ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯು ಇಂದು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2026ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಭಾರತವು ಈಗಾಗಲೇ ಪೋಲಿಯೊ ಮುಕ್ತ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದರೂ, ಕೆಲವು ನೆರೆಹೊರೆಯ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೊ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸರ್ಕಾರದ ನಿರ್ದೇಶನದಂತೆ ಸತತ 31ನೇ ವರ್ಷವೂ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಜೂನ್ 28, 29 ಹಾಗೂ 30ರಂದು ಮೊದಲ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಆಸ್ಪತ್ರೆ, ಹೆಚ್.ಡಿ.ಕೋಟೆ, ಹಂಪಾಪುರ, ಚಿಕ್ಕನಂದಿ, ಅಣ್ಣೂರು, ಕ್ಯಾತನಹಳ್ಳಿ, ಎನ್.ಬೆಳತ್ತೂರು, ಡಿ.ಬಿ.ಕುಪ್ಪೆ, ಮಾದಾಪುರ, ಹೆಬ್ಬಲಗುಪ್ಪೆ ಹಾಗೂ ಎನ್.ಬೇಗೂರು ಸೇರಿದಂತೆ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಅಂತರಸಂತೆ ಸಂಚಾರಿ ಗಿರಿಜನ ಆರೋಗ್ಯ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಜಾರಿಗೊಳ್ಳಲಿದೆ.
ತಾಲ್ಲೂಕಿನ 1,93,447 ಜನಸಂಖ್ಯೆ ವ್ಯಾಪ್ತಿಯ 58 ಉಪಕೇಂದ್ರಗಳಡಿ ಬರುವ 269 ಗ್ರಾಮಗಳಲ್ಲಿ 0 ರಿಂದ 5 ವರ್ಷದೊಳಗಿನ 12,954 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 130 ಲಸಿಕಾ ಬೂತ್‌ಗಳು ಹಾಗೂ ಹೆಚ್.ಡಿ.ಕೋಟೆ ಬಸ್ ನಿಲ್ದಾಣ ಮತ್ತು ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ 2 ಟ್ರಾನ್ಸಿಟ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ 520 ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, ವೈದ್ಯಾಧಿಕಾರಿಗಳು ಸೇರಿದಂತೆ 26 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ವಿಶೇಷವಾಗಿ ಈ ಬಾರಿ ಆದಿವಾಸಿ, ವಲಸೆ ಹಾಗೂ ಹೊರಗಿನಿಂದ ಬಂದಿರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ವಿಶೇಷ ಅಭಿಯಾನಕ್ಕೂ ಆದ್ಯತೆ ನೀಡಲಾಗಿದೆ. ಅಗತ್ಯ ಪ್ರಮಾಣದ ಪೋಲಿಯೊ ಲಸಿಕೆ ಸರ್ಕಾರದಿಂದ ಸರಬರಾಜಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?ಟಾಟಾ ಪವರ್ ಅರ್ಜಿ ದಾಖಲೆಗಳು ಕನ್ನಡದಲ್ಲಿಯೂ ಇರಲಿ: ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್, ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿ ಮಹೇಶ್, ನೇತ್ರಾವತಿ, ಸಿಡಿಪಿಒ ದೀಪಾ, ಡಾ. ಪೂರ್ಣಿಮಾ, ರಮೇಶ್, ರೋಟರಿ ಸಂಸ್ಥೆ ಹೆಚ್.ಡಿ.ಕೋಟೆ, ಲಯನ್ಸ್ ಕ್ಲಬ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.




