ತು ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನೂ ಗೆಲ್ಲಬಹುದು. ಅಕಾಡೆಮಿಯು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಹಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಿಯುಸಿ ಅಥವಾ ಪದವಿ ನಂತರ ವಿಷಯ ಆಯ್ಕೆ ಮತ್ತು ವೃತ್ತಿ ಮಾರ್ಗದರ್ಶನದ ಕೊರತೆ ಇದೆ. ಇದರಿಂದ ಸಾಕಷ್ಟು ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ. ಶಿಕ್ಷಣದ ಜೊತೆಗೆ ವೃತ್ತಿ ಮಾರ್ಗದರ್ಶನವೂ ಅಗತ್ಯವಾಗಿದೆ ಎಂದು ಹೇಳಿದರು.
ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹುರಿದುಂಬಿಸಬೇಕು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದಂತೆ ಮಕ್ಕಳು ದೊಡ್ಡ ಕನಸು ಕಾಣಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಮನೋಭಾವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ನೆರವಾಗುವ ಕುರಿತು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ನಡುವೆ ಕರಾರು ಪತ್ರಕ್ಕೆ ಸಹಿ ಹಾಕಲಾಯಿತು.
ಈ ಸುದ್ದಿ ಓದಿದ್ದೀರಾ?ಮೈಸೂರು | ಕುವೆಂಪು ಶೈಕ್ಷಣಿಕ ಚಿಂತನೆಗಳ ಕುರಿತು ವಿಚಾರಗೋಷ್ಠಿ ಮೇ.9ರಂದು
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಅಕಾಡೆಮಿಯ ನಾರಾಯಣಪ್ರಸಾದ್, ಸಂಪನ್ಮೂಲ ವ್ಯಕ್ತಿ ದೀಪಕ್, ವಿಷಯ ಪರಿವೀಕ್ಷಕರಾದ ಅಂಥಾಲಿ, ಕನಕ್ಷಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.




