ನಟ ಜೋಸೆಫ್ ವಿಜಯ್ ಅವರ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK) ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಯಶಸ್ಸು ಕಂಡಿದೆ. ಸದ್ಯ ವಿಜಯ್ ಮುಖ್ಯಮಂತ್ರಿಯಾಗಲು, ಸರ್ಕಾರ ರಚಿಸಲು ಬಹುಮತ ಪಡೆಯುವ ತಯಾರಿಯಲ್ಲಿದ್ದಾರೆ. ಈ ನಡುವೆ ವಿಜಯ್‌ಗೆ ಮಹಾತ್ಮ ಗಾಂಧಿ ಮತ್ತು ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರ ಮೊಮ್ಮಗ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾದ ಗೋಪಾಲಕೃಷ್ಣ ಗಾಂಧಿ ಬಹಿರಂಗ ಪತ್ರ ಬರೆದಿದ್ದಾರೆ.
“ನಿಮ್ಮ ಭವ್ಯ ವಿಜಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಿಮ್ಮ ಈ ಪಯಣವು ಅತ್ಯಂತ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ. ನಾನು ನಿಮ್ಮ ಮತ್ತು ನನ್ನ ಈ ರಾಜ್ಯದ ಒಬ್ಬ ಮತದಾರ. ಆದರೆ ಏಪ್ರಿಲ್ 23ರಂದು ನಿಮಗೆ ಮತ ನೀಡಿದ ಶೇ. 35ರಷ್ಟು ಮತದಾರರಲ್ಲಿ ನಾನೊಬ್ಬನಲ್ಲ. ಬದಲಾಗಿ ನಿಮಗೆ ಮತ ನೀಡದ ಶೇ. 65ರಷ್ಟು ಜನರಲ್ಲಿ ನಾನೊಬ್ಬ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಟಿವಿಕೆ ಜೊತೆ ಕೈಜೋಡಿಸುವ ಸುಳಿವು ನೀಡಿದ ಕಾಂಗ್ರೆಸ್
“ವಿಜಯ್ ಯುವಕರನ್ನು ಆಕರ್ಷಿಸುತ್ತಿದ್ದಾರೆ ಎಂಬುದು ನಿಜ. ಆದರೆ ಗೆಲ್ಲಲಾರರು. ಮತಗಳು ಎಂದಿನಂತೆ ಸಾಂಪ್ರದಾಯಿಕ ಪಕ್ಷಗಳಿಗೇ ಹೋಗುತ್ತವೆ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನೇ ನಾನು ಕೂಡ ನಂಬಿದ್ದೆ. ಹಾಗಾಗಿ ಮೇ 4ರಂದು ಫಲಿತಾಂಶಗಳು ಹೊರಬಂದಾಗ ನಾನು ನಿಜಕ್ಕೂ ಆಶ್ಚರ್ಯಚಕಿತನಾದೆ. ಆ ಆಶ್ಚರ್ಯದ ಬೆನ್ನಲ್ಲೇ ಒಂದು ಆಲೋಚನೆ ಬಂದಿತು. ನೀವು ಹೊಸಬರು, ಅಂದರೆ ಅನುಭವ ಕಡಿಮೆ ಇರಬಹುದು. ಆದರೆ ಹೊಸ ಆಲೋಚನೆಗಳನ್ನು ಹೊಂದಿರುವವರು. ಭ್ರಷ್ಟಾಚಾರ ಅಥವಾ ಕುತಂತ್ರದ ರಾಜಕಾರಣಕ್ಕೆ ಇನ್ನೂ ಬಲಿಯಾಗಿಲ್ಲ ಎಂಬ ಆಲೋಚನೆ ಬಂದಿತು” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಯಾವುದೇ ಸ್ವಾರ್ಥವಿಲ್ಲದ ವ್ಯಕ್ತಿಯೊಬ್ಬರು ನಿಮಗೆ ಕೆಲವು ಕಟು ಸತ್ಯಗಳನ್ನು ಹೇಳಬಹುದೇ ಅಂದುಕೊಂಡೆ. ಆದರೆ ಅಂತಹವರು ಯಾರೂ ಇಲ್ಲವೆಂದು ನನಗೆ ಅನ್ನಿಸಿತು. ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಸ್ಟ್ಯಾಲಿನ್ ಅವರ ಮುಂದೆ ಕೆಲವು ವಿಚಾರಗಳನ್ನು ಇಟ್ಟಂತೆಯೇ, ಇಂದು ನಿಮ್ಮ ಮುಂದೆಯೂ ಕೆಲವು ಆಲೋಚನೆಗಳನ್ನು ಇಡುವ ಧೈರ್ಯ ಮಾಡುತ್ತಿದ್ದೇನೆ” ಎಂದು ಹೇಳಿರುವ ಗೋಪಾಲಕೃಷ್ಣ ಗಾಂಧಿ ಒಟ್ಟು ಆರು ವಿಚಾರಗಳನ್ನು ಪತ್ರದಲ್ಲಿ ಬರೆದಿದ್ದಾರೆ.
