ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ ಹಾಗೂ ಪತ್ರಕರ್ತರಾದ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಈ ಆಯ್ಕೆ ನಡೆದಿದೆ.
ಮಡಿಕೇರಿ ತಾಲ್ಲೂಕಿನ ಕಡಂಗ (ಅರಪಟ್ಟು) ಗ್ರಾಮದಲ್ಲಿ ಮೇ 20, 2026ರಂದು ನಡೆಯಲಿರುವ ಈ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರಲ್ಲಿ ಈಗಾಗಲೇ ಉತ್ಸಾಹ ಮೂಡಿದೆ.
ಐತಿಚಂಡ ರಮೇಶ್ ಉತ್ತಪ್ಪ ಅವರು ಕೊಡಗು ಮೂಲದ ಹಿರಿಯ ಪತ್ರಕರ್ತರು ಹಾಗೂ ಹೆಸರಾಂತ ಲೇಖಕರಾಗಿದ್ದಾರೆ. ಮಡಿಕೇರಿ ತಾಲೂಕಿನ ಕರಡ ಗ್ರಾಮದಲ್ಲಿ ಜನಿಸಿದ ಅವರು ಕೊಡಗು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು, ಕನ್ನಡ ಜಾನಪದ ಮತ್ತು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪತ್ರಿಕೋದ್ಯಮದ ಮೂಲಕ ವೃತ್ತಿಜೀವನ ಆರಂಭಿಸಿದ ಅವರು ದೀರ್ಘಕಾಲದಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಮೈಸೂರಿನ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ ನೀಡಿರುವ ರಮೇಶ್ ಉತ್ತಪ್ಪ ಅವರು ಇದುವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವನ್ಯಜೀವಿ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು, ವಿಶೇಷವಾಗಿ ಆನೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ಸುಮಾರು 10ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಕೊಡವ ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ನೀಡಿದ್ದಾರೆ.
ಅವರ ಪ್ರಮುಖ ಕೃತಿಗಳಲ್ಲಿ ‘ಅಭಿಮನ್ಯು ದಿ ಗ್ರೇಟ್’, ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿನ ಕುರಿತಾದ ಕೃತಿ; ‘ಆನೆ ಲೋಕದ ವಿಸ್ಮಯ’ (ಇಂಗ್ಲಿಷ್‌ನಲ್ಲಿ ‘The Talking Elephant’ ಹೆಸರಿನಲ್ಲಿ ಅನುವಾದಗೊಂಡಿದೆ); ‘ಕುಶಾ ಕಿ ಕಹಾನಿ’, ದುಬಾರೆ ಆನೆ ಶಿಬಿರದ ಕುಶ ಆನೆಯ ಕಥೆ ಹಾಗೂ ‘ಸಾವಿನ ಸತ್ಯ’, ದಸರಾ ಆನೆ ಅರ್ಜುನನ ಸಾವಿನ ತನಿಖಾ ವರದಿ ಒಳಗೊಂಡ ಕೃತಿ ಪ್ರಮುಖವಾಗಿವೆ.
ಇದಲ್ಲದೆ, ಅವರ ‘ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು’ ಎಂಬ ಲೇಖನವು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಎಸ್ಸಿ ಪಠ್ಯಪುಸ್ತಕದಲ್ಲಿಯೂ ಸೇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಬ್ದುಲ್ ರಶೀದ್ ಸರ್ವಾಧ್ಯಕ್ಷರಾಗಿ ಆಯ್ಕೆ
ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ರಮೇಶ್ ಉತ್ತಪ್ಪ ಅವರ ಆಯ್ಕೆ ಸಮ್ಮೇಳನದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಾಹಿತ್ಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.




