ಸಮಾಜದಲ್ಲಿ ಶತಮಾನಗಳಿಂದ ಶೋಷಣೆ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಹಿಂದ ಚಳವಳಿ ಮಹತ್ವದ ಪಾತ್ರ ವಹಿಸಿದೆ ಎಂದು ಡಾ. ಭೀಮಣ್ಣ ಮೇಟಿ ಅವರು ಹೇಳಿದರು.
ಅಹಿಂದ ಹೋರಾಟಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಕಿತ್ತೂರು ಕರ್ನಾಟಕದ ಸಂಘಟನಾ ಪ್ರವಾಸದ ಭಾಗವಾಗಿ ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ಅಹಿಂದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಾ. ಭೀಮಣ್ಣ ಮೇಟಿ ಅವರು, ರಾಜ್ಯದಲ್ಲಿ ತಳ ಸಮುದಾಯಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ಸಂಘಟಿತ ಹೋರಾಟದ ರೂಪ ನೀಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಅಹಿಂದ ಹೋರಾಟ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ಶೋಷಿತ ಮತ್ತು ಅವಕಾಶವಂಚಿತ ಸಮುದಾಯಗಳ ಧ್ವನಿಯಾಗಬೇಕು. ಅಹಿಂದ ಚಳವಳಿಯ ಆಶಯಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಸಮುದಾಯಗಳ ಜಯಂತಿಗಳನ್ನು ಆಯಾ ಸಮುದಾಯಗಳಿಗಷ್ಟೇ ಸೀಮಿತಗೊಳಿಸದೆ, ಎಲ್ಲ ಸಮುದಾಯಗಳ ಜನರು ಪರಸ್ಪರ ಭಾಗವಹಿಸಿ, ಒಗ್ಗಟ್ಟಿನಿಂದ ಆಚರಿಸಬೇಕು. ಮಹನೀಯರ ವಿಚಾರಧಾರೆಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕು. ಜಾತಿ, ಧರ್ಮದ ಗೋಡೆಗಳನ್ನು ಮೀರಿ ಸಾಮಾಜಿಕ ಸಾಮರಸ್ಯ ಬೆಳೆಸುವ ಕೆಲಸವಾಗಬೇಕು. ಇದಕ್ಕಾಗಿ ನಾವೆಲ್ಲರೂ ಒಂದೇ ವೇದಿಕೆಯಡಿ ಸೇರಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
*ಅಹಿಂದ ಹೋರಾಟಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಈ ಸಂದರ್ಭದಲ್ಲಿ ಸಂಘಟನೆಯ ಹಿಂದಿನ ಹೋರಾಟ, ಸಾಧನೆ ಹಾಗೂ ಮುಂದಿನ ಸವಾಲುಗಳನ್ನು ಅವಲೋಕಿಸುವ ಅಗತ್ಯವಿದೆ. ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ಅಧಿಕಾರದಲ್ಲಿ ಅವಕಾಶವಂಚಿತ ಸಮುದಾಯಗಳಿಗೆ ನ್ಯಾಯಯುತ ಪಾಲು ದೊರಕಿಸುವ ಆಶಯದೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಭರಮಣ್ಣ ಟೊಳ್ಳಿ ಮಾತನಾಡಿ, ಅಹಿಂದ ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಾಜು ಆಲಗೂರು, ಶಾಸಕ ವಿ.ಸಿ. ನಾಗಠಾಣ, ಸೋಮನಾಥ ಕಳ್ಳಿಮನಿ, ವಸಂತ ಹೊನಮೊಡೆ, ಫಯಾಜ್ ಕಲಾದಗಿ, ಅಬ್ದುಲ್ ಖಧಿರ್, ಚೆನ್ನು ಕಟ್ಟಿಮನಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಕಿತ್ತೂರು ಕರ್ನಾಟಕದ ಸಂಘಟನಾ ಪ್ರವಾಸದ ಅಂಗವಾಗಿ ನಡೆದ ಈ ಸಭೆಯಲ್ಲಿ ಅಹಿಂದ ಚಳವಳಿಯ ಆಶಯಗಳನ್ನು ಜನರಿಗೆ ತಲುಪಿಸುವುದು, ವಿವಿಧ ಸಮುದಾಯಗಳ ನಡುವೆ ಐಕ್ಯತೆ ಬೆಳೆಸುವುದು ಹಾಗೂ ಸಾಮಾಜಿಕ ನ್ಯಾಯದ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಕುರಿತು ಚರ್ಚಿಸಲಾಯಿತು.