ಪತ್ರದಲ್ಲಿ ಇರುವ ಆರು ವಿಚಾರಗಳೇನು?
- ನೀವು ಮತಗಳನ್ನು ಗೆದ್ದಿದ್ದೀರಿ. ಆದರೆ ಸದನದಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವುದು ಇನ್ನೂ ಬಾಕಿ ಇದೆ. ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಜಾತ್ಯತೀತ ತತ್ವಗಳನ್ನು ರಕ್ಷಿಸುವುದು ನಿಮ್ಮ ಮೊದಲ ಆದ್ಯತೆಯಾಗಲಿ. ನಿಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಆತುರದಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರಬೇಡಿ.
- ‘ನಿಮ್ಮ ಸಿದ್ಧಾಂತ ಏನು?’ ಎಂದು ಯಾರಾದರೂ ಕೇಳಿದರೆ ಗಾಬರಿಯಾಗಬೇಡಿ. “ನನ್ನ ಸಿದ್ಧಾಂತ ‘ಯಾವುದೇ ಸಿದ್ಧಾಂತ ಇಲ್ಲದಿರುವುದು’ ಎಂದು ಹೇಳಿ. ಜತೆಗೆ ‘ನನ್ನ ಮನಸ್ಸಾಕ್ಷಿಯೇ ನನ್ನ ದಾರಿ’ ಎಂದು ಹೆಮ್ಮೆಯಿಂದ ಹೇಳಿ.
- ಸದನವನ್ನು ಒಬ್ಬ ವಿಜೇತನಾಗಿ ಪ್ರವೇಶಿಸಿ, ಆದರೆ ಗೆಲುವಿನ ಅಹಂಕಾರ ಪ್ರದರ್ಶಿಸಬೇಡಿ. ಅಧ್ಯಯನಶೀಲತೆಗೆ ಆದ್ಯತೆ ನೀಡಿ. ಇದಕ್ಕೂ ಮುನ್ನ ಸಿಎಂ ಆಗಿದ್ದ ಸ್ಟ್ಯಾಲಿನ್ ಅವರು ಪೆರಿಯಾರ್ ಮತ್ತು ಅಣ್ಣಾ ದೊರೈ ಬೆಳೆಸಿದ ಆತ್ಮಗೌರವದ ಪರಂಪರೆಯಿಂದ ಬಂದವರು. ಸೋಲನ್ನು ಒಪ್ಪಿಕೊಂಡು ಅವರು ನೀಡಿದ ಹೇಳಿಕೆ ಅತ್ಯಂತ ಘನತೆಯಿಂದ ಕೂಡಿದೆ. ಅವರ ಬಳಿ ಅನುಭವವಿದೆ, ನಿಮ್ಮ ಬಳಿ ಹೊಸತನವಿದೆ. ಅವರು ನಿಮ್ಮ ಶತ್ರುವಲ್ಲ, ಮಾರ್ಗದರ್ಶಕರು. ಉದಯನಿಧಿ ಸ್ಟ್ಯಾಲಿನ್ ಅವರೊಂದಿಗಿನ ನಿಮ್ಮ ಸಂಬಂಧವು ನಡಾಲ್ ಮತ್ತು ಫೆಡರರ್ ನಡುವಿನ ಸ್ಪರ್ಧೆಯಂತೆ ಆರೋಗ್ಯಕರವಾಗಿರಲಿ; ಅದು ದ್ವೇಷದ ಹೋರಾಟವಾಗದಿರಲಿ.
- ನಿಮ್ಮ 108 ಶಾಸಕರಲ್ಲಿ ಕೇವಲ ಮೂವರಿಗೆ ಮಾತ್ರ ಶಾಸನಸಭೆಯ ಅನುಭವವಿದೆ. ಉಳಿದವರು ಅನುಭವಿ ನಾಯಕರಿಂದ ಕಲಿಯಬೇಕಿದೆ. ಸದನದಲ್ಲಿರುವ ಐವರು ಕಾಂಗ್ರೆಸ್ ಶಾಸಕರು ಕರ್ಮಯೋಗಿ ಕಾಮರಾಜರ್ ಅವರ ಪಕ್ಷದವರು ಎಂಬುದನ್ನು ನೆನಪಿಡಿ.
- ಸಚಿವಾಲಯದ ಅಧಿಕಾರಿಗಳನ್ನು ನಿಮ್ಮ ಕೈಕೆಳಗಿನ ಕೆಲಸಗಾರರೆಂದು ಭಾವಿಸದೆ, ಸಹೋದ್ಯೋಗಿಗಳಂತೆ ನೋಡಿ. ಅವರು ಭಟ್ಟಂಗಿತನವೇ ಸೇವೆ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ರಾಜಾಜಿ ಮತ್ತು ಸರ್ದಾರ್ ಪಟೇಲ್ ಅವರು ಹೇಳಿದಂತೆ, ಯಾವುದೇ ಭಯವಿಲ್ಲದೆ ತಮ್ಮ ನಿಷ್ಠುರವಾದ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿ. ಚಮಚಾಗಿರಿಗಿಂತ ಸೇವೆಯೇ ಮುಖ್ಯವೆಂದು ಅವರಿಗೆ ಮನವರಿಕೆ ಮಾಡಿಕೊಡಿ.
- ಕೊನೆಯದಾಗಿ ತಮಿಳುನಾಡಿನ ಆಡಳಿತದಲ್ಲಿ ದಕ್ಷತೆ ಮತ್ತು ಆರ್ಥಿಕ ಪ್ರಗತಿಯ ಜೊತೆಗೆ ಪರಿಸರ ರಕ್ಷಣೆಗೂ ಒತ್ತು ನೀಡಿ. ಭಾರತವನ್ನು ದ್ವೇಷಮುಕ್ತ ಮತ್ತು ಭಯಮುಕ್ತ ದೇಶವನ್ನಾಗಿ ಮಾಡಲು ನೀವು ದಾರಿದೀಪವಾಗಬೇಕು. ಕೊನೆಯದಾಗಿ ಒಂದು ವೈಯಕ್ತಿಕ ಮಾತು: ನಮ್ಮ ರಾಜ್ಯವನ್ನು ಮುನ್ನಡೆಸುತ್ತಿರುವ ಮೊದಲ ಕ್ರೈಸ್ತ ಮುಖ್ಯಮಂತ್ರಿ ನೀವು. ಇದು ತಮಿಳುನಾಡಿನ ಜಾತ್ಯತೀತ ಪರಂಪರೆಗೆ ಸಂದ ಗೌರವ. ಈ ಪರಂಪರೆಯನ್ನು ಎಂದೂ ಮರೆಮಾಚಬೇಡಿ, ವಳ್ಳುವರ್ ಕೂಡ ಅದನ್ನೇ ಬಯಸುತ್ತಿದ್ದರು. ಮುಖ್ಯಮಂತ್ರಿಯಾಗುವ ನಿಮಗೆ ಕೇವಲ ಯಶಸ್ಸು (ವೆಟ್ರಿ) ಮಾತ್ರವಲ್ಲ, ಸಾರ್ಥಕತೆ ಸಿಗಲಿ ಎಂದು ಹಾರೈಸುತ್ತೇನೆ.




